ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿ.ಮೂ.ಗೆ ಅವಮಾನ: ಜಿಎಸ್ಸೆಸ್ ಕಿಡಿ

Last Updated 5 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಕುರಿತು ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ ಕ್ರಮಕ್ಕೆ ಶನಿವಾರವೂ ಕೆಲ ಗಣ್ಯರಿಂದ ತೀವ್ರ ಖಂಡನೆ  ವ್ಯಕ್ತವಾಗಿದೆ.

‘ಕನ್ನಡದ ಮೊದಲ ದರ್ಜೆಯ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಶಿಫಾರಸನ್ನು ತಿರಸ್ಕರಿಸಿದ ಮಾನ್ಯ  ರಾಜ್ಯಪಾಲರ ಕ್ರಮವು ಕನ್ನಡದ ವಿದ್ವತ್ ವಲಯಕ್ಕೆ ಮಾಡಿದ ಅಪಚಾರವಾಗಿದೆ’ ಎಂದು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ಟೀಕಿಸಿದ್ದಾರೆ.

‘ಈ ಕುರಿತು ವ್ಯಕ್ತವಾಗಿರುವ ವ್ಯಾಪಕವಾದ ಖಂಡನೆಗೆ ನನ್ನ ಸಹಮತವಿದೆ. ರಾಜ್ಯಪಾಲರ ಈ ಕ್ರಮದ ಹಿಂದೆ ವಿವೇಚನೆಗಿಂತ ರಾಜಕೀಯ ಪಕ್ಷಪಾತವೇ ಮಿಗಿಲಾದಂತೆ ತೋರುವುದು ವಿಷಾದನೀಯ ಸಂಗತಿಯಾಗಿದೆ.
1949ರಲ್ಲಿ ನಾನು ಅಧ್ಯಾಪನಕ್ಕೆ ದಾವಣಗೆರೆಗೆ ಹೋದಾಗ ಚಿದಾನಂದಮೂರ್ತಿ ಅವರು ನನ್ನ ಮೊದಲ ವಿದ್ಯಾರ್ಥಿಯಾಗಿದ್ದರು.

ಎಂಜಿನಿಯರಿಂಗ್, ಮೆಡಿಕಲ್ ಮತ್ತಿತರ ಕ್ಷೇತ್ರಗಳಿಗೆ ಹೋಗುವ ಅವಕಾಶವಿದ್ದರೂ ಅದನ್ನು ತ್ಯಜಿಸಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರಿಗೆ ಒಂದಲ್ಲ ಹತ್ತು ಡಾಕ್ಟರೇಟ್ ಪದವಿ ನೀಡಿದರೂ ಕಡಿಮೆಯೇ’ ಎಂದರು.

‘ಚಿದಾನಂದಮೂರ್ತಿ ಅವರು ಹಿರಿಯ ಚೇತನ. ನಾಡಿನ ಸಾಕ್ಷಿ ಪ್ರಜ್ಞೆ. ಅವರ ಸೇವೆ, ಮೇಧಾವಿತನ ಗೊತ್ತಿರುವವರು ಅವರ ಹೆಸರನ್ನು ತಿರಸ್ಕರಿಸುತ್ತಿರಲಿಲ್ಲ’ ಎಂದು ಕಾನೂನು ಸಚಿವ ಎಸ್.ಸುರೇಶ್    ಕುಮಾರ್ ಅವರು ಬಂಟ್ವಾಳದಲ್ಲಿ     ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT