ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರೂಪಕ/ ಅವನ ಜೀವ ಚೈತನ್ಯ ನಭಕ್ಕೆ ಮುಖಮಾಡಿ ಆವಿಯಾಗಿ...

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

`ಸೆಕ್ರೆಟ್ರಿ ಶಂಕರ್, ಅಸಿಸ್ಟೆಂಟ್ ಎಡಿಟರ್ ಸುಲೋಚನ, ಸೀನಿಯರ್ ಲೈಬ್ರೇರಿಯನ್ ಶ್ರೀವಾಣಿ ಈ ಮೂವರೂ ಆಫೀಸಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ. ನನ್ನನ್ನು ಜಾತಿ ಹಿಡಿದು ನಿಂದಿಸಿದ್ದಲ್ಲದೆ ಉನ್ನತಾಧಿಕಾರಿಗೆ ನನ್ನನ್ನು ಕೆಲಸದಿಂದ ತೆಗೆಯುವಂತೆ ಶಿಫಾರಸು ಮಾಡಿ ನಾನು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆ.

ನಾನು ಜಾತಿಯಿಂದ ಹೀನ ಎಂಬ ಕಾರಣಕ್ಕೆ ಒಡೆದ ಲೋಟದಲ್ಲಿ ಟೀ ಕೊಡುವುದು, ಸರಿಯಾಗಿ ಮಾತನಾಡಿಸದಿರುವುದು, ಅಸಿಸ್ಟೆಂಟ್ ಲೈಬ್ರೇರಿಯನ್ ಆದ ನನ್ನನ್ನ ಬಾಗಿಲ ಮೂಲೆಯಲ್ಲಿ ಚೇರ್ ಹಾಕಿ ಕೂರಿಸಿದ್ದು ಈ ಎಲ್ಲವೂ ನನ್ನ ಅಸಹನೆಗೆ ಕಾರಣವಾಗಿವೆ. ಇದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಂಡರೆ ಅಥವಾ ನನಗೆ ಮತ್ಯಾವ ರೀತಿಯಿಂದಲಾದರೂ ತೊಂದರೆಯಾದರೆ ಅದಕ್ಕೆ ಈ ಮೂವರೇ ಕಾರಣರು...'

ಡಾಕ್ಟರ್ ಬೆಟ್ಟಪ್ಪ ತಾನು ಪೋಲಿಸ್ ಆಯುಕ್ತರಿಗೆ ಬರೆದ ಪತ್ರದ ಒಂದು ನಕಲು ಪ್ರತಿಯನ್ನ ಸೆಕ್ರೆಟ್ರಿ ಶಂಕರ್‌ಗೂ ಕಳಿಸಿದ. ಆಡಳಿತವೆಂಬುದು ಕುದುರೆ ಸವಾರಿಯ ಹಾಗೆ. ತಾನು ಆ ಕುದುರೆಯನ್ನ ಹತ್ತಿ ಕೂತಿರುವ ಹೊಸ ಸವಾರ. ಜೀನು ನನ್ನ ಕೈಗೇನೊ ಕೊಡಲಾಗಿದೆ. ಆದರೆ ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ತರಬೇತಿ ಇಲ್ಲ. ಕುದುರೆ ಹೆಜ್ಜೆಯಿಟ್ಟು ನಡೆಯಲು ಆರಂಭಿಸಿದ ಹೊಸತರಲ್ಲೇ ಏನೋ ಅಳುಕು.. ಒಂದಿಷ್ಟು ಅಭ್ಯಾಸವಾಗುವವರೆಗೆ ಇವೆಲ್ಲ ಅಂದುಕೊಂಡು ತನಗೆ ತಾನೇ ಸಮಾಧಾನ ಮಾಡಿಕೊಂಡರೆ ಕೆಲಸ ನಿಧಾನವಾಗುತ್ತಿದೆಯೆಂದು ಮೇಲಿನ ಅಧಿಕಾರಿಗಳು ಆಕಾಶದಿಂದ ಗುಡುಗುವರು.

ಹೀಗೆ ತನ್ನ ಕೆಲಸವನ್ನ ರೂಪಕಗಳಲ್ಲಿ ಕಟ್ಟಿಕೊಳ್ಳುತ್ತ ಸಮಧಾನಿಸಿಕೊಳ್ಳುತ್ತಿದ್ದ ಶಂಕರ್‌ಗೆ ಕೆಲವು ತಿಂಗಳ ಹಿಂದೆ ಲೈಬ್ರರಿಗೆ ಅಸಿಸ್ಟೆಂಟ್ ಆಗಿ ಸೇರಿದ ಡಾಕ್ಟರ್ ಬೆಟ್ಟಪ್ಪ ಮೊದಲ ಆಘಾತ ನೀಡಿದ್ದ. ಕೆಲಸದ ಒತ್ತಡದ ಮಧ್ಯೆ ಈ ಬೆಟ್ಟಪ್ಪನದು ಎಂಥ ಹುಚ್ಚಾಟ ಅನಿಸಿ ಶಂಕರ್ ಪತ್ರ ಮಡಿಸಿಟ್ಟ. ಮಾರನೆಯ ದಿನ ಲಾಯರ್‌ನಿಂದ ಅದೇ ಆರೋಪಗಳನ್ನು ಪಟ್ಟಿಮಾಡಿ ಬೆಟ್ಟಪ್ಪ ಒಂದು ನೋಟೀಸನ್ನ ಮೂವರಿಗೂ ಕಳಿಸಿದ. ಇದ್ಯಾಕೊ ತೀರಾ ಅತಿರೇಕ ಅನಿಸಿತು ಶಂಕರ್‌ಗೆ. ಮೊದಲು ಸುಲೋಚನಾ ಅವರನ್ನ ಕರೆಸಿ ವಸ್ತುಸ್ಥಿತಿ ವಿವರಿಸಿದ. ಇದರಲ್ಲಿ ತಮ್ಮ ಪಾತ್ರವೇನಿದೆ ಎಂದು ಅವರು ಹುಬ್ಬೇರಿಸಿದರು. `ನೀವೇನಾದ್ರು ಆತನನ್ನ ಕೆಲಸದಿಂದ ತೆಗೆಯೋದಕ್ಕೆ ರೆಕಮೆಂಡ್ ಮಾಡಿದ್ರ.. ಇಲ್ಲವಲ್ಲ.. ಮತ್ಯಾಕೆ ಹೀಗಾಗ್ತಿದೆ!' ಎಂದು ತಲೆಕೊಡವಿದರು ಅವರು.

ಸರಿ ನೋಡೋಣ ಏನೇ ಆದ್ರೂ ಫೇಸ್ ಮಾಡ್ಲೇಬೇಕಲ್ಲ.. ಅಂತಂದು ನಡೆದರು. ನಂತರ ಶ್ರೀವಾಣಿಯನ್ನ ಕರೆಸಿ ಎಲ್ಲ ವಿವರಿಸಿ ಪ್ರತಿಕ್ರಿಕೆಯೆಗೆ ಕಾದ ಶಂಕರ್. ಯಾಕೆಂದರೆ ಬೆಟ್ಟಪ್ಪನಿಗೂ ಶ್ರೀವಾಣಿಗೂ ಮೊದಲಿನಿಂದಲೂ ಒಂದಿಲ್ಲೊಂದು ಘರ್ಷಣೆ ನಡೆದೇ ಇತ್ತು. ಆತ ಕೆಲಸಕ್ಕೆ ಸೇರಿ ಎರಡು ವಾರಗಳಾಗುವ ಹೊತ್ತಿಗೆ ಶ್ರೀವಾಣಿಯಿಂದ ದೂರುಗಳು ದಾಖಲಾಗತೊಡಗಿದವು. `ಸರ್ ಆತನಿಗೆ ಕೆಲಸ ಬರೋದಿಲ್ಲ. ನಾ ಹೀಗಲ್ಲ ಹೀಗೆ ಅಂತ ಹೇಳಿದ್ರೆ, ಅದನ್ನವರು ಒಪ್ಪೋದಿಲ್ಲ. ನನ್ನೇ ದಬಾಯಿಸ್ತಾರೆ. ನನಗೆ ಈ ಕೆಲಸ ಮಾಡು ಅಂತ ಹೇಳಿಲ್ಲ ಮೇಲಿನವರು... ಅಂತಾರೆ. ಸದಾ ಸೆಲ್‌ಫೋನ್‌ನಲ್ಲಿ ಮಾತು. ಕೇಳಿದ್ರೆ ಒರಟಾಗಿ ಮಾತಾಡ್ತಾರೆ...' ಅಂತ ಅಲವತ್ತುಕೊಂಡಿದ್ದರು ಶ್ರೀವಾಣಿ. `ಪ್ರಾರಂಭದಲ್ಲಿ ಇಂಥ ದುಡುಕುಗಳಾಗ್ತಾವೆ. ನೀವೇ ಸ್ವಲ್ಪ ಬುದ್ಧಿವಂತಿಕೆಯಿಂದ ಇದನ್ನ ಹ್ಯಾಂಡ್ಲ್ ಮಾಡಿ...' ಎಂದು ಅಡ್ವೈಸ್ ಮಾಡಿ ಕಳಿಸಿದ್ದ ಶಂಕರ್.

ಸರಿ, ಈಗೇನ್ಮಾಡೋಣ ಎಂಬ ಪ್ರಶ್ನೆಗೆ ಶ್ರೀವಾಣಿ, `ನೀವು ಹೇಗೆ ಹೇಳಿದ್ರೆ ಹಾಗೆ ಸರ್' ಅಂದರು. `ಸರಿ ನಾನು ಹಿರಿಯರಾದ ಸುಲೋಚನ ಅವರ ಹತ್ರಾನೂ ಈ ಬಗ್ಗೆ ಮಾತಾಡಿದ್ದೀನಿ. ಬೆಟ್ಟಪ್ಪನನ್ನ ಕರೆಸಿ ಇದೇನಪ್ಪ ಹೀಗೆ ಮಾಡಿದ್ದೀಯಾ ಅಂತ ಕೇಳೋಣ ಅಂತಿದ್ದೀವಿ... ನೀವೇನಂತೀರಿ?' ಎಂಬ ಪ್ರಶ್ನೆಗೆ ಶ್ರೀವಾಣಿ ಉತ್ತರಿಸಲಿಲ್ಲ. ಕ್ಷಣ ಯೋಚಿಸಿ, `ಆತನನ್ನ ಕರೆದು ಮಾತಾಡೋದು ಏನಿದೆ ಸರ್? ಈ ಮನುಷ್ಯ ಆರೋಪಿಸಿರೋ ಹಾಗೆ ನಾನೇನು ನಡಕೊಂಡಿಲ್ಲವಾದರೂ ಒಂದೆರಡು ಬಾರಿ ಮೆತ್ತಗೆ ಸಿಡುಕಿರಬಹುದು. ಆದರೆ ಪಾಪ ನೀವಿಬ್ರು ಅದೇನು ಮಾಡಿದ್ರಿ ಅಂತ ನನಗೆ ಗೊತ್ತಾಗ್ತಿಲ್ಲ. ಪಾಪ ನೀವು ಆತನನ್ನ ಕೂರಿಸಿಕೊಂಡು ತುಂಬ ಸೌಜನ್ಯವಾಗೇ ಎಲ್ಲ ತಿಳಿಸಿ ಹೇಳ್ತಿದ್ರಲ್ಲ...' ಎಂದು ಶ್ರೀವಾಣಿ ಬೆಟ್ಟಪ್ಪನನ್ನ ಕರೆಸೋದರ ಬಗ್ಗೆ ತಮ್ಮಲ್ಲಿ ಅಸಮ್ಮತಿ ಇದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು. ಅಲ್ರೀ ಇದು ತುಂಬ ಸೀರಿಯಸ್ ಆಗಬಹುದು ಅಂದದ್ದಕ್ಕೂ.. ಏನೇ ಆಗಲಿ ಫೇಸ್ ಮಾಡೋಣ, ಆತನಿಗೆ ಮಣಿಯುವ ಮಾತೇ ಇಲ್ಲ ಎಂಬ ಧಾಟಿಯಲ್ಲಿ ನಡೆದರು ಶ್ರೀವಾಣಿ.

ಚೇರಿಗಂಟಿಕೊಂಡು ಕೂತು ಒಂದೊಂದು ಪತ್ರವನ್ನೂ ತುಂಬ ಎಚ್ಚರದಲ್ಲಿ ಗಮನಿಸುತ್ತ ದಣಿಯುತ್ತಿದ್ದ ಶಂಕರ್‌ನ ಮನಸ್ಸು ಈಗ ಬೆಟ್ಟಪ್ಪನ ಪೂರ್ವೋತ್ತರಗಳನ್ನು ಕೆದಕತೊಡಗಿತು. `ಲೈಬ್ರರಿ ಸೈನ್ಸ್‌ನಲ್ಲಿ ಪಿ.ಜಿ ಮಾಡಿ, ಪಿಎಚ್.ಡಿ ಕೂಡ ಮಾಡಿ ಪಾಪ ಕೆಲಸ ಇಲ್ಲದೆ ಇದ್ದಾರೆ. ಲೈಬ್ರರಿಯಲ್ಲಿ ಇಶ್ಶೂ ಸೆಕ್ಷನ್‌ಗೆ ತೆಗೆದುಕೊಳ್ಳಿ... ಆಮೇಲೆ ಹಾಗೆ ರೆಟ್ರೊ ಕನ್ವರ್ಷನ್ ಕೆಲಸಕ್ಕೆ ಕೂರಿಸಿದರಾಯಿತು...' ಎಂದು ಶಂಕರ್‌ನ ಗುರು ಹಾಗು ಮೇಲಿನ ಅಧಿಕಾರಿ ಶಿಫಾರಸ್ಸು ಮಾಡಿದ್ದರಿಂದ ಬೆಟ್ಟಪ್ಪ ದೊಡ್ಡ ಸಂಸ್ಥೆಯೊಂದರ ಭಾಗವಾಗಿದ್ದ ಲೈಬ್ರರಿಯೊಳಕ್ಕೆ ಪ್ರವೇಶ ಪಡೆದಿದ್ದು. ಸರ್ ಶಿಫಾರಸ್ಸು ಮಾಡಿದ್ದಾರೆಂದ ಮೇಲೆ ಎಲ್ಲ ಪೂರ್ವಾಪರಗಳನ್ನ ಯೋಚಿಸಿಯೇ ಮಾಡಿರ್ತಾರೆ. ಹಾಗಾಗಿ ಬೆಟ್ಟಪ್ಪನ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ನಿರಾಳವಾಗಿದ್ದ ಶಂಕರ್‌ಗೆ ಎರಡು ವಾರ ಕಳೆಯುತ್ತಿದ್ದಂತೆ ಎಲ್ಲ ನೆಗೆಟಿವ್ ರಿಪೋರ್ಟ್‌ಗಳು ಬರತೊಡಗಿದವು.

ಶ್ರೀವಾಣಿಯವರ ದೂರುಗಳನ್ನು ದಾಟಿ ಸೇಲ್ಸ್ ವಿಭಾಗದ ಕೆಲ ಹುಡುಗರು ಬೆಟ್ಟಪ್ಪನ ಬಗ್ಗೆ ತುಂಬ ಸೂಚ್ಯವಾಗಿಯೇ ಆಕ್ಷೇಪಿಸತೊಡಗಿದರು. `ಸರ್ ನಾವು ಕಾಂಟ್ರಾಕ್ಚುವಲ್ ಎಂಪ್ಲಾಯಿಸ್ ಅಂತ ನಮಗೆ ಗೊತ್ತಿಲ್ವ? ನೀವ್ಯಾಕೆ ಪರ್ಮನೆಂಟ್ ಆಗಿ ಇಲ್ಲಿ ಬೇರೂರೋದಕ್ಕೆ ಪ್ರಯತ್ನಿಸಬಾರದು? ಮೇಲಿನ ಸಾಹೇಬರು ನನಗೆ ಚೆನ್ನಾಗೇ ಗೊತ್ತಿದ್ದಾರೆ. ನನ್ನನ್ನ ಇಲ್ಲಿ ಕೆಲಸಕ್ಕೆ ಸೇರಿಸಿದ್ದೂ ಅವರೇ. ಬೇಕಾದ್ರೆ ನಾನು ಅವರ ಹತ್ರ ಮಾತಾಡ್ತೇನೆ. ಈಗಷ್ಟೇ ಅವರತ್ರ ಅರ್ಧ ಗಂಟೆ ಮಾತಾಡ್ದೆ... ಅಂದಿದ್ರು ಸರ್... ನಾವು ಅದಕ್ಕೆ ಸೊಪ್ಪು ಹಾಕದೆ ಇದ್ದದ್ದಕ್ಕೆ ನಮ್ಮನ್ನ ಕಾಂಟ್ರಾಕ್ಚುವಲ್ ಅಂತ ಹಂಗಿಸ್ತಿದ್ರು... ನಾವೂ ಸಹಿಸಿಕೊಳ್ಳೋವರೆಗೂ ಸಹಿಸಿಕೊಂಡ್ವಿ... ಒಂದು ದಿನ ನೇರವಾಗೇ `ನಾವು ಕಾಂಟ್ರಾಕ್ಚುವಲ್ಲು ಅಂತ ನಮಗೆ ಗೊತ್ತಿಲ್ವ ಬೆಟ್ಟಪ್ಪನೋರೆ, ನೀವೇನು ಅದನ್ನ ಮತ್ತೆಮತ್ತೆ ನೆನಪಿಸೋದು ಬೇಕಾಗಿಲ್ಲ' ಅಂತಂದುಬಿಟ್ವಿ.

ಆವತ್ತಿನಿಂದ ಅವರು ನಮ್ಮ ಮೇಲೆ ಸ್ವಲ್ಪ ಗರಂ ಆದ್ರು. ಆದ್ರೆ ಆಗ್ಲಿ ಅಂತ ನಾವೂ ಸುಮ್ಮನಾದ್ವಿ. ಇನ್ನೊಂದು ದಿನ ಆ ನಮ್ಮ ಮಾರುತಿ ಇದ್ದಾನಲ್ಲ ಅವನಿಗೆ ಅಲ್ಲಿಗೆ ಅಪ್ಲೈ ಮಾಡ್ಕೊ ಇಲ್ಲಿಗೆ ಅಪ್ಲೈ ಮಾಡ್ಕೊ, ನನಗೆ ಅವರು ಚೆನ್ನಾಗಿ ಗೊತ್ತಿದ್ದಾರೆ ಇವರು ಚೆನ್ನಾಗಿ ಗೊತ್ತಿದ್ದಾರೆ.. ಕೆಲಸ ಕೊಡಿಸ್ತೀನಿ ಅಂತ ಮರ ಹತ್ಸಿದ್ದಾರೆ. ಮಾರುತಿ ಬಂದು ನಮ್ಮನ್ನ ಕೇಳ್ದ. ನಾವು ಒಂದೇ ಮಾತಲ್ಲಿ ಹೇಳಿದ್ವಿ: ಅವರಿಗೆ ಅಷ್ಟೆಲ್ಲ ಇನ್‌ಫ್ಲೂಯನ್ಸ್ ಇದ್ದಿದ್ರೆ ಅವರ್ಯಾಕೆ ಇಲ್ಲಿಗೆ ಕೆಲಸಕ್ಕೆ ಬರಬೇಕಿತ್ತು! ಇಷ್ಟರಲ್ಲೆ ಅರ್ಥಮಾಡ್ಕೊ ಅಂತ ಸುಮ್ಮನಾಗಿಸಿದ್ವಿ...'

ಈ ವರದಿ ಮುಗಿಯುವಷ್ಟರಲ್ಲಿ ಶ್ರೀವಾಣಿ ಮತ್ತೆ ಕೆಲವು ಸುದ್ದಿಗಳನ್ನು ತಂದರು. `ಸರ್ ನಿಮ್ಮ ತಾಳ್ಮೆಗೆ ಮೆಚ್ಚಬೇಕು. ನನಗಂತೂ ಸಹಿಸ್ಕೊಂಡು ಸಾಕಾಗಿದೆ. ಕೆಲವನ್ನೆಲ್ಲ ಹೇಳಲಿಕ್ಕೆ ಆಗೋದಿಲ್ಲ. ಆದ್ರೂ ಹೇಗೆ ಹೇಳೋದು ಅಂತ ಗೊತ್ತಾಗ್ತಿಲ್ಲ. ಇವತ್ತು ಆ ಬೆಟ್ಟಪ್ಪ ಏನು ಹೇಳಿದ್ರು ಗೊತ್ತಾ ಸರ್? ಅವರು ಲೈಬ್ರರಿ ಸೈನ್ಸ್ ಬಗ್ಗೆ ಕೆಲವು ಪುಸ್ತಗಳನ್ನ ಬರೆದಿದ್ದಾರಂತೆ. `ಅವನ್ನೆಲ್ಲ ನಿಮ್ಮ ಹೆಸರಿನಲ್ಲಿ ಅಚ್ಚು ಮಾಡಿಸೋಣ ಅಂತಿದ್ದೀನಿ ಏನಂತೀರಿ ಮೇಡಂ?' ಅಂದ್ರು. ಅಪ್ಪಾ... ಸರ್ ನಾನು ಅವರನ್ನ ಹೀಗೇ `ಅಪ್ಪ' ಅಂತಾನೇ ಕರೆದಿದ್ದೇನೆ... ಸರ್... `ನೋಡಪ್ಪಾ ನನ್ನ ಹೆಸರಿನಲ್ಲಿ ಯಾವ ಪುಸ್ತಕಗಳನ್ನೂ ಅಚ್ಚುಮಾಡಿಸೋದು ಬೇಡ. ನೀವು ಹೀಗೆಲ್ಲ ಮಾತಾಡಬಾರದು. ನಂನಮ್ಮ ಕೆಲಸ ನಾವು ಮಾಡ್ತಾ ಹೋಗೋಣ...' ಅಂತಂದುಬಿಟ್ಟೆ. ಅದೂ ಅಲ್ದೆ ನನ್ನ ಸೀರೆ ಬಗ್ಗೆ ಅವರೇನು ಸರ್ ಕಾಮೆಂಟ್ ಮಾಡೋದು! ಈ ಥರದ ಇಳಕಲ್ ಸೀರೆ ನಾವೂ ವ್ಯಾಪಾರ ಮಾಡ್ತೀವಿ. ನಿಮಗೆ ಎಷ್ಟು ಬೇಕು ಹೇಳಿ ಮೇಡಂ, ನಾ ತಂದುಕೊಡ್ತೀನಿ... ಅಂತ ಒಂದು ಸಲ ಅಂದ್ರು. ಯಾರು ತಾನೆ ಇದನ್ನೆಲ್ಲ ಸಹಿಸಿಕೊಂಡಿರ್ತಾರೆ ಸರ್? ನೋಡಪ್ಪ ಹೀಗೆಲ್ಲ ಮಾತಾಡಬೇಡ ಅಂತ ಖಾರವಾಗಿ ಹೇಳಿ ನಾನು ಸುಮ್ಮನಾದೆ...'

ಇದು ಸೀರಿಯಸ್ಸೂ ಹೌದು, ತಮಾಷೇನೂ ಹೌದು ಅನಿಸಿ ಶಂಕರ್ ಇಮ್ಮೆ ಇಬ್ಬರನ್ನೂ ತನ್ನ ಛೇಂಬರ್‌ಗೆ ಕರೆಸಿ ಸೀರೆ ಪ್ರಕರಣದ ತನಿಖೆ ಆರಂಭಿಸಿದರೆ... ಬೆಟ್ಟಪ್ಪ ಸಾರಾಸಗಟಾಗಿ ಅವೆಲ್ಲವನ್ನ ಸುಳ್ಳು ಎಂದು ತಳ್ಳಿಹಾಕಿದರು. ಶ್ರೀವಾಣಿಯವರಿಗೂ ಕೆರಳಿತು. ಎಲ್ಲಿ ಮಕ್ಕಳ ಮೇಲೆ ಆಣೆ ಮಾಡಿ ನೋಡೋಣ ಎಂಬಲ್ಲಿಂದ ಪ್ರಾರಂಭವಾಗಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ಮೇಲೆ ಆಣೆ ಮಾಡುವವರೆಗೆ ಇಬ್ಬರೂ ಮುಂದುವರೆದರು. ಶಂಕರ್‌ಗೆ ತಲೆ ಚಿಟ್ಟು ಹಿಡಿದಂತೆನಿಸಿ, ನೋಡಿ ಇಂಥ ಸಿಲ್ಲಿಸಿಲ್ಲಿ ಮ್ಯಾಟರ್‌ಗಳನ್ನ ನನ್ನವರೆಗೆ ತಂದು ನನ್ನ ಸಮಯ ಹಾಳು ಮಾಡಬೇಡಿ. ಹೊರಡಿ ಅಂದದ್ದಕ್ಕೆ... `ಸರ್ ನೀವು ಇದನ್ನ ಬಗೆಹರಿಸದಿದ್ದರೆ ಹೇಗೆ? ನಮ್ಮ ಸಮಸ್ಯೆಯನ್ನ ಇನ್ಯಾರಹತ್ರ ಹೇಳೋಣ?' ಎಂಬ ಮಾತು ಬಂತು. `ಹಾಗಾದ್ರೆ ರೈಟಿಂಗ್‌ನಲ್ಲಿ ಕೊಡಿ' ಎಂದು ಶಂಕರ್ ತೀಕ್ಷ್ಣವಾಗಿ ಕೇಳಿದ್ದಕ್ಕೆ ಇಬ್ಬರೂ ಕೆಲಕಾಲ ಸುಮ್ಮನೆ ಕೂತು ಆನಂತರ ಎದ್ದು ಹೋದರು.

ಇಷ್ಟಾದ ಮೇಲೆ ಮಾನ್ಯ ಬೆಟ್ಟಪ್ಪನವರು ಸೆಕೆಂಡ್ ಆಫೀಸರ್ ಸುಲೋಚನರವರಿಗೂ ಹಾಗೂ ಶಂಕರ್‌ರವರಿಗೂ ಆಗಾಗ ತಮ್ಮ ಮನೆಯಲ್ಲಿ ಮಾಡಿದ್ದೆಂದು ಸ್ವೀಟ್ಸ್‌ಗಳನ್ನು ಬಾಕ್ಸ್ ಸಮೇತ ತಂದುಕೊಡಲು ಆರಂಭಿಸಿದರು. ಸುಲೋಚನರವರು ಅದನ್ನು ಅಲ್ಲೇ ಎಲ್ಲರಿಗೂ ಹಂಚಿ, ಇನ್ನು ಮುಂದೆ ಈ ಪರಿಪಾಠ ನಿಲ್ಲಿಸಲು ಬೆಟ್ಟಪ್ಪನವರಿಗೆ ಸೂಚಿಸಿದರು. ಆದರೂ ಬೆಟ್ಟಪ್ಪ ಬುಟ್ಟಿಗಟ್ಟಲೆ ತರಕಾರಿಗಳನ್ನ ತಮ್ಮ ಊರಲ್ಲಿ ಬೆಳೆದಿದ್ದೆಂದು ಹೇಳಿ ತಂದುಕೊಟ್ಟರು. ಅದನ್ನೂ ನಿವಾರಿಸಿಕೊಂಡಿದ್ದಾಯಿತು.

ಇಲ್ಲಿ ಈ ಪರಿ ಸರ್ಕಸ್ಸು ನಡೆಯುತ್ತಿದ್ದರೆ ಇವರೆಲ್ಲರಿಗೂ ಉನ್ನತಾಧಿಕಾರಿಯಾಗಿದ್ದವರ ಕಚೇರಿಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಜರುಗಿ ಸಾಹೇಬರು ತಮ್ಮ ಸ್ಥಾನದಿಂದ ಕೆಲಕಾಲ ದೂರ ಸರಿಯಬೇಕಾದ ಸಂದರ್ಭ ಸೃಷ್ಟಿಯಾಯಿತು. ಅವರ ಬದಲಿಗೆ ಪ್ರಭಾರಿ ಹುದ್ದೆ ಅಲಂಕರಿಸಿದ ಮಾನ್ಯ ಸಾಹೇಬರು ಶಂಕರ್‌ನ ಆಡಳಿತದ ಕುದುರೆ ಯಾಕೆ ಕುಂಟುತ್ತಿದೆ ಎಂದು ಚಕಾರ ತೆಗೆಯಲು ಆರಂಭಿಸಿದರು. ಇಲ್ಲ ಸರ್ ಓಡುತಿದೆ ಅಂತ ಸಮಜಾಯಿಷಿ ಕೊಟ್ಟರೆ, ಮತ್ತೆ ಇಂಥ ಕಡೆ ಎಡವಿದ್ಯಾಕೆ ಎಂದು ಕೇಳುವುದು ಮಾಮೂಲಾಯಿತು. ಎಡವುತ್ತಿರಬಹುದು ಆದರೆ ಈವರೆಗೆ ಉರುಳಿ ಬೀಳಲಿಲ್ಲವಲ್ಲ ಎನ್ನುವುದಕ್ಕೆ ಶಂಕರ್‌ಗೆ ಇನ್ನೂ ಧೈರ್ಯ ಸಾಲದು. ಎರಡು ವರ್ಷಗಳ ಪ್ರೊಬೆಷನರಿ ಗುಮ್ಮ ಆಗಾಗ ಮೈದೋರಿ ನಡುಗಿಸುತ್ತಿತ್ತು.

ತಪ್ಪಿಗೆ ಸಮಜಾಯಿಷಿ ಕೋರಿ ಪತ್ರಗಳು ಬರಲು ಆರಂಭಿಸಿದವು. ಇಷ್ಟಕ್ಕೂ ಅವುಗಳಲ್ಲಿ ತನ್ನ ತಪ್ಪೇನು ಎಂಬ ಗೊಂದಲದಲ್ಲೇ ಉತ್ತರಗಳನ್ನು ಬರೆಯುವ ಪ್ರಸಂಗಗಳು ಒದಗಿಬರತೊಡಗಿದವು. ತನ್ನ ವಿರುದ್ಧ ಒಂದು ವ್ಯವಸ್ಥಿತ ಸಂಚು ರೂಪುಗೊಳ್ಳುತ್ತಿರಬಹುದೇ ಎಂದು ಆಳದಲ್ಲಿ ಅಂಜುತ್ತ ಅದನ್ನು ಉಳಿದವರೆದುರಿಗೆ ತೋರಗೊಡದಂತೆ ಸಮತೋಲನ ಮಾಡಲು ಹೆಣಗುತ್ತಿದ್ದ ಶಂಕರ್‌ಗೆ ಬೆಟ್ಟಪ್ಪ ಇನ್ನೊಂದು ಬದಿಯಲ್ಲಿ ನಿಂತು ತಲೆನೋವು ತರಬಹುದೆಂದು ಊಹಿಸಿಯೂ ಇರಲಿಲ್ಲ.

ಇದೆಲ್ಲ ಹೇಗೆ ಶುರುವಾಯಿತು ಎಂದು ಶಂಕರ್ ಯೋಚಿಸತೊಡಗಿದ. ಪ್ರಭಾರಿ ಸಾಹೇಬರು ಮೂರು ತಿಂಗಳ ಲೈಬ್ರರಿ ವರ್ಕ್ ರಿಪೋರ್ಟ್ ಹಾಗು ಬೆಟ್ಟಪ್ಪ ಮಾಡುತ್ತಿರುವ ಕೆಲಸದ ಬಗ್ಗೆ ಒಂದು ಮಾಹಿತಿ ಕಳುಹಿಸಿಕೊಡಲು ಸೂಚಿಸಿ ಒಂದು ಪತ್ರ ಬರೆದರು. ಇದರ ಪ್ರಕಾರ ನಾಲ್ಕು ಪುಟಗಳ ಲೈಬ್ರರಿ ವರ್ಕ್ ರಿಪೋರ್ಟ್ ಹಾಗು ಅರ್ಧ ಪುಟದಷ್ಟು ಬೆಟ್ಟಪ್ಪನವರ ಬಗ್ಗೆ ಅವರ ಕಾರ್ಯಕ್ಷಮತೆಯ ಬಗ್ಗೆ ತುಂಬ ವಸ್ತುನಿಷ್ಠವಾದ ಆದರೆ ಯಾವ ನಕಾರಾತ್ಮಕ ಅಂಶಗಳೂ ಇರದ ಮಾಹಿತಿಯನ್ನ ಕಳುಹಿಸಿದ್ದಾಯಿತು.

ಇದು ಈ ಪರಿ ತಿರುವು ಪಡೆಯಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಒಮ್ಮೆ ಇದ್ದಕ್ಕಿದ್ದಂತೆ `ಬೆಟ್ಟಪ್ಪನವರನ್ನು ಅವರ ಕೆಲಸದಿಂದ ಟರ್ಮಿನೇಟ್ ಮಾಡಲಾಗಿದೆ..' ಎಂದು ಪ್ರಭಾರಿ ಸಾಹೇಬರು ತಮ್ಮ ಆದೇಶ ಪತ್ರ ಕಳುಹಿಸಿದರು. ಅದರ ಅನ್ವಯ ಶಂಕರ್, ಬೆಟ್ಟಪ್ಪನವರನ್ನ ಕರೆದು ಟರ್ಮಿನೇಷನ್ ಪತ್ರ ಕೊಟ್ಟು ಅದರ ನಕಲು ಪ್ರತಿ ಮೇಲೆ `ಕಾಪಿ ರಿಸೀವ್ಡ್' ಅಂತ ಬರೆಸಿಕೊಂಡು ಸಹಿ ಹಾಕಿಸಿಕೊಂಡು ಒಂದೆರಡು ಆಶ್ಚರ್ಯದ ಹಾಗೂ ಸಾಂತ್ವನದ ಮಾತು ಹೇಳಿ ಬೀಳ್ಕೊಟ್ಟ. ನಂತರ ನೇರ ಪ್ರಭಾರಿ ಸಾಹೇಬರಿಗೆ ಫೋನ್ ಮಾಡಿ ತನ್ನ ಯಾವ ತಪ್ಪಿಗೆ ತನ್ನನ್ನು ಟರ್ಮಿನೇಟ್ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ ಅವರು ನಿಮ್ಮ ಮೇಲಧಿಕಾರಿಯವರೇ ನನಗೆ ಸೂಚಿಸಿದ್ದರಿಂದ ನಾನು ಹಾಗೆ ಮಾಡಿದೆ ಎಂದು ಫೋನ್ ಇಟ್ಟಿದ್ದಾರೆ.

ಅಲ್ಲಿಂದ ಶುರುವಾಯಿತು ಬೆಟ್ಟಪ್ಪನವರ ಆ್ಯಂಗ್ರಿ ಪ್ರೊಸೀಡಿಂಗ್ಸ್. ಇದೆಲ್ಲ ವಿಕೋಪಕ್ಕೆ ತಿರುಗುವುದು ಬೇಡ ಅನಿಸಿ, ಬೆಟ್ಟಪ್ಪನವರನ್ನ ಕರೆದು ವಸ್ತುಸ್ಥಿತಿ ಎಲ್ಲ ವಿವರಿಸಿ ಕಂಪ್ಲೇಂಟು ವಾಪಸ್ಸು ತೆಗೆದುಕೊಳ್ಳಲು ಹೇಳಿದರಾಯಿತು ಎಂದುಕೊಂಡು ಕರೆದಾಗ ಆತ ಬಂದು ಎಲ್ಲ ಅರ್ಥೈಸಿಕೊಂಡಂತೆ ಕಂಡು ನಿಜವನ್ನ ಹೇಳಿದರು. `ಸರ್ ನನ್ನ ಸಿಟ್ಟು ಇರೋದು ಶ್ರೀವಾಣಿಯವರ ಮೇಲೆ. ಕಂಪ್ಲೇಂಟ್ ಕೊಡಲಿಕ್ಕೆ ಹೋದರೆ ನಿಮ್ಮ ಮೇಲಧಿಕಾರಿಯ ಗಮನಕ್ಕೆ ತರಬೇಕಿತ್ತು ಅನ್ನೊ ಮಾತು ಬಂದಿದ್ದರಿಂದ ಇದೆಲ್ಲ ಸರಿಹೋಗಲ್ಲ ಅನಿಸಿ ನಿಮ್ಮಿಬ್ಬರ ಹೆಸರುಗಳನ್ನೂ ಸೇರಿಸಬೇಕಾಯಿತು. ಹೆದರಬೇಡಿ ನಿಮ್ಮಿಬ್ಬರನ್ನ ಪೊಲೀಸಿನೋರು ಮುಟ್ಟೋದಕ್ಕೆ ನಾನು ಬಿಡೋದಿಲ್ಲ. ಆದರೆ ಆಕೇನ ಮಾತ್ರ ನಾ ಬಿಡೋದಿಲ್ಲ...' ಎಂದು ಪಟ್ಟು ಬಿಡದೆ ಕೂತ ಆತನನ್ನ ಅದು ಹೇಗೋ ಸಮಾಧಾನ ಮಾಡಿ ಮೂವರ ಮೇಲಿನ ಕಂಪ್ಲೇಂಟೂ ವಾಪಸ್ಸು ಪಡೆಯುವಂತೆ ಒಪ್ಪಿಸಿ ಕಳುಹಿಸಿದ್ದಾಯಿತು.

ಇವತ್ತೇ ಮಧ್ಯಾಹ್ನ ಕಂಪ್ಲೇಂಟ್ ವಿತ್ ಡ್ರಾ ಕಾಪಿ ತಂದುಕೊಡ್ತೀನಿ ಎಂದು ಎದ್ದು ಹೋದ ಬೆಟ್ಟಪ್ಪ ಎರಡು ದಿನವಾದರೂ ಹಿಂದಿರುಗಲಿಲ್ಲ. ಬಹಳ ಸಲ ಫೋನ್ ಮಾಡಿದ ಮೇಲೆ ಹೇಳಿದ್ದು ಇಷ್ಟು: `ಸರ್ ನಾನು ಕಂಪ್ಲೇಂಟ್ ವಾಪಸ್ಸು ತಗೋತೀನಿ ಅಂದ್ರೆ ನಿಮ್ಮ ಆಫೀಸಿನೋರೇ ಒಬ್ರು ನನ್ನ ತಡೀತಿದ್ದಾರೆ. ನಿಮ್ಮನ್ನ ಆ ಜಾಗದಿಂದ ಕದಲಿಸಿ ನನಗೊಂದು ಪರ್ಮನೆಂಟ್ ಪೋಸ್ಟ್ ಕ್ರಿಯೇಟ್ ಮಾಡಿಸಿ ಕೊಡ್ತಾರಂತೆ. ನಿಮ್ಮ ವಿರುದ್ಧಾನೇ ಎವಿಡೆನ್ಸ್ ಕಲೆಕ್ಟ್ ಮಾಡ್ತಿದ್ದೀನಿ. ನಿಮ್ಮವರೆ ಕೊಡ್ತಿದ್ದಾರೆ. ಮನಸ್ಸು ಮಾಡಿದ್ರೆ ನಿಮ್ಮನ್ನ ಒಂದು ತಿಂಗಳಲ್ಲಿ ಕೆಲಸದಿಂದ ಕೆಳಗಿಳಿಸ್ತೀನಿ. ನನಗೆ ತೋಚಿದ ಹಾಗೆ ನಾನು ಮಾಡ್ತೀನಿ ಸರ್...'
ಬಾಸ್ ಆಗಿ ಕೂತು ಇಂಥ ಮಾತು ಕೇಳಿಸಿಕೊಳ್ಳಬೇಕಾಗಿ ಬಂದದ್ದಕ್ಕೆ ಶಂಕರ್‌ಗೆ ರೇಜಿಗೆ ಅನಿಸಿತು.

ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟಬಹುದೋ ತಿಳಿಯಲಿಲ್ಲ. ತನ್ನ ವಿರುದ್ಧ ಸಂಚು ಮಾಡುತ್ತಿರುವವರು ಯಾರಿರಬಹುದು ಎಂದು ಯೋಚಿಸುತ್ತಿದ್ದಂತೆ ಕೆಲವೆರಡು ಮುಖಗಳು ಕಣ್ಮುಂದೆ ಬಂದವು. ತಾನು ಕೆಲಸಕ್ಕೆ ಸೇರಿದಂದಿನಿಂದ ಈವರೆಗೆ ಹಲವರು ಹಲವರ ಜಾತಕಗಳನ್ನ ಬಿಚ್ಚಿಟ್ಟಿದ್ದರು. ನಂಬುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಎಲ್ಲವನ್ನೂ ಕೇಳಿಸಿಕೊಂಡು ತಟಸ್ಥವಾಗಿರಬೇಕಾಗಿ ಬಂದಿತ್ತು. ಇಲ್ಲಿ ನಡೆಯುವ ಪ್ರತಿಯೊಂದೂ ಸುದ್ದಿಯಾಗಿ ಎಲ್ಲಿಗೆ ಹೋಗಿ ಮುಟ್ಟುತ್ತದೆ... ಅದರ ಹಿಂದಿರುವ ಉದ್ದೇಶಗಳೇನು... ಎನ್ನುವುದೆಲ್ಲವೂ ಈಗೀಗ ಸ್ಪಷ್ಟವಾಗತೊಡಗಿತು. ಇದು ತಂತ್ರ ಪ್ರತಿತಂತ್ರಗಳ ಅಖಾಡ; ಇಲ್ಲಿ ಕೈಚೆಲ್ಲಿ ಕೂರಲು ಸಾಧ್ಯವೇ ಇಲ್ಲ ಅನಿಸಿತು.

ಹಾಗೆಂದು ಈ ಎಲ್ಲರನ್ನೂ ಅಧಿಕಾರಯುತವಾಗಿ ಒಮ್ಮೆಗೇ ತಡವಿಕೊಳ್ಳುವುದು ಹೇಗೆ? ಇಲ್ಲೆವರೆಗೆ ತನ್ನ ಮೈಮನವನ್ನ ತುಂಬಿಕೊಂಡಿದ್ದ ಸಾಹಿತ್ಯದ ಸಾಹಚರ್ಯ, ಸಾಹಿತಿಗಳು, ಅವರ ಅಂತರಂಗ ಬಹಿರಂಗದ ಉಪದ್ವ್ಯಾಪಗಳು, ಮುನ್ನುಡಿ-ಹಿನ್ನುಡಿಗಳನ್ನು ಬರೆಸಿಕೊಂಡು ಬಾವುಟ ಹಾರಿಸುವ, ಭ್ರಮೆಗಳು, ಸುಳ್ಳುಗಳನ್ನ ಅಚ್ಚುಕಟ್ಟಾದ ಪದಪಂಕ್ತಿಯಲ್ಲಿ ಬಂಧಿಸಿ ಅದನ್ನು ವಾಸ್ತವವೆಂಬಂತೆ ಮಾತಾಡುವ, ಈ ಎಲ್ಲಕ್ಕೆ ಪಂಗಡಗಳನ್ನ ಅಲ್ಲಲ್ಲಿ ನಿರ್ಮಿಸಿಕೊಳ್ಳುವ, ಅಲ್ಲೇ ಗಿರಕಿ ಹೊಡೆಯುತ್ತ ಬದುಕು ಆರಂಭಿಸುವ ಎಲ್ಲರೂ ತನ್ನ ಜೀವ ಚೈತನ್ಯದಲ್ಲಿ ನುಸುಳುವುದಕ್ಕೆ ನಾನೇ ದಾರಿ ಮಾಡಿಕೊಟ್ಟಿದ್ದೇನೆ. ಈಗ ಇವೆಲ್ಲವೂ ತನ್ನೊಳಗೆ ಕಲಕಲು ಆರಂಭಿಸಿವೆ. ಅದರ ಫಲ ಈ ಎಲ್ಲ ಅವಾಂತರಗಳು.

ಏನೆಲ್ಲ ಯೋಚಿಸಿ ಶಂಕರ್ ತನಗೆ ತಾನೇ ಸಾಂತ್ವನ ಹೇಳಿಕೊಂಡು ಧೈರ್ಯ ತಂದುಕೊಳ್ಳಲು ಪ್ರಯತ್ನಿಸಿದರೂ ಬೆಟ್ಟಪ್ಪನ ಮಾತುಗಳು ವಿಚಿತ್ರ ತಲ್ಲಣ ಹುಟ್ಟಿಸತೊಡಗಿದವು. ತಾನು ತೀರಾ ದಣಿದೆ, ತನ್ನ ಕೈ ಸೋತಿತು ಅನಿಸಿದಾಗ ಎಲ್ಲವನ್ನೂ ಅನಿವಾರ್ಯವಾಗಿ ಹುದುಗಿಸಿಕೊಂಡಿರುವ ತನ್ನ ಜೀವ ಚೈತನ್ಯ ಸುಳಿ ತಿರುಗಿ ನಭಕ್ಕೆ ಮುಖಮಾಡಿ ಆವಿಯಾಗಿ ಹೊರಟಿರುವಂತೆ ಭಾಸವಾಗತೊಡಗಿತು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT