ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗವೆಂದರೆ ಕೇವಲ ಬಾಲಿವುಡ್ ಅಲ್ಲ

ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಮತ
Last Updated 14 ಜುಲೈ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಭಾರತೀಯ ಚಿತ್ರರಂಗ ಎಂದರೆ ಕೇವಲ ಬಾಲಿವುಡ್ ಸಿನಿಮಾಗಳು ಮಾತ್ರವಲ್ಲ. ಭಾರತದ ಎಲ್ಲ ಭಾಷೆಯ ಸಿನಿಮಾಗಳು ಸೇರಿ ಭಾರತೀಯ ಚಿತ್ರರಂಗವಾಗಿದೆ' ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ನಡೆದ `ವಿಶ್ವ ಸಿನಿಮಾ ಅಧ್ಯಯನ ಕೇಂದ್ರ'ದ ಉದ್ಘಾಟನೆ ಹಾಗೂ `ಮಾತು ಬರುವ ತನಕ' ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಷ್ಟ್ರೀಯ ಮಟ್ಟದಲ್ಲಿ ಕೇವಲ ಬಾಲಿವುಡ್ ಸಿನಿಮಾಗಳನ್ನು ಮಾತ್ರ ಭಾರತೀಯ ಸಿನಿಮಾಗಳು ಎಂದು ಬಿಂಬಿಸಲಾಗುತ್ತಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಹೆಚ್ಚಾಗಿ ಬಾಲಿವುಡ್ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಅವು ಮಾತ್ರ ಭಾರತೀಯ ಸಿನಿಮಾಗಳು ಎಂಬಂತೆ ತೋರಿಸಲಾಗುತ್ತಿದೆ. ಅಪರೂಪಕ್ಕೆಂಬಂತೆ ಕನ್ನಡ ಹಾಗೂ ಇತರೆ ಭಾಷೆಗಳ ಸಿನಿಮಾಗಳು ಈ ಚಿತ್ರೋತ್ಸವಗಳಲ್ಲಿ ಸ್ಥಾನ ಪಡೆಯುತ್ತವೆ' ಎಂದರು.

`ವಿಶ್ವದ ಸಿನಿಮಾ ಹಾಗೂ ಎಲ್ಲ ಭಾರತೀಯ ಭಾಷೆಯ ಸಿನಿಮಾಗಳ ಚಾರಿತ್ರಿಕ ಅಂಶಗಳನ್ನು ದಾಖಲಿಸುವ ಮೌಲಿಕ ಕಾರ್ಯವನ್ನು ರಾಮದಾಸ ನಾಯ್ಡು ಅವರು `ಮಾತು ಬರುವ ತನಕ' ಪುಸ್ತಕದಲ್ಲಿ ಮಾಡಿದ್ದಾರೆ. ಆಫ್ರಿಕನ್, ರುಮೇನಿಯನ್, ಚಿಲಿ, ಏಷ್ಯನ್ ಸಿನಿಮಾಗಳ ಇತಿಹಾಸದ ವಿವರಗಳನ್ನು ನೀಡಿದ್ದಾರೆ. ವಿಶ್ವ ಸಿನಿಮಾ ಚರಿತ್ರೆಯ ಬಗ್ಗೆ ಕನ್ನಡದಲ್ಲಿ ಈವರೆಗೆ ಸರಿಯಾದ ಕೃತಿಗಳು ಬಂದಿಲ್ಲ. ಈ ಕೊರತೆ ನೀಗುವ ಕೃತಿ ಇದು' ಎಂದರು.

`ಸಿನಿಮಾ ಕ್ಷೇತ್ರದ ಆಳವಾದ ಅಧ್ಯಯನದಿಂದ ಈ ಕೃತಿ ಮೂಡಿಬಂದಿದೆ. ಇದು ಸಿನಿಮಾ ಕ್ಷೇತ್ರದ ಬಗೆಗಿನ ಶಾಸ್ತ್ರೀಯ ಕೃತಿ' ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

`ಸಾಹಿತ್ಯದಂತೆಯೇ ಸಿನಿಮಾ ಕೂಡ ಅಭಿರುಚಿ ಬೆಳೆಸುವ ಮಾಧ್ಯಮ. ಆದರೆ, ಅನೇಕರಿಗೆ ಸಿನಿಮಾದ ಬಗ್ಗೆ ಅಸಡ್ಡೆಯೇ ಹೆಚ್ಚು. ಸಿನಿಮಾ ನೋಡುವುದು ಒಂದು ಕೃತಿಯನ್ನು ಓದಿದಂತೆ. ಸಿನಿಮಾ ಬದುಕಿನ ಒಂದು ಭಾಗ' ಎಂದು ಕಥೆಗಾರ ಸಾಹಿತಿ ಕುಂ.ವೀರಭದ್ರಪ್ಪ ನುಡಿದರು.

`ನನ್ನ ವಿದ್ಯಾರ್ಥಿ ರಾಮದಾಸ ನಾಯ್ಡು ಈ ಮೌಲಿಕ ಕೃತಿ ನೀಡಿರುವುದು ನನಗೆ ಹೆಮ್ಮೆ ಎನಿಸುತ್ತಿದೆ' ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

ಪುಸ್ತಕದ ಲೇಖಕ ಪಿ.ಆರ್.ರಾಮದಾಸ ನಾಯ್ಡು, `ವಿಶ್ವ ಸಿನಿಮಾ ಸಮಗ್ರ ಅಧ್ಯಯನ ಮಾಲಿಕೆಯ ಮೊದಲ ಸಂಪುಟ ಈ ಪುಸ್ತಕ. ಇನ್ನೂ ನಾಲ್ಕು ಸಂಪುಟಗಳಲ್ಲಿ ವಿಶ್ವ ಸಿನಿಮಾದ ಸಮಗ್ರ ಅಧ್ಯಯನದ ಪುಸ್ತಕಗಳನ್ನು ಹೊತರುವ ಯೋಜನೆ ಇದೆ' ಎಂದರು.
ವಿಶ್ವ ಸಿನಿಮಾ ಅಧ್ಯಯನ ಕೇಂದ್ರ ಹೊರ ತಂದಿರುವ ಪುಸ್ತಕದ ಬೆಲೆ ರೂ.600.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT