ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ಲೋಕಾಭಿರುಚಿ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕತ್ತಲೆಯಿಂದ ಬೆಳಕಿನೆಡೆಗೆ... ಬದುಕಿನ ಒಳ ಅರ್ಥಗಳ ಹುಡುಕಾಟ... ಪ್ರಕೃತಿ ಮತ್ತು ಮಾನವನ ಸಂಬಂಧ... ತಂತ್ರಜ್ಞಾನದ ಮಹತ್ವ...
ಹೀಗೆ ವಿಭಿನ್ನ ಅಭಿರುಚಿ ಚಿತ್ರಗಳು ನೋಡುಗರ ಕಣ್ಮನ ಸೆಳೆದದ್ದು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ. ಸಮಸಂ ಕಲಾ ತಂಡ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನದಲ್ಲಿ.

ಎನ್. ಕಾಂತರಾಜ್ ಅವರ ಅಕ್ರಲಿಕ್ ಹಾಗೂ ಕ್ಯಾನ್‌ವಾಸ್ ಚಿತ್ರಗಳು ವಾಸ್ತವ ಪ್ರಪಂಚವನ್ನು ಅನಾವರಣಗೊಳಿಸುತ್ತವೆ. ಬಲೂನ್ ಮಾರುವ ಹುಡುಗನ ಕೈಯಲ್ಲಿರುವ ಬಲೂನ್‌ಗಳ ವಿವಿಧ ಬಣ್ಣಗಳು ಹುಚ್ಚು ಮನಸ್ಸಿನ ಹಲವು ಮುಖಗಳನ್ನು ಪ್ರತಿಬಿಂಬಿಸುತ್ತದೆ ಎಂಬ ಸಂದೇಶದ ಚಿತ್ರಗಳು ಅರ್ಥಪೂರ್ಣವಾಗಿವೆ.

ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂದೇಶ ಹೊತ್ತ ಕಲಾವಿದ ಎಲ್. ನಾರಾಯಣ ಸ್ವಾಮಿ ಅವರ  ಚಿತ್ರಗಳು ಆಕರ್ಷಕವಾಗಿವೆ. ಆರ್. ಕಾಂತರಾಜ್‌ರ  ಶಿಲ್ಪ ಕಲಾಕೃತಿಗಳು ಕಲಾಸಕ್ತರ ಗಮನ ಸೆಳೆಯುತ್ತವೆ. ಜೊತೆಗೆ ಇಂದಿನ ದಿನಗಳಲ್ಲಿ ವೃದ್ಧರನ್ನು ತಿರಸ್ಕಾರ ಮಾಡುವ ಮಕ್ಕಳಿಗೆ ಬುದ್ಧಿ ಹೇಳುವಂತಿರುವ ಹಣ್ಣೆಲೆ ಮತ್ತು ಊರುಗೋಲಿನ ತೈಲ ವರ್ಣದ ಚಿತ್ರಗಳು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ.

ಕುಮಾರ್ ಅವರ ಹೂವಿನ ಚಿತ್ರಗಳು, ಮಾನವನ ಆಕಾಂಕ್ಷೆಯನ್ನು ಬಿಂಬಿಸುವಂತಿವೆ. ಮತ್ತೊಂದೆಡೆ ಮುರಳಿ ಅವರ ಛಾಯಾಚಿತ್ರಗಳಲ್ಲಿ ಪ್ರಕೃತಿಯ ಕಂಪಿದೆ. ದೇಸಿ ಮಣ್ಣಿನ ಸೊಗಡನ್ನು ಬಿಂಬಿಸುವ ವಿಭಿನ್ನ ನೆಲೆಗಟ್ಟಿನ ಛಾಯಾಚಿತ್ರಗಳು ಕಣ್ಮನ ಸೆಳೆಯುವಂತಿವೆ. ಶರಾವತಿ ಹಿನ್ನಿರಿನಲ್ಲಿ ಚಿಕ್ಕದೊಂದು ನಡುಗಡ್ಡೆ ಇರುವ ಚಿತ್ರವಂತೂ ಸೌಂದರ್ಯದ ಜೊತೆಗೆ ಸಾವಿರಾರು ಜನರ ತ್ಯಾಗವನ್ನು ನೆನಪಿಸುತ್ತದೆ.

ತ್ಯಾಗರಾಜ್ ಸೆರೆ ಹಿಡಿದಿರುವ ಛಾಯಾಚಿತ್ರಗಳಲ್ಲಿ ಬದುಕು ಮತ್ತು ಹೋರಾಟವನ್ನು ಬಿಂಬಿಸುವ ವಸ್ತು ವಿಷಯಗಳಿವೆ. ಹಿರಿಯೂರು ಸಮೀಪದ ಮಾರಿಕಣಿವೆ ಜಲಾಶಯದ ಚಿತ್ರಗಳು ಅಲ್ಲಿನ ರೈತರ ಬದುಕಿಗೆ ಕನ್ನಡಿ ಹಿಡಿಯುತ್ತವೆ.

ಪ್ರದರ್ಶನದ ಕೇಂದ್ರ ಬಿಂದು ಯುವ ಕಲಾವಿದ ಸಂತೋಷ್ ಪಾಂಚಾಲ್ ಅವರ ಇನ್‌ಸ್ಟಾಲೇಷನ್. ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತದೆ. ಜಾಗತಿಕ ಗ್ರಾಮಕ್ಕೆ ಮೊಬೈಲ್‌ನ ಕೊಡುಗೆಯನ್ನು ಇಲ್ಲಿ ತೋರಿಸಿದ್ದಾರೆ. ಆಧುನಿಕತೆ ಬೆಳೆದಂತೆ ತಂತ್ರಜ್ಞಾನವೂ ಬೆಳೆದು ನಂತರ ಹಳತಾಗುತ್ತದೆ. ಸಂಶೋಧನೆಯ ಹಪಾಹಪಿತನದಿಂದ ಹೊಸ ತಂತ್ರಜ್ಞಾನ ಚಿಗುರೊಡೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ಉದ್ದೇಶ ಈ ಪ್ರದರ್ಶನದಲ್ಲಿ ಎದ್ದು ಕಾಣುತ್ತದೆ.  ಪ್ರದರ್ಶನ ಮಂಗಳವಾರ ಮುಕ್ತಾಯ. ಜತೆಗೆ ಸಂಜೆ 4.30ಕ್ಕೆ ಮಾರಿ ಕಣಿವೆ ಸಾಕ್ಷ್ಯಚಿತ್ರ ಪ್ರದರ್ಶನವಿದೆ. ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ. ಬೆಳಿಗ್ಗೆ 10 ರಿಂದ ಸಂಜೆ 7.                 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT