ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹಬ್ಬ, ರೇಷ್ಮೆ ಉತ್ಸವ, ಸೇಬು ಮೇಳ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಿನ್ನದ ಹಬ್ಬ
ಮಹಿಳೆಯರಿಗೆ ಚಿನ್ನದ ಮೇಲೆ ಇನ್ನಿಲ್ಲದ ವ್ಯಾಮೋಹ. ಪ್ರಪಂಚದಲ್ಲಿರುವ ಎಲ್ಲ ಉತ್ಕೃಷ್ಟ ವಿನ್ಯಾಸ ಹಾಗೂ ಗುಣಮಟ್ಟದ ಆಭರಣಗಳು ತಮ್ಮ ಸಂಗ್ರಹದಲ್ಲಿ ಇರಬೇಕೆಂದು ಬಯಸುತ್ತಾರೆ. ಅದರಲ್ಲೂ ಈಚಿನ ದಿನಗಳಲ್ಲಿ ಮಹಿಳೆಯರು ಆಂಟಿಕ್ ಆಭರಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಮಹಿಳೆಯರ ಮನದ ಹಂಬಲವನ್ನು ಪೂರೈಸುವಂತಿದೆ ಜ್ಯುವೆಲ್ಸ್‌ಆಫ್ ಇಂಡಿಯಾ ಏರ್ಪಡಿಸಿರುವ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ!

ದೀಪಾವಳಿ ಹಬ್ಬ ಮತ್ತು ಮದುವೆ ಋತುವಿಗೆ ಪೂರಕವಾಗಿ ನಿನ್ನೆ ಆರಂಭವಾಗಿದ್ದು ಸೋಮವಾರದ ವರೆಗೂ ನಡೆಯುವ ಈ ಮೇಳದಲ್ಲಿ ಎಂದಿನಂತೆ ಹೊಸತನ ಹಾಗೂ ಹೊಸ ಆಲೋಚನೆಗಳಿವೆ. ಹೀಗಾಗಿ ಆಭರಣಪ್ರಿಯ ಮಹಿಳೆಯರು ಇಲ್ಲಿಗೆ ಎಡತಾಕುತ್ತಿದ್ದಾರೆ.

ಇಲ್ಲಿ ಪ್ರದರ್ಶನಗೊಂಡಿರುವ ನಾನಾ ನಮೂನೆಯ, ಅಪರೂಪದ ವಿನ್ಯಾಸದ ಚಿನ್ನದ ಆಭರಣಗಳಿಗೆ ಮನಸೋತಿದ್ದಾರೆ. ಕಣ್ ಕೋರೈಸುವ ವಜ್ರದ ಆಭರಣಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಆಸ್ತಿಯ ಬೆಲೆಯನ್ನು ಹೆಚ್ಚಿಸುವಂಥ ಆಭರಣಗಳನ್ನು ಖರೀದಿಸಲು ತಮ್ಮ ಚಿತ್ತ ಹರಿಸಿದ್ದಾರೆ. 

ಮೇಳದಲ್ಲಿ 125ಕ್ಕೂ ಅಧಿಕ ಆಭರಣಕಾರರು ಪಾಲ್ಗೊಂಡು ಅಲ್ಲದೆ ತಮ್ಮ ವಿಶಿಷ್ಟ ಶೈಲಿಯ ಆಭರಣಗಳನ್ನು ಪ್ರದರ್ಶಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಜೈಪುರ, ಚೆನ್ನೈ, ಹೈದರಾಬಾದ್, ಮುಂಬಯಿ, ಅಹಮದಾಬಾದ್‌ಗಳ ಹೆಸರಾಂತ ಚಿನ್ನಾಭರಣ ಮಳಿಗೆಗಳು ಇಲ್ಲಿವೆ. ಜೆಮಾಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಅಮೆರಿಕಾ ಸಹ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದೆ.

ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ ಜೈಪುರದ ಆಮ್ರಪಾಲಿ ಜ್ಯುವೆಲರ್ಸ್ ಹಾಗೂ ರಾಣಿವಾಲ ಜ್ಯುವೆಲರ್ಸ್ ಅವರು ಪ್ರದರ್ಶಿಸಿರುವ ಶಾಸ್ತ್ರೀಯ ಕುಂದನ್ ಮತ್ತು ಮೀನಾಕಾರಿ ಆಭರಣಗಳು. ಜತೆ ಚೆನ್ನೈನ ಎಥ್ನಿಕ್ ಜ್ಯುವೆಲ್ಸ್ ಹಾಗೂ ಬೆಂಗಳೂರಿನ ನವರತ್ನದ ಸಾರ್ವಕಾಲಿಕ ದೇವಾಲಯ ಮತ್ತು ಹಳೆಯ ಕಾಲದ ಆಭರಣಗಳು, ಅಪ್ರಾಂಜೆ ಅವರ ಡಿಸೈನರ್ ಆಭರಣಗಳು, ಶ್ರೀಕೃಷ್ಣ ಡೈಮಂಡ್ಸ್, ನಿಖಾರ್, ರಾಜಸ್ತಾನದ ಅತ್ಯಾಕರ್ಷಕ ಥೇವಾ ಆಭರಣಗಳು ಹಾಗೂ ಬ್ರ್ಯಾಂಡೆಡ್ ವಜ್ರಾಭರಣಗಳೆಲ್ಲ ಇಲ್ಲಿವೆ.

`ಮಹಿಳೆಯರು ನಮ್ಮ ಪ್ರದರ್ಶನ ಮೇಳವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಕಳೆದ ವರ್ಷ 70 ಸಾವಿರ ಮಂದಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ಋತುವಿನೊಂದಿಗೆ ಆಗಮಿಸಿರುವ ಈ ಪ್ರದರ್ಶನ ಮೇಳವು ಆಭರಣ ಪ್ರಿಯರಿಗೆ ಅಚ್ಚು ಮೆಚ್ಚಾಗಿದೆ. ಇಲ್ಲಿನ ಆಭರಣಗಳು ಗುಣಮಟ್ಟ ಹಾಗೂ ಆಭರಣಗಳಲ್ಲಿನ ಸೂಕ್ಷ್ಮ ವೈಶಿಷ್ಟ್ಯಗಳನ್ನು ತೋರ್ಪಡಿಸುತ್ತದೆ. ಅಲ್ಲದೆ ಖರೀದಿಯ ಅತ್ಯುತ್ತಮ ಅನುಭವವನ್ನೂ ನೀಡುತ್ತದೆ~ ಎನ್ನುತ್ತಾರೆ ಮೇಳದ ಸಂಘಟಕ ಸಂದೀಪ್ ಬೇಕಲ್.

ಸ್ಥಳ: ಬೆಂಗಳೂರು ಅರಮನೆ, (ಮೌಂಟ್ ಕಾರ್ಮೆಲ್ ಕಾಲೇಜು ಕಡೆಯಿಂದ). ಬೆಳಿಗ್ಗೆ 10ರಿಂದ ರಾತ್ರಿ 8.
ಕೆ. ಎಂ. ಸತೀಶ್ ಬೆಳ್ಳಕ್ಕಿ

ರೇಷ್ಮೆ ಉತ್ಸವ
ಸಿಲ್ಕ್ ಸೀರೆಗಳು ಪರಿಮಳ ಬೀರುತ್ತವೆ. ಹಾಡು ಹೇಳುತ್ತವೆ. ಬೆಳ್ಳಿ ದೀಪಗಳನ್ನು ಅಂಟಿಸಿಕೊಂಡು, ಸೀರೆ ತೊಟ್ಟವರನ್ನೂ ಮಿಣ ಮಿಣ ಮಿನುಗುವಂತೆ ಮಾಡುತ್ತವೆ...!

ತಮಾಷೆ ಅಂದ್ಕೊಂಡ್ರ. ಖಂಡಿತಾ ಇಲ್ಲ. ಅರಮನೆ ಮೈದಾನದಲ್ಲಿ ಬುಧವಾರದಿಂದ ಆರಂಭವಾಗಿರುವ `ಸಿಲ್ಕ್ ಉತ್ಸವ್ - 2011~ರ ರೇಷ್ಮೆ ಸೀರೆಗಳ ಪ್ರದರ್ಶನದಲ್ಲಿ ಇಂಥ ನವ ನವೀನ ವಿನ್ಯಾಸ ಹಾಗೂ ಅನುಶೋಧನೆಯ ಸೀರೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ರಾಷ್ಟ್ರದ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚು ನೇಕಾರರು ತಾವು ನೇಯ್ದ ವಿಶೇಷ ವಿನ್ಯಾಸಗಳ ಸೀರೆಗಳನ್ನು ಈ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಇದೊಂದು `ಸಿಲ್ಕ್ ಉದ್ಯಮದ ರಾಷ್ಟ್ರೀಯ ಸಂಗಮ~ ಎನ್ನುತ್ತಾರೆ ಸಿಲ್ಕ್ ಉತ್ಸವದ ಮುಖ್ಯ ಸಲಹೆಗಾರ ಟಿ.ಎಚ್.ಸೋಮೇಖರ್

 ಮೇಳದಲ್ಲಿ ಜಾರ್ಖಂಡ್, ಛತೀಸ್‌ಗಡ, ಬನಾರಸ್, ಮಧ್ಯಪ್ರದೇಶ, ಧರ್ಮಾವರಂ, ಕಾಂಜೀವರಂ.. ಕರ್ನಾಟಕದ ಮೊಳಕಾಲ್ಮುರು, ಇಳಕಲ್, ಮೈಸೂರು ರೇಷ್ಮೆ.. ಹೀಗೆ `ಊರಿನ ಹೆಸರಿನೊಂದಿಗೆ ಖ್ಯಾತಿ~ ಪಡೆದಿರುವ ಸೀರೆಗಳ ಪ್ರದರ್ಶನ ಮತ್ತು ಮಾರಾಟವಿದೆ. `ಭಾರತೀಯ ಹೆರಿಟೇಜ್~  ಮೈಸೂರು ಸಿಲ್ಕ್‌ನ ಪುರಾತನ ಸೀರೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ವಿಶೇಷವೆಂದರೆ, ಈ ಮೇಳದಲ್ಲಿ ಪಾಲ್ಗೊಂಡಿರುವ ನೇಕಾರರೆಲ್ಲಾ ಕೈ ಮಗ್ಗದಿಂದ ನೇಯ್ದ ಸೀರೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ!

 ಧರ್ಮಾವರಂನ ವಿನ್ಯಾಸಗಾರ ಪೆದ್ದಯ್ಯ ಪಮೋಹನ್ ಅವರು ಹೊಸ ವಿನ್ಯಾಸ `ದಶಾವತಾರ~ ಸೀರೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಬೆಳಕು ಚೆಲ್ಲುವ ಸೀರೆ, ಸುಗಂಧ ಪಸರಿಸುವ ರೇಷ್ಮೆ ಸೀರೆ, ನವಿಲಿನ ವಿನ್ಯಾಸ, ಹೂವಿನ ವಿನ್ಯಾಸ, ಸಂಗೀತ ಹೊರ ಹೊಮ್ಮಿಸುವ ಸೀರೆಗಳನ್ನು ಅನುಶೋಧಿಸಿ, ಅವುಗಳನ್ನು ಪ್ರದರ್ಶಕ್ಕಿಟ್ಟಿದ್ದಾರೆ. ರೇಷ್ಮೆ ನೂಲುಗಳೊಂದಿಗೆ ಎಲ್‌ಇಡಿ ಬಲ್ಬ್‌ಗಳನ್ನು ಜೋಡಿಸಿದ್ದಾರೆ. ಬ್ಯಾಟರಿ ಚಾಲಿತ ಬಲ್ಬ್‌ಗಳು ಇವು. ಒಮ್ಮೆ ಚಾರ್ಜ್ ಮಾಡಿದರೆ ಎರಡೂವರೆ ಗಂಟೆಗಳ ಕಾಲ ಬಲ್ಬ್‌ಗಳು ಬೆಳಕು ಸೂಸುತ್ತವೆ.

ಮತ್ತೊಂದು ಸಂಗೀತಮಯ ಸೀರೆ. ಈ ಸೀರೆಯ ರೇಷ್ಮೆ ನೂಲಿನಲ್ಲಿ `ಐಪಾಡ್~ ನೆರವಿನಿಂದ ಚಿಕ್ಕ ಚಿಕ್ಕ ಸ್ಪೀಕರ್‌ಗಳನ್ನು ಅಳವಡಿಸಿದ್ದಾರೆ. ಭುಜದ ಮಟ್ಟದಲ್ಲಿ ಒಂದು ಗುಂಡಿಯಿದೆ. ಅದನ್ನು ಒತ್ತಿದರೆ ಸುಮಧುರ ಸಂಗೀತ ಹೊರ ಹೊಮ್ಮುತ್ತದೆ. `ಸೀರೆ ಉಟ್ಟವರು ಒತ್ತಡ ನಿವರಣೆಗೆ ಸಂಗೀತ ಸಹಕಾರಿ~ ಎನ್ನುತ್ತಾರೆ ಸೀರೆ ನೇಯ್ದ ನೇಕಾರರು.
 
ಇನ್ನೊಂದು ಸೀರೆಯಲ್ಲಿ, ನೂಲುಗಳ ಜೊತೆಯಲ್ಲಿ ಒಂಬತ್ತು ರತ್ನಗಳನ್ನು ಸೇರಿಸಿ, ಚಿನ್ನದ ಜರಿಯ ಸಹಾಯದಿಂದ ನೇಯ್ದಿದ್ದಾರೆ. ಇದಕ್ಕೆ `ನವರತ್ನ ಸೀರೆ~ ಎಂಬ ಹೆಸರಿಸಿದ್ದಾರೆ. 22 ಕ್ಯಾರೆಟ್ ಚಿನ್ನ ಮತ್ತು ಶುದ್ಧ ಬೆಳ್ಳಿ ಜಿಂಗಲ್ ಬೆಲ್‌ಗಳು ಮತ್ತು 81 ಅಮೂಲ್ಯ ಮಣಿಗಳನ್ನು ಪೋಣಿಸಿದ್ದಾರೆ. ಹಿಂದಿನ ಕಾಲದ `ಪಟ್ಟು ಪೀತಾಂಬರ ಸೀರೆ~ಯನ್ನೂ ಮೀರಿಸುವ ಸೀರೆ ಇದು ಎನ್ನುವುದು ಅವರ ಅಭಿಪ್ರಾಯ.

ರೇಷ್ಮೆ ಸೀರೆ ನೋಡಿ ಕಣ್ತುಂಬಿಕೊಳ್ಳುವ ಜೊತೆಗೆ, ನಿಮಗೆಂಥಾ ವಿನ್ಯಾಸದ ಸೀರೆಗಳು ಬೇಕೆಂಬುದನ್ನು ನೇಕಾರರೊಂದಿಗೆ ಹಂಚಿಕೊಳ್ಳಬಹುದು. `ನೇಕಾರ - ಗ್ರಾಹಕರ~ ನಡುವೆ ಉತ್ತಮ ಬಾಂಧವ್ಯ ಬೆಸೆಯಲೆಂದೇ ನಡೆಸುತ್ತಿರುವ ಈ ಸಿಲ್ಕ್ ಉತ್ಸವಕ್ಕೆ ಗ್ರಾಹಕರ ನೆರವು ತುಂಬಾ ಮುಖ್ಯ ಎನ್ನುತ್ತಾರೆ ಸೋಮಶೇಖರ್.

ಇದೇ ತಿಂಗಳ 18ರ ವರೆಗೆ ನಡೆಯುವ ಈ ಉತ್ಸವ, ಪ್ರತಿ ನಿತ್ಯ ಬೆಳಿಗ್ಗೆ 9.30ಯಿಂದ  ರಾತ್ರಿ 8ರವರಗೆ ನಡೆಯಲಿದೆ. ನಿತ್ಯ ಖ್ಯಾತ ರೂಪದರ್ಶಿಯರಿಂದ ಫ್ಯಾಷನ್ ಷೋ ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ಖ್ಯಾತಿಯ ರೇಷ್ಮೆ ವಸ್ತ್ರ ವಿನ್ಯಾಸಕರು ತಮ್ಮ ವಸ್ತ್ರ ಕಲಾ ಸಿರಿವಂತಿಕೆಯನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿದ್ದಾರೆ.

ಮುಂದಿನ ವಾರ ಬಲಿಪಾಡ್ಯಮಿ, ನರಕಚತುರ್ದಶಿ, ದೀಪಾವಳಿ.. ಸಾಲು ಸಾಲು ಹಬ್ಬಗಳು. ಮಗಳು -ಅಳಿಯನಿಗೆ ಉಡುಗೊರೆ, ಮೊದಲ ವರ್ಷದ ದೀಪಾವಳಿ ಸಂಭ್ರಮ ಸವಿಯುವವರಿಗೆ `ಸಿಲ್ಕ್ ಉತ್ಸವ~ ನೆರವಾಗುತ್ತದೆ. ಹಾಗಾದರೆ ಇನ್ನೇಕೆ ತಡ, ಅರಮನೆ ಮೈದಾನದ `ಗಾಯತ್ರಿ ವಿಹಾರ~ ಕ್ಕೆ ಹೊರಡಿ.
ಗಾಣಧಾಳು ಶ್ರೀಕಂಠ

ಸೇಬು ಮೇಳ
`ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ~.. ಇದು ಒಂದು ಅರ್ಥದಲ್ಲಿ `ನಾಣ್ಣುಡಿ~ಯಾಗಿಬಿಟ್ಟಿದೆ. ಆದರೆ ಇತ್ತೀಚೆಗೆ ಸೇಬು ಬೆಳೆಯುವ ಪರಿ, ಅದಕ್ಕೆ ಬಳಸುವ ಕೀಟನಾಶಕಗಳ ವಿಷಯ ಕೇಳಿದ ಮೇಲೆ ಸೇಬು ತಿನ್ನಬೇಕೇ ಬೇಡವೇ ಎಂಬ ಪ್ರಶ್ನೆ ಕಾಡಲೂಬಹುದು.

ಆ ಚಿಂತೆ ಬಿಡಿ. ಈಗ ಸೇಬು ಕೃಷಿಯಲ್ಲೂ ಸಾವಯವದ ಪ್ರವೇಶವಾಗಿದೆ. ನಂಬಿಕೆ ಬರಲಿಲ್ಲ ಅಲ್ವಾ. ಹಾಗಾದರೆ ಒಮ್ಮೆ ಕೆಂಪುತೋಟ ಲಾಲ್‌ಬಾಗ್‌ಗೆ ಭೇಟಿ ಕೊಡಿ. ಇಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ರಾಜ್ಯ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ `ಹಾರ್ಟಿ ಸಂಗಮ್ - ಸೇಬು ಮೇಳ~ ನಡೆಯುತ್ತಿದ್ದು ಸೋಮವಾರದವರೆಗೆ ಮುಂದುವರಿಯಲಿದೆ. ರಸಗೊಬ್ಬರವಿಲ್ಲದೇ, ಕೀಟನಾಶಕ ಸಿಂಪಡಿಸದೇ ಬೆಳೆದ ತರಹೇವಾರಿ ಸೇಬುಗಳನ್ನು ಇಲ್ಲಿ ಕಾಣಬಹುದು.

ಮೇಳದಲ್ಲಿ ಏನೇನಿದೆ?: ಬಣ್ಣ, ರುಚಿ, ಶಕ್ತಿಯ ಸಂಗಮವಾಗಿರುವ ಸೇಬು ಹಣ್ಣನ್ನು ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ರುಚಿಯ ಸೇಬುಗಳನ್ನು ಗ್ರಾಹಕರು ಖರೀದಿಸಬಹುದು. ಸೇಬು ಬೆಳೆಯುವಲ್ಲಿ ಅನುಸರಿಸುವ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ನೀಡಲು ಮೇಳದಲ್ಲಿ ಸ್ವತಃ ರೈತರೇ ನಿಂತಿದ್ದಾರೆ.

ದೇಶದ ವಿವಿಧೆಡೆಯ 150ಕ್ಕೂ ಹೆಚ್ಚು ರೈತರು ಬೆಳೆದಿರುವ ಹತ್ತಾರು ಬಗೆಯ ಸೇಬುಗಳು ಮೇಳದಲ್ಲಿವೆ. 40 ಮಳಿಗೆಗಳಲ್ಲಿ ಬಿಕರಿಯಾಗುತ್ತಿವೆ.

ವೈವಿಧ್ಯಮಯ ವೆರೈಟಿ: ಕಾಶ್ಮೀರದ ರೆಡ್ ಡೆಲೀಶಿಯಸ್, ಗೋಲ್ಡನ್ ಡೆಲೀಶಿಯಸ್, ಹಿಮಾಚಲ ಪ್ರದೇಶದ ರಾಯಲ್ ಡೆಲೀಶಿಯಸ್, ಶಿಮ್ಲಾ ಆಪಲ್, ಅಮೆರಿಕನ್ ಡೆಲೀಶಿಯಸ್, ಅತೀ ವಿರಳ ತಳಿ ಎನ್ನಲಾಗುವ ಚುಂಬೋರ ತಳಿಯ ಸೇಬು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಬೆಲೆ ಕಡಿಮೆ: `ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಸೇಬಿಗೆ 150 ರೂಪಾಯಿಗಿಂತ ಕಡಿಮೆ ಇಲ್ಲ. ಆದರೆ ಈ ಮೇಳದಲ್ಲಿ ನೂರು ರೂಪಾಯಿಗೆ ರುಚಿಕರ ಸೇಬು ಪಡೆಯಬಹುದು. ಕಳೆದ ಬಾರಿಗಿಂತ ಹೆಚ್ಚು ತಳಿಯ ಸೇಬುಗಳು ಒಂದೇ ಕಡೆ ಮಾರಾಟವಾಗುತ್ತಿರುವುದು ನಿಜಕ್ಕೂ ಸಂತೋಷ~ ಎನ್ನುತ್ತಾರೆ ಫಲಪ್ರಿಯ ಬಿ.ಕೆ ಆನಂದ್.

ಈ ಮೇಳದಲ್ಲಿ ಸೇಬುಗಳಷ್ಟೇ ಅಲ್ಲ, ಕಾಶ್ಮೀರಿ ಒಣ ಹಣ್ಣುಗಳು, ಅಂಜೂರ, ಹಾಗೂ ಜೇನು ತುಪ್ಪವನ್ನು ಪ್ರದರ್ಶನಕ್ಕಿಡಲಾಗಿದೆ. ಇದರ ಜೊತೆಗೆ ರಾಜ್ಯದ ವಿವಿಧೆಡೆ ಬೆಳೆದಿರುವ ವಿವಿಧ ಬಗೆಯ ಫಲ ಪುಷ್ಪಗಳ ಪ್ರದರ್ಶನ, ದೊಣ್ಣೆಮೆಣಸಿನಕಾಯಿ ಹಾಗೂ ತರಕಾರಿಗಳು ಲಭ್ಯ.
ಚಾಣುಕ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT