ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಳಿಕ ಮಮತಾಗೆ ಕಾಂಗ್ರೆಸ್ ಉತ್ತರ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಮೇಲೆ ತಿರುಗಿ ಬಿದ್ದಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಉತ್ತರ ಪ್ರದೇಶ ಚುನಾವಣೆ ಮುಗಿಯುವವರೆಗೂ ತಾಳ್ಮೆಯಿಂದ ಸಹಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

ಹೆಜ್ಜೆಹೆಜ್ಜೆಗೂ ಮಮತಾ ಅವರಿಂದ ಅಡ್ಡಿ-ಆತಂಕಗಳನ್ನು ಎದುರಿಸುತ್ತಿರುವ ಯುಪಿಎ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಕಡೆ ಆಸೆಗಣ್ಣಿನಿಂದ ನೋಡುತ್ತಿದೆ. ಆದರೆ, ಯುಪಿಎ  ಮೈತ್ರಿಕೂಟಕ್ಕೆ ಎಸ್‌ಪಿಗೆ ಅಧಿಕೃತವಾಗಿ ಆಹ್ವಾನ ನೀಡಲು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಕಾಯಲು ತೀರ್ಮಾನಿಸಿದೆ.

ಈ ಚುನಾವಣೆಯಲ್ಲಿ ಮೊದಲ ಸ್ಥಾನಕ್ಕಾಗಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷದ ನಡುವೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ ಎಂಬ ವಾಸ್ತವದ ಅರಿವು ಈ ಪಕ್ಷದ ಮುಖಂಡರಿಗಿದೆ. ಎಸ್‌ಪಿ ಅತೀ ಹೆಚ್ಚು ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಬೆಂಬಲ ನೀಡಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ, ಕಾಂಗ್ರೆಸ್- ಆರ್‌ಎಲ್‌ಡಿ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯವಾದರೆ ಕೇಂದ್ರದಲ್ಲಿ ಮುಲಾಯಂಸಿಂಗ್ ಸರ್ಕಾರ ಸೇರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ಹೋರಾಟ ನಡೆಸಬೇಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಮುಂದಿನ ಹಾದಿ ಯಾವುದೆಂಬ ಗುಟ್ಟು ಬಿಡುತ್ತಿಲ್ಲ. ಎಲ್ಲ ಲೆಕ್ಕಾಚಾರದಂತೆ ನಡೆದು ಮುಲಾಯಂ  ಜತೆ ಸಂಬಂಧ ಸಾಧ್ಯವಾದರೆ ಮೈತ್ರಿಕೂಟದಿಂದ ಟಿಎಂಸಿಯನ್ನು ಹೊರ ಹಾಕುವ ಆಲೋಚನೆಯನ್ನು ಕಾಂಗ್ರೆಸ್ ಹೊಂದಿದೆ.

ಮುಲಾಯಂ ಅಥವಾ ಲಾಲು ಪ್ರಸಾದ್ ಜತೆ ಸಖ್ಯ ಕಾಂಗ್ರೆಸ್‌ಗೇನೂ ಕಷ್ಟವಲ್ಲ. ಯುಪಿಎ ಸರ್ಕಾರಕ್ಕೆ ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಜೆಡಿ ಹೊರಗಿನಿಂದ ಬೆಂಬಲಿಸುತ್ತಿವೆ. ಕೆಲವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರ್ಕಾರದ `ಕೈ~ ಹಿಡಿದಿವೆ. ಲೋಕಸಭೆಯಲ್ಲಿ ವಿವಾದಿತ `ಲೋಕಪಾಲ ಮಸೂದೆ~ ಮೇಲೆ ಮತದಾನ ನಡೆದಾಗ ಮೂರೂ ಪಕ್ಷಗಳು ಸಭಾತ್ಯಾಗ ಮಾಡಿ ಮಸೂದೆ ಅಂಗೀಕಾರಕ್ಕೆ ಸಹಕರಿಸಿವೆ.

ಆದರೆ, ಯುಪಿಎ ಭಾಗವಾದ ಟಿಎಂಸಿ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕೆಳಮನೆಯಲ್ಲಿ ಲೋಕಪಾಲ ಮಸೂದೆ ಬೆಂಬಲಿಸಿದ ಮಮತಾ ಪಕ್ಷ ರಾಜ್ಯಸಭೆಯಲ್ಲಿ ಬೆನ್ನು ತಿರುಗಿಸಿದೆ. `ಯಾವುದೇ ಕಾರಣಕ್ಕೂ ರಾಜ್ಯಗಳ ಅಧಿಕಾರ ಕಬಳಿಸಲು ಅವಕಾಶ ಕೊಡುವುದಿಲ್ಲ~ ಎಂದು ಹೇಳಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ `ಲೋಕಾಯುಕ್ತ ಉಪಬಂಧ~ಗಳಿಗೆ ಕೆಲವು ಬದಲಾವಣೆ ಸೂಚಿಸಿದೆ.

ಇದಕ್ಕೆ ಮುನ್ನ ಚಿಲ್ಲರೆ ಮಾರಾಟದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೂ ವಿರೋಧ ಮಾಡಿದೆ. ಪೆಟ್ರೋಲ್ ಬೆಲೆ ಹೆಚ್ಚಳ ತೀರ್ಮಾನಗಳಿಗೂ ಸೊಪ್ಪು ಹಾಕಲಿಲ್ಲ. ಮಿತ್ರ ಪಕ್ಷ ಟಿಎಂಸಿ ಈ ನಡೆ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ. ಕೋಲ್ಕತ್ತದ ಇಂದಿರಾ ಭವನಕ್ಕೆ ಖಾಜಿ ನಜರುಲ್ ಇಸ್ಲಾಂ ಅವರ ಹೆಸರನ್ನು ನಾಮಕರಣ ಮಾಡಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮುಂದಾಗುವ ಮೂಲಕ ಉಭಯ ಪಕ್ಷಗಳ ನಡುವಿನ ಕಿತ್ತಾಟ ಸರಿಪಡಿಸಲಾಗದ ಮಟ್ಟಕ್ಕೆ ತಲುಪಿದೆ.

ಮಮತಾ ನಡವಳಿಕೆಯಿಂದ ಬೇಸತ್ತಿರುವ ಕಾಂಗ್ರೆಸ್ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಜತೆ ಕೈ ಜೋಡಿಸಿದೆ. ಅಜಿತ್‌ಸಿಂಗ್ ಅವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡುವ ಮೂಲಕ ಐವರು ಸಂಸದರ ಬೆಂಬಲ ಪಡೆದಿದೆ. ಚುನಾವಣೆ ಬಳಿಕ ಮುಲಾಯಂ ಪಕ್ಷದ 22 ಸಂಸದರ ಬೆಂಬಲ ಗಳಿಸಲು ಸಾಧ್ಯವಾದರೆ ಟಿಎಂಸಿಯನ್ನು ಹೊರ ಹಾಕಲಾಗುವುದು ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.

 `ಕಾಂಗ್ರೆಸ್‌ಗೆ ತನ್ನ ಸಖ್ಯ ಬೇಡವಾದರೆ ಸರ್ಕಾರದಿಂದ ಹೊರ ಹೋಗಬಹುದು~ ಎಂದು ಮಮತಾ ನೇರವಾಗಿ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ತಾಳ್ಮೆಯಿಂದ ನಡೆದುಕೊಳ್ಳುತ್ತಿದೆ. `ಮಿತ್ರ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಪರಸ್ಪರ ಚರ್ಚೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ~ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಸ್ಪಷ್ಟಪಡಿಸಿದ್ದಾರೆ. ಅಕಸ್ಮಾತ್ ಟಿಎಂಸಿ,  ಯುಪಿಎ ಮೈತ್ರಿಕೂಟ ತ್ಯಜಿಸಿದರೆ ಮಮತಾ ಅವರ ಸಾಂಪ್ರದಾಯಿಕ ಎದುರಾಳಿ ಎಡಪಕ್ಷಗಳು ಯುಪಿಎಗೆ ಬೆಂಬಲ ಕೊಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT