ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ನೌಕೆ ದುರಂತ: 26 ದೇಹ ಪತ್ತೆ

ರಕ್ಷಣಾ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಅಡ್ಡಿ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ/ರಾಯಿಟರ್ಸ್‌): ಚೀನಾದ ಯಾಂಗ್‌ಜೆ ನದಿಯಲ್ಲಿ ಮುಳುಗಿರುವ ಹಡಗಿನ ಒಳಗೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಇದುವರೆಗೆ ಒಟ್ಟು 26 ಮೃತದೇಹಗಳು ದೊರೆತಿವೆ. 400 ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 458 ಪ್ರಯಾಣಿಕರಿದ್ದ ‘ಈಸ್ಟರ್ನ್‌ ಸ್ಟಾರ್‌’ ಹಡಗು ಹುಬೇ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ಮುಳುಗಿತ್ತು. ಮಂಗಳವಾರದವರೆಗೆ 15 ಮಂದಿಯನ್ನು ರಕ್ಷಿಸಲಾಗಿತ್ತು.

200 ಮಂದಿ ನುರಿತ ಮುಳುಗುತಜ್ಞರು ಒಳಗೊಂಡಂತೆ 3 ಸಾವಿರಕ್ಕೂ ಅಧಿಕ ರಕ್ಷಣಾ ಕಾರ್ಯಕರ್ತರು ಸ್ಥಳದಲ್ಲಿದ್ದು, ಭಾರಿ ಮಳೆ ಮತ್ತು ಪ್ರತಿಕೂಲ ಹವಾಮಾನವನ್ನು ಲೆಕ್ಕಿಸದೆ ಶೋಧ ಕಾರ್ಯ ಮುಂದುವರಿಸಿದ್ದಾರೆ. 

110 ಬೋಟ್‌ಗಳು ಮತ್ತು ಐದು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ. ದುರಂತ ಸಂಭವಿಸಿ ಎರಡು ದಿನಗಳು ಕಳೆದಿವೆ. ಆದ್ದರಿಂದ ಹಡಗಿನ ಒಳಗೆ ಸಿಲುಕಿರುವವರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ. 

ಕಾರಣ ಏನು?: ಹಡಗು ಮುಳುಗಲು ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಹಡಗು ಮುಳುಗಿತ್ತು ಎನ್ನಲಾಗಿತ್ತು.

‘ಈ ದುರಂತಕ್ಕೆ ಸುಂಟರಗಾಳಿ ಕಾರಣ’ ಎಂದು ಚೀನಾ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಹವಾಮಾನ ಇಲಾಖೆ ಸುಂಟರಗಾಳಿಯ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ನೀಡದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

‘ಸುಂಟರಗಾಳಿ ಸುಮಾರು 15–20 ನಿಮಿಷಗಳ ಕಾಲ ಬೀಸಿತ್ತು. ಅದು ನದಿ ನೀರಿನ ಮಟ್ಟದಲ್ಲೇ ಬಲವಾಗಿ ಹಾದುಹೋಗಿತ್ತು’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಡಗಿನ ಕ್ಯಾಪ್ಟನ್‌ ಜಾಂಗ್‌ ಶುವೆನ್‌ ಮತ್ತು ಮುಖ್ಯ ಎಂಜಿನಿಯರ್‌ ಈಜಿ ದಡ ಸೇರಿದ್ದರು. ಸ್ಥಳೀಯ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಚೀನಾ ಸರ್ಕಾರ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ. ಅನುಭವಿ ಕ್ಯಾಪ್ಟನ್‌ ಎನಿಸಿರುವ ಶುವೆನ್‌ ಅವರನ್ನು ಚೀನಾ ಸರ್ಕಾರ ಮೂರು ವರ್ಷಗಳ ಹಿಂದೆ ಗೌರವಿಸಿತ್ತು.

ತಿರುವು ಪಡೆದಿತ್ತೇ?: ಹಡಗು ಮುಳುಗುವ ಅಲ್ಪ ಮುನ್ನ ‘ಯು ಟರ್ನ್‌’ ಪಡೆದುಕೊಂಡಿತ್ತು ಎಂದು ಕೈಕ್ಸಿನ್‌ ವೆಬ್‌ಸೈಟ್‌ ವರದಿ ಮಾಡಿದೆ.
‘ಆದರೆ ಸುಂಟರಗಾಳಿಯ ರಭಸಕ್ಕೆ ಸಿಲುಕಿ ತಿರುವು ಪಡೆದಿತ್ತೇ ಅಥವಾ ಹಡಗು ಮುಳುಗುವುದನ್ನು ತಪ್ಪಿಸಲು ಕ್ಯಾಪ್ಟನ್‌ ದಿಕ್ಕು ಬದಲಿಸಿದ್ದರೇ ಎಂಬುದು ಸ್ಪಷ್ಟವಾಗಿಲ್ಲ’ ಎಂದಿದೆ.

‘ಹಡಗು ಸೋಮವಾರ ರಾತ್ರಿ 9.20ಕ್ಕೆ 108 ಡಿಗ್ರಿಯಷ್ಟು ತಿರುವು ಪಡೆದಿದೆ. ಆ ಬಳಿಕ 10 ನಿಮಿಷಗಳ ಕಾಲ ಸಂಚರಿಸಿ ಮುಳುಗಿದೆ’ ಎಂದು ಚೀನಾ ಸಾರಿಗೆ ದೂರಸಂಪರ್ಕ ಮತ್ತು ಮಾಹಿತಿ ಕೇಂದ್ರವು ಉಪಗ್ರಹದಿಂದ ದೊರೆತ ಮಾಹಿತಿಯನ್ನು ಆಧರಿಸಿ ತಿಳಿಸಿದೆ.

‘ಬಲವಾಗಿ ಗಾಳಿ ಬೀಸಿದ ಕಾರಣ ಹಡಗು 45 ಡಿಗ್ರಿಯಷ್ಟು ವಾಲಿದೆ. ತಕ್ಷಣ ಜೀವರಕ್ಷಕ ಕವಚವನ್ನು ಧರಿಸಿ ನಾನಿದ್ದ ಕೊಠಡಿಯ ಕಿಟಕಿಯ ಮೂಲಕ ಹೊರಬಂದೆ’ ಎಂದು ದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ ಟೂರ್‌ ಗೈಡ್‌ 43ರ ಹರೆಯದ ಜಾಂಗ್‌ ಹ್ಯು ಘಟನೆಯನ್ನು ವಿವರಿಸಿದ್ದಾರೆ.

ರಾತ್ರಿಯಿಡೀ ನದಿ ನೀರಿನಲ್ಲಿ ತೇಲುತ್ತಾ ಸಾಗಿದ ಜಾಂಗ್‌ ಘಟನೆ ನಡೆದ ಸ್ಥಳದಿಂದ ಸುಮಾರು 90 ಕಿ.ಮೀ. ದೂರದಲ್ಲಿ ದಡ ಸೇರಿದ್ದಾರೆ. ಹೀಗೆ ತುಂಬಾ ದೂರದಲ್ಲಿ ಯಾರಾದರೂ ದಡ ಸೇರಿರುವರೇ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಕೂಡಾ ನಡೆದಿದೆ. ರಕ್ಷಣಾ ಕಾರ್ಯಾಚರಣೆಯ ವ್ಯಾಪ್ತಿಯನ್ನು ನದಿಯಲ್ಲಿ 220 ಕಿ.ಮೀ ವ್ಯಾಪ್ತಿಯವರೆಗೆ ವಿಸ್ತರಿಸಲಾಗಿದೆ.

ಮುಖ್ಯಾಂಶಗಳು
* 400 ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ
* ಹಡಗು ಮುಳುಗಲು ಸುಂಟರಗಾಳಿ ಕಾರಣ
*  220 ಕಿ. ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT