ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗದಲ್ಲಿ ಮರೆಯಾಗುತ್ತಿರುವ ಶ್ರದ್ಧೆ: ವಿಷಾದ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಚಿತ್ರರಂಗಲ್ಲಿದ್ದ ಆರಂಭಕಾಲದಲ್ಲಿದ್ದ ಜನರು ತಮ್ಮ ಕೆಲಸದ ಬಗ್ಗೆ ಅಪಾರ ಶ್ರದ್ಧೆ ಹೊಂದಿದ್ದರು. ಆದರೆ ಇಂದಿನ ದಿನಗಳಲ್ಲಿ ಆ ಶ್ರದ್ಧೆ ಕಾಣುತ್ತಿಲ್ಲ~ ಎಂದು ಹಿರಿಯ ಛಾಯಾಗ್ರಾಹಕ ಹಾಗೂ ನಿರ್ದೇಶಕ ಕೆ.ಜಾನಕೀರಾಮ್ ವಿಷಾದ ವ್ಯಕ್ತ ಪಡಿಸಿದರು.

ನಗರದ ಬಾದಾಮಿ ಹೌಸ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ತಿಂಗಳ ಮಾತುಕತೆ `ಬೆಳ್ಳಿಹೆಜ್ಜೆ~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಚಿತ್ರರಂಗದ ಆರಂಭದ ದಿನಗಳಲ್ಲಿ ಹಣ ಹಾಗೂ ತಂತ್ರಜ್ಞಾನದ ಕೊರತೆ ಇದ್ದರೂ ಅಂದಿನ ಚಿತ್ರಗಳು ಉತ್ತಮ ಗುಣಮಟ್ಟದೊಂದಿಗೆ ಮೂಡಿ ಬರುತ್ತಿದ್ದವು. ಆದರೆ ಇಂದು ಅಪಾರವಾದ ಹಣ ಹಾಗೂ ಮುಂದುವರೆದ ತಂತ್ರಜ್ಞಾನವಿದೆ. ಆದರೆ ಶ್ರದ್ಧೆಯ ಕೊರತೆಯಿಂದಾಗಿ ಇಂದಿನ ಚಿತ್ರಗಳ ಗುಣಮಟ್ಟ ಕುಸಿಯುತ್ತಿದೆ. ಕೆಲಸವನ್ನು ಪ್ರೀತಿಸುವ ಗುಣ ಇಂದಿನ ಚಿತ್ರರಂಗದಲ್ಲಿರುವರಿಗೆ ಇಲ್ಲವಾಗಿದೆ~ ಎಂದರು.

`ನಮ್ಮ ಕಾಲದಲ್ಲಿ ಸಿನಿಮಾ ಮಾಡುವುದೆಂದರೆ ಒಂದು ಕಲ್ಪವೃಕ್ಷವನ್ನು ಬೆಳೆಸಿದಂತಿತ್ತು. ಅದರ ಯಾವ ಭಾಗಗಳೂ ನಿರುಪಯುಕ್ತ ಎನಿಸುತ್ತಿರಲಿಲ್ಲ. ಆದರೆ ಇಂದು ಚಿತ್ರ ನಿರ್ಮಾಣದ ಎಲ್ಲ ಹಂತಗಳೂ ಸುಲಭವಾಗಿರುವ ಕಾರಣ ಚಲನಚಿತ್ರ ಕೇವಲ ಮಾರಾಟದ ಸರಕು ಎಂಬ ಭಾವನೆ ಎಲ್ಲರಲ್ಲೂ ಮನೆ ಮಾಡಿದೆ. ವರ್ಷಕ್ಕೆ ನೂರಾರು ಚಿತ್ರಗಳು ನಿರ್ಮಾಣವಾದರೂ ಅವುಗಳಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಗೆಲ್ಲುತ್ತಿವೆ. ಹೀಗಾಗಿ ಇಂದಿನ ಪ್ರೇಕ್ಷಕರೇ ಚಿತ್ರರಂಗದ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ~ ಎಂದು ಅವರು ನುಡಿದರು.

`ಚಿತ್ರರಂಗದಲ್ಲಿ ಹಲವು ದಶಕಗಳ ಕಾಲದಿಂದ ಇದ್ದರೂ ಇಲ್ಲಿ ನನಗೆ ಆತ್ಮೀಯರಾದವರು ಕೆಲವೇ ಜನರು ಮಾತ್ರ. ಸಮೀಉಲ್ಲಾ ಹಾಗೂ ನಾನು ಸಹೋದರರಂತೆ ಇದ್ದೆವು. ನಂತರದ ದಿನಗಳಲ್ಲಿ ಅಂಬರೀಶ್ ನನಗೆ ಹತ್ತಿರವಾದರು. ನಮ್ಮ ಕಾಲದಲ್ಲಿ ಚಿತ್ರರಂಗದಲ್ಲಿ ಇರುವವರನ್ನು ಅಯೋಗ್ಯರಂತೆ ನೋಡಲಾಗುತ್ತಿತ್ತು.

ಚಿತ್ರರಂಗದಲ್ಲಿರುವ ಕಾರಣಕ್ಕೇ ನನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಹೀಗಾಗಿ ನಾನು ಬ್ರಹ್ಮಚಾರಿಯಾಗಿಯೇ ಉಳಿಯಬೇಕಾಯಿತು~ ಎಂದು ತಮ್ಮ ಜೀವನಾನುಭವಗಳನ್ನು ಹಂಚಿಕೊಂಡರು.
`ಸತ್ಯಹರೀಶ್ಚಂದ್ರ, ಲಗ್ನಪತ್ರಿಕೆ, ಗಾಂಧಿ ನಗರ ನನ್ನ ಕೆಲಸದಲ್ಲಿ ಹೆಚ್ಚು ತೃಪ್ತಿಕೊಟ್ಟ ಚಿತ್ರಗಳು. ಗಾಂಧಿನಗರ ಚಿತ್ರದ `ನೀ ಮುಡಿದಾ ಮಲ್ಲಗೆ ಹೂವಿನ ಮಾಲೆ~ ಹಾಡಿನ ಚಿತ್ರೀಕರಣವನ್ನು ಇಂದಿಗೂ ಜನರು ಮೆಚ್ಚುತ್ತಾರೆ. ಹಿಂದೆ ಚಿತ್ರಕಥೆಯನ್ನು ರೂಪಿಸಲೇ ಆರು ತಿಂಗಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಚಿತ್ರಕಥೆಯನ್ನು ಸಂಪೂ ರ್ಣವಾಗಿ ಸಿದ್ಧ ಪಡಿಸಿಕೊಂಡು ನಂತರ ಚಿತ್ರೀಕರಣಕ್ಕೆ ತೊಡಗುತ್ತಿದ್ದೆವು. ಇಂದು ಚಿತ್ರ ನಿರ್ಮಾಣದ ವ್ಯಾಕರಣವೇ ಬದಲಾಗಿದೆ~ ಎಂದರು.

`ಸದ್ಯ `ಸೆಂಟ್ರಲ್ ಜೈಲ್~ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದು, ಹೊಸ ರೂಪದೊಂದಿಗೆ ಮತ್ತೆ `ಲಗ್ನಪತ್ರಿಕೆ~ ಚಿತ್ರವನ್ನು ನಿರ್ಮಿಸುವ ಕನಸಿದೆ. ಇಂದಿನ ಚಿತ್ರರಂಗದ ಕೆಟ್ಟ ವಾತಾವರಣದಿಂದಾಗಿ ನಾನು ಮತ್ತೆ ಚಿತ್ರ ನಿರ್ಮಿಸುವುದು ಬೇಡ ಎಂದು ಹಲವು ಗೆಳೆಯರು ಹೇಳುತ್ತಿದ್ದಾರೆ. ಆದರೆ ಹಣ ಕಳೆದುಕೊಂಡರೂ ಪರವಾಗಿಲ್ಲ, ಚಿತ್ರ ನಿರ್ಮಿಸಲೇಬೇಕು ಎಂಬ ಕನಸು ತಲೆ ಹೊಕ್ಕಿದೆ~ ಎಂದು ಅವರು ತಮ್ಮ ಚಿತ್ರ ನಿರ್ಮಾಣದ ಕನಸನ್ನು ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್, ಸಂಚಾಲಕರಾದ ಎಚ್.ಎನ್.ಮಾರುತಿ ಮತ್ತು ಎಸ್. ಎನ್.ರವಿಶಂಕರ್, ಗಾಯತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT