ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರಗಳ ಹುಟ್ಟು ಸಾವು

Last Updated 30 ಆಗಸ್ಟ್ 2019, 19:00 IST
ಅಕ್ಷರ ಗಾತ್ರ

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲೇ ಬೆಂಗಳೂರಿನಲ್ಲಿ ಚಿತ್ರಪ್ರದರ್ಶನ ಆರಂಭವಾಯಿತು. ತಾತ್ಕಾಲಿಕವಾಗಿ ಕೆಲವು ಸಮುದಾಯ ಭವನಗಳಲ್ಲಿ ಪ್ರೊಜೆಕ್ಟರ್‌ ತಂದಿಟ್ಟು ಚಿತ್ರಪ್ರದರ್ಶನ ನಡೆಸಲಾಗುತ್ತಿತ್ತು. ಮೂಕಿ ಚಿತ್ರಗಳು ಪ್ರದರ್ಶಿತವಾಗುತ್ತಿದ್ದದ್ದು ಹೀಗೆ. 1905ರಲ್ಲಿ ನಗರದ ಕೃಷ್ಣರಾಜೇಂದ್ರ ಮಾರ್ಕೆಟ್ ಎದುರಿಗಿನ ಕಲಾಸಿಪಾಳ್ಯದಲ್ಲಿ ಜನೋಪಕಾರಿ ದೊಡ್ಡಣ್ಣ ಶ್ರೀ ಲಕ್ಷ್ಮೀನರಸಿಂಹ ಧರ್ಮ ಸಂಸ್ಥೆಯ ಆವರಣದಲ್ಲಿದ್ದ ದೊಡ್ಡಣ್ಣ ಹಾಲ್‌ನಲ್ಲಿ ರಾಜ್ಯದ ಪ್ರಥಮ ಚಿತ್ರಮಂದಿರ ಆರಂಭವಾಯಿತು. ಪರಕೀಯರ ಆಳ್ವಿಕೆಯ ಅಂದಿನ ಅಗತ್ಯಕ್ಕೆ ತಕ್ಕಂತೆ ಅದನ್ನು ‘ಪ್ಯಾರಾಮೌಂಟ್’ ಚಿತ್ರಮಂದಿರ ಎಂದು ಕರೆಯಲಾಯಿತು. ಸಿನಿಮಾವನ್ನು ‘ಬಯೋಸ್ಕೋಪ್’ ಎಂದು ಅಂದಿನ ದಿನಗಳಲ್ಲಿ ಕರೆಯಲಾಗುತ್ತಿತ್ತು. ಇದರ ನಿರ್ಮಾತೃ ಶ್ರೀನಿವಾಸಲುನಾಯ್ಡು, ರಂಗಸ್ವಾಮಿನಾಯ್ಡು ಮತ್ತು ಸಾಹುಕಾರ ರುದ್ರಪ್ಪನವರು.

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ 1934ರ ಮಾರ್ಚ್ 4ರಂದು ಇದೇ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಸುಮಾರು 70 ವರ್ಷಗಳ ಕಾಲ ಯಶಸ್ವಿಯಾಗಿ ಚಿತ್ರಗಳನ್ನು ಪ್ರದರ್ಶಿಸಿದ ಈ ಚಿತ್ರಮಂದಿರ 1974ರಲ್ಲಿ ನೆಲಸಮವಾಯಿತು. ಅಲ್ಲಿ ಈಗ ಪರಿಮಳ ಮತ್ತು ಪ್ರದೀಪ್ ಚಿತ್ರಮಂದಿರಗಳು ತಲೆ ಎತ್ತಿವೆ. (ಈಗ ಪುನಃ ದೊಡ್ಡಣ್ಣ ಹಾಲ್ ಎಂಬ ಫಲಕವನ್ನು ಹಾಕಿದ್ದಾರೆ.)

ಪ್ಯಾರಾಮೌಂಟ್ ನಂತರ, ಗುಬ್ಬಿ ವೀರಣ್ಣ ಅವರ ಸೆಲೆಕ್ಟ್‌ (ನಂತರ ಗೀತಾ), ಶಿವಾನಂದ ಥಿಯೇಟರ್ (ಇಂದಿನ ಮೂವಿಲ್ಯಾಂಡ್‌) ನಿರ್ಮಾಣವಾದವು. ರಂಗಯ್ಯ ಬ್ರದರ್ಸ್ ಸಂಸ್ಥೆ ಸೂಪರ್‌ ಟಾಕೀಸ್ ನಿರ್ಮಿಸಿತು. ಈ ಚಿತ್ರಮಂದಿರ ಕನ್ನಡ ಚಿತ್ರಗಳಿಗೆ ಮನ್ನಣೆ ನೀಡಿದ ಖ್ಯಾತಿಯಿಂದ ಇತಿಹಾಸದಲ್ಲಿ ವಿಶಿಷ್ಟವಾಗಿ ದಾಖಲಾಗಿದೆ. ಆನಂತರ ಕೆಂಪೇಗೌಡ ರಸ್ತೆಯಲ್ಲಿ ಒಂದೊಂದಾಗಿ ಚಿತ್ರಮಂದಿರಗಳು ತಲೆ ಎತ್ತಿದವು. 1927ರಿಂದ 1943ರವರೆಗೆ ಬೆಂಗಳೂರು ದಕ್ಷಿಣ ಭಾಗವು ಭಾರತದ ಚಲನಚಿತ್ರ ವಿತರಣೆಯ ಕೇಂದ್ರವಾಗಿತ್ತು. ಹೀಗಾಗಿ ಚಿತ್ರಮಂದಿರಗಳಿಗೆ ಮಹತ್ವ ಸಿಕ್ಕಿತು. ಡಾ.ಪಟೇಲ್ ಅವರು ಮೆಜೆಸ್ಟಿಕ್ ಚಿತ್ರಮಂದಿರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ, ಕೆಂಪೇಗೌಡ ರಸ್ತೆಯಲ್ಲಿದ್ದ ಚಿತ್ರಮಂದಿರಗಳ ನಡುವೆ ಹೊಂದಾಣಿಕೆ ತರುವ ಪ್ರಯತ್ನ ಮಾಡಿದರು.

ಬೆಂಗಳೂರಿನ ಬಡಾವಣೆಗಳಲ್ಲಿ ಚಿತ್ರಮಂದಿರಗಳು ಆರಂಭವಾದದ್ದು 1944–45ರಲ್ಲಿ ಶಾರದಾ ಟಾಕೀಸ್ ಮೂಲಕ. ಈ ಚಿತ್ರಮಂದಿರದಲ್ಲಿ ‘ಬೆಳಕಿನ ಆಟ’ದ ವ್ಯವಸ್ಥೆ ಆರಂಭವಾಯಿತು. ಇದು ಪೈಪೋಟಿಗೆ ಕಾರಣವಾಗಿ ಚಿತ್ರರಂಗ ಕ್ರಿಯಾಶೀಲವಾಗಲು ನೆರವಾಯಿತು. ಒಂದೆರೆಡು ವರ್ಷಗಳಲ್ಲೇ ಮಧ್ಯಾಹ್ನದ ಪ್ರದರ್ಶನದ (ಮ್ಯಾಟಿನಿ) ವ್ಯವಸ್ಥೆಯೂ ಜಾರಿಗೆ ಬಂದಿತು. ಪೋಸ್ಟರ್‌ಗಳ ಭರಾಟೆ ಕೂಡ ಇಲ್ಲಿಂದಲೇ ಆರಂಭವಾದದ್ದು. ಇದರ ಹಿಂದೆ ಚಾಲಕ ಶಕ್ತಿಯಾಗಿದ್ದವರು ನಿರ್ಮಾಪಕ ಬಿ.ನಾಗಿರೆಡ್ಡಿ.

1957ರಲ್ಲಿ ಸುಂದರವಾದ ವಿನ್ಯಾಸದೊಂದಿಗೆ ಅಲಂಕಾರ್ ಚಿತ್ರಮಂದಿರ ತಲೆಎತ್ತಿತು. ಪ್ಲಾಸ್ಟಿಕ್‌ ತೆರೆಯ ಸೌಂದರ್ಯ, ಹೆಂಗಸರಿಗೆ ಪ್ರತ್ಯೇಕ ಶೌಚಾಲಯ–ಸ್ತ್ರೀ ಸಹಾಯಕಿ ವ್ಯವಸ್ಥೆ, ಮುಂತಾದ ಸೌಲಭ್ಯಗಳಿದ್ದ ವಿಶಿಷ್ಟ ಚಿತ್ರಮಂದಿರ ಇದಾಗಿತ್ತು. ಆನಂತರ ತ್ರಿವೇಣಿ, ಅಪರ್ಣ, ನಂದಾ ಮುಂತಾದ ಚಿತ್ರಮಂದಿರಗಳು ಆರಂಭವಾದವು.

1968ರ ಜನವರಿ 22ರಂದು ಏಷ್ಯಾದ ಅತಿ ದೊಡ್ಡ ಚಿತ್ರಮಂದಿರ ಎಂಬ ಖ್ಯಾತಿಯೊಂದಿಗೆ ‘ಕಪಾಲಿ’ ಆರಂಭವಾಯಿತು. 1983ರಲ್ಲಿ ಪಕ್ಕದ ಗಂಗಾರಾಮ್ ಕಟ್ಟಡ ಕುಸಿದ ಪರಿಣಾಮ ಭೀಕರವಾಗಿ ಜಖಂಗೊಂಡ ಚಿತ್ರಮಂದಿರ ನವೀಕರಣಗೊಳ್ಳಬೇಕಾಯಿತು. ಅನಂತರ 70ರ ದಶಕದಲ್ಲಿ ನಟರಾಜ್, ಸಂಜಯ, ತ್ರಿವೇಣಿ, ಸಂತೋಷ್, ಉಮಾ, ಶಾಂತಿ, ಬ್ಲೂಮೂನ್, ನರ್ತಕಿ, ಸಂಗೀತ, ಬಾಲಾಜಿ, ಅಭಿನಯ, ಸಾಗರ್, ಸೆಂಟ್ರಲ್ ಮುಂತಾದ ಚಿತ್ರಮಂದಿರಗಳು ಹುಟ್ಟಿಕೊಂಡವು. ಇವುಗಳಲ್ಲಿ ‘ಅಭಿನಯ’ ಚಲಿಸುವ ಮೆಟ್ಟಿಲುಗಳುಳ್ಳ ಮೊದಲ ಚಿತ್ರಮಂದಿರ ಎಂಬ ಖ್ಯಾತಿ ಪಡೆಯಿತು. ಹಾಗೆಯೇ ಮೊದಲ ಮಿನಿ ಚಿತ್ರಮಂದಿರವಾದ ಸಪ್ನ, ಅತ್ಯಾಧುನಿಕ ತಾಂತ್ರಿಕ ಸೌಕರ್ಯಗಳನ್ನು ಅಳವಡಿಸಿಕೊಂಡ ಕಾವೇರಿ, ನವರಂಗ್, ರಾಜಾ ಮಿಲ್ ಮುಚ್ಚಿದಾಗ ಹುಟ್ಟಿಕೊಂಡ ಸಂಪಿಗೆ, ಸವಿತಾ ಮುಂತಾದವು ಮುಂದಿನ ವರ್ಷಗಳಲ್ಲಿ ಚಿತ್ರರಂಗಗಳ ಸಾಲಿಗೆ ಗಮನಾರ್ಹ ಸೇರ್ಪಡೆ ಎನ್ನಿಸಿಕೊಂಡವು.

1990ರ ದಶಕದಲ್ಲಿ ಒಂದೊಂದಾಗಿ ಚಿತ್ರಮಂದಿರಗಳು ಮುಚ್ಚತೊಡಗಿದವು. ಚಿತ್ರಮಂದಿರ ನಿರ್ಮಿಸುವುದಕ್ಕಿಂತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದು ಲಾಭದಾಯಕ ಎನ್ನುವುದು ಅವುಗಳ ನಿರ್ಮಾತೃಗಳ ಅಭಿಪ್ರಾಯವಾಯಿತು.

ಚಿತ್ರಮಂದಿರದ ಸಾಧ್ಯತೆಯನ್ನು ವಿಸ್ತರಿಸುವ ಪ್ರಯತ್ನವೂ ಇತ್ತೀಚೆಗೆ ನಡೆಯುತ್ತಿದೆ. ವಾಣಿಜ್ಯೋದ್ದೇಶದ ಸಮುಚ್ಚಯ ಮತ್ತು ಇತರ ಮನೋರಂಜನೆಯ ಸಾಧ್ಯತೆಯ ಜತೆಗೆ ಚಿತ್ರಮಂದಿರ ಹೊಂದಿದ ಮಲ್ಟಿಪ್ಲೆಕ್ಸ್ ಪದ್ಧತಿ ಈಗಾಗಲೇ ಬೆಂಗಳೂರಿನಲ್ಲಿ ಜನಪ್ರಿಯವಾಗಿದೆ. ಇವುಗಳಲ್ಲಿ ಟಿಕೆಟ್ ದರ ಸದ್ಯಕ್ಕೆ ದುಬಾರಿ ಎನಿಸಿದರೂ ಮುಂದೆ ಇದು ಹೊಸತನಕ್ಕೆ ನಾಂದಿ ಹಾಡಬಲ್ಲ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT