ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಯಲ್ಲಿ ಚುನಾವಣೆ ಬಿಸಿ

Last Updated 11 ಜನವರಿ 2013, 19:57 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುವ ಮೊದಲೇ ಬೆಂಗಳೂರು ನಗರ ಜಿಲ್ಲೆಯಲ್ಲಿ ಚುಮುಚುಮು ಚಳಿಯಲ್ಲೂ ಚುನಾವಣೆಯ ಬಿಸಿ ಏರತೊಡಗಿದೆ!

ಈ ಬಾರಿಯೂ ಟಿಕೆಟ್ ದೊರೆಯುವ ಭರವಸೆ ಮೇರೆಗೆ ಆಡಳಿತಾರೂಢ ಬಿಜೆಪಿ ಶಾಸಕರು ಕ್ಷೇತ್ರ ಪ್ರವಾಸ ಆರಂಭಿಸಿದ್ದಾರೆ. ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ, ನಾಲ್ಕೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಮಂಜೂರಾತಿ ದೊರಕಿಸಿಕೊಡುವ, ಶಂಕುಸ್ಥಾಪನೆ ನೆರವೇರಿಸುವ ತವಕದಲ್ಲಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು, ಹೇಗಾದರೂ ಟಿಕೆಟ್ ಗಿಟ್ಟಿಸಬೇಕು ಎಂಬ ಉದ್ದೇಶದಿಂದ ತಮಗೆ ಆಪ್ತರಾಗಿರುವ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪುರ (ಸಾಮಾನ್ಯ), ಸಿ.ವಿ.ರಾಮನ್‌ನಗರ (ಪರಿಶಿಷ್ಟ ಜಾತಿ- ಮೀಸಲು), ಮಹದೇವಪುರ (ಪರಿಶಿಷ್ಟ ಜಾತಿ) ಹಾಗೂ ಆನೇಕಲ್ (ಪರಿಶಿಷ್ಟ ಜಾತಿ) ಕ್ಷೇತ್ರದಲ್ಲಿ ಓಡಾಡಿದಾಗ ಚುನಾವಣೆಯ ಕಾವು ಏರುತ್ತಿರುವುದು ಗೋಚರಿಸಿತು.

ಮೇಲಿನ ನಾಲ್ಕೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದರು. ಅವರೆಲ್ಲರೂ ಪುನರಾಯ್ಕೆ ಬಯಸಿದ್ದಾರೆ. ಈ ಕ್ಷೇತ್ರಗಳಲ್ಲಿ ಸದ್ಯಕ್ಕೆ ಪಕ್ಷಾಂತರದ ಗಾಳಿ ಕಾಣುತ್ತಿಲ್ಲ. ಹೊಸದಾಗಿ ಹುಟ್ಟಿಕೊಂಡಿರುವ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಸ್ಪಷ್ಟಚಿತ್ರಣ ಸಿಗುತ್ತಿಲ್ಲ. ಹೊಸ ವರ್ಷ, ಸಂಕ್ರಾಂತಿಯ ಶುಭಾಶಯ ಹೇಳುವ ನೆಪದಲ್ಲಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು, ಮುಖಂಡರು ಮತದಾರರನ್ನು ಒಲಿಸಿಕೊಳ್ಳುವ ತಂತ್ರವಾಗಿ `ಗ್ರೀಟಿಂಗ್ ಕಾರ್ಡ್'ಗಳನ್ನು ಕಳುಹಿಸಿದ್ದಾರೆ.

ಸಿ.ವಿ.ರಾಮನ್ ನಗರ
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎಸ್.ರಘು ಅವರೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಪ್ರತಿಸ್ಪರ್ಧಿಗಳು ಇಲ್ಲ. ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಉಮೇದಿನಲ್ಲಿದ್ದಾರೆ.

ಕಾಂಗ್ರೆಸ್, ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಮೇಯರ್ ಕೆ.ಸಿ.ವಿಜಯಕುಮಾರ್ ಈ ಬಾರಿ ಕಣಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಪುತ್ರ ಕೆ.ವಿ.ಗೌತಮ್‌ಗೆ ಟಿಕೆಟ್ ಕೊಡಿಸಲು ಅವರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಕೇಂದ್ರದ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ, ಕೆಪಿಸಿಸಿ ಕಾರ್ಯದರ್ಶಿ ಚೆಲುವಾದಿ ನಾರಾಯಣಸ್ವಾಮಿ ಕೆಪಿಸಿಸಿ ಸದಸ್ಯ ಪಿ.ರಮೇಶ್ ಅವರೂ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಜೆಡಿಎಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಶಿವರಾಜ್, ಪಕ್ಷದ ಮುಖಂಡ ರಾಮಮೂರ್ತಿ, ಕಳೆದ ಬಾರಿ ಸ್ಪರ್ಧಿಸಿದ್ದ ಡಾ.ರಾಕೇಶ್‌ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

ಕೆ.ಆರ್.ಪುರ
ಶಾಸಕ ಎನ್.ಎಸ್.ನಂದೀಶ ರೆಡ್ಡಿ ಈ ಸಲವೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಉತ್ಸಾಹ ತೋರಿದ್ದಾರೆ. ಅವರಿಗೆ ಟಿಕೆಟ್ ದೊರೆಯುವುದು ಖಚಿತವಾಗಿರುವುದರಿಂದ ಬೇರೆಯವರು ಪ್ರಯತ್ನ ನಡೆಸುವ ಗೋಜಿಗೆ ಹೋಗಿಲ್ಲ. ಆದರೆ, ಪಕ್ಷದ ಹಿರಿಯ ಕಾರ್ಯಕರ್ತರನ್ನು ರೆಡ್ಡಿ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಕೆಲವರಲ್ಲಿದೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆದಿದೆ. ಕೆಪಿಸಿಸಿ ಉಪಾಧ್ಯಕ್ಷ ಎ.ಕೃಷ್ಣಪ್ಪ, ಹೂಡಿ ವಾರ್ಡ್‌ನ ಬಿಬಿಎಂಪಿ ಸದಸ್ಯ ಭೈರತಿ ಬಸವರಾಜ್ ಅವರು ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆಸಿದ್ದಾರೆ. ಇಬ್ಬರೂ ಪ್ರಭಾವಿ ವ್ಯಕ್ತಿಗಳು. ಕಳೆದ ಬಾರಿ ಸೋತಿದ್ದ ಕೃಷ್ಣಪ್ಪ ಹಳೆ ಹುಲಿ. ಬಸವರಾಜ್ ಹೊಸ ಮುಖ. ವಿಧಾನಸಭೆ ಪ್ರವೇಶಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ಅವರು ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ಕೃಷ್ಣಪ್ಪ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ, ಬಸವರಾಜ್ ಅವರಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವ ಕುರಿತು ಪಕ್ಷದ ಮುಖಂಡರಲ್ಲಿ ಚರ್ಚೆ ನಡೆದಿದೆ. ಆದರೆ, ಕೃಷ್ಣಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಸದಸ್ಯ ಎಂ.ನಾರಾಯಣಸ್ವಾಮಿ ಅವರೂ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

ಬಸವರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೆ, ಪಕ್ಷೇತರರಾಗಿ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಕಾರ್ಯಕರ್ತರ ಅನಿಸಿಕೆ. ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಬಸವರಾಜ್ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಕ್ಷೇತ್ರದ ಜನರಿಗೆ ವೈಯಕ್ತಿಕವಾಗಿ ನೆರವು ನೀಡಿದ್ದಾರೆ. ಈ ಬಾರಿ ಅವರು ಕಣಕ್ಕೆ ಇಳಿಯುವುದು ಖಚಿತ ಎಂದು ಮುಖಂಡರೊಬ್ಬರು ತಿಳಿಸಿದರು.

ಕಳೆದ ಬಾರಿ ಜೆಡಿಎಸ್‌ನಿಂದ ಎಲ್.ಮುನಿಸ್ವಾಮಿ ಸ್ಪರ್ಧಿಸಿದ್ದರು. ಜೆಡಿಎಸ್ ಟಿಕೆಟ್‌ಗಾಗಿ ಪಕ್ಷದ ಕೆ.ಆರ್.ಪುರ ಕ್ಷೇತ್ರ ಘಟಕದ ಅಧ್ಯಕ್ಷ ಜೆ.ರವಿಪ್ರಕಾಶ್ ತೀವ್ರ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಬಿಜೆಪಿ ಮುಖಂಡ ಕೃಷ್ಣಮೂರ್ತಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ. ಆ ಪಕ್ಷದಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ಮಹದೇವಪುರ
ಸದ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರಿಗೇ ಮುಂಬರುವ ಚುನಾವಣೆಯಲ್ಲೂ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿದಂತಿದೆ. ಸದ್ಯಕ್ಕೆ ಅವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿಗಳು ಕಾಣುತ್ತಿಲ್ಲ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಬಿ.ಶಿವಣ್ಣ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ನಗರಸಭೆಯ ಮಾಜಿ ಅಧ್ಯಕ್ಷ ಪಿ.ರಾಜಣ್ಣ, ಮಹದೇವಪುರ ಬ್ಲಾಕ್ ಘಟಕದ ಮಾಜಿ ಉಪಾಧ್ಯಕ್ಷ ನಾಗೇಶ್ ಅವರ ಹೆಸರುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ. ಶಿವಣ್ಣ ಈ ಬಾರಿ ಆನೇಕಲ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪ್ರಾಬಲ್ಯ ಗೋಚರಿಸುತ್ತದೆ. ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ಪಕ್ಷದ ಕಾರ್ಯಕರ್ತರಾದ ಗೋವರ್ಧನ್, ರಾಮಾಂಜನೇಯ, ಆದರ್ಶ ರಮೇಶ್ ಹಾಗೂ ವಕೀಲ ನಾಗರಾಜ್ ಅರ್ಜಿ ಸಲ್ಲಿಸಿದ್ದಾರೆ. ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಇನ್ನಷ್ಟೇ ಕಾರ್ಯಕರ್ತರ ಪಡೆ ಕಟ್ಟಬೇಕಿದೆ.

ಆನೇಕಲ್
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರು ಬಿಜೆಪಿ ಅಭ್ಯರ್ಥಿಯಾಗಿ 5ನೇ ಬಾರಿಗೆ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಕಳೆದ ಬಾರಿ ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಶಿವಣ್ಣ ಈ ಬಾರಿ ಆನೇಕಲ್‌ನಿಂದ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದಾರೆ.

ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದಿದ್ದ ಬಿ.ಗೋಪಾಲ್ ಅವರಿಗೆ 2008ರಲ್ಲಿ ಕಾಂಗ್ರೆಸ್ ಟಿಕೆಟ್ ದೊರೆತಿದ್ದರಿಂದ ಶಿವಣ್ಣ ಅವರು ಮಹದೇವಪುರದಿಂದ ಸ್ಪರ್ಧಿಸಿ ಸೋತಿದ್ದರು. ಈಗ ಆನೇಕಲ್‌ಗೆ ಮರಳಲು ಉತ್ಸುಕರಾಗಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

ಮಾಜಿ ಸಚಿವ ಎಂ.ಪಿ.ಕೇಶವಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಮಚಂದ್ರ, ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಆನೇಕಲ್ ಕೇಶವ, ಜಿಗಣಿ ಕೃಷ್ಣಪ್ಪ ಅವರೂ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಟಿ.ನಾರಾಯಣ, ಮಾಜಿ ಸದಸ್ಯ ಡಿ.ಶ್ರೀನಿವಾಸ್, ಜೆಡಿಎಸ್ ಆನೇಕಲ್ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಫಟಾಫಟ್ ರವಿ, ಮುಖಂಡ ಕೆ.ಪಿ.ರಾಜು ಅವರು ಜೆಡಿಎಸ್ ಟಿಕೆಟ್ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ.

ಬಿಎಸ್‌ಪಿಯಿಂದ ಜಿಗಣಿ ಶಂಕರ್ ಕಣಕ್ಕೆ ಇಳಿಯಲಿದ್ದಾರೆ. ಜೆಡಿಯುನಿಂದ ಪಕ್ಷದ ಪರಿಶಿಷ್ಟ ಜಾತಿ/ಪಂಗಡದ ರಾಜ್ಯ ಘಟಕದ ಅಧ್ಯಕ್ಷ ತೋಪಯ್ಯ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿಯಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT