ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣದಲ್ಲಿ ಮಾಜಿ ಸಚಿವರು

Last Updated 26 ಏಪ್ರಿಲ್ 2013, 6:28 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಅಬ್ಬರದ ಪ್ರಚಾರವಿಲ್ಲದೇ ಇದ್ದರೂ, ಹಾಲಿ, ಮಾಜಿಗಳ ನಡುವೆ ಜಿದ್ದಾಜಿದ್ದಿನ ರಾಜಕೀಯ ಶುರುವಾಗಿದೆ.

ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾಜಿ ಸಚಿವರು ಕಣದಲ್ಲಿ ಉಳಿದಿರುವುದು ಚುನಾವಣೆಗೆ ಮತ್ತಷ್ಟು ಮಹತ್ವ ಬಂದಿದೆ. ಜಿಲ್ಲೆಯ ಗುರುಮಠಕಲ್, ಶಹಾಪುರ, ಸುರಪುರ ಹಾಗೂ ಯಾದಗಿರಿ ಕ್ಷೇತ್ರಗಳಲ್ಲಿ ಮಾಜಿ ಸಚಿವರು ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ವಶಕ್ಕೆ ತೆಗೆದುಕೊಂಡಿತ್ತು. ಒಂದು ಸ್ಥಾನ ಮಾತ್ರ ಬಿಜೆಪಿಯ ಪಾಲಾಗಿತ್ತು. ಇದೀಗ 2013 ರಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವರ ಸ್ಪರ್ಧೆ ಕುತೂಹಲ ಕೆರಳಿಸಿದೆ.

ಯಾದಗಿರಿ ಮತಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ, ಗುರುಮಠಕಲ್‌ನಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ, ಶಹಾಪುರದಲ್ಲಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪೂರ, ಸುರಪುರದಲ್ಲಿ ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ ಹಾಗೂ ನರಸಿಂಹ ನಾಯಕ (ರಾಜುಗೌಡ) ಸ್ಪರ್ಧೆಗೆ ಇಳಿದಿದ್ದಾರೆ.

ತಪ್ಪದ ಸಚಿವ ಸ್ಥಾನ: 2009 ರ ಡಿಸೆಂಬರ್‌ನಲ್ಲಿ ಯಾದಗಿರಿಯು ನೂತನ ಜಿಲ್ಲೆಯಾಗಿ ಘೋಷಣೆ ಆಯಿತು. ಇದಕ್ಕೂ ಮೊದಲು ಗುಲ್ಬರ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ 10 ತಾಲ್ಲೂಕುಗಳ ಗುಲ್ಬರ್ಗ ಜಿಲ್ಲೆಯಲ್ಲಿ ಈಗಿನ ಯಾದಗಿರಿ ಜಿಲ್ಲೆಗೆ ರಾಜಕೀಯವಾಗಿ ಸಾಕಷ್ಟು ಪ್ರಾತಿನಿಧ್ಯ ಸಿಗುತ್ತಲೇ ಬಂದಿತ್ತು.

ಗುರುಮಠಕಲ್ ಮತಕ್ಷೇತ್ರದಿಂದ ಸತತ 8 ಬಾರಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ, ಯಾದಗಿರಿ ಮತಕ್ಷೇತ್ರದಿಂದ ಆಯ್ಕೆಯಾಗಿದ್ದ ಡಾ. ಎ.ಬಿ. ಮಾಲಕರಡ್ಡಿ, ಶಹಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶರಣಬಸಪ್ಪ ದರ್ಶನಾಪೂರ, ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಜನತಾ ಪರಿವಾರದ ಸರ್ಕಾರದಲ್ಲಿ ರಾಜಾ ಮದನಗೋಪಾಲ ನಾಯಕರೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 2008 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸುರಪುರದಿಂದ ಆಯ್ಕೆಯಾದ ನರಸಿಂಹ ನಾಯಕ (ರಾಜುಗೌಡ) ಸಚಿವರಾಗಿ ಕೆಲಸ ಮಾಡಿದ್ದಾರೆ.

ಹೀಗಾಗಿ ಪ್ರತಿ ಚುನಾವಣೆಯಲ್ಲೂ ಜಿಲ್ಲೆಯಿಂದ ಆಯ್ಕೆಯಾಗುವ ಶಾಸಕರಿಗೆ ಸಚಿವ ಸ್ಥಾನ ತಪ್ಪಿಲ್ಲ. ಪ್ರತಿಯೊಂದು ಸರ್ಕಾರದಲ್ಲೂ ಜಿಲ್ಲೆಯ ಸಚಿವರು ಅಧಿಕಾರ ಪಡೆದಿರುವುದು ವಿಶೇಷ.

ಇದೀಗ ನಡೆಯುತ್ತಿರುವ ಈ ಚುನಾವಣಾಯಲ್ಲೂ ಈ ಎಲ್ಲ ಮಾಜಿ ಸಚಿವರು ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಡಾ. ಎ.ಬಿ. ಮಾಲಕರಡ್ಡಿ, ಬಾಬುರಾವ ಚಿಂಚನಸೂರ, ಶರಣಬಸಪ್ಪ ದರ್ಶನಾಪೂರ ಸ್ಪರ್ಧಿಸಿದ್ದಾರೆ.

ಇನ್ನು ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಮದನಗೋಪಾಲ ನಾಯಕ, ಜೆಡಿಎಸ್ ಅಭ್ಯರ್ಥಿಯಾಗಿ ರಾಜುಗೌಡ ಕಣದಲ್ಲಿ ಉಳಿದಿದ್ದಾರೆ.

ಎಲ್ಲ ಮಾಜಿ ಸಚಿವರಿಗೆ ವಿವಿಧ ಪಕ್ಷಗಳ ಪ್ರತಿಸ್ಪರ್ಧಿಗಳು ತೀವ್ರ ಪೈಪೋಟಿ ಒಡ್ಡಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಚುನಾವಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT