ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರ ಯುವಕನ ಫ್ಯಾಷನ್ ಮಂತ್ರ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅದು ಹುರಿಗಟ್ಟಿಸಿಕೊಂಡ ದೇಹವಲ್ಲ. ನೋಡಿದರೆ ಮತ್ತೊಮ್ಮೆ ನೋಡಬೇಕು ಅನಿಸುವಷ್ಟು ಆಕರ್ಷಕ ನಿಲುವು ಅಂತೂ ಹೌದು. ನೀಲಿ ಜೀನ್ಸ್ ಮೇಲೆ ಟಿ-ಶರ್ಟ್ ತೊಟ್ಟು ನಿಂತಿದ್ದರು. ಟ್ರೆಡ್‌ಮಿಲ್ ಮೇಲೆ ಓಡುತ್ತಿದ್ದ ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಅವರ ಗಡ್ಡ, ಕೂದಲು ನರೆತಿದ್ದರೂ ದೇಹ ಕಟ್ಟುಮಸ್ತಾಗಿಯೇ ಇದೆ. ಅದೇ ಚೂಪು ನೋಟ.

ಮಿಲಿಂದ್ ಸೋಮನ್!

ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ, ಹೆಚ್ಚು ಗುರುತಿಸಿಕೊಂಡಿರುವುದು ಮಾತ್ರ ಸೂಪರ್ ಮಾಡೆಲ್ ಆಗಿ. ಅವರಿಗೀಗ 48ರ ಹರೆಯ. ಆದರೆ ತರುಣನ ಗೆಟಪ್. ಮುಖದಲ್ಲಿ ತೆಳು ಮಂದಹಾಸದ ಲಾಸ್ಯ. ಮಿಲಿಂದ್ ಸೋಮನ್ ಕಾಣಿಸಿಕೊಂಡದ್ದು ಹೀಗೆ.

ಸ್ಕಾಟ್ಲೆಂಡ್‌ನ ಚಿತ್ಪಾವನ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿದ ಇವರು ತಮ್ಮ ಏಳನೇ ವಯಸ್ಸಿನವರೆಗೂ ಇಂಗ್ಲೆಂಡ್‌ನಲ್ಲೇ ಬೆಳೆದರು. ನಂತರ ಭಾರತಕ್ಕೆ ಬಂದು ನೆಲೆಸಿದರು.

ಮೊದಲು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಮಿಲಿಂದ್ ಸೋಮನ್ ನಂತರ ಸಿನಿಮಾ ರಂಗಕ್ಕೂ ಬಂದರು. `16 ಡಿಸೆಂಬರ್', `ಸೂರ್ಯ', `ಜೋಡಿ ಬ್ರೇಕರ್ಸ್‌', `ವ್ಯಾಲಿ ಆಫ್ ಫ್ಲವರ್ಸ್‌' ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು. ಹಿಂದಿ ಸಿನಿಮಾ `ರೂಲ್ಸ್: ಪ್ಯಾರ್ ಕಾ ಸೂಪರ್ ಹಿಟ್ ಫಾರ್ಮುಲಾ' (2003) ಮತ್ತು  `ಘೋಸ್ಟ್ ಬನಾ ದೋಸ್ತ್' ಮಕ್ಕಳ ಧಾರಾವಾಹಿಗಳಿಂದ ನಿರ್ಮಾಪಕರಾಗಿ ಹೆಸರು ಮಾಡಿದರು.

`ಟಫ್' ಶೂ ಜಾಹೀರಾತಿನಲ್ಲಿ ಮಿಲಿಂದ್ ಸೋಮನ್, ತಮ್ಮ ಮಾಜಿ ಪ್ರೇಯಸಿ ಮಧು ಸಪ್ರೆ ಜತೆ ನಗ್ನರಾಗಿ ಕಾಣಿಸಿಕೊಂಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಮಾಡೆಲಿಂಗ್ ಮಾತ್ರವಲ್ಲದೆ ರಾಷ್ಟ್ರಮಟ್ಟದ ಈಜುಗಾರರಾಗಿಯೂ ಮಿಂಚಿದವರು ಅವರು.

ಅಂದಹಾಗೆ, ಮಿಲಿಂದ್ ಸೋಮನ್ ನಗರದ ಫೋರಂ ಮಾಲ್‌ಗೆ ಬಂದದ್ದು ಒಂದು ಸಾಮಾಜಿಕ ಕಳಕಳಿಯ ಉದ್ದೇಶವಿಟ್ಟುಕೊಂಡು. ಅದು, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಾಗರ್ ಆಸ್ಪತ್ರೆ ಆಯೋಜಿಸಿದ್ದ `ಪಿಂಕಥಾನ್'. ಈ ಕುರಿತು ಅವರು `ಮೆಟ್ರೊ'ದೊಂದಿಗೆ ಮಾತು ಹಂಚಿಕೊಂಡರು.

ಪಿಂಕಥಾನ್ ಬಗ್ಗೆ ನಿಮ್ಮ ಅಭಿಪ್ರಾಯ?
ಇದೊಂದು ಒಳ್ಳೆಯ ಕೆಲಸ. ಮಹಿಳೆಯರಲ್ಲಿ ಇಂದು ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು  ಹೆಮ್ಮೆ. ಇಲ್ಲಿ ವಿಪ್ರೊ, ಐಬಿಎಂ ಕಂಪೆನಿಗಳ ಉದ್ಯೋಗಿಗಳು ಇದ್ದಾರೆ. ಅವರಿಗೆ ನಾನು ತರಬೇತಿಯನ್ನೂ ನೀಡುತ್ತಿದ್ದೇನೆ. ಇವರೆಲ್ಲಾ ಪಿಂಕಥಾನ್ ಮೂಲಕ ಮಹಿಳೆಯರಿಗೆ ಬೆಂಬಲ ನೀಡುತ್ತಿದ್ದಾರೆ.

ನಿಮ್ಮ ಫಿಟ್‌ನೆಸ್ ಮತ್ತು ಫ್ಯಾಷನ್ ಮಂತ್ರ ಏನು?
ಕ್ರೀಯಾಶೀಲನಾಗಿ ಇರುವುದು ನನ್ನ ಫಿಟ್‌ನೆಸ್ ಗುಟ್ಟು. ಮನಸ್ಸು ಸೋಮಾರಿಯಾದಷ್ಟೂ ದೇಹ ಸೋಮಾರಿತನಕ್ಕೆ ತೆರೆದುಕೊಳ್ಳುತ್ತದೆ. ಹಾಗಾಗಿ ನಾನು ಸದಾ ಯಾವುದಾದರೊಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ. ನನಗೆ ಕಂಫರ್ಟ್ ಆಗಿರುವ ಉಡುಪು ಧರಿಸುತ್ತೇನೆ. ಅದೇ ನನ್ನ ಫ್ಯಾಷನ್.

ಸಿನಿಮಾ, ಮಾಡೆಲಿಂಗ್ ಎರಡರಲ್ಲಿ ಯಾವುದು ನಿಮಗೆ ತುಂಬಾ ಇಷ್ಟ?
ಎರಡೂ ಇಷ್ಟ. ಇವೆರೆಡು ಕ್ಷೇತ್ರಗಳನ್ನೂ ನಾನು ಇಷ್ಟಪಟ್ಟು ಆರಿಸಿಕೊಂಡಿದ್ದು. ಹಾಗಾಗಿ ಇದರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡುವುದು ಕಷ್ಟವಾಗುತ್ತದೆ (ನಗು).

ಸಮಾಜಸೇವೆ, ವೃತ್ತಿ ಜೀವನ, ಖಾಸಗಿ ಬದುಕು ಹೇಗೆ ನಿರ್ವಹಿಸುತ್ತಿರಿ?
ಇದೆಲ್ಲಾ ಕಷ್ಟದ ಕೆಲಸವಲ್ಲ. ಯಾರು ಬೇಕಾದರೂ ಸಲೀಸಾಗಿ ನಿಭಾಯಿಸಬಹುದು.

ಆಗಿನ ಮಾಡೆಲಿಂಗ್ ಕ್ಷೇತ್ರಕ್ಕೂ, ಈಗಿನ ಮಾಡೆಲಿಂಗ್‌ಗೂ ನೀವು ಕಂಡ ವ್ಯತ್ಯಾಸ?
ಆಗ ಇಷ್ಟು ವೃತ್ತಿಪರವಾಗಿರಲಿಲ್ಲ. ಈಗ ತಾಂತ್ರಿಕವಾಗಿ ತುಂಬಾ ಮುಂದುವರಿದಿದೆ. ಅವಕಾಶಗಳೂ ಹೆಚ್ಚಿವೆ.

ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ನಿಮ್ಮಿಷ್ಟದ ಆಹಾರ?
ಇದೊಂದು ಸುಂದರ ನಗರಿ. ಇಲ್ಲಿನ ವಾತಾವರಣ ನನಗಿಷ್ಟ. ಚೆನ್ನಾಗಿರುವ ಆಹಾರ ಸಿಗುತ್ತದೆ. ನನಗೆ ಮಸಾಲೆ ದೋಸೆಯೆಂದರೆ ತುಂಬಾ ಇಷ್ಟ.

ಮುಂದಿನ ಯೋಜನೆಯೇನು?
ಸದ್ಯಕ್ಕೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಇರುವ ಕೆಲಸವನ್ನು ಮುಗಿಸಬೇಕಿದೆ.

ಇಷ್ಟದ ಸಿನಿಮಾ?
`ಲಿಂಕನ್' ಸಿನಿಮಾ ನನಗೆ ತುಂಬಾ ಇಷ್ಟ.

ಮುಂದಿನ ಭಾನುವಾರ `ಪಿಂಕಥಾನ್'
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಗರ್ ಆಸ್ಪತ್ರೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಮಹಿಳೆಯರಲ್ಲಿ ಫಿಟ್‌ನೆಸ್ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸರಿಯಾದ ಆಹಾರ, ವ್ಯಾಯಾಮದಿಂದ ಮಹಿಳೆಯರು ಆರೋಗ್ಯದಿಂದ ಇರಬಹುದು. ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ಆ ದಿನ ಕಂಠೀರವ ಕ್ರೀಡಾಂಗಣದಲ್ಲಿ ಈ ಪಿಂಕಥಾನ್ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮಹಿಳೆಯರಿಗಾಗಿ ಈ ಕಾರ್ಯಕ್ರಮವಿದ್ದು, 3, 5, 10 ಕಿ.ಮೀ ವರೆಗೂ ಓಡಬಹುದು .ರೂ. 500 ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು ಸಾಗರ್ ಆಸ್ಪತ್ರೆಯ ಕಾರ್ಯಾಚರಣೆ ಮತ್ತು ವ್ಯವಹಾರ ವಿಭಾಗದ ನಿರ್ದೇಶಕಿ ಸುಧಾ ಕಮಲ್‌ನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT