ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಇನ್ನೊಂದು ಮುಖ

ರೆಕ್ಕೆ ಬೇರು
Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚಿಕ್ಕದು ಸುಂದರವಾಗಿರುತ್ತದೆ ಎಂಬ ಹೇಳಿಕೆ ಇದೆ.  ಹೇಳಿಕೆಗಳು ಆಶಯಗಳಷ್ಟೆ. ಆಶಯಗಳೆಲ್ಲ ವಾಸ್ತವಗಳಾಗಿರುವುದಿಲ್ಲ. ಚಿಕ್ಕದ್ದನ್ನು ಸುಂದರವಾಗಿಟ್ಟುಕೊಳ್ಳಲು ಸಾಧ್ಯವಾದರೆ ಮಾತ್ರ, ಅನೇಕ ಚಿಕ್ಕ ಚಿಕ್ಕ ಸಂಗತಿಗಳೆಲ್ಲ ಸೇರಿ ಉಂಟಾದ ದೊಡ್ಡದು ತಂತಾನೇ ಸುಂದರವಾಗಿರುವುದು ಸಾಧ್ಯ. ಯಾರು ಚಿಕ್ಕದ್ದನ್ನು ಉಪೇಕ್ಷಿಸುತ್ತಾರೋ ಅವರು ದೊಡ್ಡದನ್ನು ನಿರ್ವಹಿಸಲಾರರು. ಮನೆ ಗೆದ್ದು ಮಾರು ಗೆಲ್ಲು ಅಂದರೆ ಅದೇ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನಿರ್ಲಕ್ಷಿಸಿ, ದೇಶೋದ್ಧಾರದ ಎಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ ಅದು ಹುಸಿಯಾಗಿರುತ್ತದೆ.

Small is beautiful ಎಂಬುದಕ್ಕೆ ವಿಶಾಲ ಅರ್ಥವಿದೆ. ಸುಂದರ ಎಂದರೆ ಅಚ್ಚುಕಟ್ಟಾದ, ಆರೋಗ್ಯಪೂರ್ಣವಾದ, ಅರ್ಥವಂತಿಕೆಯಿಂದ ಕೂಡಿದ ವ್ಯವಸ್ಥೆ. ಅಭಿರುಚಿವಂತ, ಪುಟ್ಟದಾದ ವಸ್ತು ವಿಷಯಗಳನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳುತ್ತಾನೆ. ಸಹಜವಾಗಿ ಅವನ ಅಭಿರುಚಿ ವಿಸ್ತರಿಸುತ್ತಾ ಹೋಗಿ ಅವನ ವ್ಯಾಪ್ತಿಗೆ ಬರುವ ಎಲ್ಲ ದೊಡ್ಡದಾದ ಸಂಗತಿಗಳಿಗೂ ಸದಭಿರುಚಿಯ ಸ್ಪರ್ಶ ದೊರೆತು ಅವನೆಲ್ಲ ಯೋಜನೆಗಳು ನಿಯತಿ, ಖಾಚಿತ್ಯ ಮತ್ತು ಗುಣಮಟ್ಟದಿಂದ ಕಂಗೊಳಿಸುತ್ತವೆ. ಮನೆಯ ಕಸವನ್ನು ನೀಟಾಗಿ ಗುಡಿಸಲು ಆರಂಭಿಸಿದರೆ ಬೀದಿಯ ಕಸ, ದೇಶದ ಕಸವನ್ನು ಅಷ್ಟೇ ನೀಟಾಗಿ ಗುಡಿಸಲು ಸಾಧ್ಯ. ಮನೆಯ ಕಸದ ಮೇಲೆ ಹಾಸಿ ಮಲಗಬಲ್ಲಾತನಿಗೆ ದೇಶದ ಕಸ ಕಾಣಿಸುವುದೇ ಇಲ್ಲ. ಕಸದೊಂದಿಗೆ ಬದುಕಬಲ್ಲ ಅಸೂಕ್ಷ್ಮ್ಮ ಮನುಷ್ಯ ಸ್ವಯಂ ಕಸವಾಗಿರುತ್ತಾನೆ. ಕಸದ ಗುಂಡಿಯಾ ಗಿರುತ್ತಾನೆ.

ದಿಲ್ಲಿ, ಮುಂಬೈ, ಕೊಲ್ಕತ್ತಾಗಳಂಥ ಮಹಾನಗರಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಕು–ಸಣ್ಣ ಸಣ್ಣ ಅಸಂಖ್ಯ ಹಳ್ಳಿಗಳು ಸ್ಮಶಾನವಾದರೂ ಚಿಂತೆ ಇಲ್ಲ ಎಂಬ ನಗರಮುಖೀ ಧೋರಣೆ ಈಗ ಸುಪ್ತವಾಗಿ ಅನೇಕರಲ್ಲಿದೆ. ಆದರೆ ವಾಸ್ತವಾಂಶ ಏನೆಂದರೆ ಹಳ್ಳಿಗಳು ಬರಿದಾಗುತ್ತಿದ್ದಂತೆ ನಗರಗಳು ಕೊಳಗೇರಿಗಳಾಗುತ್ತಾ ಹೋಗುತ್ತವೆ. ಬದುಕು ಹುಡುಕಿ ಬಂದವರಿಗೆಲ್ಲ ನೆಲೆ ಒದಗಿಸಲು ನಗರಗಳೇನೂ ಕಾಮಧೇನುಗಳಲ್ಲ. ಆದರೆ ಹಳ್ಳಿಗಳಿಗೆ ಕಲ್ಪವೃಕ್ಷ–ಕಾಮಧೇನು ಗುಣವಿತ್ತು.

ಗಾಂಧೀಜಿಯವರ ವಿಕೇಂದ್ರೀಕರಣ ಪ್ರಜ್ಞೆಯ ಮೂಲಧಾತು ಇದೇ ಆಗಿದೆ. ಪುಟ್ಟ ಬದುಕಿನ ಸೌಂದರ್ಯವನ್ನು ತಿಳಿಯದ ನಾವು ಹಳ್ಳಿಗಳನ್ನು ಕೊಂದೆವು. ನಾವು ಮಾತ್ರವಲ್ಲ; ಅಭಿವೃದ್ಧಿಶೀಲ ರಾಷ್ಟ್ರ ಎಂದು ಗುರುತಿಸಿಕೊಳ್ಳುತ್ತಿರುವ ಚೀನಾ ಸಹ.
                                                                ***
ಈ ಮಾತುಗಳನ್ನು ನನ್ನ ಕೆಲವು ಪ್ರವಾಸಾನುಭವಗಳ ಬೆಳಕಿನಲ್ಲಿ ವಿಸ್ತರಿಸಬಯಸುತ್ತೇನೆ. ಅಮೆರಿಕಾವಿರಲಿ, ಯಾವ ದೇಶಕ್ಕೇ ಹೋಗಿ ನೀವು ಮೇಡ್‌ ಇನ್‌ ಚೈನಾ ಪದಾರ್ಥಗಳಿಂದ ತಪ್ಪಿಸಿಕೊಳ್ಳಲಾರಿರಿ. ಇವುಗಳಲ್ಲಿ ಅಪಾರ ನಕಲಿ. ನಕಲು ಪರಿಣತಿಯಿಂದಲೇ ಜಗತ್ತಿನ ಎಕಾನಮಿಗೆ ಭಯ ಹುಟ್ಟಿಸಿರುವ ಚೀನಾ ವಿಚಿತ್ರ ರೀತಿಯಲ್ಲಿ ಈಗ ಬಲಶಾಲಿ ದೇಶ. ಸದಾ ಅರಕ್ಷಿತ ಪ್ರಜ್ಞೆಯಲ್ಲಿ ಬದುಕುವ ಅಲ್ಲಿನ ಶ್ರೀಸಾಮಾನ್ಯ ಕತ್ತು ಬಗ್ಗಿಸಿಕೊಂಡು ಪ್ರಶ್ನೆಗಳನ್ನು ಪಕ್ಕಕ್ಕಿಟ್ಟು ದುಡಿಯುತ್ತಾನೆ.

ಅವನಿಗೆ ಗೊತ್ತಿರುವುದು ಅದೊಂದೇ. ಪ್ರಜಾಪ್ರಭುತ್ವ ಇದ್ದ ಕಡೆ ಮಾತ್ರ ಪ್ರಶ್ನೆಗಳಿರುತ್ತವೆ. ಚೀನಾದ ಸಾರ್ವಜನಿಕ ಬದುಕಿನಲ್ಲಿ ಪ್ರಭುತ್ವವನ್ನು ಪ್ರಶ್ನಿಸಿದರೆ ಉಳಿಗಾಲವಿಲ್ಲ. ಭಾರತದಲ್ಲಾದರೋ ಬರಿಯ ಪ್ರಶ್ನೆಗಳೇ. ಪ್ರಶ್ನೆಗಳಿರುವ ಸಮಾಜ ಎಚ್ಚರವಂತ ಸಮಾಜ – ನಿಜ. ಆದರೆ ನಾನೇಕೆ ದುಡಿಯಲಿ? ನಾನೇಕೆ ತೆರಿಗೆ ನೀಡಲಿ? ನಾನೇಕೆ ಮತದಾನ ಮಾಡಲಿ? ನಾನು ಬಹುಸಂಖ್ಯಾತನಾದ್ದರಿಂದ ಉಳಿದವರು ಇಲ್ಲೇಕಿರಬೇಕು? ಇಂಥ ಪ್ರಶ್ನೆಗಳು ಅಪಾಯಕಾರಿ. ಇದು ಚೀನಾದ ಪ್ರಶ್ನಾತೀತ ಸ್ಥಿತಿಯಷ್ಟೇ ಅಪಾಯಕಾರಿ. ರಚನಾತ್ಮಕ ಪ್ರಶ್ನೆಗಳಿದ್ದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿವು.

 ಎಲ, ಎಲಾ ಚೀನವೇ, ನಿನ್ನನ್ನು ಎಲ್ಲರೂ ಕೊಂಡಾಡುತ್ತಾರಲ್ಲ! ನೋಡಿಯೇ ಬಿಡಬೇಕು ಎಂದು ಕಳೆದ ಕೆಲವು ತಿಂಗಳ ಹಿಂದೆ–ಹಲವು ಸಲ ಒಂಟಿ ಬಡಗಿ ಸುಂಟರಗಾಳಿಯಂತೆ– ಚೀನಾಕ್ಕೇ ಹೋಗಿ ಬಂದೆ. ಡೆಲಿಗೇಶನ್ನು, ಕಾನ್‌ಫರೆನ್ಸು ಕಾಂಪಿಟಿೇಶನ್ನು ಎಂಥದ್ದೂ ಇಲ್ಲ. ಕೈಯಲ್ಲೊಂದು ನೋಟ್‌ಬುಕ್‌ ಹಿಡಿದು ಹೊರಟೆ. ಬೀಜಿಂಗ್‌, ಶಾಂಘೈ, ಗುಂಜಾವ್‌–ಯಾವ ಮಹಾ ನಗರದಲ್ಲೇ ಇಳಿಯಲಿ–ಅಲ್ಲಿಂದ ಒಂದು ವಾರ ಹಳ್ಳಿಗಾಡನ್ನು ಹುಡುಕಿ ಹೊರಡುತ್ತಿದ್ದೆ.

ನಗರಗಳು ಕಣ್ಣು ಕೊರೈಸುವಂತೆ ಬೆಳೆದಿವೆ. ಮುಖ್ಯಮಂತ್ರಿಗಳು ಹೇಳಿದಂತೆ ರಸ್ತೆಗಳು ನುಣುಪಾಗಿವೆ. ವೇಗದ ರೈಲುಗಳು, ಆಧುನಿಕ ಕಟ್ಟಡಗಳು, ನಿಬ್ಬೆರಗಾಗಿಸುವ ತಂತ್ರಜ್ಞಾನ, ಅವಿರತ ಆರ್ಥಿಕ ಚಟುವಟಿಕೆಗಳು, ಬೃಹತ್‌ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು, ಸಂಶೋಧನಾ ಸಂಸ್ಥೆಗಳು, ಅಮೆರಿಕಾವನ್ನೂ ಬೆಚ್ಚಿ ಬೀಳಿಸುವ ದೈತ್ಯ ಉತ್ಪಾದನೆಗಳು, ಕತ್ತು ಬಗ್ಗಿಸಿಕೊಂಡು ದುಡಿಯುವ ಕಾರ್ಮಿಕ ಸಮುದಾಯ, ಕೆಂಪು ಸೇನೆಯ ಧ್ವಜಗಳ ಹಾರಾಟ, ಭಯ ಭಕ್ತಿಯಿಂದ ಉಪಚರಿಸಲ್ಪಡುವ ಮಾವೋನ ಬಿಗಿದ ಮುಖದ ಭಾವಚಿತ್ರ.

ಆದರೆ ಗ್ರಾಮೀಣ ಚೀನಾ? ಅದು ಭಾರತಕ್ಕಿಂತ ದಾರುಣ. ಅಲ್ಲಿ ಸಂಪದ್ಭರಿತ ನಗರಗಳಿವೆ. ಆದರೆ ವಾಸಯೋಗ್ಯವಾದ ಹಳ್ಳಿಗಳಿಲ್ಲ.
                                                             ***
ನಾನು ಹಳ್ಳಿಗಾಡನ್ನು ಸುತ್ತಲು ಸಾಮಾನ್ಯವಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಗೈಡ್‌ಗಳಾಗಿ ಕರೆದುಕೊಂಡು ಹೋಗುತ್ತೇನೆ. ನೂರಿನ್ನೂರು ಯೆನ್‌ಗಳನ್ನು ದಿನ ಭತ್ಯೆಯಾಗಿ ಕೊಟ್ಟರೆ, ಊಟ ವಸತಿ ನಿರ್ವಹಿಸಿದರೆ, ಅವರು ವಾರವಿಡೀ ಜೊತೆಯಲ್ಲಿರುತ್ತಾರೆ. ಅಲ್ಲಿನ ಕಂಟೊನೀಸ್‌ ಭಾಷೆಯನ್ನು ಸಾಧಾರಣ ತರ್ಜುಮೆಯೊಂದಿಗೆ ಇಂಗ್ಲಿಷ್‌ನಲ್ಲಿ ವಿವರಿಸುತ್ತಾರೆ.

ಆತನ ಕೈನಲ್ಲೊಂದು ಇಂಗ್ಲಿಷ್‌–ಚೈನೀಸ್‌ ಶಬ್ದಕೋಶವಿರುತ್ತದೆ. ಸಣ್ಣ ಕಣ್ಣಿನಿಂದ ಓದಿ, ಶ್ರಮವಹಿಸಿ, ತರ್ಜುಮೆ ಮಾಡಿ ವಾಸ್ತವಕ್ಕೆ ಹತ್ತಿರವಿರುವಂತೆ ನೋಡಿಕೊಳ್ಳುತ್ತಾರೆ. ಅನ್ಯಥಾ ಮಾರ್ಗವಿಲ್ಲ. ಹಳ್ಳಿಗಾಡಿನ ಪ್ರವಾಸಕ್ಕೆ ಪ್ಯಾಕೇಜು ಟೂರ್‌ಗಳಿಲ್ಲ. ಕಂಟೊನೀಸ್‌ ಕಲಿಯುವುದು ದುಸ್ತರ. ಈ ವಿದ್ಯಾರ್ಥಿ ಸಂಕುಲ ಎಲ್ಲ ಮಹಾನಗರಗಳಲ್ಲೂ ಇದ್ದು ಪಾರ್ಟ್‌ಟೈಂ ಗೈಡ್‌ಗಳಾಗಿ ಕೆಲಸ ಮಾಡುತ್ತಾರೆ. ಚೀನಾದ ಸಮಗ್ರ ಅನುಭವಗಳು ಮುಂದೆ ನನ್ನ ಪ್ರವಾಸಕಥನದಲ್ಲಿ ದೀರ್ಘವಾಗಿ ದಾಖಲಾಗಲಿದೆಯಾದ್ದರಿಂದ ಈ ಲೇಖನದ ಆಶಯಕ್ಕೆ ಪೂರಕವಾದ ಸಂಕ್ಷಿಪ್ತವಾದ ಮಾಹಿತಿಯನ್ನು ಮಾತ್ರ ಹೆಕ್ಕಿ ಇಲ್ಲಿ ಕೊಡುತ್ತಿದ್ದೇನೆ; ಪ್ರಾತಿನಿಧಿಕವಾಗಿ.

ಗ್ಯಾಂಗ್‌ ಡಂಗ್‌ (Guang dong) ಪ್ರಾಂತ್ಯದಲ್ಲಿರುವ ಝಂಗ್‌ ಚೌ (Zhong zhou) ಎಂಬ ಹಳ್ಳಿಯಲ್ಲಿ ಒಂದು ವಾರ ತಂಗಿ ಅಲ್ಲಿಯ ಸುತ್ತಣ ಹತ್ತಾರು ಹಳ್ಳಿಗಳನ್ನು ಸುತ್ತಾಡಿದೆ. ವಯಸ್ಸಾದ ಹಣ್ಣು ಹಣ್ಣು ಮುದುಕ ಮುದುಕಿಯರು. ಇಲ್ಲವೇ ಹಸಿ ಬಾಣಂತಿಯರು. ಎಳೆ ಕಂದಮ್ಮಗಳು. ಹರೆಯ ಬರುತ್ತಿದ್ದಂತೆ ತರುಣ ತರುಣಿಯರು ನಗರಕ್ಕೆ ಓಡಿಹೋಗುತ್ತಾರೆ.

ಇಲ್ಲಿನಂತೆಯೇ ಹಳ್ಳಿಗಳು ವೃದ್ಧಾಶ್ರಮಗಳು. ನಗರಗಳಲ್ಲಿ ವಸತಿ ಮತ್ತು ಹಣದ ಸಮಸ್ಯೆ. ಆದ್ದರಿಂದ ವಯಸ್ಸಾದವರಿಗೆ ಹಳ್ಳಿಗಳೇ ಗತಿ. ನಾನು ಉಳಿದ ಮನೆಯೊಂದರಲ್ಲಿ ಅಜ್ಜ, ಅಜ್ಜಿ, ತಾಯಿ, ತಂದೆ, ಸೊಸೆ ಮಾತ್ರ ಇದ್ದರು. ಭತ್ತ ಕಟಾವಿಗೆ ಬಂದಿತ್ತು. ಕೆಲಸದವರಿಲ್ಲ. ಹೊಲಗದ್ದೆಗಳಲ್ಲಿ ಕಾಣಸಿಗುವವರೂ ಸಹ ಹಣ್ಣಾದ ಜೀವಗಳೇ.

ಭೂಮಿ ಒಡೆತನ ಸರ್ಕಾರದ್ದು. ಗ್ರಾಮ ಪ್ರಾಂತ್ಯಗಳಲ್ಲಿ 30 ವರ್ಷ, ನಗರಪ್ರಾಂತ್ಯಗಳಲ್ಲಿ 70 ವರ್ಷ–ಈ ಅವಧಿಯ ನಂತರ ಸರ್ಕಾರ ಆಸ್ತಿಯನ್ನು ವಶ ಮಾಡಿಕೊಂಡು ಮರುಹಂಚಿಕೆ ಮಾಡುತ್ತದೆ. ಪ್ರತಿ ಮನೆ, ಶಾಲೆ, ಕಛೇರಿಯಲ್ಲಿ ಮಾವೋನ ಚಿತ್ರ ನೇತಾಡುತ್ತಿರುತ್ತದೆ. ಸಾವಿರ ಜನಸಂಖ್ಯೆಯ ಹಳ್ಳಿಗಳಲ್ಲಿ ಒಬ್ಬನೇ ಒಬ್ಬ ಯುವಕನೂ, ಯುವತಿಯೂ ಕಾಣಸಿಗುವುದಿಲ್ಲ. ಎಲ್ಲರೂ ಶಾಂಘೈನ ಪಿಜ್ಜಾಹಟ್‌ನ ಅಥವಾ ಬೀಜಿಂಗ್‌ನ ಮ್ಯಾಕ್‌ಡೊನಾಲ್ಡನ ಕೆಲಸಕ್ಕೋ ದೌಡಾಯಿಸಿರುತ್ತಾರೆ.
                                                                ***
ಹೊಯ್‌ಜಿ (Huaiji) ಎಂಬ ಊರಿಗೆ ಹೋಗುವಾಗ ಮೂರು ಗಂಟೆಗಳ ರಸ್ತೆ ಎಷ್ಟು ಹಾಳಾಗಿತ್ತೆಂದರೆ ಇಲ್ಲೊಂದು ಸರ್ಕಾರಿ ವ್ಯವಸ್ಥೆ ಇದೆಯೆ? ಇಲ್ಲಿ ಮನುಷ್ಯರು ವಾಸಿಸುತ್ತಾರೆಯೆ? ಓಡಾಡುತ್ತಾರೆಯೆ?– ಎಂಬಷ್ಟು ಭೀಕರವಾಗಿತ್ತು. ಆ ಶೌಚಾಲಯಗಳು ಗಬ್ಬು ವಾಸನೆ ಹೊಡೆಯುತ್ತಿದ್ದವು. ಎಲ್ಲೆಲ್ಲೂ ಪ್ಲಾಸ್ಟಿಕ್ಕು. ನನ್ನ ಗೈಡ್‌ ಅದನ್ನು ತಾಲ್ಲೂಕು ಕೇಂದ್ರ ಎಂದ. ಲಟಾರಿ ಬಸ್ಸಿನಲ್ಲಿ ಕುಳಿತ ಕೂಡಲೇ ಎದುರಿನ ಟಿವಿಯಲ್ಲಿ ಮಾತ್ರ ತಪ್ಪದೆ ಕೆಂಪು ಸೇನೆಯನ್ನು ಕೊಂಡಾಡುವ ದೇಶಭಕ್ತಿಯ ಸಾಕ್ಷ್ಯಚಿತ್ರ.

ಬುದ್ಧನ ದೇವಾಲಯದಲ್ಲಿ ಆದ ಸ್ವಾರಸ್ಯಕರ ಅನುಭವ. ಅದು ಪರ್ಲ್ ರಿವರ್‌ ದಂಡೆಯಲ್ಲಿದೆ. ದೇವಾಲಯದ ಪ್ರಾಂಗಣದಲ್ಲಿ ಉದ್ದಕ್ಕೂ ಕಂಟೊನೀಸ್‌ ಭಾಷೆಯಲ್ಲಿ ಬರೆದ ಫಲಕಗಳಿದ್ದವು. ಅವು ಪಾಳಿ ಭಾಷೆಯಿಂದ ಅನುವಾದಿಸಲ್ಪಟ್ಟ ಬುದ್ಧನ ವ್ಯಾಖ್ಯೆಗಳಿರಬೇಕು ಎಂದು ಊಹಿಸಿ ನನ್ನ ಗೈಡ್‌ ಅನ್ನು ವಿವರಿಸಲು ಕೋರಿದೆ. ಅವನು ಪಿಸುಮಾತಿನಲ್ಲಿ, ಭಯಗೊಂಡು, ಪಕ್ಕಕ್ಕೆ ಕರೆದು ಅವೆಲ್ಲವೂ ಸರ್ಕಾರದ ಸೂಚನೆಗಳು ಎಂದ. ಅಷ್ಟೊಂದು ಸೂಚನೆಗಳು? ಯಾರಿಗಾಗಿ? ಅದೂ ದೇವಾಲಯದಲ್ಲಿ? ಅವನು ಹೇಳಿದ: ನೀವು ಯಾವ ದೇಶದಿಂದ, ಧರ್ಮದಿಂದ, ಮತದಿಂದ ಬಂದವರಾಗಿರಬಹುದು. ನಿಮ್ಮ ರೀತಿಯಲ್ಲಿ ನೀವು ಬುದ್ಧನನ್ನು ಪೂಜಿಸಲು ಸ್ವತಂತ್ರರಾಗಿದ್ದೀರಿ. ಆದರೆ ಪೂಜೆಯ ನಡುವೆ ಸರ್ಕಾರವನ್ನು ಟೀಕಿಸುವ, ಖಂಡಿಸುವ ಅಥವಾ ವಿಮರ್ಶಿಸುವ ಮಂತ್ರಗಳನ್ನು, ಉಚ್ಚಾರಗಳನ್ನು ಬಳಸಿದರೆ ಶಿಕ್ಷೆಗೆ ಗುರಿಯಾಗುತ್ತೀರಿ! ಎಲ್ಲ ಮುಖ್ಯ ದೇವಾಲಯಗಳಲ್ಲೂ ಇಂಥ ಆಜ್ಞಾಫಲಕಗಳು ಇರುತ್ತವಂತೆ.

ನಿರುದ್ಯೋಗ ಸಮಸ್ಯೆ ಎಷ್ಟಿದೆ? ಭ್ರಷ್ಟಾಚಾರ ಎಷ್ಟು ಪ್ರಮಾಣದಲ್ಲಿದೆ? ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೆ? ಮಾಧ್ಯಮಗಳು ಏನು ಮಾಡುತ್ತಿವೆ? ಇಂಥ ಯಾವ ಪ್ರಶ್ನೆ ಕೇಳಿದರೂ ಪಿಸುಮಾತಿನ ಮೆಲುದನಿಯ ಉತ್ತರ. ಜನ ಹೆದರಿ ಸಾಯುತ್ತಾರೆ. ತಮ್ಮ ಸ್ವಂತ ಮಗುವನ್ನು ಪಡೆಯಲೂ–ಅದು ಎರಡನೆಯದಾಗಿದ್ದರೆ ಹೆಂಡತಿ ಬಸುರಿಯಾಗುತ್ತಿದ್ದಂತೆ ಅನಧಿಕೃತವಾಗಿ ಪಕ್ಕದ ದೇಶಗಳಿಗೆ ಕಳುಹಿಸುತ್ತಾರೆ. ಬಹಳಷ್ಟು ಮಂದಿ ಹಾಂಗ್‌ಕಾಂಗ್‌ ಅನ್ನು ಮಕ್ಕಳನ್ನು ಹೆರಲು ಬಳಸಿಕೊಳ್ಳುತ್ತಾರೆ. ಭ್ರಷ್ಟಾಚಾರದಲ್ಲಿ ಭಾರತ ಹಿಂದೆ! ಕೆಂಪು ಸೇನೆಯ ಅಧಿಕಾರಿಗಳು ಎರಡೂ ಕೈಗಳಿಂದ ಮುಕ್ಕುತ್ತಾರೆ. ಪ್ರಶ್ನೆಗಳನ್ನು, ಪ್ರಶ್ನೆ ಮಾಡಿದವರನ್ನೂ ಬೇರುಸಹಿತ ಕಿತ್ತೆಸೆಯುತ್ತಾರೆ. ಬೆರಳೆಣಿಕೆಯ ಸೇನಾ ದಂಡಾಧಿಕಾರಿಗಳ ಕಪಿಮುಷ್ಟಿಯಲ್ಲಿ ಜನ ವಿಹ್ವಲರಾಗಿ ಬದುಕುತ್ತಾರೆ.

ಇದಕ್ಕೆ ಪರ್ಯಾಯವೇನು? ಅಥವಾ ಪರಿಹಾರವೇನು? ಆ ಪ್ರಶ್ನೆಯನ್ನು ಚೀನಾದ ಜನಸಾಮಾನ್ಯರೇ ಕೇಳಿಕೊಳ್ಳುತ್ತಿಲ್ಲ. ಭಾರತದಷ್ಟೇ ಪ್ರಾಚೀನ ನಾಗರಿಕತೆ, ಸಂಸ್ಕೃತಿ ಉಳ್ಳ ಚೀನಾ ಅದೆಲ್ಲವನ್ನೂ ಅಲಕ್ಷಿಸಿ ಮತ್ತೊಂದು ಅಮೆರಿಕಾ ಆಗಹೊರಟಿದೆ. ಎರಡು ಕಡ್ಡಿಗಳಲ್ಲಿ ಆಹಾರ ತಿನ್ನುವ ಒಂದೇ ಒಂದು ಪದ್ಧತಿಯನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಪಾರಂಪರಿಕ ಕಲೆ, ಆಚಾರವಿಚಾರ, ಸಂಸ್ಕೃತಿಗಳಿಗೆ ಸಾವಕಾಶವಾಗಿ ತಿಲಾಂಜಲಿ ಕೊಡುತ್ತಿದೆ. ಸಂಸ್ಕೃತಿಯ ತೊಟ್ಟಿಲುಗಳಾದ ಗ್ರಾಮ ಸಮಾಜವನ್ನು ನಾಶ ಮಾಡಿರುವುದೇ ಇದಕ್ಕೆ ಕಾರಣ. ಬೀಜಿಂಗ್‌, ಶಾಂಘೈಗಳು ಭಯೋತ್ಪಾದನೆ, ಮಾಫಿಯಾ, ಕೋಮುದಂಗೆ, ಪೈರಸಿ ಮಾತ್ರ ಸೃಷ್ಟಿಸಬಲ್ಲವು–ಸಂಸ್ಕೃತಿಯನ್ನಲ್ಲ.
                                                        ***
‘ನೀನು ಚೀನೀ ಪ್ರಜೆ ಅಲ್ಲವೆ? ಏಕೆ ಸ್ಯಾಮ್‌ ಎಂದು ಹೆಸರಿಟ್ಟುಕೊಂಡಿದ್ದಿ?’ ಎಂದು ನನ್ನ ಗೈಡ್‌ನನ್ನು ಕೇಳಿದೆ. ಅವನು ಮುಗುಳ್ನಕ್ಕು, ನಗರಕ್ಕೆ ಬಂದ ಹಳ್ಳಿಹುಡುಗರು ಸ್ಯಾಮ್‌, ರಿಕ್‌, ಜಾನ್‌ ಎಂದು ಹೆಸರಿಟ್ಟುಕೊಳ್ಳುತ್ತಾರೆ; ಅಮೆರಿಕದವರಂತಾಗಲು! ಹಳ್ಳಿಗೆ ಹೋದಾಗ ಮಾತ್ರ ಅವರು ಡೆಂಗ್‌, ಜುಂಗ್‌ಗಳಾಗುತ್ತಾರೆ. ಒಂದು ಕುಗ್ರಾಮದಲ್ಲಿ ಶಾಲೆಯನ್ನು ನೋಡಲು ಹೋದಾಗ ಅಲ್ಲಿನ ಶಿಕ್ಷಕ ಅತ್ಯುತ್ಸಾಹದಲ್ಲಿ ಪಠ್ಯವನ್ನು ವಿವರಿಸಿದ. ಅದು ಟೈಟಾನಿಕ್‌ ದುರಂತ ಪ್ರೇಮಕಥೆ ಮತ್ತು ಸೌಂಡ್‌ ಆಫ್‌ ಮ್ಯೂಸಿಕ್‌ನ ಗೀತ ಸಾಹಿತ್ಯವಾಗಿತ್ತು. ಜಾಗತೀಕರಣ ಅಂತ ನಾವು ಬೊಬ್ಬೆ ಹೊಡೆಯುತ್ತೇವಲ್ಲ ಅದರ ಪರಾಕಾಷ್ಠೆಯನ್ನು ಚೀನಾದಲ್ಲಿ ನೋಡಬೇಕು! ಶಿಥಿಲವಾಗಿದ್ದ ಆ ಶಾಲೆಯ ಫೋಟೋ ಮಾತ್ರ ತೆಗೆಯಬೇಡಿ ಎಂದು ಆತ ಸೂಚಿಸಿದ್ದು ಮಾರ್ಮಿಕವಾಗಿತ್ತು. ಸದಾ ಹಲ್ಲಿಗೆ ಕಡ್ಡಿ ಚುಚ್ಚುತ್ತ, ನನ್ನ ‘ವಲಸೆ ಹಕ್ಕಿಯ ಹಾಡು’ ಕಾದಂಬರಿಯ ಡ್ರಿಲ್‌ ಮಾಸ್ತರು ಸುಬ್ಬೇಗೌಡನನ್ನು ಹೋಲುತ್ತಿದ್ದ ಆತನ ಹೆಸರು ಓವಂಪಿ. (Ou wompi) ಎಲ್ಲ ಹುಡುಗರೂ ಇಂಗ್ಲಿಷ್‌ ಮಾಧ್ಯಮ ಬಯಸುತ್ತಾರೆ. ಕಟೊನೀಸ್‌ ಕಲಿಯಲೊಲ್ಲರು ಎಂಬುದು ಅವನ ಅಳಲು. ನನಗೆ ಕನ್ನಡ ನೆನಪಾಯಿತು.
                                                                  ***
ಈ ಸಾಮ್ಯ–ವೈದೃಶ್ಯಗಳು ನಮ್ಮನ್ನು ಗೊಂದಲಕ್ಕೆ ತಳ್ಳುತ್ತವೆ. ನಾವು ಮಂತ್ರಿಗಳನ್ನಷ್ಟೇ ಏಕೆ? ನ್ಯಾಯಾಧೀಶರನ್ನೂ ಜೈಲಿಗೆ ತಳ್ಳುತ್ತೇವೆ. ಟೀಕಿಸುತ್ತೇವೆ. ಪ್ರತಿಭಟಿಸುತ್ತೇವೆ. ಮುಷ್ಕರ ಹೂಡುತ್ತೇವೆ. ಚೀನಾದ ಪ್ರಜೆಗೆ ಆ ಸ್ವಾತಂತ್ರ್ಯವಿಲ್ಲ.

ಆದರೆ ಭ್ರಷ್ಟಾಚಾರದಲ್ಲಿ ನಾವೂ–ಅವರೂ ಸಮಾನರು. ನಾವು ಅಧಿಕಾರಿಗಳಿಗೆ, ರಾಜಕಾರಣಿಗೆ ಲಂಚ ಕೊಟ್ಟರೆ ಚೀನಾದ ಪ್ರಜೆ ಮಿಲಿಟರಿಗೇ ಲಂಚ ಕೊಡಬಲ್ಲ ಜಾಣ. ಯುವಜನತೆ ಮಾವೋನನ್ನು ಇಷ್ಟಪಡುವುದಿಲ್ಲ. ಚೀನಾ ಬಲಾಢ್ಯ ರಾಷ್ಟ್ರವಾಗುತ್ತಿದೆಯೆ? ಯಾವ ಬೆಲೆ ತೆತ್ತು? ಯುಎಸ್‌ಎಸ್‌ಆರ್‌ಗೆ ಆದ ಗತಿಯೆ ಚೀನಾಕ್ಕೂ ಕಾದಿದೆಯೆ? ಭಾರತದ ಪ್ರಜೆಯ ವ್ಯಕ್ತಿಸ್ವಾತಂತ್ರ್ಯವನ್ನು ಚೀನೀ ಪ್ರಜೆ ಅಸೂಯೆಯಿಂದ ನೋಡಿದರೆ, ಚೀನಾದ ಪ್ರಗತಿಯನ್ನು ಭಾರತೀಯ ಪ್ರಜೆ ಬೆರಗಿನಿಂದ, ಅಸೂಯೆಯಿಂದ ನೋಡುತ್ತಾನೆ. ಇದರಲ್ಲಿ ಸರಿ ಯಾವುದು? ಸಂಸ್ಕೃತಿಯನ್ನೂ ಅದರ ನೆನಪಿನ ಕೋಶವನ್ನೂ ನಾಶ ಮಾಡಿಕೊಳ್ಳಲು ತಯಾರಾದರೆ ಮನುಷ್ಯನೂ, ದೇಶವೂ ಶ್ರೀಮಂತವಾಗಬಹುದೇನೋ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT