ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣಕ್ಕೆ ರಂಗು ತುಂಬಿದ ಪತ್ನಿಯರು...

ಪತಿಗಾಗಿ ಮಹಲು ಬಿಟ್ಟು ಬೀದಿಗಿಳಿದ ಕ್ಷಣ
Last Updated 26 ಏಪ್ರಿಲ್ 2013, 10:00 IST
ಅಕ್ಷರ ಗಾತ್ರ

ತುಮಕೂರು: ಸಂಖ್ಯೆಯಲ್ಲಿ ಜಿಲ್ಲೆಯ ಅರ್ಧದಷ್ಟಿದ್ದರೂ ಒಂದೇ ಒಂದು ಸೀಟು ಗೆಲ್ಲುವ ಅವಕಾಶವನ್ನೂ ಮಹಿಳೆಯರು ಸೃಷ್ಟಿಸಿಕೊಂಡಿಲ್ಲ. ಆದರೂ ಪತಿಯರ ಗೆಲುವಿಗಾಗಿ ಪತ್ನಿಯರು ನೀಡುತ್ತಿರುವ ಸಾಥ್ ಚುನಾವಣಾ ಕಣದಲ್ಲಿ ರಂಗು ಹೆಚ್ಚಿಸಿದೆ.

ಚುನಾವಣಾ `ಕದನ ಭೂಮಿ'ಯಲ್ಲೆಗ ಪತ್ನಿಯರ ಮತ ತಂತ್ರ ಗಮನ ಸೆಳೆಯತೊಡಗಿದೆ. ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನಂತೆಯೇ ಪತಿ ಪರವಾಗಿ ಪ್ರಚಾರಕ್ಕೆ ಇಳಿಯುತ್ತಿರುವ ಪತ್ನಿಯರು ಮಡಿಲು ತುಂಬಿಸಿಕೊಳ್ಳುತ್ತಾ ಮತಯಾಚನೆ ಗಮನ ಸೆಳೆಯುತ್ತಿದೆ.

ಅಭ್ಯರ್ಥಿಯ ಪತ್ನಿಯೇ ಮತ ಕೇಳಲು ಮನೆ ಬಾಗಿಲಿಗೆ ಬಂದರೆಂದರೆ ಜನ ಸುಲಭವಾಗಿ ಮನ ಸೋಲುತ್ತಾರೆ. ಪ್ರಚಾರದ ಗ್ರಾಫ್ ಕೂಡ ಏರುತ್ತದೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

`ಪ್ರತಿ ಮನೆಗೂ ಅಭ್ಯರ್ಥಿಯೇ ಬಂದು ಮತ ಕೇಳಬೇಕು ಎಂಬುದು ಮತದಾರರ ಬಯಕೆ. ಮನೆ ಬಳಿಗೆ ಹೋಗದಿದ್ದರೆ ಜನ ಮತ ಹಾಕುವುದಿಲ್ಲ. ಅಭ್ಯರ್ಥಿಯೇ ಎಲ್ಲರ ಮನೆಬಾಗಿಲಿಗೂ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಪತ್ನಿಯರು ಮನೆಬಾಗಿಲು ಎಡೆ ತಾಕಬೇಕಾಗಿದೆ.

ಅಭ್ಯರ್ಥಿ ಪತ್ನಿಯೇ ಚುನಾವಣಾ ಕಣದಲ್ಲಿ ಕಾಣಿಸಿಕೊಂಡರೆ ಕಾರ್ಯಕರ್ತರಲ್ಲೂ ಉತ್ಸಾಹ ಇಮ್ಮಡಿಯಾಗುವುದು ಸತ್ಯ' ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜೇಶ್ ದೊಡ್ಮನೆ  ಪ್ರತಿಕ್ರಿಯಿಸಿದರು.

ಜಿಲ್ಲೆಯ ಇತಿಹಾಸ ಕೆದಕಿದರೆ ಇಲ್ಲಿಯವರೆಗೂ ಇಬ್ಬರು ಮಹಿಳೆಯರು ಶಾಸಕರಾಗಿದ್ದಾರೆ. ಭಾಗೀರಥಮ್ಮ ಜಿಲ್ಲೆಯ ಮೊದಲ ಮಹಿಳಾ ಶಾಸಕಿ. ಅವರನ್ನು ಬಿಟ್ಟರೆ ಮಧುಗಿರಿ ಕ್ಷೇತ್ರದಲ್ಲಿ ಆರಿಸಿ ಬಂದ ಅನಿತಾಕುಮಾರ ಸ್ವಾಮಿ ಎರಡನೇ ಮಹಿಳಾ ಶಾಸಕಿ. ಆದರೆ ಜಿಲ್ಲೆಯ ಮಹಿಳೆಯರು ವಿಧಾನಸೌಧದ ಮೆಟ್ಟಲು ಹತ್ತದೇ ಹೋದರೂ ಗಂಡಂದಿರ ಗೆಲುವಿನಲ್ಲಿ ಅವರ ಕೊಡುಗೆ ಮಾತ್ರ ಸಾಕಷ್ಟಿದೆ.
ಗುಬ್ಬಿ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್  ಗೆಲುವಿಗೆ ಅವರ ಪತ್ನಿ ಭಾರತಿ ಇರಲೇಬೇಕು ಎನ್ನುತ್ತಾರೆ ಕಾರ್ಯಕರ್ತರು.

ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಪರ ಅವರ ಪತ್ನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ಇನ್ನಿಲ್ಲದಂತೆ ಬೆವರು ಸುರಿಸುತ್ತಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಎಚ್.ನಿಂಗಪ್ಪ ಪತ್ನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ಮಿಂಚಿನ ಪ್ರಚಾರದಲ್ಲಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಸಿ.ಗೌರಿಶಂಕರ್, ಬಿಜೆಪಿ ಅಭ್ಯರ್ಥಿ ಬಿ.ಸುರೇಶ್‌ಗೌಡ ಪತ್ನಿ ಕೂಡ ಮೊದಲ ಸಲ ಮತ ಕೇಳಲು ಗ್ರಾಮ, ಗ್ರಾಮ ಸುತ್ತತೊಡಗಿದ್ದಾರೆ.

ತುಮಕೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಶಿವಣ್ಣ ಅವರ `ಗೆಲುವಿನ ಶಕ್ತಿ' ಎಂದೇ ಕರೆಯಲಾಗುವ ನಾಗರತ್ನಾ ಈ ಸಲವೂ ಪ್ರಚಾರದಲ್ಲಿದ್ದಾರೆ.

ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿವೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ನಿ ಕನ್ನಿಕಾ ಇದೇ ಮೊದಲ ಸಲ ಮನೆ ಮನೆಯನ್ನೂ ಎಡತಾಕುತ್ತಿದ್ದಾರೆ. ಪರಮೇಶ್ವರ್ ಅವರ ಚುನಾವಣೆ ಇತಿಹಾಸದಲ್ಲಿ ಅವರ ಪತ್ನಿ ಮೊದಲ ಸಲ ಮಹಲು ಬಿಟ್ಟು ಗ್ರಾಮದ ಬೀದಿಗೆ ಬಂದಿದ್ದಾರೆ.

ಮಧುಗಿರಿ ಕ್ಷೇತ್ರದ ಅಭ್ಯರ್ಥಿ ಎಂ.ವಿ. ವೀರಭದ್ರಯ್ಯ ನಿವೃತ್ತ ಐಎಎಸ್ ಅಧಿಕಾರಿ. ಇವರ ಪತ್ನಿ ಗಂಗಮ್ಮ ಕೂಡ ಮೊದಲ ಸಲ ಮಹಲು ಬಿಟ್ಟು ಜನ ಸಾಮಾನ್ಯರತ್ತ ನಡೆದುಬಂದಿದ್ದಾರೆ. ಕುತೂಹಲದ ಕೇಂದ್ರ ಬಿಂದುವಾಗಿರುವ ಈ ಮಹಿಳೆಯರ ಶ್ರಮ ಏನಾದೀತು ಎಂಬುದು ಚುನಾವಣಾ ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.

ಮೊದಲ ಸಲ ಕೈ ಮುಗಿದಾಗ...
ಪ್ರಚಾರದಲ್ಲಿದ್ದ ಪರಮೇಶ್ವರ್ ಪತ್ನಿ ಕನ್ನಿಕಾ ಮಾತಿಗೆ ಸಿಕ್ಕಾಗ ಹೇಳಿದಿಷ್ಟು.

`ಇದೊಂಥರ ಹೊಸ ರೀತಿಯ ಅನುಭವ. ಜನರು ಮರೆಯಲಾರದ ಪ್ರೀತಿ ತೋರುತ್ತಿದ್ದಾರೆ.

ಮಗಳಂತೆ, ಸೊಸೆಯಂತೆ ಕಾಣುತ್ತಿದ್ದಾರೆ. ಬಹುತೇಕ ಮನೆಯವರು ಆರತಿ ಎತ್ತಿ ಸ್ವಾಗತಿಸುವುದು ಸಂಭ್ರಮ ತಂದಿದೆ.
ಯಜಮಾನರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕ್ಷೇತ್ರದಲ್ಲಿ ಓಡಾಡುವುದಿಲ್ಲ ಎಂಬ ಆರೋಪ ಇದೆ.  ಹೀಗಾಗಿ ಮತದಾರರನ್ನು ಕಾಣಬೇಕೆಂದು ಪ್ರಚಾರಕ್ಕೆ ಇಳಿದಿದ್ದೇನೆ. ಇಲ್ಲಿಯ ಅನುಭವ ಕಂಡಾಗ ಮೊದಲಿನಿಂದಲೂ  ಕ್ಷೇತ್ರದ ಜನರೊಂದಿಗೆ ಇರಬೇಕಾಗಿತ್ತು ಎಂದೆನಿಸುತ್ತಿದೆ.

ಜನರ ಪ್ರೀತಿ
ಓದಿರುವುದು ನಾನು ಕಡಿಮೆ. ಹಳ್ಳಿ ಮಗಳು. ಜನ ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಯಜಮಾನರಿಗೆ ವಿಆರ್‌ಎಸ್ ಪಡೆಯಲು ತೊಂದರೆ ಕೊಟ್ಟರು.

ಮೊದಲ ಸಲ ಮತ ಕೇಳುವುದು ಸಂತಸ ತಂದಿದೆ. ಪ್ರಚಾರದ ವೇಳೆ ಮನೆ ಮಗಳಂತೆ ಕಾಣುತ್ತಿರುವುದು ಕಂಡ ಮೂಕವಿಸ್ಮಿತನಾಗಿದ್ದೇನೆ ಎಂದು ಎಂ.ವಿ.ವೀರಭದ್ರಯ್ಯ ಪತ್ನಿ ಗಂಗಮ್ಮ ಹೇಳಿದರು.

ಪ್ರಚಾರಕ್ಕಷ್ಟೇ ಪತ್ನಿ...
ಚುನಾವಣೆಯಲ್ಲಿ ಪ್ರಚಾರಕ್ಕಷ್ಟೇ ಪತ್ನಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಚಾರ ಮಾಡುವುದು ತಪ್ಪಲ್ಲ. ಆದರೆ ಜಿಲ್ಲೆಯಲ್ಲಿ ಮಹಿಳೆಯರಿಗೆ ಸ್ಥಾನವೇ ಇಲ್ಲ. ಗೆಲುವು ಖಚಿತ ಎನ್ನುವಂಥ ಕ್ಷೇತ್ರದಲ್ಲಿ ಯಾವ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಎರಡು ಸಲ, ಮೂರು ಸಲ ಶಾಸಕರಾದರೂ ತಮ್ಮ ಪತ್ನಿಯರಿಗೆ ಅವಕಾಶ ಬಿಟ್ಟುಕೊಟ್ಟಿಲ್ಲ. ಅವರದೇ ಪಕ್ಷದಲ್ಲಿ ಮಹಿಳಾ ನಾಯಕಿಯರನ್ನು ಬೆಳೆಯಲು ಬಿಟ್ಟಿಲ್ಲ. ಪ್ರಚಾರಕ್ಕಷ್ಟೇ ಬಳಸಿಕೊಳ್ಳುವುದು ಯಾವ ನ್ಯಾಯ ಅಲ್ಲವೇ?
-ಆರತಿ ರಾಘವೇಂದ್ರ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT