ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ಜೋಳ ಬಿತ್ತನೆ

Last Updated 10 ಜನವರಿ 2012, 10:05 IST
ಅಕ್ಷರ ಗಾತ್ರ

ಸಿರುಗುಪ್ಪ: ತುಂಗಭದ್ರಾ ಮತ್ತು ಹಗರಿ ನದಿಯಿಂದ ಏತ ನೀರಾವರಿ ಕಲ್ಪಿಸಿಕೊಂಡ ಜಮೀನುಗಳಲ್ಲಿ ಹೈಬ್ರೀಡ್ ಜೋಳ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

ಈ ಎರಡೂ ನದಿಗಳಲ್ಲಿ ಮುಂದಿನ ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರಬಹುದೆಂಬ ಆತಂಕದಿಂದ ಬೇಸಿಗೆ ಹಂಗಾಮಿನ ಹಿಂಗಾರು  ಭತ್ತದ ಬೆಳ ಕೈಬಿಟ್ಟಿರುವ ರೈತರು ಅಲ್ಪಾವಧಿಯ ಜೋಳ, ಎಳ್ಳು, ಉದ್ದು ಬೆಳೆಯಲು ಮುಂದಾಗಿದ್ದಾರೆ.

ತುಂಗಾಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇದೆ ಎಂದು ಈಗಾಗಲೇ ನೀರಾವರಿ ಇಲಾಖೆ ಸೂಚನೆ ಪ್ರಕಟಿಸಿದ್ದರಿಂದ ದುಬಾರಿ ಬೆಳೆಯಾದ ಭತ್ತದ ಬದಲಿಗೆ ಬಹುತೇಕ ರೈತರು ಜೋಳದಂತಹ ಪರ್ಯಾಯ ಬೆಳೆ ಯತ್ತ ಮುಖ ಮಾಡಿದ್ದಾರೆ.

ನದಿ ದಂಡೆ ಸಮೀಪದ ಜಮೀನಿನಲ್ಲಿ ಮಾತ್ರ ಭತ್ತ ನಾಟಿ ಮಾಡಿರುವ ರೈತರು, ಹೇರಳ ನೀರು ಲಭ್ಯವಾಗದ ದೂರದ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದಾರೆ. ಹಗರಿ ಸಾಲಿನ ಕುಡುದರಹಾಳು ಗ್ರಾಮದಲ್ಲಿ 500 ಎಕರೆಗೂ ಅಧಿಕ ಮತ್ತು ನಾಗಲಾಪುರ ಗ್ರಾಮದಲ್ಲಿ 200 ಎಕರೆಗೂ ಹೆಚ್ಚು ಜಮೀನುಗಳಲ್ಲಿ ಈ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದು ರೈತ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.

`ಬೇಸಿಗೆಯಲ್ಲಿ ನದಿ ಬತ್ತಿಹೋಗಿ ನೀರಿಲ್ಲದೇ ಬೆಳೆದ ಭತ್ತದ ಫಸಲು ಕೈಗೆ ಬರುತ್ತಿರಲಿಲ್ಲ ಅದಕ್ಕಾಗಿ ಈ ವರ್ಷ ಭತ್ತವನ್ನು ಕೈಬಿಟ್ಟು ಮಿತ ನೀರಾವರಿಯಲ್ಲಿ ಅಲ್ಪಾವಧಿಯ ಹೈಬ್ರಿಡ್ ಜೋಳ ಬಿತ್ತನೆ ಮಾಡುತ್ತಿದ್ದೇವೆ~ ಎಂದು ಕುಡುದರಹಾಳು ಗ್ರಾಮದ ಪ್ರಗತಿಪರ ರೈತ ಟಿ.ಎಂ.ಸಿದ್ದಲಿಂಗಯ್ಯಸ್ವಾಮಿ ಪತ್ರಿಕೆಗೆ ತಿಳಿಸಿದರು. ನಮ್ಮೂರಾಗ   `ಈ ಭಾಗದ ಎಲ್ಲರೂ ಜೋಳ ಬೆಳೆಯಲು ಆಸಕ್ತಿ ತೋರಿದ್ದಾರೆ ಆದರೆ ಈವರೆಗೆ ಭತ್ತ ಬೆಳೆಯುವ ಜಮೀನಿನಲ್ಲಿ ಭತ್ತ ಬಿಟ್ಟು ಬೇರೇನೂ ಬೆಳೆಸಿಲ್ಲ. ಈ ಬಾರಿಯ ಬೇಸಿಗೆಯಲ್ಲಿ ಜೋಳ ಬೆಳೆಸುವ ಸಾಹಸಕ್ಕೆ ಮುಂದಾಗಿದ್ದೇವೆ~ ಎಂದರು.

ಬಾಗವಾಡಿ, ಕೆಸರಕೋಣಿಕ್ಯಾಂಪು, ಶ್ರೀಧರಗಡ್ಡೆ, ಚಿಕ್ಕಬಳ್ಳಾರಿ, ಹಚ್ಚೊಳ್ಳಿ, ರಾರಾವಿ, ಕೆ.ಸೂಗೂರು, ಕೆ.ಬೆಳಗಲ್ ಅಲ್ಲದೇ ತಾಲ್ಲೂಕಿನ ಇನ್ನೂ ಅನೇಕ ಗ್ರಾಮಗಳ  ಏತ ನೀರಾವರಿ ಜಮೀನುಗಳಲ್ಲಿ ಜೋಳ ಬಿತ್ತನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT