ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚುನಾವಣೆಗೂ ಮುನ್ನ ಕಾಮಗಾರಿ ಮುಗಿಸಿ'

Last Updated 10 ಜುಲೈ 2013, 10:41 IST
ಅಕ್ಷರ ಗಾತ್ರ

ಶಿವಮೊಗ್ಗ: ಸದ್ಯದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಸಂಸದರ ಅನುದಾನದಡಿ ಉದ್ದೇಶಿತ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾ ನೀತಿ ಸಂಹಿತಿ ಜಾರಿಯಾದರೆ ಕಾಮಗಾರಿ ಅನುಷ್ಠಾನ ಕಷ್ಟವಾಗುತ್ತದೆ. ಆದ್ದರಿಂದ ತ್ವರಿತವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸಭೆಗೆ ಮಾಹಿತಿ ನೀಡಿ, ಸಂಸದರ ಅನುದಾನ ಇದುವರೆಗೆ  ರೂ..12.30 ಕೋಟಿ ಬಂದಿದೆ. ಇದರಲ್ಲಿ ರೂ.11.36 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು 460 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಷ್ಟು ಕಾಮಗಾರಿಗಳಿಗೆ ರೂ. 15.71 ಕೋಟಿ ಅನುದಾನದ ಅವಶ್ಯಕತೆ ಇದೆ. ಈಗಾಗಲೇ 107 ಕಾಮಗಾರಿಗಳು ಮುಗಿದಿವೆ. 353 ಕಾಮಗಾರಿಗಳು ಬಾಕಿ ಇವೆ. ಇವುಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪಡಿತರ; ಸೂಕ್ತ ಕ್ರಮ: ಪಡಿತರ ಚೀಟಿ ನವೀಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಜಾಗೃತಿ ಸಮಿತಿ ಸದಸ್ಯ ಕೆ.ಎಸ್.ಗುರುಮೂರ್ತಿ ವ್ಯಕ್ತಪಡಿಸಿದ ಆಕ್ಷೇಪಕ್ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಪ್ರತಿಕ್ರಿಯಿಸಿ, ಅಗತ್ಯಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ನಿಯಂತ್ರಿಸಲು ಉಪ ವಿಭಾಗಾಧಿಕಾರಿ ಹಾಗೂ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಸೂಚನೆ ನೀಡಲಾಗುವುದು ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ ಚೀಟಿ ನವೀಕರಣ ಸಮಸ್ಯೆಯಾಗಿದೆ. ಹೆಚ್ಚಿನ ಕಂಪ್ಯೂಟರ್, ಇಂಟರ್‌ನೆಟ್ ಸಂಪರ್ಕ ಇಲ್ಲದಿರುವುದರಿಂದ ಗ್ರಾಮೀಣ ಭಾಗದ ಜನರು ಹರಸಾಹಸ ಪಡುತ್ತಿದ್ದಾರೆ. ಇದರ ಜತೆಗೆ ಕಾರ್ಡು ನವೀಕರಣಕ್ಕೆ ಸರ್ಕಾರ ರೂ. 50 ನಿಗದಿ ಮಾಡಿದ್ದರೆ, ಕಾರ್ಡು ನವೀಕರಣ ಕೇಂದ್ರದ ಸಿಬ್ಬಂದಿ ರೂ. 100ರಿಂದ 200ರವರೆಗೆ ವಸೂಲಿ ಮಾಡುತ್ತಿದ್ದಾರೆ. ಹೆಚ್ಚುವರಿ ನವೀಕರಣ ಕೇಂದ್ರ ಸ್ಥಾಪಿಸಬೇಕು ಎಂದು ಕೆ.ಎಸ್.ಗುರುಮೂರ್ತಿ ಒತ್ತಾಯಿಸಿದರು.

ಭಾಗ್ಯಲಕ್ಷ್ಮಿ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಈವರೆಗೆ ಬಾಂಡ್ ವಿತರಣೆಯಾಗಿಲ್ಲ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗಮನಹರಿಸಿ, ಕೂಡಲೇ ಬಾಂಡ್‌ಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಗುರುಮೂರ್ತಿ ಸೂಚಿಸಿದರು.
ಖಾತ್ರಿ ಯೋಜನೆಯಡಿ ಕಾಮಗಾರಿ: ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯ ಪ್ರವಾಹದಿಂದ ಅನೇಕ ಗ್ರಾಮಾಂತರ ಪ್ರದೇಶಗಳು ಹಾನಿಗೊಳಗಾಗಿವೆ. ಇಂತಹ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ತುರ್ತಾಗಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಸೂಚಿಸಿದರು.

ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಸಸಿಕಾಂತ್ ಸೆಂಥಿಲ್ ಮಾತನಾಡಿ, ಜಿಲ್ಲೆಯಲ್ಲಿ ಈ ಯೋಜನೆಯ ಅನುಷ್ಠಾನ ಕಾರ್ಯ ತೃಪ್ತಿಕರವಾಗಿ ಸಾಗಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಎಸ್.ಸಿ., ಎಸ್.ಟಿ. ಫಲಾನುಭವಿಗಳ ಹೊಲಗದ್ದೆ ಹಾಗೂ ವಾಸದ ಮನೆಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಕುರಿತು ಗ್ರಾಮಸಭೆಯಲ್ಲಿ ಚರ್ಚಿಸಿ, ಅನುಮೋದನೆ ಪಡೆದು, ಪ್ರಸ್ತಾವ  ಸಲ್ಲಿಸಿ, ಅನುಮೋದನೆಯ ನಂತರ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.  ಈ ಯೋಜನೆಯ ಅನುಷ್ಠಾನದಲ್ಲಿ ಅಕ್ರಮವೆಸಗಿದ ಅಧಿಕಾರಿಗಳು ಅಥವಾ ಫಲಾನುಭವಿಗಳಿಂದ ಹಣ ಹಿಂದಕ್ಕೆ ಪಡದುಕೊಳ್ಳಲಾಗುವುದು ಹಾಗೂ ಅಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಯೋಜನೆಯಡಿ 2,268 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ಬಿಡುಗಡೆಯಾದ ರೂ..4,439.08 ಲಕ್ಷ ಅನುದಾನದಲ್ಲಿ ರೂ.4,426.61ಲಕ್ಷ ಖರ್ಚು ಮಾಡಿ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದರು.

ಇಂದಿರಾ ಆವಾಸ್ ಯೋಜನೆಯಡಿ ನಿವೇಶನ, ಹಕ್ಕುಪತ್ರ ಹಾಗೂ ಇತರೆ ದಾಖಲಾತಿಗಳನ್ನು ಹೊಂದಿರದ ಕಾರಣದಿಂದ ಜಿಲ್ಲೆಯ 1,390ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಭೂಮಿಯಲ್ಲಿ ಕನಿಷ್ಠ 15ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ವಾಸಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ದೃಢೀಕರಣ ಪಡೆದು ಸಲ್ಲಿಸಿದಲ್ಲಿ  ಮತ್ತೆ ಪರಿಗಣಿಸಲಾಗುವುದು ಎಂದರು.

2011-12ನೇ ಸಾಲಿನಲ್ಲಿ ಅನುಮೋದನೆಗೊಂಡ 8,702 ಮನೆಗಳಲ್ಲಿ 2,071ಮನೆಗಳು ಈಗಾಗಲೇ ಪೂರ್ಣ ಗೊಂಡಿವೆ. 4,611 ಮನೆಗಳು ಪ್ರಗತಿಯಲ್ಲಿವೆ ಎಂದರು.

ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಶಂಕರಪ್ಪ, ಬಸವ ವಸತಿ ಯೋಜನೆಯ ಪ್ರಗತಿ ಬಗ್ಗೆ ಸಭೆಗೆ ವಿವರ ನೀಡಿದರು.
ಈ ಯೋಜನೆಯಡಿ ಅನುಮೋದನೆಗೊಂಡ 28,000 ಮನೆಗಳಲ್ಲಿ 15,500ಮನೆಗಳನ್ನು ವಿವಿಧ ಕಾರಣಗಳಿಗಾಗಿ ಆನ್‌ಲೈನ್‌ನಲ್ಲಿ ಬ್ಲಾಕ್ ಮಾಡಲಾಗಿದೆ. ಅವುಗಳಲ್ಲಿ ಈಗಾಗಲೇ ನೆಲಗಟ್ಟು, ಕಟ್ಟಡ ನಿರ್ಮಾಣಕ್ಕೆ ಆರಂಭಿಸಿರುವ ಹಾಗೂ ದಾಖಲೆಗಳು ಸರಿಯಾಗಿದ್ದು, ಯೋಜನೆಯಿಂದ ಹೊರಗುಳಿದಿರುವ 3,500ಮನೆಗಳ ದಾಖಲಾತಿಗಳನ್ನು ಇಷ್ಟರಲ್ಲೇ ಆನ್‌ಲೈನ್‌ನಲ್ಲಿ ಪುನರ್ ಬಿಡುಗಡೆಗೊಳಿಸಲಾಗುವುದು ಎಂದರು.

ಜಿಲ್ಲೆಯ ಹಲವು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ  ಇಲಾಖೆಗಳ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುವಂತೆ ಸಂಸತ್ ಸದಸ್ಯರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT