ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಮತ್ತಷ್ಟು ತುಟ್ಟಿ ಸಂಭವ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಹಣಕಾಸು ನಿಯಂತ್ರಣ ಕ್ರಮಗಳಿಂದ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬಿಗಿಯಾದ ಹಣಕಾಸು ನೀತಿಯಿಂದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಕಡಿಮೆಯಾಗಿದೆ. ಷೇರುಪೇಟೆ, ಸಾಲ ಪತ್ರ, ಮ್ಯೂಚುವಲ್ ಫಂಡ್ ಸೇರಿದಂತೆ ಇತರೆ ಹೂಡಿಕೆ ಯೋಜನೆಗಳು ಆಕರ್ಷಣೆ ಕಳೆದುಕೊಂಡಿವೆ. ಚಿನ್ನದ ಮೇಲಿನ ಹೂಡಿಕೆಯೇ ಸುರಕ್ಷಿತ ಮತ್ತು ಲಾಭದಾಯಕ ಎನ್ನುವ ಮನೋಭಾವ ಮುಂದುವರಿದಿದೆ.

ಇನ್ನೇನು ಮದುವೆ ಮತ್ತು ಹಬ್ಬಗಳ ಕಾಲ ಶುರುವಾಗಲಿದೆ. ಜತೆಗೆ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯವೂ ಗಣನೀಯವಾಗಿ ಕುಸಿದಿದೆ. ಈ ಎಲ್ಲ ಕಾರಣಗಳಿಂದ ಚಿನ್ನದ ಬೇಡಿಕೆ ಮತ್ತು ಬೆಲೆ ಇನ್ನಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ಪರಿಣಿತರು ಹೇಳಿದ್ದಾರೆ.

ಬ್ಯಾಂಕುಗಳಿಗೆ `ಆರ್‌ಬಿಐ' ನೀಡುವ ಸಾಲದ ಬಡ್ಡಿದರವನ್ನು ಇತ್ತೀಚೆಗೆ 300 ಮೂಲಾಂಶಗಳಷ್ಟು ಹೆಚ್ಚಿಸಿದೆ. ಇದರಿಂದ ಒಟ್ಟಾರೆ ಹಣಕಾಸು ಚಟುವಟಿಕೆ ಕಡಿಮೆಯಾಗಿದೆ. ಒಂದೇ ದಿನದಲ್ಲಿ ಸಾಲಪತ್ರಗಳ ಮೇಲಿನ ಹೂಡಿಕೆ ಮೌಲ್ಯ ಶೇ 3.5ರಷ್ಟು ತಗ್ಗಿದೆ. ಹೂಡಿಕೆದಾರರು ಮತ್ತೆ ಚಿನ್ನದ ಮೇಲೆ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಷೇರುಪೇಟೆ ಯಿಂದ ದೊಡ್ಡ ಮಟ್ಟದ ಬಂಡವಾಳ ಚಿನಿವಾರ ಪೇಟೆಯತ್ತ ಹರಿಯುತ್ತಿದೆ ಎನ್ನುತ್ತಾರೆ `ಇನ್ವೆಸ್ಟರ್ ಕೇರ್' ಸಂಸ್ಥೆಯ ನಿರ್ದೇಶಕ ಸಮರ್ ವಿಜಯ್.

`ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಕಳೆದ ಎಂಟು ವಹಿವಾಟು ಅವಧಿಗಳಲ್ಲಿ ಒಟ್ಟಾರೆ 1,138 ಅಂಶಗಳಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗಳಿಗೆ ಸರಾಸರಿ ರೂ.500ರಷ್ಟು ಹೆಚ್ಚಿದೆ. ಷೇರುಪೇಟೆ ಚೇತರಿಸಿಕೊಳ್ಳದೇ ಇದ್ದರೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ಜಿಯೊಜಿತ್ ಕಾಮ್‌ಟ್ರೇಡ್‌ನ ನಿರ್ದೇಶಕ ಸಿ.ಪಿ.ಕೃಷ್ಣನ್.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸದ್ಯ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1340 ಡಾಲರ್ ಆಸುಪಾಸಿನಲ್ಲಿದೆ. ಇದು 1500 ಡಾಲರ್ ದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.

ಮೊದಲ ತ್ರೈಮಾಸಿಕ ಹಣಕಾಸು ನೀತಿಯಲ್ಲಿ `ಆರ್‌ಬಿಐ' ಬಡ್ಡಿ ದರ ತಗ್ಗಿಸಬಹುದು ಎಂಬ ನಿರೀಕ್ಷೆ ಇತ್ತು. ಬಡ್ಡಿ ದರ ಇಳಿದರೆ ಬಾಂಡ್ ಮಾರಾಟ ಮತ್ತು ಖರೀದಿ ಹೆಚ್ಚುತ್ತಿತ್ತು. ಆದರೆ, `ಆರ್‌ಬಿಐ' ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಣಕಾಸು ಅಸ್ಥಿರತೆ ಸಂದರ್ಭದಲ್ಲಿ `ಚಿನ್ನವೇ' ಅತ್ಯಂತ ಸುರಕ್ಷಿತ ಎಂಬ ಭಾವನೆ ಬಲವಾಗುತ್ತಿದೆ. ಸರ್ಕಾರ ಇದನ್ನು ಬದಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ, ಪರ್ಯಾಯ ಹೂಡಿಕೆ ಯೋಜನೆಗಳು ಅಷ್ಟೊಂದು ಜನಪ್ರಿಯವಾಗುತ್ತಿಲ್ಲ ಎನ್ನುತ್ತಾರೆ ಇಂಡಿಯಾ ರೇಟಿಂಗ್ಸ್ ಸಂಸ್ಥೆಯ ಹಿರಿಯ ಅರ್ಥಶಾಸ್ತ್ರಜ್ಞ ಡಿ.ಕೆ.ಪಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT