ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಕುರಳಿ: ಪ್ಲೋರೈಡ್‌ಯುಕ್ತ ನೀರು ತಂದ ಭೀತಿ

Last Updated 7 ಜನವರಿ 2012, 5:30 IST
ಅಕ್ಷರ ಗಾತ್ರ

ಪಾಂಡವಪುರ: ನಿಧಾನ ವಿಷ ಎಂದೇ ಹೇಳಲಾಗುವ ಪ್ಲೋರೈಡ್ ಅಂಶ ತಾಲ್ಲೂಕಿನ ಚಿನಕುರಳಿ ಹೋಬಳಿಯ ಬಹುತೇಕ ಗ್ರಾಮಗಳ ಅಂತರ್ಜಲದಲ್ಲಿ ವ್ಯಾಪಿಸಿದ್ದು, ಈ ನೀರು ಬಳಸುವ ನಾಗರಿಕರಲ್ಲಿ ಆತಂಕ ಮೂಡಿದೆ.

ತಾಲ್ಲೂಕು ಪಂಚಾಯಿತಿ ವರದಿ ಪ್ರಕಾರ, ಹೋಬಳಿ ವಿವಿಧ ಗ್ರಾಮಗಳಲ್ಲಿ ಪಡೆದ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಫ್ಲೋರೈಡ್ ಅಂಶ ಇರುವುದು ದೃಢ  ಪಟ್ಟಿದೆ. ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರು ವಷ್ಟು ಹೆಚ್ಚಿನ ಮಟ್ಟದ ಪ್ಲೋರೈಡ್ ಅಂಶ ಪತ್ತೆಯಾಗಿದೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಅರಳಕುಪ್ಪೆ, ನಳ್ಳೇನಹಳ್ಳಿ, ಸಿಂಗಾಪುರ, ಮಾರ‌್ಮಳ್ಳಿ, ಜವರೇಗೌಡನಕೊಪ್ಪಲು, ಇಳ್ಳೇನ ಹಳ್ಳಿ, ಚಿಕ್ಕಬೋಗನಹಳ್ಳಿ, ಬ್ಯಾಟ ರಾಯನ ಕೊಪ್ಪಲು, ಬನ್ನಂಗಾಡಿ, ಹೊಸಕನ್ನಂಬಾಡಿ, ಕಣವೆಕೊಪ್ಪಲು, ಆಶೋಕನಗರ, ಚಿಕ್ಕಮರಳಿ, ದೇವೇಗೌಡನಕೊಪ್ಪಲು, ದೊಡ್ಡಬ್ಯಾಡರಹಳ್ಳಿ, ಮೂಡಲಕೊಪ್ಪಲು, ಹೊಸಕೋಟೆ, ಲಕ್ಷ್ಮೀ ಸಾಗರ, ಮೇಲುಕೋಟೆ ಮತ್ತು ಜಕ್ಕನಹಳ್ಳಿ ಗ್ರಾ.ಪಂ.ನ ಕೆಲವು ಗ್ರಾಮಗಳಿಂದ ಪರೀಕ್ಷೆ ನೀರು ಪಡೆಯಲಾಗಿದೆ.

ಈ ಭಾಗದ ಗ್ರಾಮಗಳಲ್ಲಿ ಅಲ್ಲಲ್ಲಿ, ಜನರ ಕಾಲಿನ ಮೂಳೆಗಳು ಸೊಟ್ಟಗಾಗಿರುವುದು, ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುವುದು; ವೃದ್ದರು ನಡೆಯಲಾರದ ಸ್ಥಿತಿ ತಲುಪಿರುವುದು ಕಂಡುಬಂದಿದೆ.

ಚಿನಕುರಳಿ ಹೋಬಳಿಯ ಹೆಚ್ಚು ಗ್ರಾಮಗಳು ಪ್ಲೋರೊಸಿಸ್ ಭೀತಿಗೆ ನಲುಗಿದ್ದು, ಈ ಭಾಗದ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ಪ್ಲೋರೈಡ್‌ಯುಕ್ತ ನೀರೇ ಆಧಾರ. ಪ್ಲೋರೈಡ್‌ಮುಕ್ತ ನೀರು ದೊರಕದಿದ್ದಲ್ಲಿ ಪರಿಸ್ಥಿತಿ ಗಂಭೀರವಾಗಬಹುದು ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ತೊಣ್ಣೂರು ಕೆರೆಯಿಂದ ಈ ಭಾಗದ ಹಲವು ಗ್ರಾಮಗಳಿಗೆ ನೀರು ಪೂರೈಸುವ ವ್ಯವಸ್ಥೆ ಇದ್ದರು, ಶುದ್ಧೀಕರಣ ಯಂತ್ರಗಾರದಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಗಳಿಗೆ ತೊಣ್ಣೂರು ಕೆರೆ ನೀರು ತಲುಪುತ್ತಿಲ್ಲ.
ಕುಳಿತರೆ ಏಳಲಾಗದ, ಎದ್ದರೆ ಕೂರಲಾಗದ ಮಂಡಿ ನೋವಿನಿಂದ ನರಳುತ್ತಿರುವ ರಾಜು, ಮೈಕೈ ನೋವಿನಿಂದ ನರಳುವ ರಾಮೇಗೌಡ, 10 ವರ್ಷಕ್ಕೆ ಹಲ್ಲು ಹಳದಿಯಾಗಿರುವ ನಿಸರ್ಗ ಪ್ಲೋರೈಡ್ ಯುಕ್ತ ನೀರು ಸೇವಿಸಿದ್ದಕ್ಕೆ ಆಗಿರುವ ಪರಿಣಾಮಕ್ಕೆ ಕೆಲ ನಿದರ್ಶನಗಳು.

`10 ಪಿಸಿಎಂ ಪ್ಲೋರೈಡ್ ಅಂಶ ಇರುವ ನೀರನ್ನು ಸತತ  ಸೇವಿಸಿದರೆ ಮೂಳೆಗಳು ಸೊಟ್ಟಗಾಗಿ ಹಲ್ಲುಗಳು ಹಳದಿಯಾಗುತ್ತವೆ~ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮರೀಗೌಡ.

ಇನ್ನಾದರೂ ಈ ಗ್ರಾಮಗಳಿಗೆ ಗುಣಮಟ್ಟದ ನೀರು ಪೂರೈಸಲು ಕ್ರಮ   ಜರುಗಿಸಬೇಕು                 ಎಂಬು ದು ತಾಪಂ ಸದಸ್ಯ ಎಂ. ಪುಟ್ಟೇಗೌಡ ಅವರ ಆಗ್ರಹ. ಜನ ಪ್ರತಿನಿಧಿಗಳು, ತಾಲ್ಲೂಕು ಆಡಳಿತದ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT