ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋದ್ಯಮ ಸಹೋದ್ಯೋಗಿಗಳಲ್ಲಿ ಕಂದಕ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಚಿತ್ರರಂಗದ ಪ್ರಮುಖರೆಲ್ಲರೂ ದ್ವೀಪಗಳಾಗುತ್ತಿರುವ ಇಂದಿನ ಸಂದರ್ಭದಲ್ಲಿ ಒಗ್ಗಟ್ಟಿನ ಕೊರತೆಯೇ ಕನ್ನಡ ಚಿತ್ರರಂಗದ ಹಲವು ಸಮಸ್ಯೆಗಳಿಗೆ ಕಾರಣ~ ಎಂದು ಹಿರಿಯ ಚಲನಚಿತ್ರ ನಟ ಅಶೋಕ್ ಅಭಿಪ್ರಾಯ ಪಟ್ಟರು.

ನಗರದಲ್ಲಿ ಶನಿವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ `ಬೆಳ್ಳಿಹೆಜ್ಜೆ~ ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಚಿತ್ರೋದ್ಯಮದಲ್ಲಿ ನಾಯಕ ನಟರು ಮತ್ತು ಉಳಿದ ಎಲ್ಲ ಕಾರ್ಮಿಕರ ನಡುವಿನ ಅಂತರ ಹೆಚ್ಚಾಗುತ್ತಿದೆ. ಮೂರರಿಂದ ನಾಲ್ಕು ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುವ ನಾಯಕ ನಟರು ಯಾರ ಮಾತಿಗೂ ಬೆಲೆ ಕೊಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಚಿತ್ರೋದ್ಯಮದ ಕಾರ್ಮಿಕರ ನಡುವೆ ಒಗ್ಗಟ್ಟಿನ ಕೊರತೆ ಉಂಟಾಗಿದೆ. ಇದು ಕನ್ನಡ ಚಿತ್ರರಂಗದ ಹಲವು ಸಮಸ್ಯೆಗಳ ಮೂಲ~ ಎಂದು ಅವರು ನುಡಿದರು.

`ಚಿತ್ರರಂಗದ ಹಿಂದಿನ ಹಲವು ಕಾರ್ಮಿಕರು ಇಂದು ಮಾಲೀಕರೂ ಆಗಿರುವುದರಿಂದ ಕಾರ್ಮಿಕ ಹಾಗೂ ಮಾಲೀಕರ ಸಂಘರ್ಷ ತಳಮಟ್ಟದಿಂದಲೇ ಹೆಚ್ಚಾಗಿದೆ. ಚಲನಚಿತ್ರ ಕಾರ್ಮಿಕರಿಗೆ ನ್ಯಾಯಯುತ ಹಾಗೂ ನಿಗದಿತ ಸಮಯದ ವೇತನ ಮತ್ತು ಕಾರ್ಮಿಕ ನಿಯಮಗಳ ಪ್ರಕಾರ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಕಾರ್ಮಿಕ ನಾಯಕನಾಗಿ ಸಾಕಷ್ಟು ಹೋರಾಟ ನಡೆಸಿದ್ದೇನೆ. ಕನ್ನಡ ಚಿತ್ರೋದ್ಯಮದ ಕಾರ್ಮಿಕ ನಾಯಕನಾಗಿ ಕಳೆದ 20 ವರ್ಷಗಳಿಂದ ಮಾಡಿರುವ ಕೆಲಸ ನನಗೆ ತೃಪ್ತಿ ತಂದಿದೆ~ ಎಂದರು.

`ನಾನು `ಕ್ರಾಂತಿಯೋಗಿ ಬಸವಣ್ಣ~ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಬರಬಹುದು ಎಂದು ನಿರೀಕ್ಷಿಸಿದ್ದೆ, ಪ್ರಶಸ್ತಿ ಬರಲಿಲ್ಲ. ಆದರೆ ಪ್ರಶಸ್ತಿ-ಸನ್ಮಾನಗಳನ್ನು ಮೀರಿದ ಕಾಯಕ ತತ್ವವನ್ನು ಆ ಚಿತ್ರದಿಂದ ಕಲಿತೆ. ಪ್ರಶಸ್ತಿಗಳು ಬರಲಿಲ್ಲ ಎಂಬ ಬಗ್ಗೆ ಯಾವುದೇ ಬೇಸರವಿಲ್ಲ. ಜೀವನದಲ್ಲಿ ಪ್ರಶಸ್ತಿಗಳಿಗಿಂತ ಅನ್ನ ಹಾಗೂ ಆರೋಗ್ಯ ಮುಖ್ಯ ಎಂಬುದು ಅರಿವಾಗಿದೆ~ ಎಂದರು.

`ಅಭಿನಯದಲ್ಲಿ ನಾನು ರಾಜ್ ಕುಮಾರ್ ಅವರನ್ನು ಅನುಕರಿಸುತ್ತೇನೆ ಎಂದು ಹಲವರು ಹೇಳಿದ್ದಿದೆ. ಆದರೆ ನಾನು ಅವರನ್ನು ಅನುಕರಿಸಲಿಲ್ಲ, ಅನುಸರಿಸಿದೆ. ಹಿರಿತೆರೆಯಿಂದ ದೂರಾದ ಮೇಲೆ ಕಿರುತೆರೆ ನನ್ನ ಅಭಿವ್ಯಕ್ತಿಯ ಮಾರ್ಗವಾಯಿತು. ವೇಗದ ಸಿನಿಮಾಕ್ಕಿಂತಲೂ ಭಿನ್ನವಾಗಿ ಧಾರಾವಾಹಿಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ. `ಅರ್ಧಸತ್ಯ~ ಹಾಗೂ `ಗುಪ್ತಗಾಮಿನಿ~ ಪಾತ್ರಗಳಿಂದ ಇಂದಿಗೂ ಜನರು ನನ್ನನ್ನು ಗುರುತಿಸುತ್ತಾರೆ. ಇದು ಹೆಚ್ಚು ಖುಷಿ ಕೊಡುತ್ತದೆ~ ಎಂದರು.

`ಕಾಲದಿಂದ ಕಾಲಕ್ಕೆ ಜನರ ಅಭಿರುಚಿಗಳು ಬದಲಾಗುತ್ತವೆ. ಆದರೆ ಮೌಲ್ಯಯುತವಾದ ಕಲೆ ಮಾತ್ರ ಉಳಿಯುತ್ತದೆ. `ಕೊಲವೆರಿ ಡಿ~ ಗೀತೆ ಇಂದಿನ ಜನರ ಅಭಿರುಚಿ. ಅದನ್ನು ಕೀಳು ಎಂದು ಟೀಕಿಸಲಾಗದು. ಕಾಲವೇ ಮೌಲ್ಯವನ್ನು ನಿರ್ಧರಿಸುತ್ತದೆ. ಕಾಲದ ಹೊಡೆತದಲ್ಲಿ ಮಾಧುರ್ಯ ಇರುವ ಗೀತೆಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ~ ಎಂದು ಅವರು ತಿಳಿಸಿದರು.

`ವಿದೇಶಗಳಲ್ಲಿ ಚಲನಚಿತ್ರ ನಿರ್ಮಾಣವೂ ಸೇರಿದಂತೆ ಎಲ್ಲ ಕೆಲಸಗಳ ಬಗ್ಗೆಯೂ ಜನಕ್ಕೆ ಹೆಚ್ಚಿನ ಶ್ರದ್ಧೆ ಇದೆ. ಆದರೆ ನಮ್ಮಲ್ಲಿ ಅದು ಸಾಧ್ಯವಾಗುತ್ತಿಲ್ಲ. ಮುಂದುವರೆದ ರಾಷ್ಟ್ರಗಳು ನಿರಾಕರಿಸುತ್ತಿರುವ ನ್ಯೂಕ್ಲಿಯರ್ ಶಕ್ತಿಯನ್ನು ಭಾರತ ಅಪ್ಪಿಕೊಳ್ಳಲು ಮುಂದಾಗುತ್ತಿದೆ. ಸುಸ್ಥಿರ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಜಗತ್ತಿನ ಮುಂದುವರೆದ ದೇಶಗಳು ಮುಂದಾಗುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿ ಈ ಬಗ್ಗೆ ಜಾಗೃತಿ ಇಲ್ಲದೇ ಇರುವುದು ನಮ್ಮ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ~ ಎಂದು ಅವರು ವಿಷಾದಿಸಿದರು.

`ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಇದು ನನ್ನ ಕನ್ನಡ ಹೋರಾಟದ ಮುಂದುವರೆದ ಭಾಗ. ಈ ಮೂಲಕ ಕನ್ನಡ ಸಾಹಿತ್ಯ ಹಾಗೂ ಚಿತ್ರೋದ್ಯಮವನ್ನು ಒಂದು ಮಾಡುವುದು ನನ್ನ ಉದ್ದೇಶ~ ಎಂದು ಅವರು ನುಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಂಚಾಲಕ ಎಸ್.ರವಿಶಂಕರ್, ಹಿರಿಯ ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT