ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸಿದ್ಧತೆಗಿಲ್ಲ ಬರ!

Last Updated 16 ಜನವರಿ 2013, 9:14 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಸತತ ಎರಡು ವರ್ಷಗಳಿಂದ `ಬರ' ಕಾಣಿಸಿಕೊಂಡಿದ್ದರೂ, ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಅದರ ಛಾಯೆ ಮೂಡುವ ಲಕ್ಷಣಗಳಿಲ್ಲ. ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಚುನಾವಣಾ ಸಿದ್ಧತಾ ಕಾರ್ಯವನ್ನು ಭರದಿಂದ ನಡೆಸಿದ್ದಾರೆ.

ಜಿಲ್ಲೆಯ ಹುಕ್ಕೇರಿ, ಯಮಕನಮರಡಿ, ಚಿಕ್ಕೋಡಿ- ಸದಲಗಾ, ನಿಪ್ಪಾಣಿ, ರಾಯಬಾಗ, ಕುಡಚಿ, ಅಥಣಿ, ಕಾಗವಾಡ, ಅರಭಾವಿ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿಯ ಐವರು ಹಾಗೂ ಕಾಂಗ್ರೆಸ್‌ನ ನಾಲ್ವರು ಗೆದ್ದಿದ್ದರು. ಹಾಲಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪುನರಾಯ್ಕೆಯಾಗಲು ಚುನಾವಣಾ ತಂತ್ರಗಳನ್ನು ಹೆಣೆಯಲು ಈಗಾಗಲೇ ಆರಂಭಿಸಿದ್ದಾರೆ. ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ತರಾತುರಿಯಲ್ಲಿ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲು ಪೈಪೋಟಿ ನಡೆಸಿದ್ದಾರೆ.

ಹುಕ್ಕೇರಿ ಕ್ಷೇತ್ರ: ಹುಕ್ಕೇರಿಯು ವ್ಯಕ್ತಿ ಕೇಂದ್ರಿತ ವಿಧಾನಸಭಾ ಕ್ಷೇತ್ರವಾಗಿದೆ. ಎರಡು ದಶಕಗಳಿಂದ ವಿವಿಧ ಪಕ್ಷಗಳಿಂದ ಗೆದ್ದು ಬಂದಿರುವ ಸಚಿವ ಉಮೇಶ ಕತ್ತಿ ಈ ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲ ಕ್ಷೇತ್ರದ ಜನರಲ್ಲಿ ಮೂಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಕತ್ತಿ ಒಂದೊಮ್ಮೆ ಕೆಜೆಪಿಯಿಂದ ಸ್ಪರ್ಧಿಸಿದರೆ, ಮಾಜಿ ಸಚಿವ ಶಶಿಕಾಂತ ನಾಯಿಕ ಬಿಜೆಪಿಯಿಂದ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ.

ಕಾಂಗ್ರೆಸ್‌ನಲ್ಲಿ ರವಿ ಕರಾಳೆ, ಪ್ರಕಾಶ ದೇಶಪಾಂಡೆ, ಜಯಪ್ರಕಾಶ ನಲವಡೆ, ರಾಜು ಸಿದ್ನಾಳ ಹೆಸರುಗಳು ಕೇಳಿ ಬರುತ್ತಿವೆ. ಜೆಡಿಎಸ್‌ನಲ್ಲಿ ಬಸವರಾಜ ಮಟಗಾರ, ಭೀಮಗೌಡ ಪಾಟೀಲ ಚುನಾವಣೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.

ಯಮಕನಮರಡಿ ಕ್ಷೇತ್ರ: ಕಾಂಗ್ರೆಸ್‌ನಿಂದ ಶಾಸಕ ಸತೀಶ ಜಾರಕಿಹೊಳಿ ಪುನರಾಯ್ಕೆ ಬಯಸಿ ಸ್ಪರ್ಧಿಸುವುದು ಬಹುತೇಕ ಖಚಿತ. ಬಿಜೆಪಿಯ ಎಂ.ಎಲ್. ಮುತ್ತೆಣ್ಣವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದರೆ, ಜೆಡಿಎಸ್‌ನಲ್ಲಿ ಸುಭಾಸ ಕರನಿಂಗ್, ರಂಜನೀಶ ಆಚಾರ್ಯ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಲಖನ್ ಜಾರಕಿಹೊಳಿ ಈಗಾಗಲೇ ಕ್ಷೇತ್ರದಲ್ಲಿ ಹಲವು ಬಾರಿ ಸಂಚರಿಸಿದ್ದು, ಕೊನೆ ಕ್ಷಣದಲ್ಲಿ ಕಾಂಗ್ರೆಸ್ಸೇತರ ಯಾವುದಾದರೂ ಒಂದು ಪಕ್ಷದಿಂದ ಚುನಾವಣೆ ಎದುರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಚಿಕ್ಕೋಡಿ- ಸದಲಗಾ ಕ್ಷೇತ್ರ: ಚಿಕ್ಕೋಡಿ- ಸದಲಗಾ ಕೂಡ ವ್ಯಕ್ತಿ ಕೇಂದ್ರಿತ ಕ್ಷೇತ್ರವಾಗಿದೆ. ಈಗಾಗಲೇ ನಾಲ್ಕು ಬಾರಿ ಚುನಾಯಿತರಾಗಿರುವ  ಪ್ರಕಾಶ ಹುಕ್ಕೇರಿ ಐದನೇ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ.

ತುಕಾರಾಮ್ ಯಮನಪ್ಪ ಕಿವಡ ಸಹ  ಆಕಾಂಕ್ಷಿಯಾಗಿದ್ದರೂ ಕಾಂಗ್ರೆಸ್ ಟಿಕೆಟ್ ಹುಕ್ಕೇರಿಯವರಿಗೆ ಸಿಗುವುದು ಬಹುತೇಕ ಖಚಿತ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಅವರ ಹೆಸರು ಕೇಳಿ ಬರುತ್ತಿದೆ. ಆದರೆ, ಈಗಾಗಲೇ ಅವರು ಎಂಎಲ್‌ಸಿ ಆಗಿರುವುದರಿಂದ ಅವರ ಸಹೋದರ ಜಗದೀಶ ಕವಟಗಿಮಠ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಜೊತೆಗೆ ಮಹಾಂತೇಶ ಕವಟಗಿಮಠ ಅವರು ಕೆಜೆಪಿಯತ್ತ ಹೋಗಲಿದ್ದಾರೆಯೋ ಎಂಬ ಕುತೂಹಲವೂ ಮೂಡಿದೆ.

ಜೆಡಿಎಸ್‌ನಲ್ಲಿ ಮಾಜಿ ಶಾಸಕ ಕಲ್ಲಪ್ಪ ಪಾರಿಸಾ ಮಗೆನ್ನವರ, ಡಾ. ಅಣ್ಣಪ್ಪ ಮಗದುಮ್, ದಯಾನಂದ ಮಠಪತಿ, ಕಿರಣ ಕೋರೆ ಅವರ ಹೆಸರು ಕೇಳಿ ಬರುತ್ತಿವೆ. ಬಿಎಸ್‌ಪಿಯಿಂದ ಟಿಕೆಟ್ ಪಡೆಯಲು ಡಾ. ರಾಜೀವ ಕಾಂಬಳೆ, ವೀರಸಿಂಗ್ ದೇಸಾಯಿ ಘೋರ್ಪಡೆ, ಮಚಂದ್ರ ಕಾಡಾಪುರೆ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ. ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಕ್ಷೇತ್ರದಲ್ಲಿ ನೆಲೆ ಕಾಣದೇ ಇರುವುದರಿಂದ ಅಭ್ಯರ್ಥಿಗಳ ಆಯ್ಕೆ ಕೊನೆ ಕ್ಷಣದಲ್ಲಿ ನಡೆಯಲಿದೆ.

ನಿಪ್ಪಾಣಿ ಕ್ಷೇತ್ರ: ಶಾಸಕ ಕಾಕಾಸಾಹೇಬ ಪಾಟೀಲ ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿ ಸ್ಪರ್ಧಿಸಲಿದ್ದಾರೆ. ಅಶೋಕಕುಮಾರ ಅಸೋದೆ, ಲಕ್ಷ್ಮಣರಾವ್ ಚಿಂಗಳೆ ಆಕಾಂಕ್ಷಿಗಳಾಗ್ದ್ದಿದಾರೆ. ಬಿಜೆಪಿ ಟಿಕೆಟ್‌ಗಾಗಿ ಶಶಿಕಲಾ ಜೊಲ್ಲೆ ಹಾಗೂ ಶುಭಾಂಗಿ ಜೋಶಿ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಶಶಿಕಲಾ ಜೊಲ್ಲೆ  ಕೆಜೆಪಿ ಜತೆಯೂ ಕಾಣಿಸಿಕೊಂಡಿರುವುದರಿಂದ ಇವರ ನಡೆಯ ಮೇಲೆ ಬಿಜೆಪಿಯ ಟಿಕೆಟ್ ನಿರ್ಧಾರಗೊಳ್ಳಲಿದೆ. ಜೆಡಿಎಸ್‌ನಿಂದ ಸುನಿತಾ ಹೊನಕಾಂಬಳೆ ಸ್ಪರ್ಧಿಸಬಹುದು. ನಿಪ್ಪಾಣಿಯಲ್ಲಿ ಎಂಇಎಸ್ ಹಾಗೂ ಶಿವಸೇನೆಯ ಶಕ್ತಿ ಕುಂದಿದ್ದರಿಂದ ಈ ಬಾರಿ ಇವರ ಪ್ರತಿನಿಧಿಗಳು ಸ್ಪರ್ಧಿಸುವುದು ಅನುಮಾನವಿದೆ.

ರಾಯಬಾಗ ಕ್ಷೇತ್ರ: ರಾಯಬಾಗ ಕ್ಷೇತ್ರದಲ್ಲಿ ಹಾಲಿ ಶಾಸಕ ದುರ್ಯೋದನ ಐಹೊಳೆ ಮತ್ತೆ ಬಿಜೆಪಿಯಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಬಿ.ಎಸ್. ಬಾಗೇವಾಡಿ, ಓಂಪ್ರಕಾಶ ಕಣಗಲಿ, ಉತ್ತಮಕುಮಾರ ಶಿಂಧೆ, ರಾಜು ಎಸ್ ಶಿರಗಾಂವಿ ಅವರ ನಡುವೆ ಸ್ಪರ್ಧೆ ನಡೆಯಲಿದೆ. ಜೆಡಿಎಸ್‌ನಲ್ಲಿ ಬಾಳಾಸಾಹೇಬ ವಡ್ಡರ  ಹೆಸರು ಮಾತ್ರ ಪ್ರಬಲವಾಗಿ ಕೇಳಿ ಬರುತ್ತಿದೆ. ಕ್ಷೇತ್ರದಲ್ಲಿ ಇನ್ನೂ ಸಮರ್ಪಕವಾಗಿ ಸಂಘಟನೆಯಾಗದ ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿದೆ.

ಕುಡಚಿ ಕ್ಷೇತ್ರ:  ಕುಡಚಿ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಸ್ಪರ್ಧೆ ನಡೆಯಲಿದೆ. ಹಾಲಿ ಶಾಸಕ ಎಸ್.ಬಿ. ಘಾಟಗೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಇವರಿಗೆ ಕಳೆದ ಬಾರಿ ಸ್ವತಂತ್ರವಾಗಿ ಪ್ರಬಲ ಸ್ಪರ್ಧೆಯೊಡ್ಡಿದ್ದ ಪಿ. ರಾಜೀವ್ ಈ ಬಾರಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿಯಲ್ಲಿ ಮಹೇಶ ತಮ್ಮಣ್ಣವರ ಹಾಗೂ ಜಿ.ಪಂ. ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ಹೆಸರು ಮುಂಚೂಣಿಯಲ್ಲಿದೆ. ಜೆಡಿಎಸ್‌ನಲ್ಲಿ ಶಾಂತಾರಾಮ್ ಸಣ್ಣಕ್ಕಿ, ಡಿ.ಟಿ. ಕದಂ, ರಾಜು ತಳವಾರ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಇನ್ನು ಡಿಎಸ್‌ಎಸ್ ರಾಜ್ಯ ಸಂಚಾಲಕ ಬೆಂಗಳೂರಿನ ಮೋಹನ್‌ರಾಜ್ ಎಂಬುವವರು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಯಬಾಗ ಅಥವಾ ಕುಡಚಿ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಥಣಿ ಕ್ಷೇತ್ರ: ಬಿಜೆಪಿಯಿಂದ ಮಾಜಿ ಸಚಿವ ಲಕ್ಷ್ಮಣ ಸವದಿ ಪುನರಾಯ್ಕೆ ಬಯಸಿ ಸ್ಪರ್ಧಿಸುವ ನಿರೀಕ್ಷೆ ಇದೆ. ಆದರೆ, ಕೊನೆ ಕ್ಷಣದಲ್ಲಿ ಸವದಿ ಅವರು ಕೆಜೆಪಿಯಿಂದ ಸ್ಪರ್ಧಿಸಿದರೆ, ಉಮೇಶರಾವ್ ಬೊಂಟಡಕರ ಅವರಿಗೆ ಬಿಜೆಪಿ ಟಿಕೆಟ್ ಲಭಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಶಹಜಹಾನ್ ಡೊಂಗರಗಾಂವ್, ಮಹೇಶ ಕುಮಟಳ್ಳಿ, ಗಜಾನನ ಮಂಗಸೂಳಿ, ಕಿರಣಗೌಡ ಪಾಟೀಲ ಮುಂಚೂಣಿಯಲ್ಲಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಸದಾಶಿವ ಬೊಟಾಳಿ, ಸಂಗನಗೌಡ ಪಾಟೀಲ, ಸಯ್ಯದ್ ಅಮಿನ್ ಗದ್ಯಾಳ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.

ಕಾಗವಾಡ ಕ್ಷೇತ್ರ: ಬಿಜೆಪಿಯಿಂದ ಶಾಸಕ ರಾಜು ಕಾಗೆ ಪುನಃ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನಲ್ಲಿ ದಿಗ್ವಿಜಯಸಿಂಗ್ ಪವಾರ ದೇಸಾಯಿ, ಅಮರಸಿಂಹ ಪಾಟೀಲರ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್‌ನಲ್ಲಿ ಶ್ರೀಮಂತ ಪಾಟೀಲ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯ ಮುಖಂಡರಾದ ಅಜಿತ್ ಚೌಗಲಾ ಕೆಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಅರಭಾವಿ ಕ್ಷೇತ್ರ: ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ತೆರೆಮರೆಯ ಕಸರತ್ತು ನಡೆದಿದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಅರಭಾವಿ ಕ್ಷೇತ್ರದಲ್ಲಿ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲ ಮೂಡತೊಡಗಿದೆ. ಬಿಜೆಪಿಯಲ್ಲೇ ಉಳಿದುಕೊಂಡರೆ, ಅವರಿಗೇ ಟಿಕೆಟ್ ಖಚಿತ. ಪಕ್ಷವನ್ನು ತೊರೆದರೆ, ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿವೇಕ ಪಾಟೀಲ ಪುನಃ ಬಿಜೆಪಿಯಿಂದ ಕಣಕ್ಕಿಳಿಯಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಕಾಂಗ್ರೆಸ್‌ನಲ್ಲಿ ಬಿ.ಬಿ. ಬೆಳಕೂಡ ಹೆಸರು ಮುಂಚೂಣಿಯಲ್ಲಿದೆ. ಕೆಜೆಪಿಯಿಂದ ಜಿ.ಪಂ. ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT