ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ಬಿತ್ತನೆ ಕಾರ್ಯ

Last Updated 3 ಜೂನ್ 2013, 11:22 IST
ಅಕ್ಷರ ಗಾತ್ರ

ಗಜೇಂದ್ರಗಡ: ನಿರಂತರ ಬರದಿಂದ ಸುಖ-ಸಮೃದ್ಧಿಯನ್ನೇ ಕಳೆದುಕೊಂಡಿದ್ದ ರೈತ ಸಮೂಹಕ್ಕೆ ಸುಮಾರು ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಮುಂಗಾರು ಹಂಗಾಮಿನ ಬಿತ್ತನೆ ಅವಧಿಗೆ ವರುಣ ಕೃಪೆ ತೋರಿದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

ಎರಡು ವರ್ಷಗಳಿಂದ ತಲೆದೋರಿದ್ದ ಭೀಕರ ಬರದಿಂದ ತತ್ತರಿಸಿ ಹೋಗಿದ್ದ ಕೃಷಿಕರು ತೀವ್ರ ಸಂಕಷ್ಟದ ಸುಳಿಗೆ ಸಿಲುಕಿ ನಲುಗಿ ಹೋಗಿದ್ದರು.

ನಿರಂತರ ಬರದಿಂದ ಉಂಟಾಗಿರುವ ಭಾರಿ ಪ್ರಮಾಣದ ನಷ್ಟವನ್ನು ನೀಗಿಸಿಕೊಳ್ಳಲು ಪ್ರಸಕ್ತ ವರ್ಷ ಸಮರ್ಪಕ ಮಳೆ ಸುರಿಯಲಿದೆ ಎಂಬ ನಿರೀಕ್ಷೆಯೊಂದಿಗೆ ವರ್ಷಾರಂಭದ ಕೃಷಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದ ಅನ್ನದಾತ ವರುಣನ ನಿರೀಕ್ಷೆಯಲ್ಲಿದ್ದರು.

ನೇಗಿಲಯೋಗಿಯ ನಿರೀಕ್ಷೆಯಂತೆಯೇ ಮುಂಗಾರು ಹಂಗಾಮಿನ ಬಿತ್ತನೆ ಅವಧಿ ಆರಂಭದಲ್ಲಿಯೇ ಸಮರ್ಪಕ ಮಳೆ ಸುರಿದಿದೆ.

ಇದರಿಂದಾಗಿ ಕೃಷಿಕರ ಉತ್ಸಾಹ ಇಮ್ಮಡಿಗೊಂಡಿದೆ. ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಗೆಜ್ಜೆ ಶೇಂಗಾ, ಮೆಕ್ಕೆಜೋಳ, ಹೈಬ್ರಿಡ್ ಜೋಳ, ತೊಗರಿ, ಸಜ್ಜಿ ಮುಂತಾದ ಬೆಳೆಗಳ ಬಿತ್ತನೆಗೆ ಕೃಷಿಕರು ಮುಂದಾಗಿದ್ದಾರೆ.

ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ರೈತರು ಬೀಜ, ಗೊಬ್ಬರ, ಲಘು ಪೋಷಕಾಂಶಗಳ ಖರೀದಿಗೆ ರೈತ ಸಂಪರ್ಕ ಕೇಂದ್ರ, ಆಗ್ರೋ ಕೇಂದ್ರಗಳಿಗೆ ಮುಗಿ ಬಿದ್ದಿದ್ದಾರೆ.

ತಾಲ್ಲೂಕಿನ 1,10,523 ಹೆಕ್ಟೇರ್ ಪ್ರದೇಶ ಮುಂಗಾರು ಬಿತ್ತನೆಗೆ ಮೀಸಲಿದೆ. ಪ್ರಸಕ್ತ ವರ್ಷ 71,258 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯನ್ನು ಕೃಷಿ ಇಲಾಖೆ ನಿರೀಕ್ಷಿಸಿದೆ. ಇದಕ್ಕೆ ಪೂರಕವಾಗಿ ಇಲಾಖೆ ಅಗತ್ಯ ಬೀಜ, ಲಘು ಪೋಷಕಾಂಶಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿಡಲಾಗಿದೆ. ರೈತರ ಕೃಷಿ ಉತ್ಸಾಹಕ್ಕೆ ಕುಂದು ಬರದಂತೆ ಕೃಷಿ ಇಲಾಖೆ ಮುತುವರ್ಜಿ ವಹಿಸಿದೆ. ಕೃಷಿಕರ ಅನುಕೂಲಕ್ಕಾಗಿ ಕೃಷಿ ಇಲಾಖೆ ತಾಲ್ಲೂಕಿನಾದ್ಯಂತ ಹೆಚ್ಚುವರಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆದಿದೆ.

ತಾಲ್ಲೂಕಿನ ನರೇಗಲ್, ಹೊಳೆ-ಆಲೂರ ನಗರಗಳಲ್ಲಿ ಪ್ರಮುಖ ಕೇಂದ್ರಗಳಿವೆ. ಗಜೇಂದ್ರಗಡ, ಹಿರೇಹಾಳ, ಬೆಳವಣಿಕೆಗಳಲ್ಲಿ ಉಪ ಕೇಂದ್ರಗಳನ್ನು ತೆರೆಯಲಾಗಿದೆ. ಸೂಡಿ, ಮುಶಿಗೇರಿ, ಹಾಲಕೇರಿ, ಅಬ್ಬಿಗೇರಿ ಸೇರಿದಂತೆ ಒಟ್ಟು 11 ಭೂ ಚೇತನ ಕೇಂದ್ರಗಳನ್ನು ತೆರೆಯಲಾಗಿದೆ.

ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬೀಜಗಳನ್ನು ಪೊರೈಸಲಾಗಿದೆ. ಇದರಲ್ಲಿ ಹೆಸರು-600 ಕ್ವಿಂಟಲ್, ತೊಗರಿ-52 ಕ್ವಿಂಟಲ್, ಹೈಬ್ರೀಡ್ ಜೋಳ-35 ಕ್ವಿಂಟಲ್, ಸಜ್ಜೆ-30 ಕ್ವಿಂಟಲ್  ಮೆಕ್ಕೆಜೋಳ-450 ಕ್ವಿಂಟಲ್, ಶೇಂಗಾ-200 ಕ್ವಿಂಟಲ್ ಸಂಗ್ರಹಿಸಿಡಲಾಗಿದೆ.

ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ದರದ ಬೀಜಗಳನ್ನು ಸಂಗ್ರಹಿಸಿ ಇಡಲಾಗಿದೆ.

ನಿರೀಕ್ಷೆ ಮೀರಿದ ಮಳೆ ಪ್ರಮಾಣ: ಮೇ ಅಂತ್ಯಕ್ಕೆ 100 ಮಿಲಿ ಮೀಟರ್ ಮಳೆ ನಿರೀಕ್ಷಿಸಲಾಗಿತ್ತು. ಆದರೆ, 73.33 ಮಿಲಿ ಮೀಟರ್  ಮಳೆ ಸುರಿದಿತ್ತು. ಜೂನ್ ತಿಂಗಳ ಆರಂಭದಲ್ಲಿ 101.79 ಮಿಲಿ ಮೀಟರ್ ಮಳೆ ಸುರಿದಿದೆ. ಪ್ರಸಕ್ತ ವರ್ಷ ಮಳೆ ಪ್ರಮಾಣ ಇಲಾಖೆಯ ನಿರೀಕ್ಷೆಯನ್ನು ಮೀರಿದೆ. ಹೀಗಾಗಿಯೇ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ತೀವ್ರಗೊಂಡಿವೆ. ಅಲ್ಲದೆ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತಿದೆ.

ಬಿತ್ತನೆಗೆ ಎತ್ತುಗಳೇ ಇಲ್ಲ ಟ್ರ್ಯಾಕ್ಟರ್ ಎಲ್ಲ: ಬಿತ್ತನೆ ಕಾರ್ಯವನ್ನು ಗಳೆ (ಎತ್ತುಗಳಿಂದ) ಮಾಡಿದರೆ ಬೆಳೆ ಸಮೃದ್ಧವಾಗಿ ಬೆಳೆದು ಉತ್ತಮ ಇಳುವರಿ ದೊರೆಯುತ್ತದೆ ಎಂಬ ನಂಬಿಕೆಯಲ್ಲಿರುವ ರೈತರು ಎತ್ತುಗಳನ್ನು ಬಳಸಿ ಬಿತ್ತನೆ ಕಾರ್ಯ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತ ಮಿತ್ರ ಎತ್ತುಗಳನ್ನು ತೊರೆದು ಟ್ರ್ಯಾಕ್ಟರ್‌ಗಳನ್ನು ಬಳಸಿ ಕೃಷಿಗೆ ಮುಂದಾಗಿದ್ದ. ಆದರೆ ಈಗ ಕೃಷಿಕರು ಎತ್ತುಗಳನ್ನು ಬಳಸಿ ಬಿತ್ತನೆ ಕಾರ್ಯ ಪೂರ್ಣಗೊಳಿಸಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ. ಆದರೆ, ಎತ್ತುಗಳನ್ನು ಹೊಂದಿರುವ ಕೃಷಿಕರು ಮೊದಲು ತಮ್ಮ ಜಮೀನುಗಳ ಬಿತ್ತನೆ ಕಾರ್ಯ ಪೂರ್ಣಗೊಳಿಸಿ ಬಳಿಕ ಬೇಡಿಕೆ ಇಟ್ಟಿರುವ ಕೃಷಿಕರ ಜಮೀನುಗಳ ಬಿತ್ತನೆಗೆ ಮುಂದಾಗುವುದಾಗಿ ಹೇಳುತ್ತಿದ್ದಾರೆ. ಎತ್ತುಗಳಿಂದ ಬಿತ್ತನೆ ಮಾಡಿಸಬೇಕು ಎಂದುಕೊಂಡ ಕೃಷಿಕರಿಗೆ ಬಿತ್ತನೆ ಅವಧಿ ಮುಗಿದು ಹೋಗುತ್ತದೆ ಎಂಬ ಭೀತಿಯಿಂದಾಗಿ ಅನಿವಾರ್ಯವಾಗಿ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡುತ್ತಿದ್ದಾರೆ.

ಬೇಗ ಬಿತ್ತನೆ ಮಾಡಿ: ಅತ್ಯಂತ ಕಡಿಮೆ ಖರ್ಚಿನಲ್ಲಿ ಸಮೃದ್ಧವಾಗಿ ಬೆಳೆಯಬಹುದಾದ ಏಕೈಕ ಬೆಳೆ `ಹೆಸರು'. ಬಿತ್ತನೆ ಅವಧಿ ತೀರಾ ಕಡಿಮೆ ಇದೆ.

ಹೀಗಾಗಿ ಕೃಷಿಕರು ಹೆಸರು ಬಿತ್ತನೆ ಕಾರ್ಯವನ್ನು ಆದಷ್ಟು ಬೇಗನೆ ಮುಗಿಸಬೇಕು. ಬಿತ್ತನೆಗೆ ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ನೀಡುವ ಬೀಜ, ಗೊಬ್ಬರಗಳನ್ನು ಬಳಸಿ, ಖಾಸಗಿ ಕಂಪೆನಿಗಳ ಬೀಜ, ಗೊಬ್ಬರಗಳನ್ನು ಬಳಸಿ ಮೋಸ ಹೋಗದೆ ಇಲಾಖೆಯ ಬೀಜಗಳನ್ನು ಬಳಸಿ ಉತ್ತಮ ಬೆಳೆ ತೆಗೆಯಲು ಕೃಷಿಕರು ಮುಂದಾಗುವುದು ಸೂಕ್ತ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್ `ಪ್ರಜಾವಾಣಿ'ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT