ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು

Last Updated 13 ಏಪ್ರಿಲ್ 2013, 10:49 IST
ಅಕ್ಷರ ಗಾತ್ರ

ಶಹಾಪುರ: ಹಲವಾರು ಗೊಂದಲ, ಗೋಜಲು ಹಾಗೂ ಉಹಾಪೋಹಗಳಿಗೆ ತೆರೆಬಿದ್ದು ಕೊನೆಗೆ ರಾಜಕೀಯ ಪಕ್ಷದ ಅಭ್ಯರ್ಥಿಗಳು ಅಖಾಡಕ್ಕೆ ಇಳಿಯಲು ಸನ್ನದ್ಧರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶರಣಬಸಪ್ಪ ದರ್ಶನಾಪೂರ, ಗುರುಪಾಟೀಲ್ ಸಿರವಾಳ ಕೆಜೆಪಿ, ಜೆಡಿಎಸ್‌ನಿಂದ ಶರಣಪ್ಪ  ಸಲಾದಪೂರ, ವೀರಣ್ಣಗೌಡ ಮಲ್ಲಾಬಾದಿ ಬಿಜೆಪಿಯಿಂದ ಹಾಗೂ ಬಿಎಸ್ಸಾರ ಕಾಂಗ್ರೆಸ್‌ನಿಂದ ಶಂಕ್ರಣ್ಣ ವಣಿಕ್ಯಾಳ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)  ಬಸವರಾಜ ಪಡುಕೋಟೆ ಸ್ಫರ್ಧಿಸಲಿದ್ದಾರೆ.

ಸ್ಥಳೀಯ ರಾಜಕೀಯ ಪಕ್ಷಗಳು ಹೆಚ್ಚು ಜನ್ಮತಾಳಿದ್ದರಿಂದ ಸಹಜವಾಗಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಏರುಮುಖವಾಗಿದೆ. ಶಹಾಪುರ ವಿಧಾನಸಭೆ ಕ್ಷೇತ್ರವು ಅತ್ಯಂತ ಕಡಿಮೆ ಅಂದರೆ 1,83,495 ಮತದಾರರನ್ನು ಹೊಂದಿದೆ. ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿ,  ತಾಲ್ಲೂಕಿನ ಗೋಗಿ, ಶಹಾಪುರ ಹೋಬಳಿ ಕ್ಷೇತ್ರಗಳು ಬರುತ್ತವೆ.

ಕ್ಷೇತ್ರದಲ್ಲಿ  ಅತಿ ಹೆಚ್ಚು ಮತದಾರರನ್ನು  ಅಂದಾಜು 40,000 ಕುರುಬ ಸಮುದಾಯ ಹೊಂದಿದ್ದರೆ ನಂತರದ ಸ್ಥಾನ ವಾಲ್ಮೀಕಿ , ಮುಸ್ಲಿಂ,  ಕಬ್ಬಲಿಗ ಜಾತಿಯವರಿದ್ದಾರೆ. ಮೇಲ್ಜಾತಿಯ ಲಿಂಗಾಯತ 20,000 ಹಾಗೂ ರಡ್ಡಿ 15,000 ಮತದಾರನ್ನು ಹೊಂದಿದ್ದಾರೆ ಎಂಬುವುದು ಆಯಾ ಜಾತಿಯ ನಾಯಕರು ಅಂಕಿ ಅಂಶಗಳನ್ನು ಬಿಚ್ಚಿಡುತ್ತಾರೆ.

ಪ್ರಸಕ್ತ ಚುನಾವಣೆಯಲ್ಲಿ ಪ್ರಬಲ ಜಾತಿ ರಡ್ಡಿ ಸಮುದಾಯಕ್ಕೆ ಶರಣಬಸಪ್ಪ ದರ್ಶನಾಪೂರ, ವೀರಣ್ಣಗೌಡ ಮಲ್ಲಾಬಾದಿ, ಶಂಕ್ರಣ್ಣ ವಣಿಕ್ಯಾಳ ಸೇರಿದವರಾಗಿದ್ದರೆ, ಗುರುಪಾಟೀಲ್ ಸಿರವಾಳ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.  ಜೆಡಿಎಸ್‌ನಿಂದ ಸ್ಫರ್ಧಿಸಿರುವ ಶರಣಪ್ಪ ಸಲಾದಪೂರ ಕುರುಬ ಜಾತಿಗೆ ಸೇರಿದವರಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ಬಸವರಾಜ ಪಡಕೋಟಿ ಹಿಂದುಳಿದ ಮರಾಠ ಕೋಮಿಗೆ ಸೇರಿದವರಾಗಿದ್ದಾರೆ.

ಒಂದೇ ಕೋಮಿನ ಮೂವರು ಅಭ್ಯರ್ಥಿಗಳು ಪ್ರಮುಖ ರಾಜಕೀಯ ಪಕ್ಷದಿಂದ ಸ್ಪರ್ಧಿಸಿರುವುದು ವಿಶೇಷವಾಗಿದೆ. ಯಾವ ಜಾತಿಯ ಹೆಚ್ಚು ಮತಗಳನ್ನು ಪಡೆದುಕೊಳ್ಳುತ್ತಾರೆ ಅದರ ಮೇಲೆ ಅವರ ಗೆಲುವಿನ ಭವಿಷ್ಯ ನಿರ್ಧಾರವಾಗಲಿದೆ.

ರಾಜಕೀಯ ಪಕ್ಷದ ಅಭ್ಯರ್ಥಿಗಳು ತಮ್ಮದೆ ಆದ ರಾಜಕೀಯ ರಣತಂತ್ರವನ್ನು ರೂಪಿಸಿಕೊಳ್ಳುತ್ತಿದ್ದು ಗ್ರಾಮೀಣ ಪ್ರದೇಶದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈಗಾಗಲೇ ಪ್ರಚಾರದಲ್ಲಿ ಕಾಂಗ್ರೆಸ್ ಮುಂದೆ ಇದ್ದರೆ ನಂತರದ ಸ್ಥಾನ ಜೆಡಿಎಸ್‌ನದ್ದಾಗಿದೆ. ಇನ್ನೂ ಬಿಜೆಪಿ ಹಾಗೂ ಬಿಎಸ್ಸಾರ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಮಗ್ನವಾಗಿವೆ.

ರಾಜಕೀಯ ಪಕ್ಷದ ಟಿಕೆಟ್‌ಗಾಗಿ ಹೋರಾಟ ನಡೆಸಿ ಕೊನೆಗೆ ವಿಫಲರಾಗಿರುವ ಅತೃಪ್ತ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಸುಳಿವನ್ನು ಅನ್ವರಪಾಶ ನೀಡಿದ್ದಾರೆ.

ಅಲ್ಲದೆ ಹಿಂದುಳಿದ ಜಾತಿಗ ಮತಗಳನ್ನು ವಿಭಜಿಸುವ ಸಲುವಾಗಿ ಪ್ರಮುಖ ರಾಜಕೀಯ ಪಕ್ಷವೊಂದು ಹಿಂದುಳಿದ ಅಭ್ಯರ್ಥಿಯನ್ನು ಕಣಕ್ಕಿಸುವ ತೆರೆಮರೆಯ ಕಸರತ್ತು  ನಡೆದಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಕೆಲ ರಾಜಕೀಯ ಪಕ್ಷಗಳು ತಮ್ಮದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ಸ್ವತಂತ್ರ ಅಭ್ಯರ್ಥಿಯೆಂದು ಕಣಕ್ಕಿಸಿ ನಂತರ ಅವರ ನೆರವಿನಿಂದ ವಾಹನ ಹಾಗೂ ಇನ್ನಿತರ ಅಗತ್ಯವಾದ ಖರ್ಚುಗಳನ್ನು ಮಾಡುವ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ ಎಂದು ನುಡಿಯುತ್ತಾರೆ ಜೆಡಿಎಸ್   ಕಾರ್ಯಕರ್ತರೊಬ್ಬರು.

ಒಟ್ಟಾರಿಯಾಗಿ ರಾಜಕೀಯ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನೇನಿರುವುದು ನಾಮಪತ್ರ ಸಲ್ಲಿಕೆಯಲ್ಲಿ ಮಗ್ನರಾಗಿದ್ದಾರೆ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT