ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಪ್ರಚಾರಕ್ಕೆ ಹೈಟೆಕ್ ಸ್ಪರ್ಶ!

Last Updated 20 ಏಪ್ರಿಲ್ 2013, 11:08 IST
ಅಕ್ಷರ ಗಾತ್ರ

ಬೆಳಗಾವಿ: `ಪ್ರಿಯ ಮತದಾರ ಬಾಂಧವರೇ! ನಿಮ್ಮ ಅಮೂಲ್ಯ ಮತವನ್ನು ನಮ್ಮ ಪಕ್ಷದ ಅಭ್ಯರ್ಥಿಗೆ ನೀಡಿ, ಬಹುಮತದಿಂದ ಆರಿಸಿ ತರಬೇಕಾಗಿ ನಮ್ರ ವಿನಂತಿ...!'

ನಾಮಪತ್ರವನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಏಪ್ರಿಲ್ 20ರ ಬಳಿಕ ಕ್ಷೇತ್ರದ ತುಂಬೆಲ್ಲ ಮತಯಾಚನೆಯ ಇಂಥ ಘೋಷಣೆಗಳು ಜನಸಾಮಾನ್ಯರ ಕಿವಿಗೆ ಬೀಳಲಿದೆ. ಜಿಲ್ಲೆಯಾದ್ಯಂತ ಅಭ್ಯರ್ಥಿಗಳು ಭಾನುವಾರದಿಂದ ಅಧಿಕೃತವಾಗಿ ಚುನಾವಣಾ ಪ್ರಚಾರವನ್ನು ಆರಂಭಿಸಲಿ ರುವುದರಿಂದ ಚುನಾವಣಾ ಕಣ ರಂಗೇರಲಿದೆ. ಅದರಲ್ಲೂ ಈ ಬಾರಿ ಚುನಾವಣೆ ಪ್ರಚಾರಕ್ಕೆ ಹೈಟೆಕ್ ಸ್ಪರ್ಶ ದೊರೆತಿರುವುದು ವಿಶೇಷವಾಗಿದೆ.

ಹೌದು, ಚುನಾವಣಾ ಅಖಾಡಕ್ಕಿಳಿದ ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಅನುಸರಿಸುವ ತಂತ್ರಗಳೇ ಒಂದೇ, ಎರಡೇ; ಬ್ಯಾನರ್‌ಗಳು, ಕರಪತ್ರಗಳು, ಆಟೊಗಳಲ್ಲಿ ಕುಳಿತು ಮೈಕ್‌ನಲ್ಲಿ ಪ್ರಚಾರ ಮಾಡು ವುದು... ಹೀಗೆ ಪಟ್ಟಿ ಮುಂದುವರಿ ಯುತ್ತ ಸಾಗುತ್ತದೆ. ಆದರೆ ಸದ್ಯ ಇವುಗಳ ಸ್ಥಾನವನ್ನು ಧ್ವನಿಮುದ್ರಿತ ಸಿಡಿಗಳು ಆಕ್ರಮಿಸಿಕೊಳ್ಳುತ್ತಿದ್ದು, ಎಲ್ಲಿಲ್ಲದ ಬೇಡಿಕೆ ಬಂದಿದೆ.

ಈ ಹಿಂದೆ ಆಟೋ ರಿಕ್ಷಾ, ಕಾರು ಹಾಗೂ ವಿವಿಧ ವಾಹನಗಳಲ್ಲಿ ಪಕ್ಷದ ಕಾರ್ಯಕರ್ತರು ಮೈಕ್ ಹಿಡಿದು ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದರು. ಈ ಎಲ್ಲ ಕಾರ್ಯಚಟುವಟಿಕೆಗಳಿಗೆ ಸದ್ಯ ತೆರೆ ಬಿದ್ದಿದ್ದು, ಅದಕ್ಕೆ ಪರ್ಯಾಯವಾಗಿ ಧ್ವನಿಮುದ್ರಿತ ಸಿಡಿ ಬಳಸಲಾಗುತ್ತಿದೆ.

ಪ್ರಚಾರ ವಾಹನದಲ್ಲಿ ಸಿಡಿಗಳನ್ನು ಹಾಕಿಕೊಂಡು ಕ್ಷೇತ್ರದಾದ್ಯಂತ ಸಂಚರಿಸಿ ದರಾಯಿತು. ಈ ತರಹದ ಧ್ವನಿಮುದ್ರಿತ ಸಿಡಿಗಳನ್ನು ಬೆಳಗಾವಿಯ ಭೋವಿ ಗಲ್ಲಿಯ `ಸರಿಗಮ ಆಡಿಯೋ ರೆಕಾರ್ಡಿಂಗ್ ಸ್ಟುಡೀಯೋ' ಸಿದ್ಧಪಡಿ ಸುತ್ತ ಜನಪ್ರಿಯಗಳಿಸಿದೆ.

`ಸರಿಗಮ'ದ ಮಾಲೀಕರಾದ ಚಂದ್ರಶೇಖರ ಕೌಜಲಗಿ 1997ರಲ್ಲಿ ಧ್ವನಿಮುದ್ರಿತ ಸಿಡಿಗಳನ್ನು ತಯಾರಿಸಲು ಆರಂಭಿಸಿದ್ದು, ಈವರೆಗೆ ಸುಮಾರು 3 ವಿಧಾನಸಭೆ ಚುನಾವಣೆಗೆ ಅವರು ಪ್ರಚಾರ ಸಾಮಗ್ರಿ ಒದಗಿಸಿದ್ದಾರೆ.

ಮುಂಬೈನ ಆನಂದ ಕೇಸರಕರ ಎಂಬುವರ ಬಳಿ 4 ವರ್ಷ ತರಬೇತಿ ಪಡೆದಿರುವ ಚಂದ್ರಶೇಖರ, ಜಿಲ್ಲೆಯಲ್ಲಿ ಧ್ವನಿಮುದ್ರಿತ ಸಿಡಿಗಳನ್ನು ತಯಾರಿಸಿ ನೀಡುತ್ತಿದ್ದಾರೆ.

ಈ ಧ್ವನಿಮುದ್ರಿತ ಸಿಡಿ ನಿರ್ಮಿಸಲು ಅಭ್ಯರ್ಥಿಗಳು ನೀಡುವ ಮಾಹಿತಿಗೆ ಅನುಗುಣವಾಗಿ ಸುಮಂಗಲಾ ರತನಕುಮಾರ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಸ್ಕ್ರಿಪ್ಟ್ ಬರೆಯು ತ್ತಾರೆ. ಇವರ ಕುಟುಂಬದ ಸದಸ್ಯರಾದ ರತನಕುಮಾರ, ಐಶ್ವರ್ಯ, ಪ್ರಫುಲ್‌ಲ್ ಅವರು ಸಹಾಯ ಮಾಡುತ್ತಾರೆ. ನಂತರ ಸ್ಕ್ರಿಪ್ಟ್‌ಗೆ ಅನುಗುಣವಾಗಿ ಚಂದ್ರಶೇಖರ ಅವರು ಧ್ವನಿ ನೀಡುತ್ತಾರೆ. ತದನಂತರ ಅಗತ್ಯಕ್ಕೆ ತಕ್ಕಂತೆ ಧ್ವನಿಮುದ್ರಿತ ಸಿಡಿ ಗಳಲ್ಲಿ ಘೋಷಣೆಗಳ ನಡುವೆ ದೇಶಭಕ್ತಿ ಗೀತೆ, ರಣಕಹಳೆ ಹಾಗೂ ಸಂಗೀತವನ್ನು ಅಳವಡಿಸಿಕೊಡಲಾಗು ತ್ತದೆ. ಸಿಡಿ ನಿರ್ಮಾಣ ಹಾಗೂ ವ್ಯವಹಾರವನ್ನೆಲ್ಲ ರತನಕುಮಾರ ಕೌಜಲಗಿ ಅವರು ನೋಡಿಕೊಳ್ಳುತ್ತಾರೆ.

ಸದ್ಯ ಚುನಾವಣೆ ಸಮಯ ಆದ್ದರಿಂದ ಚಂದ್ರಶೇಖರ ಕೌಜಲಗಿ ಅವರು ಒಂದು ದಿನದಲ್ಲಿ ಧ್ವನಿಮುದ್ರಿತ ಸಿಡಿ ನಿರ್ಮಿಸಿಕೊಡುತ್ತಿದ್ದಾರೆ. ಚುನಾವಣಾ ಪ್ರಚಾರದ ಸಿಡಿಗೆ ರೂ. 2000 ಪಡೆಯುತ್ತಿದ್ದಾರೆ. ಸಭೆ, ಸಮಾರಂಭ ಗಳಿಗೆ 1000ರಿಂದ 1500 ರೂಪಾಯಿ ಪಡೆಯುತ್ತಿದ್ದಾರೆ. ಕನ್ನಡ, ಮರಾಠಿ, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ಕೌಜಲಗಿ ಅವರು ಧ್ವನಿ ಮುದ್ರಿತ ಸಿಡಿ ನಿರ್ಮಿಸುತ್ತಾರೆ.

ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ತಾವು ಸುಮಾರು 100 ಧ್ವನಿ ಮುದ್ರಿತ ಸಿಡಿಗಳನ್ನು ನಿರ್ಮಿಸಿ ಕೊಟ್ಟಿದ್ದೇವೆ. ಸದ್ಯ ವಿಧಾನಸಭೆ ಚುನಾವಣೆಗೆ ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಬೈಲಹೊಂಗಲ, ರಾಮದುರ್ಗ, ಅಥಣಿ, ಸವದತ್ತಿಯಿಂದ ಸ್ಪರ್ಧಿಸುತ್ತಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸಿಡಿ ನಿರ್ಮಿಸಿಕೊಡಲು ಅಭ್ಯರ್ಥಿಗಳಿಂದ ಬೇಡಿಕೆ ಬಂದಿದೆ. ವರ್ಷದಿಂದ ವರ್ಷಕ್ಕೆ ಧ್ವನಿಮುದ್ರಿತ ಸಿಡಿಗಳಿಗೆ ಬೇಡಿಕೆ ಹೆಚ್ಚುತ್ತಿತ್ತಿದೆ' ಎಂದು ರತನಕುಮಾರ ಕೌಜಲಗಿ ಹರ್ಷ ವ್ಯಕ್ತಪಡಿಸುತ್ತಾರೆ.

ಸದ್ಯದ ವಿಧಾನಸಭೆ ಚುನಾವಣೆಗೆ ಸಿಡಿ ನಿರ್ಮಿಸಲು ಈಗಾಗಲೇ ಸಾಕಷ್ಟು ಬೇಡಿಕೆಗಳು ಬಂದಿವೆ. ಸಮಯದ ಕೊರತೆಯಿಂದ ಕೆಲವೇ ಸಿಡಿಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಕಳೆದ 5 ವರ್ಷಗಳಿಂದ ಧ್ವನಿಮುದ್ರಿತ ಸಿಡಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಪ್ರತಿ ಸಾರಿ ನಗರ ಪ್ರದೇಶದಲ್ಲಿನ ಅಭ್ಯರ್ಥಿಗಳು ಸಿಡಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಈ ಬಾರಿ ಜಿಲ್ಲೆಯ ವಿವಿಧೆಡೆಗಳಿಂದ ಅಭ್ಯರ್ಥಿಗಳು ಆಗಮಿಸುತ್ತಿದ್ದಾರೆ ಎಂದು ಚಂದ್ರಶೇಖರ ಕೌಜಲಗಿ `ಪ್ರಜಾವಾಣಿ'ಗೆ ತಿಳಿಸಿದರು.

ಕುಗ್ಗಿದ ಬೇಡಿಕೆ: ಒಂದೆಡೆ ಧ್ವನಿಮುದ್ರಿತ ಸಿಡಿಗಳ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಪ್ರಮುಖ ಪ್ರಚಾರ ಸಾಮಗ್ರಿ ಎನಿಸಿಕೊಂಡಿದ್ದ ಬ್ಯಾನರ್‌ಗಳು ಗ್ರಾಹಕರು ನಿರೀಕ್ಷೆಯಲ್ಲಿವೆ. ಕೆಲವೇ ವರ್ಷಗಳ ಹಿಂದೆ ಪಕ್ಷದ ಕಾರ್ಯಕರ್ತ ರಿಂದ ತುಂಬಿ ತುಳುಕುತ್ತಿದ್ದ ಬ್ಯಾನರ್ ತಯಾರಿಸುವ ಅಂಗಡಿಗಳು ಗ್ರಾಹಕರ ಕೊರತೆಯಿಂದ ಬಳಲುತ್ತಿವೆ. ಇದಕ್ಕೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮವು ಕಾರಣ ಎಂದು ಹೇಳಲಾಗು ತ್ತಿದೆ. ಚುನಾವಣಾ ಆಯೋಗವು ಖರ್ಚು ವೆಚ್ಚದ ಮೇಲೆ ನಿಗಾ ವಹಿಸಿ ರುವ ಕಾರಣ ಅಭ್ಯರ್ಥಿಗಳು ಬ್ಯಾನರ್‌ಗಳನ್ನು ನಿರ್ಮಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ವ್ಯಾಪಾರವು ಸಂಪೂರ್ಣ ಕಳೆಗುಂದಿದೆ ಎನ್ನುತ್ತಾರೆ ಖಡೇ ಬಜಾರಿನ ಅಂಗಡಿಯೊಂದರ ಮಾಲೀಕ ಪ್ರಮೋದ ಕಾಕಡೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT