ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚಿತ್ರಕಲೆ ಪ್ರಪಂಚದ ಮೊದಲ ಭಾಷೆ: ಜಿ.ಜಗದೀಶ

Last Updated 25 ಡಿಸೆಂಬರ್ 2012, 6:49 IST
ಅಕ್ಷರ ಗಾತ್ರ

ಹಾವೇರಿ: `ಚಿತ್ರಕಲೆ ಪ್ರಪಂಚದ ಮೊಟ್ಟ ಮೊದಲ ಭಾಷೆ. ಸಾವಿರ ಪದಗಳಲ್ಲಿ ಹೇಳುವ ಒಂದು ವಿವರಣೆಯನ್ನು ಒಂದು ಅತ್ಯುತ್ತಮ ಚಿತ್ರ ಹೇಳುತ್ತದೆ. ಇಂತಹ ಚಿತ್ರಕಲೆಯಿಂದ ಮಾನವ ತನ್ನ ನಡೆ-ನುಡಿ, ಸಂಸ್ಕೃತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾನೆ' ಎಂದು ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ, ಚಿತ್ರಕಲಾ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆ ಹುಟ್ಟುವದಕ್ಕೂ ಮುನ್ನ ಮಾನವ ಪರಸ್ಪರರನ್ನು ಅರ್ಥಮಾಡಿಕೊಳ್ಳಲು, ಸಂವಹನ ನಡೆಸಲು ಕಂಡುಕೊಂಡ ಸುಲಭದ ಮಾರ್ಗವೇ ಈ ಚಿತ್ರಕಲೆ ಭಾಷೆಯದಾಗಿತ್ತು ಎಂದ ಅವರು, ಚಿತ್ರಕಲಾ ಶಿಕ್ಷಕರು ಮಕ್ಕಳಿಗೆ ಕಲಾತ್ಮಕತೆಗೆ ಪ್ರೇರಕವಾಗುವಂತಹ ಅಂಶಗಳನ್ನು ಮನದಟ್ಟು ಮಾಡಿದಾಗ ಮಾತ್ರ ಮಕ್ಕಳು ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿ, ಕಲೆ ಕೂಡಾ ಒಂದು ಶಿಕ್ಷಣ, ಮಗುವಿನಲ್ಲಿ  ಸುಪ್ತವಾಗಿರುವ ಕಲೆ ಶಿಕ್ಷಕರು ಹಾಕುವ ಗೆರೆಗಳಿಂದಲೇ ಪ್ರೇರಣೆ ಸಿಗುತ್ತದೆ. ವಿದ್ಯಾರ್ಥಿಗಳು ಪುಸ್ತಕದಲ್ಲಿನ ರೇಖಾ ಚಿತ್ರಗಳನ್ನು ಗಮನಿಸುವುದರಿಂದ ಹೆಚ್ಚೆಚ್ಚು ಚಿತ್ರಗಳನ್ನು ಬಿಡಿಸಲು ಸಹಾಯಕವಾಗುತ್ತದೆ ಎಂದರು.

ಡಿಡಿಪಿಐ ಎಸ್.ಬಿ.ಕೊಡ್ಲಿ ಮಾತನಾಡಿ, ಪ್ರಪಂಚದಲ್ಲಿ ಕಲೆ, ಸಂಗೀತ, ಸಾಹಿತ್ಯ ಮತ್ತು ಪಾಂಡಿತ್ಯಗಳಿಗೆ ಅವಕಾಶ ವಿಲ್ಲದಿದ್ದರೆ ಮನುಷ್ಯ ಶಿಕ್ಷಣದ ಅತ್ಯುನ್ನತ ಘಟ್ಟ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಚಿತ್ರಕಲೆ ಬಿಡಿಸುವಂತ ಪಾಲಕರು ಪ್ರೇರಣೆ ನೀಡಬೇಕು ಎಂದು ಸಲಹೆ ಮಾಡಿದರು.

ಶಿಕ್ಷಣ ಇಲಾಖೆ ಆಯುಕ್ತ ಕಲಾ ಪರಿವೀಕ್ಷಕ ಪಿ.ಆರ್. ಬಾರ್ಕೇರ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿರುವ ಕಲೆಯನ್ನು ಹೊರಹೊಮ್ಮಿಸಲು ಇಂತಹ ಚಿತ್ರಕಲಾ ಪ್ರದರ್ಶನಗಳನ್ನು ಹೆಚ್ಚೆಚ್ಚು ಆಯೋಜಿಸುತ್ತಿರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲಾವಿದ ಕೆ.ಎಸ್. ಅರಾವತ್, ಸೃಷ್ಠಿ ಫೌಂಡೇಶನ್ ಅಧ್ಯಕ್ಷ  ಸುಭಾಷ್ ಹುಲ್ಯಾಳ, ಸಂಘದ ಗೌರವ ಅಧ್ಯಕ್ಷ ಆರ್.ಆರ್. ಗುಡಿಸಾಗರ, ಉಪಾಧ್ಯಕ್ಷೆ ಎಲ್.ಎಸ್. ಹಳಕೊಪ್ಪ ಹಾಜರಿದ್ದರು. ಎಂ.ಜಿ.ಹಿರೇಮಠ ಸ್ವಾಗತಿಸಿದರು. ಜೆ.ಎಂ.ಇಟಗಿ ನಿರೂಪಿಸಿದರು. ವಂದನಾ ಹಳಕೊಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT