ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದು ಕಟಕಟೆಗೆ ಬರಲಿ: ರಾಜಾ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ಹಿಂದೆ ಹಣಕಾಸು ಸಚಿವರಾಗಿದ್ದ ಹಾಲಿ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಸಮನ್ಸ್ ನೀಡಬೇಕು ಮತ್ತು 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಾಕ್ಷಿಯಾಗಿ ಅವರನ್ನು ಪರಿಗಣಿಸಬೇಕು ಎಂದು ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಸೋಮವಾರ ದೆಹಲಿ ಕೋರ್ಟ್‌ಗೆ ಹೇಳಿದರು.

ಷೇರುಗಳ ಪ್ರಮಾಣ ತಗ್ಗಿಸಿದ ವಿಷಯದ ಬಗ್ಗೆ ಚಿದಂಬರಂ ಸಂಪುಟ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದರು. ಸಂಪುಟ ಸಭೆಗೆ ಸಂಬಂಧಿಸಿದ ಚಿದಂಬರಂ ಹೇಳಿಕೆಯನ್ನು ಸಿಬಿಐ ದಾಖಲಿಸಿರಬೇಕು ಎಂದು ರಾಜಾ ಪರ ಹಾಜರಾಗಿದ್ದ ಹಿರಿಯ ವಕೀಲ ಸುಶೀಲ್ ಕುಮಾರ್ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರಿಗೆ ತಿಳಿಸಿದರು.

ಷೇರುಗಳ ಪ್ರಮಾಣ ತಗ್ಗಿಸುವ ಬಗ್ಗೆ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಉಪಸ್ಥಿತಿಯಲ್ಲೇ ಚಿದಂಬರಂ ಅವರು ಸಲಹೆ ನೀಡಿದ್ದರೇ ಎಂಬುದನ್ನು ಗೃಹ ಸಚಿವರಿಗೆ ಕೇಳಬೇಕು ಎಂದೂ ರಾಜಾ ಪರ ವಕೀಲರು ಕೋರಿದರು.

`ಚಿದಂಬರಂ ಅವರನ್ನು ಇಲ್ಲಿಗೆ (ಕೋರ್ಟ್‌ಗೆ) ಕರೆಸಿ. ಪ್ರಧಾನಮಂತ್ರಿ ಉಪಸ್ಥಿತಿಯಲ್ಲಿ ಈ ಸಭೆ ನಡೆಯಿತೇ ಇಲ್ಲವೇ ಮತ್ತು ಈ ಸಲಹೆಯನ್ನು ನೀವು ನೀಡಿದ್ದಿರೇ ಎಂದು ಕೇಳಿ~ ಎಂದು ಅವರು ಹೇಳಿದರು.

ಬೊಕ್ಕಸಕ್ಕೆ ನಷ್ಟವಾಗಿದೆ ಎನ್ನಲಾದ ಬಗ್ಗೆ ಅವರು, ಸಂಸತ್ತಿನಲ್ಲೇ ಪ್ರಧಾನಮಂತ್ರಿ  ನಷ್ಟವಾಗಿಲ್ಲವೆಂದಿದ್ದಾರೆ ಎಂದರು.

ಆರೋಪಿ ಶಾಹಿದ್ ಬಲ್ವಾ ಅವರ ಸ್ವಾನ್ ಟೆಲಿಕಾಂ ಮತ್ತು ಸಂಜಯ್ ಚಂದ್ರ ಅವರ ಯೂನಿಟೆಕ್ ವೈರ್‌ಲೆಸ್ (ತಮಿಳುನಾಡು) ಪ್ರೈ.ಲಿ. ತಮ್ಮ ಷೇರುಗಳನ್ನು ದುಬೈ ಮೂಲದ ಇಟಿಸಾಲಟ್ ಮತ್ತು ನಾರ್ವೆ ಮೂಲದ ಟೆಲಿನಾರ್‌ಗೆ ಅನುಕ್ರಮವಾಗಿ  ನೀಡಿದ್ದಾರೆ ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ಹೇಳಿದೆ.

ಕೋರ್ಟ್ ತನ್ನ ಅಧಿಕಾರ ಬಳಸಿ ಸಿಆರ್‌ಪಿಸಿಯ 311ನೇ ಸೆಕ್ಷನ್‌ನಡಿ ಚಿದಂಬರಂ ಅವರನ್ನು ಕರೆಸಬೇಕು ಮತ್ತು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ರಾಜಾ ಪರ ವಕೀಲರು ಮನವಿ ಮಾಡಿದರು.

`ಷೇರು ಪ್ರಮಾಣ ತಗ್ಗಿಸಿದ ವಿಷಯದ ಬಗ್ಗೆ ಆಗಿನ ಹಣಕಾಸು ಸಚಿವರು ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಚಿದಂಬರಂ ಇದರಲ್ಲಿ ಭಾಗಿ ಆಗಿದ್ದಾರೆ. ನಾನು ಅವರನ್ನು ಆರೋಪಿ ಎಂದು ಕರೆಯುತ್ತಿಲ್ಲ. ಸಿಬಿಐ ಅವರ ಹೇಳಿಕೆಯನ್ನು ಈ ಮೊದಲೇ ದಾಖಲಿಸಬೇಕಿತ್ತು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT