ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ: ವ್ಯಾಟ್ ಹೆಚ್ಚಳಕ್ಕೆ ವಿರೋಧ

Last Updated 25 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯಾಟ್’ ದರಗಳನ್ನು ಶೇ 13.5ರಿಂದ ಶೇ 12.5ಕ್ಕೆ ಇಳಿಸಬೇಕು ಎನ್ನುವ ವಾಣಿಜ್ಯೋದ್ಯಮ ಸಂಘಗಳ ಮನವಿಗೆ ಸ್ಪಂದಿಸದ ಸರ್ಕಾರ, ವ್ಯತಿರಿಕ್ತವಾಗಿ ವರ್ತಿಸಿ ತೆರಿಗೆ ದರ ಹೆಚ್ಚಿಸಿದೆ. ಇದರಿಂದ ಹೆಚ್ಚು ವರಮಾನ ಸಂಗ್ರಹಿಸುವ ಸರ್ಕಾರದ ಉದ್ದೇಶ ಈಡೇರದೇ ಹೋಗಬಹುದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ ಬಿ. ಟಿ. ಮನೋಹರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನ ವ್ಯಾಪಾರಿಗಳ ವಿರೋಧ: ಚಿನ್ನಾಭರಣಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ದರವನ್ನು ಶೇ 1ರಿಂದ ಶೇ 2ಕ್ಕೆ ಹೆಚ್ಚಿಸಿರುವುದಕ್ಕೆ ಚಿನ್ನಾಭರಣ ವ್ಯಾಪಾರಿ ವಲಯದಲ್ಲಿಯೂ ತೀವ್ರ ಅಸಮಾಧಾನ ವ್ಯಕ್ತವಾಗಿದೆ.10 ಗ್ರಾಂ ಚಿನ್ನದ ಆಭರಣಗಳಿಗೆ ರೂ 22 ಸಾವಿರದಷ್ಟು ಬೆಲೆ ಇದ್ದರೆ, ಖರೀದಿದಾರರು  ರೂ 220ರಂತೆ ತೆರಿಗೆ ಪಾವತಿಸಬೇಕಾಗಿತ್ತು.ಬಜೆಟ್ ಪ್ರಸ್ತಾವನೆ ಪ್ರಕಾರ ಅದು ಇನ್ನು ಮುಂದೆ ರೂ 440 ಆಗಲಿದೆ. 1 ಕೆಜಿ ಚಿನ್ನ ಖರೀದಿಸುವ ವರ್ತಕರು ರೂ 20 ಸಾವಿರದಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.  ಇದರಿಂದ ಗ್ರಾಹಕರು ಮತ್ತು ಚಿನ್ನಾಭರಣ ವ್ಯಾಪಾರಿಗಳಿಗೆ ಹೆಚ್ಚಿನ ಹೊರೆ ಬೀಳಲಿದೆ.

ನೆರೆಯ ಎಲ್ಲ ರಾಜ್ಯಗಳಲ್ಲಿ ಚಿನ್ನಾಭರಣಗಳ ಮೇಲೆ ಶೇ 1ರಷ್ಟು ಏಕರೂಪದ ತೆರಿಗೆ (ವ್ಯಾಟ್) ಇರುವಾಗ, ಕರ್ನಾಟಕದಲ್ಲಿ ಮಾತ್ರ ತೆರಿಗೆ ದರ ಹೆಚ್ಚಲಿರುವುದರಿಂದ ಚಿನ್ನಾಭರಣಗಳ ಖರೀದಿ ವಹಿವಾಟು ನೆರೆಯ ರಾಜ್ಯಗಳಿಗೆ ವರ್ಗಾವಣೆಗೊಳ್ಳುವ ಭೀತಿ ಇದೆ ಎಂದು ಬೃಹತ್ ಬೆಂಗಳೂರು ಚಿನ್ನಾಭರಣ ಮಾರಾಟ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿ. ಎ. ಶರವಣ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತೆರಿಗೆ ಹೆಚ್ಚಿಸುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದೂ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ ದಿನ ಅಂದಾಜು ರೂ 100 ಕೋಟಿಗಳಷ್ಟು ಮೊತ್ತದಷ್ಟು ಚಿನ್ನಾಭರಣಗಳ ವಹಿವಾಟು ನಡೆಯುತ್ತಿದ್ದು, ತೆರಿಗೆ ಪ್ರಮಾಣ ಹೆಚ್ಚಳದಿಂದ ಕಡಿಮೆಯಾಗುವ, ನೆರೆ ರಾಜ್ಯಗಳಿಗೆ ಮತ್ತು ಗಡಿ ಭಾಗದ ನಗರಗಳಿಗೆ ಈ ವಹಿವಾಟು ವರ್ಗಾವಣೆಗೊಳ್ಳುವ ಅಪಾಯ ಇದೆ ಎಂದೂ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT