ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸುಧಾರಣಾ ಮಸೂದೆಗೆ ಕೇಂದ್ರ ಸಿದ್ಧತೆ

Last Updated 15 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಸರ್ಕಾರವು ಎರಡನೇ ಆಡಳಿತಾತ್ಮಕ ಸುಧಾರಣಾ ಆಯೋಗದ ಶಿಫಾರಸುಗಳನ್ನು ಗಮನದಲ್ಲಿರಿಸಿ, ಮಹತ್ವದ ಚುನಾವಣಾ ಸುಧಾರಣೆ ಮಸೂದೆ ರೂಪಿಸುತ್ತಿರುವುದಾಗಿ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಖಾತೆ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ತಿಳಿಸಿದರು.

ಸಮಾರಂಭವೊಂದರ ನಿಮಿತ್ತ ಗುರುವಾರ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, `ಅಪರಾಧಿಗಳು, ಹಣ ಮತ್ತು ತೋಳ್ಬಲ ಪ್ರದರ್ಶನವನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಈ ಮಸೂದೆ ರೂಪಿಸುತ್ತಿದ್ದು, ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದು~ ಎಂದರು.

`ಚುನಾವಣಾ ಆಯೋಗವನ್ನು ಅತ್ಯಂತ ಪ್ರಬಲ ಮತ್ತು ಶಕ್ತಿಶಾಲಿಗೊಳಿಸುವ ಮೂಲಕ ಅಪರಾಧಿಗಳಿಗೆ ಅವಕಾಶ ನಿರಾಕರಣೆ ಮತ್ತು ಚುನಾವಣೆಯಲ್ಲಿ ಹಣ, ತೊಳ್ಬಲ ಹಾಗೂ ಆಡಳಿತಯಂತ್ರ ದುರುಪಯೋಗ ತಡೆಯುವುದು ಈ ಮಸೂದೆಯ ಉದ್ದೇಶವಾಗಿದೆ. ಕೇಂದ್ರ ಕಾನೂನು ಸಚಿವಾಲಯವು ಪ್ರಧಾನಿ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿ, ಈ ಪ್ರಸ್ತಾವಿತ ಮಸೂದೆಗೆ ಅಂತಿಮ ರೂಪ ನೀಡಲಿದೆ~ ಎಂದರು.

ಭ್ರಷ್ಟಾಚಾರ ನಿರ್ಮೂಲನೆಗಾಗಿ ಆಡಳಿತ ಸುಧಾರಣಾ ಆಯೋಗ ಮಾಡಿರುವ ಶಿಫಾರಸುಗಳನ್ನು ಅಧ್ಯಯನ ಮಾಡಲು ಹಿರಿಯ ಸಚಿವರ ತಂಡವೊಂದನ್ನು ಪ್ರಧಾನಿ ರಚಿಸಿದ್ದು, ಇದು ಈಗಾಗಲೇ 1005 ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ. ಇದರೊಡನೆ, ಪ್ರಬಲ ಲೋಕಪಾಲ ಮಸೂದೆಗೂ ಸರ್ಕಾರ ಬದ್ಧವಾಗಿದ್ದು, ಇದನ್ನು ಸೂಕ್ತ ತಿದ್ದುಪಡಿಗಳೊಡನೆ ಡಿಸೆಂಬರ್ ತಿಂಗಳು ಸಂಸತ್ತಿನಲ್ಲಿ ಮಂಡಿಸಲಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT