ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಪ್ರತ್ಯಕ್ಷ: ಆತಂಕ

Last Updated 10 ಜನವರಿ 2012, 9:40 IST
ಅಕ್ಷರ ಗಾತ್ರ

ರಾಮನಾಥಪುರ: ಸಂತೆ ಮರೂರಿನಲ್ಲಿ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿದ ನರಭಕ್ಷಕ ಚಿರತೆ ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ಕಾಣಿಸಿ ಕೊಂಡು ಜನರಲ್ಲಿ ಭೀತಿ ಮೂಡಿಸುತ್ತಿದೆ.

ಕಳೆದ ವಾರ ಬೆಳವಾಡಿ ಸಮೀಪದ ಸೀಬಳ್ಳಿ ಮತ್ತು ಬೇಡಿಗನಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ ಮತ್ತೆ ಎರಡು ದಿನಗಳ ಹಿಂದೆ ಕೆಸವತ್ತೂರು ಗ್ರಾಮದ ರೈತರು ದೊಡ್ಡ ಬೆಮ್ಮತ್ತಿಗೆ ಹೋಗುವ ರಸ್ತೆ ಸಮೀಪ ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುತ್ತಿದ್ದಾಗ ಬೋಳ ಗುಡ್ಡದ ಅರಣ್ಯ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ. ಅದರ ಮರಿ ಚಿರತೆ ಮಾತ್ರ ಹೊಲದೊಳಗೇ ಮಲಗಿದೆ. ಚಿರತೆಯನ್ನು ಕಂಡ ಕೂಡಲೇ ರಾಗಿ ಬೆಳೆ ಕಟಾವು ಮಾಡುತ್ತಿದ್ದ ರೈತರು ಹೆದರಿ ಓಡಿ ಹೋಗಿದ್ದಾರೆ. ಜನರು ಜೋರಾಗಿ ಕಿರುಚಾಟ ನಡೆಸಿದ್ದರಿಂದ ಬೆದರಿದ ಚಿರತೆ ಕೂಡ ತನ್ನ ಮರಿಯೊಂದಿಗೆ ಮತ್ತೆ ಅರಣ್ಯ ಪ್ರದೇಶದತ್ತ ಹೊರಟಿದೆ.

ಗ್ರಾಮಸ್ಥರು ಮತ್ತೆ ಹೊಲದತ್ತ ಹೋಗಲು ಭಯ ಪಡುವಂತಾಗಿದೆ. ಬೋಳ ಗುಡ್ಡ ಅರಣ್ಯಕ್ಕೆ ಹೊಂದಿಕೊಂಡಂತೆ ಅರಸೀಕಟ್ಟೆ ಕಾವಲು, ಮುದಗನೂರು ಕಾವಲು ಸೇರಿದಂತೆ ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶ ಇರುವುದರಿಂದ ಅಲ್ಲಿಯೇ ಸುಳಿದಾಡುತ್ತಿರುವುದರಿಂದ ಗ್ರಾಮಸ್ಥರು ಅತ್ತ ಸುಳಿಯದೆ ಆತಂಕದಲ್ಲೇ ದಿನ ದೂಡುವಂತಾಗಿದೆ.

ಕಳೆದ ಕೆಲ ವಾರಗಳಿಂದ ತಾಲ್ಲೂಕಿನ ವಿವಿಧೆಡೆ ಬೆಳೆದಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಸಂಚಾರ ಮಾಡುತ್ತಿರುವ ಚಿರತೆ ತನ್ನ ಮರಿಯೊಂದಿಗೆ ಆಹಾರಕ್ಕಾಗಿ ತೀವ್ರ ಅಲೆದಾಟ ನಡೆಸುತ್ತಿದೆ. ಕೆಲ ದಿನಗಳ ಕಾಲ ಬೇಡಿಗನಹಳ್ಳಿ ಕೊಪ್ಪಲು- ಸೀಬಳ್ಳಿ ನಡುವಿನ ಕೆರೆ ಪಕ್ಕದ ದಟ್ಟ ಪೊದೆಯೊಳಗಿದ್ದ ಚಿರತೆ ಆಗಾಗ ಹೊರ ಬಂದು ಪಕ್ಕದ ಬೆಳೆ ಜಮೀನುಗಳ ಮೇಲೆ ನುಗ್ಗಿ ತುಳಿದು ಹಾಕಿತ್ತು.

ಇದೀಗ ಪುನಃ ಕೆಸವತ್ತೂರು ಬಳಿ ಬೋಳಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ಜನರ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಅಗತ್ಯವಿರುವ ಕ್ರಮ ಕೈಗೊಂಡು ಈ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವ ಮೂಲಕ ತಾಲ್ಲೂಕಿನ ಜನರಲ್ಲಿ ಮನೆ ಮಾಡಿರುವ ಆತಂಕ ದೂರ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT