ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲೆ ಕಥೆ

ಅರಿವು ಹರಿವು
Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಳೆದ ಬಾರಿ ಬಣ್ಣಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಜಗದಗಲ ಹರಡಿರುವ ಚಿತ್ರಕಲೆ ಅಥವಾ ವರ್ಣಕಲೆಯ ಬಗ್ಗೆ ಈ ವಾರ ಮಾತನಾಡೋಣ. ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆ ಒಂದು ರೀತಿಯಲ್ಲಿ ಸಾಗರ. ಅದರ ವಿಸ್ತಾರ ಊಹೆಗೂ ನಿಲುಕದ್ದು. ಚಿತ್ರಕಲೆ ಹುಟ್ಟಿದ್ದು, ಅದು ಬೆಳೆದು ಬಂದ ಹಾದಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಂತಹ ಕಲೆಯ ಒಟ್ಟಾರೆ ಇತಿಹಾಸವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಪ್ರಯತ್ನ ಇದು.

ಪ್ರಪಂಚದ ಚಿತ್ರಕಲೆಯನ್ನು ಪ್ರಮುಖವಾಗಿ ಎರಡು ವಿಭಾಗ ಮಾಡಲಾಗಿದೆ. ಪಾಶ್ಚಿಮಾತ್ಯ ಚಿತ್ರ ಕಲೆ (ವೆಸ್ಟರ್ನ್‌ ಪೇಂಟಿಂಗ್‌) ಮತ್ತು ಪೂರ್ವ ರಾಷ್ಟ್ರಗಳ ಚಿತ್ರಕಲೆ (ಈಸ್ಟರ್ನ್‌ ಪೇಂಟಿಂಗ್). ಇವುಗಳಲ್ಲಿ ಉಪ ವಿಭಾಗಗಳು ಹಲವಾರು ಇವೆ. ಪೂರ್ವ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಚಿತ್ರಕಲೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿ ಚೀನಾ ಚಿತ್ರಕಲೆ, ಭಾರತೀಯ ವರ್ಣಕಲೆ (ಇದರಲ್ಲೂ ಹಲವಾರು ವಿಧಗಳಿವೆ. ಮಧುಬನಿ, ಮೊಘಲ್, ರಜಪೂತ್, ತಂಜಾವೂರು ಚಿತ್ರಕಲೆ ಇತ್ಯಾದಿ) ಜಪಾನ್‌ ಚಿತ್ರಕಲೆ, ಕೊರಿಯಾ ವರ್ಣಕಲೆ... ಹೀಗೆ ರಾಷ್ಟ್ರಕ್ಕೊಂದರಂತೆ, ಪ್ರಾಂತ್ಯಕ್ಕೊಂದರಂತೆ ಬಗೆಗಳಿವೆ. ಅತ್ತ, ಪಾಶ್ಚಿಮಾತ್ಯ ವಿಭಾಗದಲ್ಲಿ ರೋಮ್‌, ಗ್ರೀಸ್‌, ಈಜಿಪ್ಟ್‌... ಹೀಗೆ ಹಲವು ವಿಧಗಳಿವೆ.

ಚಿತ್ರಕಲೆಯ ಪರಿಕಲ್ಪನೆ ಇತ್ತೀಚಿನದಲ್ಲ. ಇದಕ್ಕೆ ಬರೋಬ್ಬರಿ 40 ಸಾವಿರ ವರ್ಷಗಳ ಇತಿಹಾಸ ಇದೆ. ಪ್ರಾಚೀನ ಶಿಲಾಯುಗದಲ್ಲಿ ನೆಲೆಸಿದ್ದ ಮಾನವರು ಚಿತ್ರ ಬಿಡಿಸುವುದರಲ್ಲಿ ಪರಿಣತಿ ಸಾಧಿಸಿದ್ದರು. ಫ್ರಾನ್ಸ್‌ನಲ್ಲಿ ಪತ್ತೆಯಾಗಿರುವ ಚೌವೆಟ್‌ ಗುಹೆಗಳ ಗೋಡೆಯಲ್ಲಿ ಅಂದಿನ ಮಾನವರು ಬಿಡಿಸಿದ್ದ ಪ್ರಾಣಿಗಳ ಚಿತ್ರಗಳು ಕಂಡು ಬಂದಿವೆ. ಇದಕ್ಕೆ ನೈಸರ್ಗಿಕವಾಗಿ ಲಭ್ಯವಿದ್ದ ಬಣ್ಣಗಳನ್ನೂ ಅವರು ಬಳಸಿದ್ದಾರೆ. ಈ ಗುಹೆಯು 32 ಸಾವಿರ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಸುತ್ತಮುತ್ತಲಿನ ಪರಿಸರದಲ್ಲಿ ತಮ್ಮ ಕಣ್ಣಿಗೆ ಬೀಳುತ್ತಿದ್ದ ಪ್ರಾಣಿಗಳ ಚಿತ್ರಗಳನ್ನು ಅಂದಿನ ಜನರು ಗುಹೆಯ ಗೋಡೆಗಳಲ್ಲಿ ಬಿಡಿಸುತ್ತಿದ್ದರು.

ಈ ಭೂಮಿಯಲ್ಲಿ ಚಿತ್ರಕಲೆಗೆ ಆಧಾರ ಇದೇ ಎಂದು ಪರಿಗಣಿಸಲಾಗಿದೆ. ಅಲ್ಲಿಂದ, ಚಿತ್ರಕಲೆ ಬೆಳೆದು ಬಂದ ಪ್ರತಿ ಹಂತವೂ ಇತಿಹಾಸದಲ್ಲಿ ದಾಖಲಾಗಿದೆ. ಪ್ರಾಚೀನ, ಮಧ್ಯ ಮತ್ತು ನವ ಶಿಲಾಯುಗದ ಜನರು ಗುಹೆಗಳಲ್ಲಿ ಚಿತ್ರ ಬಿಡಿಸುತ್ತಿದ್ದುದಕ್ಕೆ ದಾಖಲೆಗಳು ಹಲವು ರಾಷ್ಟ್ರಗಳಲ್ಲಿ ಸಿಗುತ್ತವೆ. ನಮ್ಮ ಭಾರತ, ಚೀನಾ, ಸ್ಪೇನ್‌, ಆಸ್ಟ್ರೇಲಿಯಾ ಪೋರ್ಚುಗಲ್‌.. ಹೀಗೆ ಹಲವು ದೇಶಗಳನ್ನು ಪಟ್ಟಿ ಮಾಡಬಹುದು.

ಭಾರತದ ವಿಷಯಕ್ಕೆ ಬಂದರೆ ಮಧ್ಯಪ್ರದೇಶ ಭಿಂಬೆಡ್ಕ ಕಲ್ಲಿನ ಗುಹೆಗಳಲ್ಲಿ ಈ ಚಿತ್ರಗಳಿವೆ. ಇವು ಕ್ರಿ.ಪೂ. 5500 ಅವಧಿಗೆ ಸೇರಿದ್ದು. ಅಜಂತಾ ಗುಹೆಗಳಲ್ಲೂ ಇದೇ ರೀತಿಯ ಚಿತ್ರಗಳನ್ನು ಕಾಣಬಹುದು. ನಾಗರಿಕತೆಗಳು ಬೆಳೆಯುವ ಹೊತ್ತಿಗೆ ಚಿತ್ರಕಲೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದವು. ಪುರಾತನ ಈಜಿಪ್ಟ್‌, ಗ್ರೀಸ್‌, ರೋಮನ್‌ಗಳಲ್ಲಿ ತಜ್ಞ ಚಿತ್ರ ಕಲಾವಿದರಿದ್ದರು ಎಂಬುದಕ್ಕೂ ಪುರಾವೆಗಳು ಸಿಕ್ಕಿವೆ. ಆಗಿನ ಕಾಲದಲ್ಲಿ ಲಭ್ಯವಿದ್ದ ನೈಸರ್ಗಿಕ ಬಣ್ಣಗಳಲ್ಲಿ ಮತ್ತು ನೈಸರ್ಗಿಕ ಬ್ರಷ್‌ಗಳನ್ನು ಬಳಸಿಯೇ ಚಿತ್ರ ಬಿಡಿಸುತ್ತಿದ್ದರು.

ಅಂದಿನ ಕಾಲದ ಜನರು ಬಿಡಿಸಿದ್ದ ಚಿತ್ರಗಳನ್ನು ಈಜಿಪ್ಟ್‌ನ ಬೃಹತ್‌ ಪಿರಮಿಡ್ಡುಗಳಲ್ಲಿ ಈಗಲೂ ಕಾಣಬಹುದು. ಗ್ರೀಕರು ದೇವಾಲಯದ ಗೋಡೆಗಳಲ್ಲಿ ಭಿತ್ತಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಶೃಂಗರಿಸುತ್ತಿದ್ದರು. ಗ್ರೀಕ್‌ ಮತ್ತು ರೋಮ್‌ಗಳಲ್ಲಿ ಜನರು ದಿನ ನಿತ್ಯದ ಉಪಯೋಗಕ್ಕೆ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳಲ್ಲೂ ತಮ್ಮ ಚಿತ್ರ ಬಿಡಿಸುವ ಕೌಶಲ್ಯ ಮೆರೆದಿದ್ದರು.

ಏಸು ಕ್ರಿಸ್ತನ ಜನನದ ನಂತರ ಪಾಶ್ಚಿಮಾತ್ಯ ಚಿತ್ರಕಲೆಯ ಮೇಲೆ ಕ್ರಿಶ್ಚಿಯನ್‌ ಧರ್ಮದ ಪ್ರಭಾವ ಹೆಚ್ಚಾಯಿತು. ಮಧ್ಯಕಾಲೀನ ಯುಗದಲ್ಲಿ (ಕ್ರಿ.ಶ 500-1400) ಚಿತ್ರಕಲೆಗೆ ಹೆಚ್ಚು ಪ್ರಾಮುಖ್ಯ ಸಿಗಲಿಲ್ಲ. ಜಗತ್ತಿನಾದ್ಯಂತ ಇದ್ದ ಕ್ಷೋಭೆಯಿಂದಾಗಿ ಚಿತ್ರಕಲೆಗೆ ಹಿನ್ನಡೆಯಾಯಿತು. ಇವುಗಳು ಧಾರ್ಮಿಕ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿತ್ತು. 

ಕ್ರಿ.ಶ 13ನೇ ಶತಮಾನದ ನಂತರ ಚಿತ್ರಕಲೆ ಮತ್ತೆ ಮುನ್ನಲೆಗೆ ಬಂತು. ಅದರಲ್ಲೂ ವಿಶೇಷವಾಗಿ ಇಟಲಿಯಲ್ಲಿ ಇದಕ್ಕೆ ಹೆಚ್ಚು ಮಹತ್ವ ಸಿಕ್ಕಿತು. ಪುನರುಜ್ಜೀವನದ ಅವಧಿಯಲ್ಲಿ ಲಿಯನಾರ್ಡೊ ಡಾ ವಿನ್ಸಿಯಂತಹ ಅತ್ಯದ್ಭುತ ಚಿತ್ರ ಕಲಾವಿದರು ಜಗತ್ತಿಗೆ ಪರಿಚಯಗೊಂಡರು. ಈ ಅವಧಿಯಲ್ಲಿ ಯೂರೋಪ್‌ನ ಎಲ್ಲ ರಾಷ್ಟ್ರಗಳಲ್ಲಿ ಚಿತ್ರಕಲೆ ಮತ್ತೊಂದು ಮಜಲಿಗೆ ತೆರೆದುಕೊಂಡಿತು.

19ನೇ ಶತಮಾನದಲ್ಲಿ ಆಧುನಿಕ ಚಿತ್ರಕಲೆಯ ಪರಿಕಲ್ಪನೆಗೆ ಹೊಸ ರೂಪ ಸಿಕ್ಕಿತು. ಇದೇ ಅವಧಿಯಲ್ಲಿ ಆದ ಕ್ಯಾಮೆರಾದ ಆವಿಷ್ಕಾರವು, ಚಿತ್ರ ಬಿಡಿಸುವುದರ ಉದ್ದೇಶ ಏನು ಎಂಬುದನ್ನು ಕಲಾವಿದರು ಮರು ವಿಮರ್ಶೆಗೆ ಒಳಪಡಿಸುವಂತೆ ಮಾಡಿತು. 20ನೇ ಶತಮಾನದಲ್ಲಿ ಎರಡನೇ ಮಹಾಯುದ್ಧದ ನಂತರ ಅಮೆರಿಕವು ಚಿತ್ರಕಲೆಯ ಪ್ರಧಾನ ಕೇಂದ್ರವಾಗಿ ಹೊರ ಹೊಮ್ಮಿತು. ಅದುವರೆಗೂ, ಅಲ್ಲಿನ ಕಲಾವಿದರು ಹೆಚ್ಚಾಗಿ ಯೂರೋಪಿನ ಶೈಲಿ ಚಿತ್ರಕಲೆಯನ್ನು ಅನುಕರಿಸುತ್ತಿದ್ದರು. ನಂತರದ ಆರೇಳು ದಶಕಗಳಲ್ಲಿ ಚಿತ್ರಕಲೆಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ಇತಿಹಾಸವನ್ನು ಗಮನಿಸುತ್ತಾ ಬಂದರೆ, ಕಾಲಘಟ್ಟಕ್ಕೆ ಅನುಸಾರವಾಗಿ ಚಿತ್ರಕಲೆಯೂ ಬದಲಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಶತಮಾನಗಳ ಹಿಂದೆ ಚಾಲ್ತಿಯಲ್ಲಿದ್ದ ಚಿತ್ರಕಲೆಯ ಪ್ರಕಾರಗಳು ಈಗ ತೀರಾ ವಿರಳ. ಆಧುನಿಕ, ಅಮೂರ್ತ, ಸಮಕಾಲೀನ ಚಿತ್ರಕಲೆಗಳು ಹೆಚ್ಚು ಜನಪ್ರಿಯ. ಕಂಪ್ಯೂಟರ್‌, ಡಿಜಿಟಲ್‌ ತಂತ್ರಜ್ಞಾನವೂ ಈಗ ಚಿತ್ರಕಲೆಯೊಂದಿಗೆ ಬೆರೆತಿವೆ.

ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಭೌಗೋಳಿಕ, ಪ್ರಾಂತ್ಯ, ಧರ್ಮ, ಸಂಸ್ಕೃತಿ, ಐತಿಹಾಸಿಕ ಘಟನೆಗಳು ಚಿತ್ರಕಲೆಯ ಮೇಲೆ ಪ್ರಭಾವ ಬೀರುತ್ತವೆ ಎಂಬುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಿತ್ರಕಲೆಯ ಶೈಲಿ ಬದಲಾಗುತ್ತಿರುತ್ತದೆ. ವಿಶಾಲ ವ್ಯಾಪ್ತಿ ಹೊಂದಿರುವ ಚಿತ್ರಕಲೆಗೆ ತಮ್ಮದೇ ಕೊಡುಗೆ ನೀಡಿ, ಅದರ ಶ್ರೀಮಂತಿಕೆಯನ್ನು ಹೆಚ್ಚಿಸಿದ ಅಸಂಖ್ಯಾತ ಕಲಾವಿದರು ಈ ಜಗತ್ತಿನಲ್ಲಿ ಇದ್ದಾರೆ. ಈ ಹೊತ್ತಿನಲ್ಲಿ ಅವರೆಲ್ಲರೂ ಸ್ಮರಣೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT