ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನದ ಕಿರಿಕಿರಿ; ನಿರ್ಲಕ್ಷ್ಯ ಸಲ್ಲ

Last Updated 15 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ಹೊಂದಿಕೊಂಡ ಗಡಿಭಾಗದಲ್ಲಿ ಚೀನದ ಸೇನಾಪಡೆಗಳು ಗಡಿ ಉಲ್ಲಂಘನೆ ಮಾಡಿ ಬಳಕೆಯಲ್ಲಿಲ್ಲದ ಬಂಕರುಗಳನ್ನು ನಾಶಪಡಿಸಿದರೆಂಬ ಕಾರ್ಯಾಚರಣೆಯ ವರದಿಗೆ ಭಾರತ ಸರ್ಕಾರ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.
ಅಲ್ಲದೆ, ಅಂಥ ಘಟನೆಯ ವರದಿಯೇ ಬಂದಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ.

ಎರಡು ವರ್ಷಗಳ ಹಿಂದೆ ಚೀನಾ ಸೇನೆಗೆ ಸೇರಿದ ಹೆಲಿಕಾಪ್ಟರ್‌ಗಳು ಭಾರತದ ವಾಯುಪ್ರದೇಶವನ್ನು ಉಲ್ಲಂಘಿಸಿ ಹಾರಾಟ ನಡೆಸಿದ್ದಲ್ಲದೆ ಗಡಿ ಭಾಗದಲ್ಲಿ ಆಹಾರ ಮತ್ತಿತರ ಸಾಮಗ್ರಿಗಳನ್ನು ಉದುರಿಸಿ ಹೋಗಿದ್ದ ಘಟನೆಯೂ ವರದಿಯಾಗಿತ್ತು.

ಭಾರತದ ಗಡಿಯೊಳಕ್ಕೆ ನುಸುಳಿ ಸಣ್ಣಪುಟ್ಟ ಕೀಟಲೆ ಮಾಡಿ ಓಡಿಹೋಗುವ ಚೀನೀ ಸೈನಿಕರ ದುಸ್ಸಾಹಸ ಪ್ರಕರಣಗಳು ನಡೆಯುತ್ತಲೇ ಇವೆ. ಪಾಕಿಸ್ತಾನದ ಜೊತೆ ರಾಜತಾಂತ್ರಿಕ ಮೈತ್ರಿಯಲ್ಲದೆ, ವ್ಯಾವಹಾರಿಕ ಬಾಂಧವ್ಯವನ್ನೂ ಹೊಂದಿರುವ ಚೀನಕ್ಕೆ ಕಾಶ್ಮೀರದ ಗಡಿ ಭಾಗದಲ್ಲಿ ಹೆಚ್ಚಿನ ಚಟುವಟಿಕೆ ನಡೆಸಲು ಅವಕಾಶವಾದರೆ ಅದರ ಬಗ್ಗೆ ಭಾರತ ಗಮನ ಹರಿಸಲೇ ಬೇಕು.

ವಿಶ್ವದಲ್ಲಿಯೇ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಚೀನಕ್ಕೆ ಪ್ರದೇಶ ವಿಸ್ತರಣೆಯ ಅನಿವಾರ್ಯತೆ ಇದ್ದರೆ ಅದಕ್ಕೆ ಭಾರತದಲ್ಲಿ ಆಸ್ಪದವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಯಾವುದೇ ಕಡೆಯಿಂದ ಗಡಿ ಅತಿಕ್ರಮಣದ ವರದಿಗಳು ಬಂದರೂ ಅದನ್ನು ಭಾರತ ನಿರ್ಲಕ್ಷಿಸಬಾರದು.

 ನೆರೆ ಹೊರೆಯ ದೇಶವಾಗಿ ಚೀನದ ಜೊತೆ ಇರುವ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭಾರತದ ಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಇದಕ್ಕೆ ದೇಶದ ರಾಜಕೀಯ ಪಕ್ಷಗಳಲ್ಲಿ ಸಹಮತ ಉಂಟಾಗುವಂತೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಬೇಕು.

ಆರು ದಶಕಗಳಿಂದಲೂ ಉಳಿದುಕೊಂಡು ಬಂದಿರುವ ಗಡಿ ಸಮಸ್ಯೆಯನ್ನು ಶಾಶ್ವತವಾಗಿ ಇತ್ಯರ್ಥ ಪಡಿಸಿಕೊಳ್ಳುವುದು ಎರಡೂ ದೇಶಗಳಿಗೆ ಪ್ರಯೋಜನಕಾರಿ.
ಏನೇ ಇದ್ದರೂ ಗಡಿಯಲ್ಲಿ ಆಗುತ್ತಿರುವ ಅತಿಕ್ರಮಣದ ಪ್ರಕರಣಗಳನ್ನು ರಾಜತಾಂತ್ರಿಕ ವಿಧಾನಗಳಿಂದ ಚೀನದ ಗಮನಕ್ಕೆ ತರುವುದಕ್ಕೆ ಭಾರತ ಯತ್ನಿಸಬೇಕು.

ಸಮಸ್ಯೆಗಳನ್ನು   ರಾಜತಾಂತ್ರಿಕ ರೀತಿಯಿಂದ ಬಗೆಹರಿಸುವ ಪ್ರಯತ್ನ ಮುಂದುವರಿಸಬೇಕು. ನೆರೆಹೊರೆಯ ದೇಶಗಳಾಗಿ ಗಡಿ ಸಮಸ್ಯೆ ಎದುರಿಸುತ್ತಿದ್ದರೂ ವ್ಯಾವಹಾರಿಕವಾಗಿ, ವಾಣಿಜ್ಯ ಸಂಬಂಧದ ದೃಷ್ಟಿಯಿಂದ ಎರಡೂ ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆಯಾಗಿಲ್ಲ. ಬದಲಾಗಿ ವ್ಯಾಪಾರ ವಹಿವಾಟನ್ನು ವಿಸ್ತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.

ಚೀನದ ಉತ್ಪಾದನೆಗಳಿಗೆ ಭಾರತದಲ್ಲಿಯೂ ಮಾರುಕಟ್ಟೆ ವಿಸ್ತಾರವಾಗಿದೆ. ಭಾರತದ ಉತ್ಪನ್ನಗಳೂ ಚೀನ ಮಾರುಕಟ್ಟೆ ಪ್ರವೇಶಿಸಿವೆ. ಇವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಯಬೇಕು.

ಚೀನವು ಪಾಕಿಸ್ತಾನದ ಜೊತೆ ಹೊಂದಿರುವ ಮಿಲಿಟರಿ ಹಿತಾಸಕ್ತಿ ಮತ್ತು ಸಹಕಾರವನ್ನು ಲಕ್ಷ್ಯದಲ್ಲಿಟ್ಟುಕೊಂಡರೂ ಅದರೊಂದಿಗೆ ವಾಣಿಜ್ಯ ವ್ಯವಹಾರವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಭಾರತಕ್ಕೆ ನಷ್ಟವೇನೂ ಇಲ್ಲ. ಏಕೆಂದರೆ ಪಾಕಿಸ್ತಾನದಂತೆ ಭಯೋತ್ಪಾದಕ ಸಂಘಟನೆಗಳಿಗೆ ಆಸರೆ ನೀಡಿ ಅವು ಭಾರತದ ವಿರುದ್ಧ ಸಂಚು ನಡೆಸುವುದಕ್ಕೆ ಚೀನದ ನೆಲದಲ್ಲಿ ಉತ್ತೇಜನ ಸಿಗುತ್ತಿರುವ ಪ್ರಕರಣಗಳು ವರದಿಯಾಗಿಲ್ಲ. ಏಕೆಂದರೆ ನೆರೆಹೊರೆ ಆಯ್ಕೆಯಲ್ಲ. ಅದರೊಂದಿಗೆ ಸಹಬಾಳ್ವೆ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT