ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಸಿಕರ ಎದೆಯ ಕೋಗಿಲೆ ಸುಶೀಲಾ

ವ್ಯಕ್ತಿ
Last Updated 3 ಏಪ್ರಿಲ್ 2016, 15:55 IST
ಅಕ್ಷರ ಗಾತ್ರ

ಅಮರ–ಮಧುರ ಎನ್ನುವಂತಹ ಕನ್ನಡ ಸಿನಿಮಾಗಳ ಒಂದಷ್ಟು ಹಳೆಯ ಗೀತೆಗಳನ್ನು ನೆನಪಿಸಿಕೊಳ್ಳಿ: ‘ಅಮರ ಮಧುರ ಪ್ರೇಮ’ (ರತ್ನಗಿರಿ ರಹಸ್ಯ), ‘ಮೆಲ್ಲುಸಿರೆ ಸವಿಗಾನ’ (ವೀರಕೇಸರಿ), ‘ಒಲವೆ ಜೀವನ ಸಾಕ್ಷಾತ್ಕಾರ’ (ಸಾಕ್ಷಾತ್ಕಾರ), ‘ಹಾರುತ ದೂರಾ ದೂರಾ’ (ರಾಣಿ ಹೊನ್ನಮ್ಮ), ‘ಬಾಳ ಬಂಗಾರ ನೀನು’ (ಬಂಗಾರದ ಮನುಷ್ಯ), ‘ನೀ ಬರುವ ದಾರಿಯಲ್ಲಿ ನಗೆಹೂವು ಬಾಡದಿರಲಿ’ (ಹೃದಯ ಪಲ್ಲವಿ), ‘ತುಟಿಯ ಮೇಲೆ ತುಂಟ ಕಿರುನಗೆ’ (ಮನ ಮೆಚ್ಚಿದ ಮಡದಿ), ‘ಎಲ್ಲೇ ಇರು ಹೇಗೇ ಇರು’ (ಕಸ್ತೂರಿ ನಿವಾಸ),

‘ನನ್ನೆದೆಯ ಮಾತೆಲ್ಲ ನೀ ಆಡಬೇಕು’ (ಭಲೇ ಭಾಸ್ಕರ), ‘ಕರ್ಪೂರದಾ ಗೊಂಬೆ ನಾನು’ (ನಾಗರಹಾವು), ‘ವಿರಹ ನೂರು ನೂರು ತರಹ’ (ಎಡಕಲ್ಲು ಗುಡ್ಡದ ಮೇಲೆ), ‘ಹೂವು ಚೆಲುವೆಲ್ಲ ನಂದೆಂದಿತು’ (ಹಣ್ಣೆಲೆ ಚಿಗುರಿದಾಗ), ‘ಏನೋ ಎಂತೋ’ (ಅಮರಶಿಲ್ಪಿ ಜಕಣಾಚಾರಿ)– ಈ ಎಲ್ಲ ಗೀತೆಗಳಲ್ಲಿನ ಒಂದು ಸಾಮಾನ್ಯ ಅಂಶ ಪಿ.ಸುಶೀಲಾ.

ಭಾರತೀಯ ಚಿತ್ರರಂಗ ಹಲವು ಅಪ್ರತಿಮ ಗಾಯಕಿಯರನ್ನು ಕಂಡಿದೆ. ಆದರೆ, ಮಾಧುರ್ಯದ ವಿಷಯಕ್ಕೆ ಬಂದರೆ ಹೆಚ್ಚು ಆಪ್ತವಾಗುವ ಹೆಸರು ಸುಶೀಲಾ. ಅಡಿಗೆರೆ ಎಳೆಯುವಂತೆ ಹೇಳುವುದಾದರೆ ಮಾಧುರ್ಯಕ್ಕೆ ಪರ್ಯಾಯ ಸುಶೀಲಾ. ದಣಿವನ್ನು ಕಳೆಯುವ, ದಿವ್ಯಾನುಭೂತಿಯನ್ನು ಉಂಟು ಮಾಡುವ ಇಂಪು ಅವರ ಶಾರೀರದ್ದು. ಆ ಕಾರಣದಿಂದಲೇ ಅವರು, ಭಾರತೀಯ ಚಲನಚಿತ್ರ ಸಂಗೀತದ ರೋಲ್ಸ್‌ರಾಯ್!

ಗಂಧರ್ವ ಲೋಕದಿಂದ ಅಪರೂಪದ ಸ್ವರವೊಂದು ಇಳಿದುಬಂದು ಬೆಳ್ಳಿತೆರೆಯನ್ನು ಚೆಲುವುಗೊಳಿಸಿದಂತೆ ಕೋರೈಸಿದವರು ಸುಶೀಲಾ. ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ‘ದಕ್ಷಿಣ ಭಾರತದ ಕೋಗಿಲೆ’ ಎನ್ನಿಸಿಕೊಂಡ ಅಗ್ಗಳಿಕೆ ಅವರದು. ಹಾಡಿನ ಮೂಲಕವೇ ಭಾಷೆಗಳ ಗಡಿಯನ್ನು ಅಳಿಸುತ್ತ, ಕೇಳುಗರ ಭಾವಕೋಶದ ಭಾಗವಾದ ಸಾಧನೆ ಅವರದು.

ಪ್ರಸ್ತುತ, ಹನ್ನೆರಡು ಭಾಷೆಗಳಲ್ಲಿ ಪಿ.ಸುಶೀಲಾ ಅವರು ಹಾಡಿರುವ 17,695 ಗೀತೆಗಳ ಸಾಧನೆಯನ್ನು ಗಿನ್ನೆಸ್‌ ದಾಖಲೆ ಪುಸ್ತಕ ಗೌರವಿಸಿದೆ. ಎಂಬತ್ತರ ವಯಸ್ಸಿನಲ್ಲಿ ಸುಶೀಲಾ ಅವರ ಹೆಸರು ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ ನಮೂದಾದುದು ಒಂದು ವಿಶೇಷ ಸಂಗತಿ. ಆದರೆ ಸಾಧನೆ ಮತ್ತು ದಾಖಲೆ ಸುಶೀಲಾ ಅವರ ವಿಷಯದಲ್ಲಿ ಹೊಸತೇನೂ ಅಲ್ಲ.

ಶಾಲಾ ದಿನಗಳಲ್ಲಿ ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲ ಮೊದಲ ಸ್ಥಾನ ಪಡೆಯುವುದು ಅವರಿಗೆ ರೂಢಿಯಾಗಿಬಿಟ್ಟಿತ್ತು. ಸಿನಿಮಾ ಗೀತೆಗಳ ಗಾಯನಕ್ಕಾಗಿ ಐದು ಸಲ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆ ಅವರದು. ಇವೆಲ್ಲವನ್ನೂ ಮೀರಿ ತಮ್ಮ ಜೇನಿನಂಥ ಹಾಡುಗಳ ಮೂಲಕ ಜನರ ಮನಸ್ಸುಗಳಲ್ಲಿ ಸುಶೀಲಾ ಶಾಶ್ವತವಾಗಿ ಉಳಿದಿದ್ದಾರಲ್ಲ; ಅದೊಂದು ಅಸಾಧಾರಣ ಸಾಧನೆ.

ಸುಶೀಲಾ ಮೂಲತಃ ತೆಲುಗಿನ ಹೆಣ್ಣು ಮಗಳು. ಜನಿಸಿದ್ದು 1935ರಲ್ಲಿ ಆಂಧ್ರ ಪ್ರದೇಶದ ವಿಜಯನಗರಂನಲ್ಲಿ. ಮನೆಯಲ್ಲಿ ಸಂಗೀತದ ಬಗ್ಗೆ ಒಲವಿತ್ತು. ಶಾಲೆಯಲ್ಲೂ ಹಾಡುವ ಹುಡುಗಿಯ ಬೆನ್ನು ತಟ್ಟಲಾಯಿತು. ಸಂಗೀತದಲ್ಲಿ ಡಿಪ್ಲೊಮಾ ಪೂರೈಸಿದ ಅವರನ್ನು ಸಿನಿಮಾದ ಅವಕಾಶಗಳು ಹುಡುಕಿಕೊಂಡು ಬಂದವು. ಅಂದಿನ ಪ್ರಸಿದ್ಧ ಸಂಗೀತ ನಿರ್ದೇಶಕ ನಾಗೇಶ್ವರ ರಾವ್‌ ಅವರು ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದರು.

ಆಗ ಅವರ ಕಣ್ಣಿಗೆ ಬಿದ್ದುದು ಸುಶೀಲಾ ಎನ್ನುವ ಅಪ್ಪಟ ಪ್ರತಿಭೆ. 1951–52ರಲ್ಲಿ ಸಿನಿಮಾಗಳಲ್ಲಿ ಹಾಡತೊಡಗಿದ ಸುಶೀಲಾ, ನಾಲ್ಕೈದು ವರ್ಷಗಳಲ್ಲಿ ತಮ್ಮದೇ ಆದ ವರ್ಚಸ್ಸು ಸೃಷ್ಟಿಸಿಕೊಂಡರು. 1955ರ ನಂತರವಂತೂ ಅವರ ಹಾಡಿಲ್ಲದ ತಮಿಳು, ತೆಲುಗು ಸಿನಿಮಾಗಳೇ ಇಲ್ಲ ಎನ್ನುವ ಮಟ್ಟಿಗೆ ಜನಪ್ರಿಯರಾದರು. ಅವರು ಹಾಡಲು ಶುರು ಮಾಡಿದ ಸಂದರ್ಭದಲ್ಲಿ ಚಿತ್ರರಂಗದಲ್ಲಿದ್ದ ಪೈಪೋಟಿ ಅಷ್ಟಿಷ್ಟಲ್ಲ. ಸೂಲಮಂಗಲಂ ರಾಜಲಕ್ಷ್ಮಿ, ಪಿ. ಲೀಲಾ, ಎಂ.ಎಲ್.ವಸಂತಕುಮಾರಿ, ಎ.ಪಿ.ಕೋಮಲ, ಆರ್.ಬಾಲಸರಸ್ವತಿ, ಜಿಕ್ಕಿ ಅವರಂಥ ಘಟಾನುಘಟಿಗಳ ನಡುವೆ ರಂಗಪ್ರವೇಶಿಸಿದ ಸುಶೀಲಾ, ಕೆಲವು ವರ್ಷಗಳಲ್ಲೇ ಎಲ್ಲರನ್ನೂ ಮೀರಿ ಬೆಳೆದರು.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ದಿನಗಳಲ್ಲಿ ನಟಿಸುವಂತೆ ಕೆಲವು ನಿರ್ದೇಶಕರು ಸುಶೀಲಾ ಅವರನ್ನು ಒತ್ತಾಯಿಸಿದ್ದಿದೆ. ಆದರೆ, ಹಾಡುಗಾರಿಕೆಯ ತಮ್ಮ ಬದ್ಧತೆಯನ್ನು ಅವರು ನಟನೆಯ ಆಮಿಷಕ್ಕೆ ಬಲಿಕೊಡಲಿಲ್ಲ. ಗಿನ್ನೆಸ್‌ ದಾಖಲೆಯಲ್ಲಿ ಸುಶೀಲಾ ಅವರ 1960ರ ನಂತರದ ಹಾಡುಗಳನ್ನಷ್ಟೇ ಪರಿಗಣಿಸಲಾಗಿದೆ. ಆದರೆ ಅದಕ್ಕೂ ಮೊದಲಿನ ಒಂದು ದಶಕದ ಅವಧಿಯಲ್ಲಿ ಅವರು ಸಾವಿರಾರು ಹಾಡುಗಳನ್ನು ಜೀವಗೊಳಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ಅವರು ಹಾಡಿರುವ ಗೀತೆಗಳ ಸಂಖ್ಯೆ ನಲವತ್ತು ಸಾವಿರಕ್ಕೂ ಹೆಚ್ಚು. ಸಂಖ್ಯೆಗಳ ಮಾತು ಒತ್ತಟ್ಟಿಗಿರಲಿ, ಹಾಡುಗಳ ಮೂಲಕ ಅವರು ಸಂಪಾದಿಸಿದ ಅಭಿಮಾನಿಗಳನ್ನು ಲೆಕ್ಕ ಇಟ್ಟವರಾರು? ಆ ಅಭಿಮಾನಿಗಳಲ್ಲಿ ಅವರ ಪತಿಯೂ ಇದ್ದಾರೆ! ‘ನನ್ನ ಸಾಧನೆಯ ಹಿಂದೆ ಪತಿಯ ತ್ಯಾಗ ಸಾಕಷ್ಟಿದೆ. ನನ್ನ ಧ್ವನಿಯ ಬಗ್ಗೆ ಅವರಿಗೆ ವಿಶೇಷ ಪ್ರೇಮ’ ಎಂದು ಗಿನ್ನೆಸ್‌ ಗೌರವ ಪ್ರಕಟಗೊಂಡ ಸಂದರ್ಭದಲ್ಲಿ ಸುಶೀಲಾ ಹೇಳಿದ್ದಾರೆ.

ಕನ್ನಡದಲ್ಲಿ ಸುಮಾರು 5 ಸಾವಿರ ಗೀತೆಗಳನ್ನು ಸುಶೀಲಾ ಹಾಡಿದ್ದಾರೆ. ಚಿತ್ರರಸಿಕರ ಭಾವಕೋಶದಲ್ಲಿ ಸುಶೀಲಾ ಅವರಿಗೊಂದು ಬೆಚ್ಚನೆಯ ಸ್ಥಾನವಿದೆ. ಆದರೆ, ಕನ್ನಡ ಚಿತ್ರೋದ್ಯಮಕ್ಕೆ ಇತಿಹಾಸದ ಋಣಭಾರ ಹಾಗೂ ಪ್ರಜ್ಞೆ ಕಡಿಮೆ ಎನ್ನುವುದು ಸುಶೀಲಾ ಅವರ ಸಂದರ್ಭದಲ್ಲೂ ರುಜುವಾತಾಗಿದೆ. 2008ರಲ್ಲಿ ಈ ಅಪೂರ್ವ ಗಾಯಕಿಗೆ ದೇಶದ ಉನ್ನತ ನಾಗರಿಕ ಗೌರವಗಳಲ್ಲೊಂದಾದ ‘ಪದ್ಮಭೂಷಣ’ದ ಸಮ್ಮಾನ ದೊರೆತಾಗ ಗೌರವಿಸುವುದಿರಲಿ, ಅಭಿನಂದನೆ ಸಲ್ಲಿಸುವ ಗೋಜಿಗೂ ಕನ್ನಡ ಚಿತ್ರೋದ್ಯಮ ಹೋಗಲಿಲ್ಲ. ಈಗ ಗಿನ್ನೆಸ್‌ ಗೌರವದ ಸಂದರ್ಭದಲ್ಲಿ ಕೂಡ ಅಂಥದ್ದೊಂದು ಸಜ್ಜನಿಕೆ ಚಿತ್ರರಸಿಕರ ಪಾಲಿಗಷ್ಟೇ ಸೀಮಿತವಾಗಿದೆ.

ಸುಶೀಲಾ ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ. ಚಲನಚಿತ್ರ ಸಂಗೀತದಲ್ಲಿ ಏನೆಲ್ಲ ಪ್ರಯೋಗಗಳು ನಡೆದೂ ಕೊನೆಗೆ ಮಾಧುರ್ಯವೇ ಮುನ್ನೆಲೆಗೆ ಸಲ್ಲುವುದು ಮತ್ತೆ ಮತ್ತೆ ಸಾಬೀತಾಗಿರುವ ಸಂದರ್ಭದಲ್ಲಿ, ಸುಶೀಲಾ ಅವರ ಗೀತೆಗಳು ‘ಮಾಧುರ್ಯದ ಮಾದರಿ’ಗಳಂತೆ ಕೇಳುಗರ ಮನಸ್ಸುಗಳನ್ನು ಪ್ರಸನ್ನಗೊಳಿಸುತ್ತ ಜೊತೆಗಿವೆ. ಅವರ ಹಾಡುಗಳನ್ನು ಕೇಳುವುದು ಕೇವಲ ಕಾಲಕ್ಷೇಪ ಅಥವಾ ಮನರಂಜನೆಯ ಸಂಗತಿಯಲ್ಲ. ಅದು, ಕಳೆದುಹೋದ ಕಾಲಘಟ್ಟದೊಂದಿಗಿನ ಮುಖಾಮುಖಿ ಹಾಗೂ ಮರಳಿ ನಮ್ಮದಾಗಿಸಿಕೊಳ್ಳಬೇಕಾದ ಒಂದು ಆದರ್ಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT