ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗದಲ್ಲಿ ನಾನಿನ್ನೂ ಯಂಗ್‌!

Last Updated 10 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಸಾಹಿತ್ಯ ಸಂವೇದನೆಯ ಗಿರಿರಾಜ್‌ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ. ಅವರ ನಿರ್ದೇಶನದ ‘ಜಟ್ಟ’ ಸಿನಿಮಾ ಇಂದು ತೆರೆಕಾಣುತ್ತಿದೆ. ‘ಕೆಟ್ಟದಾಗಿ ಮಾಡಿದರೂ ಪರವಾಗಿಲ್ಲ, ದೇವನೂರರ ‘ಕುಸುಮಬಾಲೆ’ಯನ್ನು ಸಿನಿಮಾ ಮಾಡಬೇಕು’ ಎನ್ನುವುದು ಅವರ ಆಸೆ. ಕಾರಂತರ ಮೂಕಜ್ಜಿ ಕೂಡ ಕನಸಾಗಿ ಅವರನ್ನು ಕಾಡುತ್ತಿದ್ದಾಳೆ.

ಮನೆಯವರಿಗೆ ಮಗ ಪದವಿ ಪೂರೈಸಿ ಉದ್ಯೋಗ ಹಿಡಿಯಲಿ ಎನ್ನುವ ಆಸೆ. ಆದರೆ ಆತನದ್ದು ರಂಗ ಚಟುವಟಿಕೆಗಳ ಮೂಲಕ ಜನರನ್ನು ತಲುಪುವ ಹಂಬಲ. ಪದವಿ ಪೂರ್ಣಗೊಳಿಸಿದರೆ ತನ್ನ ಕನಸುಗಳಿಗೆ ಕತ್ತರಿ ಎನ್ನುವುದು ಸ್ಪಷ್ಟವಾಗುತ್ತಲೇ ಆತ ಕಂಡುಕೊಂಡಿದ್ದು ಪರೀಕ್ಷೆಯಲ್ಲಿ ಫೇಲಾಗುವ ದಾರಿ. ಆ ತರುಣನ ಹೆಸರು ಗಿರಿರಾಜ್; ಇಂದು (ಅ.11) ತೆರೆ ಕಾಣುತ್ತಿರುವ ‘ಜಟ್ಟ’ ಚಿತ್ರದ ನಿರ್ದೇಶಕರು.
ಸಾಹಿತ್ಯದ ಹಿನ್ನೆಲೆಯ ಕೆಲವು ಯುವ ನಿರ್ದೇಶಕರು ಕನ್ನಡ ಚಿತ್ರರಂಗ­ದಲ್ಲಿದ್ದಾರೆ. ಅವರ ಸಾಲಿಗೆ ಗಿರಿರಾಜ್ ಕೂಡ ಸೇರುತ್ತಾರೆ. ಅವರ ‘ಕಥೆಗೆ ಸಾವಿಲ್ಲ’ ಕಾದಂಬರಿ 2008-–09ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಪಡೆದಿತ್ತು. ‘ಎಲ್ಲೋ ಹುಟ್ಟಿ ಎಲ್ಲೋ ಬೆಳೆದು’ ಕಥೆ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿತ್ತು. ‘ನವಿಲಾದವರು’ ಸಿನಿಮಾವನ್ನು ಕೇವಲ ಮೂವತ್ತೈದು ಸಾವಿರ ರೂಪಾಯಿ ವೆಚ್ಚದಲ್ಲಿ ರೂಪಿಸುವ ಮೂಲಕ ಗಿರಿರಾಜ್‌ ಸುದ್ದಿ ಮಾಡಿದ್ದರು. ‘ಸಿನಿಮಾ ರಂಜನೆ’ ಜೊತೆ ಮಾತನಾಡಿದ ಗಿರಿರಾಜ್‌ ಅವರ ಮಾತುಗಳ ತುಂಬ ‘ಹೊಸತಾಗಿ ಏನನ್ನಾದರೂ ಮಾಡಬೇಕು’ ಎನ್ನುವ ಹಂಬಲ ಎದ್ದುಕಾಣುತ್ತಿತ್ತು. ಅವರೊಂದಿಗಿನ ಮಾತುಕತೆಯ ಆಯ್ದಭಾಗ ಇಲ್ಲಿದೆ.

‘ಜಟ್ಟ’ ಚಿತ್ರದ ಕಥೆ ಏನು?
‘ಜಟ್ಟ’ ಕಾಡಿನೊಳಗಿನ ಸಂಘರ್ಷದ ಕಥಾನಕ. ಬುಡಕಟ್ಟು ಸಂಸ್ಕೃತಿ– ಆಧುನಿಕತೆ, ಗಂಡು– ಹೆಣ್ಣು, ನಂಬಿಕೆ ಮತ್ತು ಧರ್ಮ, ದಯೆ ಮತ್ತು ಹಿಂಸೆ, ನಂಬಿಕೆ ಮತ್ತು ರಾಜಕಾರಣದ ಸಂಘರ್ಷದ ಚಿತ್ರಣ. ‘ಜಟ್ಟ’ ಎನ್ನುವ ವ್ಯಕ್ತಿಯನ್ನು ಪ್ರತಿನಿಧಿಸಿಕೊಂಡು ಬುಡಕಟ್ಟು ಸಂಸ್ಕೃತಿಯ ಬದುಕಿನ ನಾನಾ ಮುಖಗಳತ್ತ ಹೆಣೆಯಲಾಗಿರುವ ಕಥೆ. ಸ್ತ್ರೀ ಸಂವೇದನೆಗಳು ಚಿತ್ರದಲ್ಲಿ ಪ್ರಮುಖವಾಗಿವೆ. ಪುರುಷ ಸಮಾಜ ಶೋಷಕ ವರ್ಗದಲ್ಲಿದೆ. ಅದರ ಒಂದು ಭಾಗ ನಾನು ಎಂಬುದು ಕೂಡ ಸತ್ಯ. ಆ ಪಾಪಪ್ರಜ್ಞೆಯೂ ಚಿತ್ರದ ಹುಟ್ಟಿಗೆ ಕಾರಣವಿರಬಹುದು.

ಚಿತ್ರಕ್ಕೆ ಈ ವಸ್ತುವನ್ನು ಆಯ್ಕೆ ಮಾಡಲು ಕಾರಣ?
ನಾನು ಮೂಲತಃ ರಂಗಭೂಮಿಯಿಂದ ಬಂದವನು. ಬೀದಿನಾಟಕಗಳಲ್ಲಿ ತೊಡಗಿದವನು. ದನಿ ಇಲ್ಲದವರ ದನಿಯಾಗಲು ರಂಗಚಟುವಟಿಕೆಗಳು ಮತ್ತು ಸಿನಿಮಾ ಒಂದು ಮಾಧ್ಯಮ ಎನ್ನುವುದನ್ನು ಕಂಡುಕೊಂಡವನು. ಮಲೆನಾಡು– ಕರಾವಳಿಯ ಕಾಡಿನ ವಾತಾವರಣ ನನ್ನ ಬಾಲ್ಯವನ್ನು ರೂಪಿಸಿದೆ. ಕಾಡಿನ ಬುಡಕಟ್ಟು ಜನರು ಈ ಹಿಂದಿನ ಸಹಜ ಜೀವನದಿಂದ ದೂರವಾಗುತ್ತಿದ್ದಾರೆ. ಇದಕ್ಕೆ ಟಿಂಬರ್‌ ಲಾಬಿ, ಕಾಡಿನ ಸಂಸ್ಕೃತಿ ನಾಶ ಮತ್ತಿತರರ ಕಾರಣಗಳಿವೆ. ವೈಚಾರಿಕತೆ ಮತ್ತು ಅಭಿವೃದ್ಧಿಯೊಂದಿಗಿನ ಬುಡಕಟ್ಟು ಜನರ ಮುಖಾಮುಖಿ, ತಾಕಲಾಟ ಮತ್ತು ನನ್ನೊಳಗಿನ ಸಂಘರ್ಷ ಒಗ್ಗೂಡಿ ರೂಪುಪಡೆದವನು ‘ಜಟ್ಟ’.

‘ಜಟ್ಟ’ ಯಾವ ವರ್ಗದ ಚಿತ್ರ?
ವ್ಯಾಪಾರಿ, ಕಲಾತ್ಮಕ ಎಂದು ನಾನು ವಿಭಾಗಿಸುವುದಿಲ್ಲ. ಸಂಗೀತ, ತಂತ್ರಜ್ಞತೆ, ಲೈಟಿಂಗ್‌ನಲ್ಲಿ ಕಲಾತ್ಮಕತೆ ಕಾಣಬಹುದು. ಮುಖ್ಯವಾಹಿನಿ (ವ್ಯಾಪಾರಿ) ಚಿತ್ರಗಳಂತೆ ನೋಡಿಸಿಕೊಂಡು ಹೋಗುವ ಗುಣವನ್ನೂ ಹೊಂದಿದೆ. ಶಿವರಾಮ ಕಾರಂತರ ಪುಸ್ತಕವನ್ನು ಕೌಂಡಿನ್ಯ ಇಲ್ಲವೆ ಬಿ.ಕೆ. ಅನಂತರಾಮ್‌ ಬರೆದಿದ್ದರೆ ಯಾವ ರೀತಿ ಬರೆಯುತ್ತಿದ್ದರೋ ಆ ರೀತಿ ಇದೆ ಎನ್ನಬಹುದಷ್ಟೇ.

‘ಸೇಡೊಂದೆ ಪರಮ ಸುಖ’ ಅಡಿಬರಹ ಚಿತ್ರಕ್ಕಿದೆ, ಇದರ ಅರ್ಥ ಏನು?
ಮಹಾಭಾರತದಲ್ಲಿ ಶಕುನಿಯ ಮಾತು ಇದು. ಮನುಷ್ಯನ ಮನೋಧರ್ಮ ಸಹಜವಾಗಿ ಒಂದು ಛಲದಲ್ಲಿ ಬದುಕುತ್ತದೆ. ನಮಗೆ ಆಗದವರು ಇಲ್ಲವೇ ಬೇರೊಬ್ಬರಿಗೆ ಕೆಟ್ಟದಾದಾಗ ನಾವು ಖುಷಿ ಪಡುತ್ತೇವೆ. ಇದು ಚಿತ್ರದಲ್ಲಿ ಕಾಣುವ ಪ್ರಮುಖ ಅಂಶಗಳಲ್ಲೊಂದು.
ಮನರಂಜನೆಯೇ ಮುಖ್ಯವಾಗಿರುವ ಇಂದು ನಿಮ್ಮ ಸಿನಿಮಾವನ್ನು ಜನ ಸ್ವೀಕರಿಸುವರೆ?

ಮನರಂಜನೆ ಚಿತ್ರಕ್ಕೆ ಅವಶ್ಯಕ. ಜೊತೆಗೆ ಮನೋವಿಕಾಸವೂ ಇರಬೇಕು ಎನ್ನುವುದು ನನ್ನ ನಿಲುವು. ಮಹಾಭಾರತದಲ್ಲಿ ಮನರಂಜನೆ, ಸೆಕ್ಸ್‌, ಕೌರ್ಯ ಎಲ್ಲವೂ ಇದೆ. ಆ ಕಾರಣದಿಂದಲೇ ಅದು ಎಲ್ಲ ಕಾಲಘಟ್ಟದಲ್ಲೂ ಸಲ್ಲುತ್ತಿದೆ. ನನ್ನ ದೃಷ್ಟಿಯಲ್ಲಿ ಕಥೆಯ ನಿರೂಪಣೆಯೇ ಮುಖ್ಯವಾದದ್ದು. ಅದುವೇ ಜನರನ್ನು ಸೆಳೆಯುವುದು.

ನಿಮ್ಮ ಸಾಹಿತ್ಯ, ಸಿನಿಮಾ ನೆಲೆಯನ್ನು ಗಟ್ಟಿಗೊಳಿಸಿದೆಯೇ?
ಹೌದು. ಕಥೆ, ಕವಿತೆಗಳಿಗೆ ಆರಂಭ, ಬೆಳವಣಿಗೆ ಅಂತ್ಯ ಎನ್ನುವ ರೀತಿಯಲ್ಲಿಯೇ ಸಿನಿಮಾ ಸಹ ರೂಪು ಪಡೆಯುತ್ತದೆ. ಹೆಚ್ಚಿನ ಓದು ಬೇರೆ ಬೇರೆ ರೀತಿಯಲ್ಲಿ ಸ್ಪಂದಿಸಲು ನೆರವಾಗುತ್ತದೆ.  ಓದು ಇಲ್ಲದಿದ್ದರೆ ಸಮಸ್ಯೆಗಳನ್ನು ಬೇರೊಂದು ರೀತಿಯಲ್ಲಿ ನೋಡಲು ಸಾಧ್ಯವಿಲ್ಲ.

ಸಾಹಿತ್ಯದ ಹಿನ್ನೆಲೆಯವರು ನೀವು. ಸಾಹಿತ್ಯ ಕೃತಿಗಳನ್ನು ಸಿನಿಮಾಕ್ಕೆ ಒಗ್ಗಿಸುವಾಗ ಯಾವ ರೀತಿಯ ಪ್ರಯತ್ನಗಳಾಗಬೇಕು ಎಂದು ಭಾವಿಸಿದ್ದೀರಿ? 
ಪುಸ್ತಕ ಓದಿದಾಗ ನೀಡುವ ಅನುಭವ ಮತ್ತು ಆ ಕೃತಿ ಚಿತ್ರವಾದಾಗ ನೀಡುವ ಅನುಭವ ಬೇರೆ ಬೇರೆಯಾಗಿರಬೇಕು. ಭೈರಪ್ಪನವರ ‘ನಾಯಿ ನೆರಳು’ ಸನಾತನ ಸಂಪ್ರದಾಯಗಳನ್ನು ಪ್ರತಿನಿಧಿಸುವ ಮತ್ತು ಬಿಂಬಿಸುವ ಕೃತಿ. ಆ ಕೃತಿ ಗಿರೀಶ್ ಕಾಸರವಳ್ಳಿಯವರ ಕೈಯಲ್ಲಿ ಸಿನಿಮಾ ಚೌಕಟ್ಟಿಗೆ ಸಿಕ್ಕಿದಾಗ ಹೊಸ ಆಯಾಮ ಪಡೆಯಿತು. ಅಲ್ಲಿ ಸ್ತ್ರೀಯೊಬ್ಬಳ ನೋವುಗಳು ತೆರೆದುಕೊಂಡವು. ಇಲ್ಲಿ ಕಥೆಯ ಆಶಯಕ್ಕೆ ಧಕ್ಕೆ ಎನ್ನುವ ಮಾತು ಬರುವುದೇ ಇಲ್ಲ. ಒಂದು ಕಥೆಯನ್ನು ಅಥವಾ ಕೃತಿಯನ್ನು ಎಲ್ಲರೂ ಏಕರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ಅದು ಅವರವರ ಭಾವನೆಗಳಿಗೆ ಮತ್ತು ಪರಿಸರಕ್ಕೆ ಸಂಬಂಧಿಸಿದ್ದು. 

ನಿಮ್ಮ ಸಿನಿಮಾ ಪರಿಭಾಷೆ ಯಾವ ರೀತಿಯದು?
ಗೊತ್ತಿಲ್ಲ. ಚಿತ್ರಜೀವನದಲ್ಲಿ ಹುಡುಕಾಟದಲ್ಲಿರುವವ ನಾನು. ನಿರ್ದೇಶಕ ತನ್ನ ತಲೆಯಲ್ಲಿರುವ ಉದ್ದೇಶಿತ ಭಾವವನ್ನು ಪ್ರೇಕ್ಷಕನ ಮನಸ್ಸಿನಲ್ಲಿ ರಸೋತ್ಪತ್ತಿ ಮೂಡಿಸಬೇಕು. ಮುಖ್ಯವಾಗಿ ಸಾಮಾಜಿಕ ಬದ್ಧತೆ ಮತ್ತು ವಸ್ತು ವಿಷಯಕ್ಕೆ ನಿಷ್ಠೆ ಇರಬೇಕು.

ವ್ಯಾಪಾರಿ (ಮುಖ್ಯವಾಹಿನಿ) ಚಿತ್ರಗಳಲ್ಲಿ ತೊಡಗುವುದಿಲ್ಲವೇ?
ತೊಡಗುವೆ. ಆದರೆ ಹೂಡಿದ ಬಂಡವಾಳ ವಾಪಸು ಬರುತ್ತದೆ ಎನ್ನುವ ಭರವಸೆ ನನಗೆ ಇದ್ದರೆ ಮಾತ್ರ.

ಸಾಮಾಜಿಕ ಸಮಸ್ಯೆಗಳನ್ನು ಮತ್ತು ಜಿಜ್ಞಾಸೆಗೆ ಹಚ್ಚುವ ವಸ್ತುಗಳನ್ನು ಮಾತ್ರ ಚಿತ್ರರೂಪಕ್ಕಿಳಿಸಬೇಕು ಎಂದುಕೊಂಡಿದ್ದೀರಾ?
ಎಲ್ಲ ಚಿತ್ರಗಳಿಗೂ ಸಮಸ್ಯೆಗಳೇ ವಸ್ತುಗಳು. ಮುಖ್ಯವಾಹಿನಿಯ ಸಿನಿಮಾಗಳಲ್ಲಿ ರೌಡಿಸಂನ ಕಥೆ ಹೇರಳವಾಗಿದ್ದು ಇದೂ ಒಂದು ಸಾಮಾಜಿಕ ಸಮಸ್ಯೆಯೇ. ಇತ್ತೀಚಿನ ರೀಮೇಕ್‌ ಚಿತ್ರ ‘ಬೃಂದಾವನ’ದಲ್ಲಿ ಎರಡು ಕುಟುಂಬಗಳ ನಡುವಿನ ಸಂಘರ್ಷವಿದೆ. ಇದೂ ಒಂದು ಸಮಸ್ಯೆಯೇ. ಪ್ರತಿ ಚಿತ್ರಕಥೆಗಳೂ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತವೆ. ನಾವು ಯಾವ ರೀತಿ ಸ್ಪಂದಿಸುತ್ತೇವೆ ಮತ್ತು ನಿರೂಪಿಸುತ್ತೇವೆ ಎನ್ನುವುದು ಮುಖ್ಯ. ಕೃಷ್ಣ–ಸುಧಾಮನ ಕಥೆ ರಾಜ ಮತ್ತು ಸ್ನೇಹಿತನ ಕಥೆಯಾದರೂ ಅದು ವರ್ಗ ಆಧಾರಿತವಾಗಿದೆ. 

ಮುಂದಿನ ಪ್ರಾಜೆಕ್ಟುಗಳು?
‘ಮೈತ್ರಿ’ ಚಿತ್ರ ಮುಂದಿನ ವರ್ಷ ತೆರೆಕಾಣಲಿದೆ. ‘ಅದ್ವೈತ’ ಬಿಡುಗಡೆ ಹಂತದಲ್ಲಿದೆ. ಸದ್ಯ ಯಾವುದೇ ಹೊಸ ಅವಕಾಶಗಳಿಲ್ಲ. ನಾನಿನ್ನೂ ಚಿತ್ರರಂಗದಲ್ಲಿ ಯಂಗ್‌. ಎದ್ದಿಲ್ಲ ಬಿದ್ದಿಲ್ಲ. ಆದರೆ ನನ್ನ ಡ್ರೀಮ್ ಪ್ರಾಜೆಕ್ಟ್ ದೇವನೂರರ ‘ಕುಸುಮಬಾಲೆ’ಯನ್ನು ಸಿನಿಮಾ ಮಾಡುವುದು. ಚಿತ್ರ ಮಾಡಿದರೂ ಕೃತಿಯಷ್ಟು ಗಟ್ಟಿತನದಿಂದ ಮಾಡಲು ಸಾಧ್ಯವಿಲ್ಲ ನಿಜ. ಕೆಟ್ಟದ್ದಾದರೂ ಪ್ರಯತ್ನ ಮಾಡಬೇಕು ಎನ್ನುವ ಕನಸು. ಮತ್ತೊಂದು ಕನಸು ‘ಮೂಕಜ್ಜಿಯ ಕನಸು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT