ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಶಿಕ್ಷಕರ ನೇಮಿಸಲು ಆಗ್ರಹ

Last Updated 18 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಕಲಾವಿದ ಜಿ.ಎನ್.     ಸೀತಾರಾಮಯ್ಯ ಗುರುವಾರ ಸರ್ಕಾರವನ್ನು ಒತ್ತಾಯಿಸಿದರು. ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಮೈಸೂರು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಸಂಯುಕ್ತವಾಗಿ ಎರಡು ದಿನಗಳ ಕಾಲ ಆಯೋಜಿಸಿರುವ 8 ನೇ ಶೈಕ್ಷಣಿಕ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಬೇಕು’ ಎಂದರು.

‘ಚಿತ್ರಕಲೆ ಜೀವನದ ಭಾಗವಾಗಬೇಕು. ಎಳೆಯ ವಯಸ್ಸಿನಲ್ಲಿ ಮಕ್ಕಳು ಚಿತ್ರಕಲೆಯತ್ತ ವಾಲುವುದರಿಂದ ದುಶ್ಚಟಗಳಿಗೆ ಬೀಳುವುದನ್ನು ತಪ್ಪಿಸಬಹುದು. ಈ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ 62 ಚಿತ್ರಕಲಾ ಶಾಲೆಗಳಿವೆ. ಶೇಕಡಾ 78 ರಷ್ಟು ಚಿತ್ರಕಲಾ ಶಾಲೆಗಳಿಗೆ ಅನುದಾನವನ್ನು ನೀಡುತ್ತಿಲ್ಲ. ಆದ್ದರಿಂದ ಸರ್ಕಾರ ಎಲ್ಲ ಚಿತ್ರಕಲಾ ಶಾಲೆಗಳಿಗೂ ಅನುದಾನವನ್ನು ನೀಡಬೇಕು ಹಾಗೂ ರಾಜ್ಯದ ಎಲ್ಲ ಚಿತ್ರಕಲಾ ಶಾಲೆಗಳಲ್ಲಿ ಏಕರೂಪವಾದ ಪಠ್ಯಕ್ರಮವಿಲ್ಲ. ಇದನ್ನೂ ಸರ್ಕಾರ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಚಿತ್ರಕಲಾ ಶಿಕ್ಷಕರು ಸರ್ಕಾರಿ ಉದ್ಯೋಗಕ್ಕಾಗಿ ಕಾಯುವುದನ್ನು ಬಿಡಬೇಕು. ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮುಂದಾಗಬೇಕು. ಕಲಾವಿದರು ಹತ್ತರಲ್ಲಿ ಒಬ್ಬರು ಆಗುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ‘ಸರ್ಕಾರವು ಚಿತ್ರಕಲಾ ಶಿಕ್ಷಕರ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತವಾದ ಪರಿಹಾರವನ್ನು ನೀಡಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನನ್ನ ಮೂಲಕ ನಿಮಗೆ ಈ ಸಂದೇಶವನ್ನು ತಲುಪಿಸಿದ್ದಾರೆ’ ಎಂದು ಹೇಳಿದರು.

‘ಮಕ್ಕಳು ಪರಿಪೂರ್ಣವಾಗಿ ಬೆಳೆಯಲು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಮುಖ್ಯ. ದೈಹಿಕ ಶಿಕ್ಷಣದಿಂದ ದೈಹಿಕ ಆರೋಗ್ಯವನ್ನು, ಪಠ್ಯಪುಸ್ತಕಗಳಿಂದ ಬುದ್ಧಿಯನ್ನು ಪಡೆಯಬಹುದು. ಚಿತ್ರಕಲೆಯಿಂದ ಮಕ್ಕಳ ಮನಸ್ಸು ಅರಳುವಂತೆ ಮಾಡಬಹುದು ಎಂದು ತಿಳಿಸಿದರು. ವೇದಿಕೆಯಲ್ಲಿ ಹಿರಿಯ ಕಲಾವಿದ ಎಚ್.ಜಿ.ಬಸವಣ್ಣಾಚಾರ್, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಮಹದೇವಯ್ಯ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಅವಟಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಎ.ಕಂಠಿ, ಸಮಾಜ ಸೇವಕ ದೇವದತ್ತ, ಸಾರ್ವಜನಿಕ  ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿಯ ನಿರ್ದೇಶಕ (ಪ್ರೌಢಶಿಕ್ಷಣ) ಹನುಮಂತರಾಯಪ್ಪ, ಡಿಎಸ್‌ಇಆರ್‌ಟಿ ವಿಶೇಷಾಧಿಕಾರಿ ಜಿ.ಎಸ್.ಮುಡಂಬಡಿತ್ತಾಯ, ಕರ್ನಾಟಕ ಸೆಕೆಂಡರಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂದನಕೇರ್, ಮೈಸೂರು ವಿಭಾಗದ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಐ.ಎನ್.ಕಲ್ಲನಗೌಡ್ರು ಇದ್ದರು. ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ತೊರೆಮಾವು ಮಹದೇವಸ್ವಾಮಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT