ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಂಚನಕಟ್ಟೆಯ ಕೋಲ್ಮಿಂಚು!

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಯನ ಮನೋಹರ ಚುಂಚನಕಟ್ಟೆ ಜಲಪಾತವು ಮೈಸೂರು ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ್. ನಗರ) ತಾಲ್ಲೂಕಿನಲ್ಲಿದೆ. ತಾಲ್ಲೂಕು ಕೇಂದ್ರದಿಂದ ಚುಂಚನ ಕಟ್ಟೆಗೆ ಎಂಟು ಕಿ.ಮೀ.ಗಳ ದೂರವಷ್ಟೇ. ಮೈಸೂರಿನಿಂದ ಚುಂಚನಕಟ್ಟೆಗೆ ಸುಮಾರು ಒಂದೂವರೆ ತಾಸಿನ ಪ್ರಯಾಣ.
 
ಜಲಪಾತದ ಸಮೀಪವೇ ಕೋದಂಡರಾಮ ದೇವಸ್ಥಾನವಿದೆ. ಪುರಾತನವಾದ ಈ ದೇಗುಲದಲ್ಲಿ ಸೀತಾದೇವಿಯ ವಿಗ್ರಹವು ಶ್ರೀರಾಮನ ಬಲಭಾಗಕ್ಕಿರುವುದು ವಿಶೇಷ. ದಂತಕಥೆಯೊಂದರ ಪ್ರಕಾರ ಶ್ರೀರಾಮನು ವನವಾಸದ ವೇಳೆ ಈ ಸ್ಥಳಕ್ಕೆ ಆಗಮಿಸಿದ್ದು, ಇಲ್ಲಿ ನೆಲೆಸಿದ್ದ ಚುಂಚ ಮತ್ತು ಆತನ ಪತ್ನಿ ಚುಂಚಿಯರ ಆತಿಥ್ಯ ಸ್ವೀಕರಿಸಿದ್ದನಂತೆ.
 
ಆ ಸಂದರ್ಭದಲ್ಲಿ ಇಲ್ಲೊಂದು ತೊಟ್ಟು ನೀರೂ ಇರಲಿಲ್ಲವಂತೆ. ಸೀತೆಗೆ ಸ್ನಾನ ಮಾಡುವ ಆಸೆ. ಆಗ, ರಾಮನ ಆಜ್ಞೆಯ ಮೇರೆಗೆ ಲಕ್ಷ್ಮಣ, ಕಲ್ಲಿನ ಬಂಡೆಗೆ ಬಾಣ ಬಿಟ್ಟಾಗ ಅಲ್ಲಿ ನೀರು ಉಕ್ಕಿ ಹರಿಯಿತಂತೆ. ಅಂದು ಉದ್ಭವವಾದ ನೀರೇ ಇಂದು ಜಲಪಾತವಾಗಿ ಧುಮ್ಮಿಕ್ಕುತ್ತಿದೆ ಎನ್ನುತ್ತದೆ ಪುರಾಣದ ಕಥೆ.

ಅಂದಹಾಗೆ, ಅನತಿ ದೂರದಲ್ಲೇ ಜಲಪಾತ ಭೋರ್ಗರೆಯುತ್ತಿದ್ದರೂ ಗರ್ಭಗುಡಿಯಲ್ಲಿ ಅದರ ಸದ್ದು ಒಂದಿಷ್ಟೂ ಕೇಳಿಸುವುದಿಲ್ಲ. ಅದು ದೇಗುಲದ ಇನ್ನೊಂದು ವಿಶೇಷ.
ಹತ್ತಿಪ್ಪತ್ತು ಮೆಟ್ಟಿಲು ಇಳಿದು ಮುಂದೆ ಸಾಗಿದರೆ, ಮೊದಲಿಗೆ ಬಂಡೆಯ ಮೇಲೆ ಮೂರು ನಾಲ್ಕು ಸಣ್ಣ ಸಣ್ಣ ನೀರಿನ ಝರಿಗಳು ಕಾಣಿಸುತ್ತವೆ.

ಇನ್ನೂ ಸ್ವಲ್ಪ ಮುಂದೆ ಬಂಡೆಗಳನ್ನು ಹತ್ತಿ ಇಳಿದು ಸಾಗಿದರೆ ನೀರು ಭೋರ್ಗರೆಯುತ್ತಾ ಧುಮ್ಮಿಕ್ಕುವುದು ಕಾಣಿಸುತ್ತದೆ. ಇಲ್ಲಿ ಕಾವೇರಿ ನದಿಯು ಸುಮಾರು 60 ಅಡಿ ಎತ್ತರದಿಂದ 300-400 ಅಡಿ ವಿಸ್ತಾರವಾಗಿ ಅನಾವರಣಗೊಳ್ಳುತ್ತದೆ.

ನದಿಯು ಮೊದಲಿಗೆ ಎರಡು ಭಾಗದಲ್ಲಿ ಧುಮುಕಿ ಮತ್ತೆ ಒಂದಾಗಿ ಎತ್ತರದಿಂದ ಧುಮುಕುತ್ತದೆ. ಬೇರೆ ಜಲಪಾತಗಳಂತಲ್ಲದೆ ಇಲ್ಲಿ ನಾವು ಸುಲಭವಾಗಿ ಜಲಪಾತದ ಬಳಿ ಸಾಗಿ ಬಂಡೆಯ ಮೇಲೆ ಕುಳಿತು ನೀರನ್ನು ಮುಟ್ಟಬಹುದು.
 
ಬಂಡೆಗಳ ಹಾಸಿನ ಮೂಲೆಮೂಲೆಗಳಿಂದ ನುಗ್ಗಿಬರುವ ನೀರು ಹಾಲು ಬಿಳುಪಿನಿಂದ ಕೂಡಿದ್ದರೆ, ಬಂಡೆಗಳು ವಿವಿಧ ಬಣ್ಣಗಳ ಗೆರೆಗಳಿಂದಾಗಿ ಜಮಖಾನ ಹಾಸಿದಂತೆ ಕಾಣುತ್ತವೆ. ಜಲಪಾತದ ಮೊರೆತ ಹಾಗೂ ಶುಭ್ರ ನೀರಿನ ಸಿಂಚನ ಒಂದು ಚೇತೋಹಾರಿ ಅನುಭವ.
 
ಜಲಪಾತದಲ್ಲಿ ನೀರು ಬೀಳುವ ರಭಸವನ್ನು ಬಳಸಿಕೊಂಡು ಒಂದು ಜಲ ವಿದ್ಯುದಾಗಾರವನ್ನು  ಸಹ ಸ್ಥಾಪಿಸಲಾಗಿದೆ.  ಚುಂಚನಕಟ್ಟೆ ಜಲಪಾತದ ಪರಿಸರ ಸೊಗಸಾದ ಪ್ರವಾಸಿ ತಾಣವಾದರೂ, ಅಲ್ಲಿ ಯಾವ ಮೂಲಭೂತ ಸೌಕರ್ಯಗಳೂ ಇಲ್ಲ. ಪ್ರವಾಸಿಗಳು ತಮ್ಮದೇ ವಾಹನಗಳಲ್ಲಿ ಹೋಗಬೇಕು, ಊಟ ತಿಂಡಿಗಳನ್ನೂ ಕೊಂಡೊಯ್ಯಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT