ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ದೈತ್ಯನ ಮುಂದೆ ತಲೆಬಾಗಿದ ಹಾಲಿವುಡ್

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣಕ್ಕೆ ಮುಕ್ತವಾಗಿ ತೆರೆದುಕೊಂಡ ನಂತರ ಮುಕ್ತ ಜಾಗತಿಕ ಮಾರುಕಟ್ಟೆಯಾಗಿ ಮಾರ್ಪಟ್ಟಿರುವ ಚೀನಾ, ಎಲ್ಲ ಕ್ಷೇತ್ರಗಳಲ್ಲೂ ಅಮೆರಿಕಕ್ಕೆ ಸರಿ ಸಮಾನವಾಗಿ ಪೈಪೋಟಿ ನೀಡಬಲ್ಲ ಹಂತಕ್ಕೆ ಬೆಳೆದು ನಿಂತಿದೆ. ಇತ್ತೀಚೆಗೆ ಹಾಲಿವುಡ್ ಚಿತ್ರ ನಿರ್ಮಾಣ ಕಾರ್ಯವನ್ನೂ ನಿಯಂತ್ರಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹಾಲಿವುಡ್ ನಂತರ ವಿಶ್ವದ ಎರಡನೇ ದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾವನ್ನು ನಂಬಿಕೊಂಡು ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಸುರಿಯುತ್ತಾರೆ. ಹಾಕಿದ ಬಂಡವಾಳ ಮರಳಿ ಬರಬೇಕಾದರೆ ಚೀನಾದಲ್ಲಿ ಹಾಲಿವುಡ್ ಚಿತ್ರ ಯಶಸ್ಸು ಕಾಣುವುದು ಅನಿವಾರ್ಯ. ಇದನ್ನು ಅರಿತಿರುವ ಚೀನಾ ಸರ್ಕಾರ ಹಾಲಿವುಡ್ ಮಂದಿಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದೆ. ಚೀನಾ ಕಂಪೆನಿಗಳ ಸಹಯೋಗದಲ್ಲಿ ನಿರ್ಮಿಸಿದ ಚಲನಚಿತ್ರಗಳಿಗೆ ಅನಗತ್ಯ ಕಿರಿ, ಕಿರಿಗಳಿಲ್ಲದೆ ಅವಕಾಶ ನೀಡುತ್ತಿದೆ. ಆ ರಾಷ್ಟ್ರದಲ್ಲಿ ಸಂಪೂರ್ಣ ಅಥವಾ ಭಾಗಶಃ ಚಿತ್ರೀಕರಣಗೊಂಡ ಚಲನಚಿತ್ರಗಳಿಗೂ ಶೀಘ್ರ ಹಸಿರು ನಿಶಾನೆ ದೊರೆಯುತ್ತದೆ.

ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾದಲ್ಲಿ ಒಂದು ಕಾಲಕ್ಕೆ ಚಿತ್ರ ನಿರ್ಮಾಣ ಮತ್ತು ಬಿಡುಗಡೆ ಕಷ್ಟದ ಕೆಲಸ. ಚಿತ್ರಕಥೆಗೆ ಸೆನ್ಸಾರ್ ಅನುಮತಿ ಪಡೆಯುವುದೇ ಒಂದು ಸಾಹಸವಾಗಿತ್ತು. ವಿದೇಶಿಯರು ಅಲ್ಲಿ ಚಿತ್ರೀಕರಣ ನಡೆಸುವುದು ಕನಸಿನ ಮಾತಾಗಿತ್ತು. ಆದರೆ, ಜಾಗತೀಕರಣದ ನಂತರ ಚೀನಾದ ಚಿತ್ರ ನಿರ್ಮಾಣ ಮಾರುಕಟ್ಟೆ ಜಾಗತಿಕ ವ್ಯಾಪ್ತಿ ಪಡೆದುಕೊಂಡಿದೆ. ಸೀಮಿತವಾಗಿದ್ದ ತನ್ನ ಸಿನಿಮಾ ನಿರ್ಮಾಣ ಕ್ಷೇತ್ರವನ್ನು ಮುಕ್ತಗೊಳಿಸಿರುವುದು ಮತ್ತು ಸೆನ್ಸಾರ್ ನೀತಿಗಳಲ್ಲಿ ಮಾರ್ಪಾಡು ಮಾಡಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ.

ಒಂದು ಕಾಲಕ್ಕೆ ರಷ್ಯಾ ಮತ್ತು ಚೀನಾದಂತಹ ಕಮ್ಯುನಿಸ್ಟ್ ರಾಷ್ಟ್ರಗಳನ್ನು `ಖಳ'ರಂತೆ ಬಿಂಬಿಸುತ್ತಿದ್ದ ಹಾಲಿವುಡ್ ಚಿತ್ರಗಳು ಹೇರಳವಾಗಿ ತೆರೆಯ ಮೇಲೆ ಕಾಣುತ್ತಿದ್ದವು. ಚೀನಾದಂತಹ ದೊಡ್ಡ ಮಾರುಕಟ್ಟೆಯಲ್ಲಿ ಹಣ ಗಳಿಸಬೇಕು ಎಂದರೆ ಅದರ ತಾಳಕ್ಕೆ ತಕ್ಕಂತೆ ಕುಣಿಯಲೇಬೇಕು. ಚೀನಿಯರ ಭಾವನೆಗಳಿಗೆ ಧಕ್ಕೆಯಾಗದಂತೆ, ಅವರಿಗೆ ಪ್ರಿಯವಾದ ಮತ್ತು ಅವರ ಮನೋಭಾವಗಳಿಗೆ ಹೊಂದಿಕೊಳ್ಳುವ ಚಿತ್ರಗಳನ್ನು ತೆಗೆಯಬೇಕು. ಯಾವುದೇ ಕಾರಣಕ್ಕೂ ಚೀನಿಯರನ್ನು ಖಳರಂತೆ ಚಿತ್ರೀಕರಿಸಿರಬಾರದು ಮತ್ತು ಚೀನಾದ ಘನತೆಗೆ ಧಕ್ಕೆಯಾಗಬಾರದು ಎಂಬ ಷರತ್ತು ಕಡ್ಡಾಯ. ಚೀನಿಯರನ್ನು ಮುಜುಗರಕ್ಕೀಡು ಮಾಡುವ ದೃಶ್ಯಗಳಿದ್ದರೆ ಅಂತಹ ಚಿತ್ರಗಳಿಗೆ ಸೆನ್ಸಾರ್ ಅನುಮತಿ ದೊರೆಯುವುದು ಕಷ್ಟ.

ಚೀನಾ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ನಿರ್ಮಿಸುವ ಅನಿವಾರ್ಯತೆ ಹಾಲಿವುಡ್ ಮಂದಿಗೆ ಎದುರಾಗಿದೆ. ಚೀನಾದ ಬಗ್ಗೆ ಹೊರಗಿನವರು ತೆಗೆಯುವ ಚಿತ್ರಗಳನ್ನು ಸೆನ್ಸಾರ್ ಮಂಡಳಿ ಮತ್ತು ಅಧಿಕಾರಿಗಳು ಹದ್ದಿನ ಕಣ್ಣಿನಿಂದ ವೀಕ್ಷಿಸುತ್ತಾರೆ. ಸಣ್ಣ, ಪುಟ್ಟ ಅಂಶಗಳಿಗೂ ಅನಗತ್ಯ ತಕರಾರು ತೆಗೆಯುತ್ತಾರೆ. ಚೀನಾ ಕುರಿತಾದ ಯಾವುದೇ ಆಕ್ಷೇಪಗಳು ಇಲ್ಲದಿದ್ದರೂ ಅನುಮತಿ ನೀಡಲು ಕಿರಿ, ಕಿರಿ ಮಾಡುತ್ತಾರೆ.

ಹೀಗಾಗಿಯೇ ಪ್ಯಾರಾಮೌಂಟ್, ಟ್ವೆಂಟಿಯೆಥ್ ಸೆಂಚುರಿ ಫಾಕ್ಸ್, ಸೋನಿ ಮತ್ತು ಯುನಿವರ್ಸಲ್ ಪಿಕ್ಚರ್ಸ್‌ನಂತಹ ಅಮೆರಿಕದ ದೈತ್ಯ ಚಿತ್ರ ನಿರ್ಮಾಣ ಕಂಪೆನಿಗಳು ಚೀನಾ ಕಂಪೆನಿಗಳ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿವೆ. ಸ್ಥಳೀಯ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಳ್ಳುತ್ತಿವೆ. ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಭಾಗಶಃವಾದರೂ ಅಲ್ಲಿಯೇ ಚಿತ್ರೀಕರಣ ನಡೆಸುತ್ತಿವೆ.

ಹಾಲಿವುಡ್‌ನ ಡಿಸ್ನಿ ಮತ್ತು ಮಾರ್ವೆಲ್ ಚಿತ್ರ ನಿರ್ಮಾಣ ಸಂಸ್ಥೆ ಈ ಮೊದಲು ನಿರ್ಮಿಸಿದ `ಐರನ್ ಮ್ಯಾನ್ ಭಾಗ-1 ಮತ್ತು 2' ಚೀನಾದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದ್ದವು. ಗಲ್ಲಾಪೆಟ್ಟಿಗೆಯಲ್ಲಿ ಹಣ ಕೊಳ್ಳೆ ಹೊಡೆದಿದ್ದವು. ಆದ್ದರಿಂದ ಮೂರನೇ ಭಾಗವನ್ನು ಚೀನಾದ ಸಹಯೋಗದಲ್ಲೇ ನಿರ್ಮಿಸಬೇಕೆಂಬುದು ಡಿಸ್ನಿ ಮತ್ತು ಮಾರ್ವೆಲ್ ಸಂಸ್ಥೆಯ ಆಶಯವೂ ಆಗಿತ್ತು. ಹೀಗಾಗಿ ಬೀಜಿಂಗ್‌ನಲ್ಲಿರುವ ಡಿಎಂಜಿ ಎಂಟರ್‌ಟೈನ್‌ಮೆಂಟ್ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರುವುದಲ್ಲದೆ, `ಐರನ್ ಮ್ಯಾನ್ ಭಾಗ-3' ಚಿತ್ರದ ಮೇಲೆ ಬಂಡವಾಳವನ್ನೂ ಹೂಡಿದೆ. ಚಿತ್ರ ಮೇ 3ರಂದು ಬಿಡುಗಡೆಗೆ ಸಿದ್ಧವಾಗಿದೆ. ಅಮೆರಿಕವನ್ನು ಚೀನಾ ಸಂಪೂರ್ಣವಾಗಿ ನಿಯಂತ್ರಿಸಿರುವುದು ಈ ಚಿತ್ರದಲ್ಲಿ ಸಂಪೂರ್ಣವಾಗಿ ಗೊತ್ತಾಗುತ್ತದೆ. 

ಇದೇ ರೀತಿಯ ಛಾಯೆ `ಕುಂಗ್‌ಫೂ ಪಾಂಡಾ-3' ಮತ್ತು 2007ರಲ್ಲಿ ಬಿಡುಗಡೆಯಾದ ಕೊಹೆನ್ಸ್ ಅವರ `ಮಮ್ಮಿ' ಚಿತ್ರದಲ್ಲೂ ಕಂಡುಬಂದಿತ್ತು. ಚೀನಾದ ಮರುಭೂಮಿಯಲ್ಲಿ ಚಿತ್ರೀಕರಿಸಲಾಗಿದೆ ಎಂಬ ಒಂದೇ ಕಾರಣಕ್ಕೆ `ಮಮ್ಮಿ' ಚಿತ್ರಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾತ್ರ ಸೆನ್ಸಾರ್ ಮಂಡಳಿ ಸೂಚಿಸಿತ್ತು. ಚಿತ್ರದಲ್ಲಿ ಬರುವ ಖಳ ನಾಯಕ ಚೀನಾದ ನಾಯಕ ಮಾವೊ ಅವರನ್ನು ಹೋಲಬಾರದು ಎಂಬ ಎಚ್ಚರಿಕೆ ನೀಡಿತ್ತು.

ಆಸ್ಕರ್ ಪ್ರಶಸ್ತಿಯ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಭಾರತೀಯ ಮಕ್ಕಳಿಬ್ಬರ ಚಿತ್ರಕಥೆಯನ್ನು ಹೊಂದಿರುವ `ಲೈಫ್ ಆಫ್ ಪೈ' ಎಂಬ ಚಿತ್ರವನ್ನು ಚೀನಾದಲ್ಲಿ ಬಿಡುಗಡೆ ಮಾಡುವ ಮುನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಅಂಶಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಭಾಷಾಂತರದಲ್ಲಿ ಒಂದು ಸಾಲನ್ನು ಮಾತ್ರ ಕೈಬಿಡುವಂತೆ ಸೂಚಿಸಲಾಗಿತ್ತು. ಚೀನಾ ಕಂಪೆನಿಯೊಂದಿಗೆ ಕರಾರು ಮಾಡಿಕೊಂಡಿದ್ದ ಟ್ವೆಂಟಿಯೆಥ್ ಫಾಕ್ಸ್ ಸೆಂಚುರಿ ನಿರ್ಮಾಣ ಸಂಸ್ಥೆ ಕೆಲವೇ ಕೆಲವು ಬದಲಾವಣೆಯೊಂದಿಗೆ ಈ ಚಿತ್ರವನ್ನು ಬಿಡುಗಡೆ ಮಾಡಲು ಯಶಸ್ವಿಯಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುತ್ತದೆ ಎಂಬ ಅಂಶಗಳನ್ನು ಹೊಂದಿದ್ದ ಈ ಚಿತ್ರ ಬಿಡುಗಡೆ ಖಂಡಿತಾ ಸುಲಭ ಸಾಧ್ಯವಾಗಿರಲಿಲ್ಲ. 

ಆದರೆ ಹಾಲಿವುಡ್ ಸಂಪೂರ್ಣವಾಗಿ ಚೀನಾದ ಸಡಿಲ ನೀತಿಯನ್ನು ನಂಬುವಂತೆಯೂ ಇಲ್ಲ. ಕೆಲವು ಬಾರಿ ಚೀನಾದ ಸೆನ್ಸಾರ್ ನಮ್ಮ ಚಿತ್ರವನ್ನು ಯಾವ ಕಾರಣಕ್ಕೆ ತಡೆಹಿಡಿದಿದೆ ಎನ್ನುವುದನ್ನೂ ಊಹಿಸಲೂ ಸಾಧ್ಯವಿಲ್ಲ. 2009ರಲ್ಲಿ ಚೀನಾ ಫಿಲಂಸ್ ಸಹಯೋಗದಲ್ಲಿ ಸೋನಿ ಪಿಕ್ಚರ್ಸ್‌ ಸಂಸ್ಥೆ `ದಿ ಕರಾಟೆ ಕಿಡ್' ಎಂಬ ಚಿತ್ರದ ಚಿತ್ರಕಥೆಯನ್ನು ಚೀನಾದ ಸೆನ್ಸಾರ್ ಮಂಡಳಿಗೆ ಸಲ್ಲಿಸಿತ್ತು. ಚೀನಾ ನೀತಿಗೆ ತಕ್ಕಂತೆ ಚಿತ್ರ ಯಾವ ರೀತಿ ಇರಬೇಕೋ ಅದೇ ರೀತಿಯ ಮಾರ್ಪಾಡುಗಳೊಂದಿಗೆ ಚಿತ್ರಕಥೆಯನ್ನು ಸಲ್ಲಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ. ಚಿತ್ರದಲ್ಲಿದ್ದ  ಖಳನಾಯಕ ಚೀನಿಯರನ್ನು ಹೋಲುತ್ತಿದ್ದ ಕಾರಣವನ್ನು ಮುಂದಿಟ್ಟು, ಅಸಮಾಧಾನಗೊಂಡಿದ್ದ ಸೆನ್ಸಾರ್ ಮಂಡಳಿ ಚಿತ್ರವನ್ನು ತಿರಸ್ಕರಿಸಿತ್ತು. ಹಾಲಿವುಡ್ ನಿರ್ಮಾಪಕರು ಚೀನಾದ ಕಲಾವಿದರನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಮಾಡುವುದು ಈ ಕಾರಣದಿಂದಲೇ.

ಚಿತ್ರಕತೆಯಲ್ಲಿ ಚೀನಾದ ನೆಲ, ಜನ ಇದ್ದರೆ ಸೆನ್ಸಾರ್ ಸಮಸ್ಯೆಯೇ ಇಲ್ಲ. ಇಲ್ಲದಿದ್ದರೆ ಚಿತ್ರ ಸೆನ್ಸಾರ್ ಆಗುವುದೇ ಕಷ್ಟ. ಸೆನ್ಸಾರ್ ಮಂಡಳಿಯ ನಿಯಮಾವಳಿ ಹಾಗೂ ಅದರ ಕ್ರಮವನ್ನು ನೀಡುವಂತೆ `ನ್ಯೂಯಾರ್ಕ್ ಟೈಮ್ಸ' ಸಲ್ಲಿಸಿದ್ದ ಪ್ರಶ್ನೆಗಳಿಗೆ ಚೀನಾ ಸೆನ್ಸಾರ್ ಮಂಡಳಿ  ಉತ್ತರಿಸುವ ಗೋಜಿಗೇ ಹೋಗಿಲ್ಲ. 12,000 ಚಿತ್ರಮಂದಿರಗಳಿರುವ ಚೀನಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ದೊಡ್ಡ `ತ್ರಿ ಡಿ' ಪರದೆ ಹಾಗೂ ಉತ್ತಮ ಧ್ವನಿ ವ್ಯವಸ್ಥೆ ಹೊಂದಿರುವ ಐಮ್ಯಾಕ್ಸ್ ಥಿಯೇಟರ್‌ಗಳನ್ನು ಅಲ್ಲಿಯ ಜನರು ಹೆಚ್ಚು ಇಷ್ಟಪಡುತ್ತಾರೆ. ಎಂಥಹ ಚಿತ್ರಗಳನ್ನು ನೋಡಬೇಕು ಎಂಬುದನ್ನು ಚೀನಾ ಸರ್ಕಾರವೇ ನಿರ್ಧರಿಸುತ್ತದೆ. ಇಂಗ್ಲಿಷ್ ಚಿತ್ರಗಳು ಹೆಚ್ಚು ಬಿಡುಗಡೆಯಾಗುವುದು ಇಂತಹ ಚಿತ್ರ ಮಂದಿರಗಳಲ್ಲಿಯೇ. ಇಂತಹ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಇಷ್ಟಪಡದ ಹಾಲಿವುಡ್ ಮಂದಿ ಚೀನಾದಲ್ಲಿಯೇ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಾರೆ. ಚೀನಿಯರಿಗೆ ಆಪ್ತ ಎನಿಸುವ ಚಿತ್ರಕಥೆಗಳಿಗೆ ಹಾಲಿವುಡ್‌ನಲ್ಲಿ ಈಗ ಬೇಡಿಕೆ ಹೆಚ್ಚಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT