ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗಳಿಂದ ಹೊಸ ಕುಡುಕರ ಸೃಷ್ಟಿ

ಸಚ್ಚಿದಾನಂದ ಹೆಗಡೆ ವಿಷಾದ
Last Updated 22 ಏಪ್ರಿಲ್ 2013, 8:09 IST
ಅಕ್ಷರ ಗಾತ್ರ

ಮೈಸೂರು: ಪ್ರತಿ ಬಾರಿ ಚುನಾವಣೆಯಲ್ಲಿಯೂ 16 ಲಕ್ಷಕ್ಕೂ ಹೆಚ್ಚು ಜನರು ಕುಡಿತದ ಚಟಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಾರೆ. ಹೊಸವರ್ಷದ ಮುನ್ನಾದಿನದ ಪಾರ್ಟಿಗಳ ಮೂಲಕ 25 ಲಕ್ಷ ಜನರು ಕುಡಿತ ಆರಂಭಿಸುತ್ತಾರೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು (ಎನ್‌ಎಸ್‌ಎಸ್) ಭಾನುವಾರ 38ನೇ ಅಂತರ ಕಾಲೇಜು ವಾರ್ಷಿಕ ಶಿಬಿರದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

`ಪುಕ್ಕಟೆ ಕುಡಿಯಲು ಸಿಗುತ್ತದೆ ಮತ್ತು ಬಾಡೂಟವೂ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾಗಿ ಹಲವರು ಕುಡಿತ ಆರಂಭಿಸುತ್ತಾರೆ. ಎಲ್ಲ ಪ್ರಾಣಿಗಳಿಗೂ ಒಂದೇ ಹಂತದ ಮಿದುಳು ಇರುತ್ತದೆ. ಆದರೆ ಮನುಷ್ಯರ ಮಿದುಳಿನಲ್ಲಿ  ಎರಡು ಹಂತವಿರುತ್ತದೆ. ಒಂದು ಹಂತವು ದಿನನಿತ್ಯದ ಸಹಜವಾದ ಕಾರ್ಯಗಳಿಗೆ ಸೀಮಿತವಾಗಿರುತ್ತದೆ. ಆದರೆ ಉನ್ನತ ಹಂತದ ಮಿದುಳು ಬೌದ್ಧಿಕ ಚಟುವಟಿಕೆಗಳನ್ನು ಪ್ರಚೋದಿಸುತ್ತದೆ. ಆದರೆ ಮದ್ಯಪಾನ ಮಾಡಿದಾಗ ಉನ್ನತ ಹಂತದ ಮಿದುಳು ತನ್ನ ಕ್ರಿಯಾಶೀಲತೆ ಕಳೆದುಕೊಳ್ಳುತ್ತದೆ. ಆಗ ಮನುಷ್ಯ ವಿವೇಚನಾರಹಿತ ವರ್ತನೆ ಮಾಡುತ್ತಾನೆ. ಇದರಿಂದ ಯಾವ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂಬ ಯೋಚನೆಯನ್ನೂ ಮಾಡದಂತಾಗುತ್ತಾನೆ' ಎಂದು ವಿವರಿಸಿದರು.

`ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ದುಷ್ಕರ್ಮಿಗಳಲ್ಲಿ ಶೇ 70ರಷ್ಟು ಮಂದಿ ಮದ್ಯಪಾನ ಮಾಡಿರುತ್ತಾರೆ. ಇದರಿಂದ ಅವರ ಮನದಲ್ಲಿ ಕರುಣೆ, ವಿವೇಚನೆ, ಸೌಜನ್ಯಗಳು ಇರುವುದೇ ಇಲ್ಲ. ರಸ್ತೆ ಅಪಘಾತಗಳು ಬಹುತೇಕ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದಲೇ ಆಗುತ್ತಿವೆ. ದೆಹಲಿ ಅತ್ಯಾಚಾರ ಪ್ರಕರಣದ ಆರೋಪಿಗಳೂ ಪಾನಮತ್ತರಾಗಿದ್ದರು. ಆದರೆ ಆ ಪ್ರಕರಣದಲ್ಲಿ ಮಾಧ್ಯಮಗಳು ಮತ್ತು ಜನರಲ್ಲಿ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಕುರಿತು ಬಹಳಷ್ಟು ಚರ್ಚೆಗಳಾದವು. ಆದರೆ ಮೂಲ ಕಾರಣವಾದ ಮದ್ಯಪಾನದ ಬಗ್ಗೆ ಚರ್ಚೆ ಆಗದಿರುವುದು ಬೇಸರದ ಸಂಗತಿ' ಎಂದು ಹೇಳಿದರು.

`ನಮ್ಮ ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 31 ರಂದು ಹೊಸ ವರ್ಷದ ಸ್ವಾಗತಕ್ಕಾಗಿ ಮತ್ತು ಮೋಜಿಗಾಗಿ ಕುಡಿತ ಆರಂಭಿಸುವವರ ಹೆಚ್ಚಿನ ಪ್ರಮಾ ಣದಲ್ಲಿದ್ದಾರೆ. ಅಲ್ಲದೇ ಕಾಲೇಜು ವಾರ್ಷಿಕೋತ್ಸವ ಮತ್ತಿತರ ಉತ್ಸವಗಳ ನೆಪದಲ್ಲಿ ಕುಡಿತಕ್ಕೆ ಬೀಳುವವರೂ ಬಹಳಷ್ಟಿದ್ದಾರೆ. ಕುಡಿತ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದ ಖುಷಿ, ಸುಖ ಸಿಗುತ್ತದೆ ಎನ್ನುವುದು ಒಂದು ಭ್ರಮೆ. ಶೇ 56ರಷ್ಟು ಜನಸಂಖ್ಯೆಯಷ್ಟಿರುವ ಯುವಕ-ಯುವತಿಯರು ಈ ದೇಶದ ಭವಿಷ್ಯವನ್ನು ಬದಲಾಯಿಸಿಬಿಡಬಲ್ಲರು. ಆದರೆ ಬಹುಪಾಲು ಯುವಜನರು ವ್ಯಸನಗಳಿಗೆ ದಾಸರಾಗುತ್ತಿರುವುದು, ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗುತ್ತಿದೆ' ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT