ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಸೇನಾ ದಾಳಿ

Last Updated 14 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಲೆಹ್ (ಪಿಟಿಐ): ಚೀನಾದ ಸೈನಿಕರು ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಭಾರತ ನಿರ್ಮಿಸಿದ್ದ ಹಳೆಯ ಬಂಕರ್‌ಗಳು ಹಾಗೂ ಟೆಂಟ್‌ಗಳನ್ನು ನಾಶಮಾಡಲು ಯತ್ನಿಸಿದ್ದಾರೆ.

ಇಲ್ಲಿಂದ ಸುಮಾರು ಮುನ್ನೂರು ಕಿ.ಮೀ ದೂರದ ಚೌಮರ್ ಪ್ರಾಂತ್ಯದ ನ್ಯೋಮಾ ಸೆಕ್ಟರ್‌ನಲ್ಲಿ ಸೈನಿಕರು ಈ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಸೈನಿಕರು ಹೆಲಿಕಾಪ್ಟರ್ ಮೂಲಕ ಭಾರತದ ವಾಯು ಗಡಿಯೊಳಗೆ ಸುಮಾರು ಒಂದೂವರೆ ಕಿ.ಮೀ ದೂರ ಪ್ರವೇಶ ಮಾಡಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ.

ಆದರೆ ಮತ್ತೆ ಕೆಲವು ವರದಿಗಳ ಪ್ರಕಾರ ಹೆಲಿಕಾಪ್ಟರ್‌ಗಳು ಚೀನಾದ ಗಡಿಯ ಬಳಿ ಇಳಿದಿದ್ದು, ಅಲ್ಲಿಂದ ಸೈನಿಕರು ಭಾರತದ ಗಡಿ ಪ್ರವೇಶ ಮಾಡಿ ಬಂಕರ್ ಹಾಗೂ ಟೆಂಟ್‌ಗಳನ್ನು ನಾಶ ಮಾಡಲು ಯತ್ನಿಸಿದ್ದಾರೆ. ಇದು ಚೀನಾದ ಪ್ರದೇಶ ಎನ್ನುವ ಫಲಕಗಳನ್ನು ಹಾಕಿದ್ದಾರೆ.

ಆದರೆ ಭಾರತದ ಸೇನೆ ಈ ವರದಿಗಳನ್ನು ಅಲ್ಲಗಳೆದಿದೆ. ಚೀನಾ ಸೈನಿಕರು ಭಾರತದ ಗಡಿಯೊಳಗೆ ಬಂದಿಲ್ಲ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಬಲ್ಲ ಮೂಲಗಳ ಪ್ರಕಾರ ಚೀನಾದ ಎರಡು ಹೆಲಿಕಾಪ್ಟರ್‌ಗಳು ಭಾರತದ ವಾಯು ಗಡಿಯಲ್ಲಿ ಒಂದೂವರೆ ಕಿ.ಮೀ. ದೂರದವರೆಗೆ ಬಂದು ಇಳಿದಿವೆ.

ಚೀನಾ ಸೈನಿಕರು ಭಾರತದ ಹಳೆಯ ಬಂಕರ್‌ಗಳನ್ನು ನಾಶ ಮಾಡಲು ಯತ್ನಿಸಿವೆ. ಈ ಬಂಕರ್‌ಗಳನ್ನು ತುಂಬಾ ಸಮಯದಿಂದ ಭಾರತದ ಸೈನಿಕರು ಉಪಯೋಗಿಸುತ್ತಿರಲಿಲ್ಲ ಎಂದೂ ಮೂಲಗಳು ತಿಳಿಸಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚೀನಾದ ಹೆಲಿಕಾಪ್ಟರ್‌ಗಳು ಗಡಿ ನಿಯಂತ್ರಣ ರೇಖೆಯ ಬಳಿ ಇಳಿದಿದ್ದು, ಅಲ್ಲಿಂದ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿ ಬಂಕರ್‌ಗಳನ್ನು ನಾಶ ಮಾಡಲು ಯತ್ನಿಸಿದರು. ಸ್ಥಳೀಯ ಅಧಿಕಾರಿಗಳು ಈ ಸಂಬಂಧ ತಮ್ಮ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಭಾರತದ ಗಡಿಯೊಳಗೆ ಚೀನಾ ಸೈನಿಕರು ಪ್ರವೇಶ ಮಾಡಿರುವ ವರದಿಗಳು ಸರಿಯಲ್ಲ ಎಂದು ಉಧಮ್‌ಪುರದಲ್ಲಿರುವ ಸೇನೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯ ತಿಳಿಸಿದ್ದಾರೆ.

ಚೌಮರ್ ಪ್ರಾಂತ್ಯದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಸರಿಯಾಗಿ ಗುರುತಿಸಿಲ್ಲ. ಅಲ್ಲಿ ಗಡಿಯ ಬಗ್ಗೆ ಸದಾ ಭಿನ್ನಾಭಿಪ್ರಾಯ ಇದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿದ್ದಾರೆ.

2009ರ ಜುಲೈನಲ್ಲಿಯೂ ಸಹ ಚೀನಾದ ಸೈನಿಕರು ಮೌಂಟ್ ಗ್ಯಾ ಪ್ರದೇಶದಲ್ಲಿ ಭಾರತದ ಗಡಿಯೊಳಗೆ ಒಂದೂವರೆ ಕಿ.ಮೀ ದೂರ ಅತಿಕ್ರಮ ಪ್ರವೇಶ ಮಾಡಿ, ಕಲ್ಲುಗಳ ಮೇಲೆ ಕೆಂಪು ಬಣ್ಣದಲ್ಲಿ `ಚೀನಾ ಗಡಿ~ ಎಂದು ಬರೆದು ಹೋಗಿದ್ದರು. 2009ರ ಜೂನ್ 21ರಂದು ಚೀನಾದ ಹೆಲಿಕಾಪ್ಟರ್ ಇದೇ ಪ್ರದೇಶದಲ್ಲಿ ಭಾರತದ ವಾಯುಗಡಿ ಉಲ್ಲಂಘನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT