ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಶಿಕ್ಷಕನಿಗೆ ರಾಜ್ಯ ಪ್ರಶಸ್ತಿಯ ಗರಿ

Last Updated 11 ಸೆಪ್ಟೆಂಬರ್ 2011, 5:35 IST
ಅಕ್ಷರ ಗಾತ್ರ

ಗೋಣಿಕೊಪ್ಪಲು : ಬಟ್ಟಲಲ್ಲಿ ಬಣ್ಣ, ಕೈಯಲ್ಲಿ ಬ್ರಷ್ ಇದ್ದರೆ  ಸಾಕು. ಕಣ್ಣುಕೋರೈಸುವ ವಿವಿಧ ವರ್ಣ ಚಿತ್ರಗಳು ಒಡನೆ ಒಡಮೂಡುತ್ತವೆ. ಜತೆಗೆ ಪುಟಾಣಿ ವಿದ್ಯಾರ್ಥಿಗಳ ಕೈ ಕೂಡ ಚಿತ್ರ ಬಿಡಿಸುವತ್ತ ಸಾಗುತ್ತದೆ.
-ಇದು ಪ್ರಸಕ್ತ ಸಾಲಿನ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾದ  ಬಿ.ಆರ್.ಸತೀಶ್ ಅವರ ಒಂದು ಸಣ್ಣ ತುಣುಕು.

ಚಿತ್ರಕಲಾ ಶಿಕ್ಷಕರಾಗಿರುವ ಸತೀಶ್ ಒಬ್ಬ ಅಪ್ರತಿಮ ಕಲಾವಿದ. ಚಿತ್ರ ಕಲೆಯ ಬಗ್ಗೆ ಬಾಲ್ಯದಲ್ಲಿಯೇ ಒಲವು ಬೆಳೆಸಿಕೊಂಡು ಬಳಿಕ ಅದರಲ್ಲಿಯೇ ಬದುಕು ಕಂಡುಕೊಂಡವರು.

ಎಎಂಸಿ (ಮಾಸ್ಟರ್ ಆಫ್ ಆರ್ಟ್ಸ್ ಸರ್ಟಿಫಿಕೇಟ್)  ಶಿಕ್ಷಣ ಪಡೆದು 1994ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದರು. ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಶಿಕ್ಷಣ ನೀಡುವುದರ ಜತೆಗೆ ಸರ್ಕಾರದ ವಿವಿಧ ಯೋಜನೆಗಳ  ಸ್ತಬ್ದ ಚಿತ್ರ ತಯಾರಿಕೆಯಲ್ಲಿಯೂ ತೊಡಗಿದರು. 

 ಸಾಕ್ಷರತಾ ಆಂದೊಲನ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವ, ಗಾಂಧಿಜಯಂತಿ, ಸಾಹಿತ್ಯ ಸಮ್ಮೇಳನ, ದಸರಾ ಉತ್ಸವ ಹಾಗೂ ಇತರ ವಿಶೇಷ ಕಾರ್ಯಕ್ರಮಗಳ ಸ್ತಬ್ದ ಚಿತ್ರ ತಯಾರಿಕೆ  ಹೊಣೆ ಸತೀಶ್ ಅವರ ಹೆಗಲಿಗೆ ಬಿದ್ದಿತು. ಜಿಲ್ಲಾ ಉತ್ಸವಗಳ ವೇದಿಕೆ ನಿರ್ಮಾಣ ಅದಕ್ಕೆ ಪೂರಕವಾದ ಚಿತ್ರ ಸಹಿತವಾದ ಬೋರ್ಡ್ ಬ್ಯಾನರ್ ತಯಾರಿಕೆ ಕೂಡ ಇವರ ಕೊರಳಿಗೆ ಬೀಳುತ್ತಿದೆ.

  ಮೈಸೂರು ದಸರಾ ಉತ್ಸವಕ್ಕೆ ಪ್ರತಿ ವರ್ಷ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳಲ್ಲಿ ಸತೀಶ್ ಅವರ ಕಲೆಯ ಕುಂಚ ಇದ್ದೇ ಇರುತ್ತದೆ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಕೊಡಗು ಜಿಲ್ಲೆಯಿಂದ ಹೊರಟ `ಕನ್ನಡ ರಥ~ವನ್ನು ಸತೀಶ್  ಆಕರ್ಷಕವಾಗಿ ರೂಪಿಸಿ ಎಲ್ಲರ ಗಮನ ಸೆಳೆದಿದ್ದರು.

 ವಿರಾಜಪೇಟೆ ಸಮೀಪದ  ಅರಮೇರಿ ಕಳಂಚೇರಿ ಮಠದಲ್ಲಿ ನಡೆದ ಹೊಂಬೆಳಕು ಕಾರ್ಯಕ್ರಮದ ಕವಿ ಕಾವ್ಯ ಕುಂಚದಲ್ಲಿ  ಸ್ಥಳದಲ್ಲಿಯೇ  ಕವಿತೆಗೆ ತಕ್ಕ ಚಿತ್ರ ಬಿಡಿಸಿ ನೆರೆದಿದ್ದ ಪೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು
  ಜಲವರ್ಣ, ತೈಲವರ್ಣ ಹಾಗೂ ಮಿಶ್ರವರ್ಣದಲ್ಲಿ ಆಕರ್ಷಕ  ಚಿತ್ರ ಬಿಡಿಸುವ ಕಲೆ ಸತೀಶ್ ಅವರಿಗೆ ಕರಗತವಾಗಿದೆ. ಇವರ ಹಲವು ಚಿತ್ರಗಳು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ಹಾಗೂ ಹೈದರಾಬಾದ್ ಚಿತ್ರಕಲಾ ಗ್ಯಾಲರಿಯಲ್ಲಿ ಪ್ರದರ್ಶನ ಗೊಂಡಿವೆ.

 ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಬಂಗಲೆಗಳ ಗೋಡೆಗಳ ಮೇಲೆಯೂ ಸತೀಶ್ ವರ್ಣ ಚಿತ್ರಗಳು ಗಮನ ಸೆಳೆಯುತ್ತಿವೆ. ವೈಯಕ್ತಿಕ ಸಾಧನೆಯ ಜತೆಗೆ ಕಳೆದ 15 ವರ್ಷಗಳಿಂದ ತಮ್ಮ ಶಿಷ್ಯ ವೃಂದವನ್ನು ಸಮರ್ಥವಾಗಿ ತಯಾರಿಸಿದ್ದಾರೆ. ಸತೀಶ್ ಅವರ ಕಲೆಯ ಕುಂಚದಲ್ಲಿ ಬೆಳೆದ ನೂರಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದು ಕೊಂಡಿದ್ದಾರೆ.

  1996ರಲ್ಲಿ ಜಪಾನ್‌ನಲ್ಲಿ  ಇಂಡೋ ಜಪಾನೀಸ್ ಅಸೋಸಿ ಯೇಷನ್  ಏರ್ಪಡಿಸಿದ್ದ  ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಸತೀಶ್ ಅವರ ಮಾರ್ಗದರ್ಶನ 11ವಿದ್ಯಾರ್ಥಿಗಳು ತಮ್ಮ ಚಿತ್ರಗಳನ್ನು ಪ್ರದರ್ಶಿಸಿ ಬಹುಮಾನ ಪಡೆದುಕೊಂಡದ್ದು ಹೆಗ್ಗಳಿಕೆ. ಸಾರ್ವಜನಿಕ ಶಿಕ್ಷಣ ಇಲಾಖೆ  5ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬೇಸಿಗೆ ಚಿತ್ರಕಲಾ ಶಿಬಿರದಲ್ಲಿ ಸತೀಶ್ ಅವರದೇ ಸಾರಥ್ಯ.

 ಇವರ ಸಾಧನೆಯನ್ನು ಗುರುತಿಸಿದ ಶಿಕ್ಷಣ ಇಲಾಖೆ ಜನಮೆಚ್ಚಿದ ಶಿಕ್ಷಕ, ಜಿಲ್ಲಾ ಅತ್ಯುತ್ತಮ ಶಿಕ್ಷಕ  ಪ್ರಶಸ್ತಿ ನೀಡಿ ಗೌರವಿಸಿತ್ತು. ವಿವಿಧ ಸಂಘಸಂಸ್ಥೆಗಳು ಕೂಡ ನೂರಾರು ಪ್ರಶಸ್ತಿ ನೀಡಿ ಅಭಿನಂದಿಸಿವೆ. 40ರ ಹರೆಯದ ಸತೀಶ್ ಅವರ ಮಗಳು ಅಪ್ಪನ ದಾರಿಯಲ್ಲಿಯೇ ಸಾಗಿ ಈಗಾಗಲೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 `ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಜತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ವಿದ್ಯಾರ್ಥಿ ಪೋಷಕರು ತಮ್ಮಮಕ್ಕಳಿಗೆ  ಚಿತ್ರಕಲೆಯ ಬಗ್ಗೆ ಪ್ರೋತ್ಸಾಹ ನೀಡಬೇಕು~ ಎಂಬ ನುಡಿ ಅವರದು.  ಮೂಲತಃ ವಿರಾಜಪೇಟೆ ಯವರಾದ ಸತೀಶ್ ಇದೀಗ ಗೋಣಿ ಕೊಪ್ಪಲಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT