ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿಯ ಪರಿಮಳ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತನ್ನ ಟಿಕೆಟ್ ಅಷ್ಟೇ ಅಲ್ಲದೆ ಚುರುಮುರಿ ಚೀಲಕ್ಕೂ ಲಗೇಜ್ ಚಾರ್ಜ್ ಮಾಡುವ ಈ ಹೊಸ ಕಂಡಕ್ಟರನ ಬಸ್ಸಿನಲ್ಲಿ ಇದೊಳ್ಳೆ ಹತ್ತಿದೆನೆಪ್ಪಾ ಎನ್ನುತ್ತ, ಇನ್ನೊಂದೈದು ನಿಮಿಷಕ್ಕೆ ವಿನಾಕಾರಣ ಐದು ರೂಪಾಯಿ ಕೈ ಬಿಟ್ಟು ಹೋಗುವುದಕ್ಕೆ ಪರಿತಪಿಸುತ್ತ, ಹನುಮವ್ವ ಜೋಲುಮುಖ ಹಾಕಿದಳು.

ಇಷ್ಟೆಲ್ಲ ಶ್ರಮವಹಿಸಿ ಕಿಡಕಿಯ ಹತ್ತಿರದ ಸೀಟು ಹಿಡಿದಿದ್ದೂ ವ್ಯರ್ಥವಾಯಿತೆನ್ನುವಂತೆ ಅವಳ ಮನಸ್ಸಿನಲ್ಲಿ ಹಳಹಳಿ ತುಂಬಿಕೊಂಡಿತು. ನಾನಾ ತರದ ಉಗುಳುಗಳಿಂದ, ವಾಂತಿ-ವಾಕರಿಕೆಗಳಿಂದ ಬಣ್ಣಗೆಟ್ಟಿದ್ದ ಕಿಡಕಿಯ ಆಸುಪಾಸಿನ ತಗಡು, ಸರಳುಗಳಿಗೆ ತಲೆ ಹೊಂದಿಸುತ್ತ ಆಕೆ ಹೊರಗೆ ನೋಡಿದಳು.
 
ಬಸ್‌ಸ್ಟ್ಯಾಂಡ್ ತುಂಬ ಗಿಜಿಗಿಡುತ್ತಿದ್ದ ಜನ. ತೆಗ್ಗು ಬಿದ್ದ ನಿಲ್ದಾಣದೊಳಗೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹೊಳ್ಳುತ್ತ ಬರುವ ಬಸ್ಸುಗಳನ್ನು ಕಂಡೊಡನೆ ಬಂಗಾರ ಕಂಡಂತಾಗಿ ಮಂದಿ ತಮ್ಮ ಕೈಯಲ್ಲಿಯ ಚೀಲಗಳನ್ನು, ಹೆಗಲ ಮೇಲಿನ ಗಂಟುಗಳನ್ನು ಓಟದ ಗತಿಯೊಂದಿಗೆ ಹೇಗೋ ನಿಯಂತ್ರಿಸುತ್ತ ಅವುಗಳೆಡೆ ಓಡುತ್ತಿದ್ದರು.
 
ಜೀವದ ಖಬರು ಇಲ್ಲದವರಂತೆ ಓಡುತ್ತ ಕೆಳಗಿಳಿಯುವವರನ್ನು ಲೆಕ್ಕಿಸದೆ ಬಸ್ಸಿನ ಒಳಗೆ ನುಗ್ಗುತ್ತಿದ್ದ ಪರಿ ಕಂಡು- `ಯಪ್ಪಾ, ಈ ಗದ್ದಲ ನೋಡಿದ್ರ ಧಾರವಾಡಕ್ಕ ಬರಬಾರದು ಅನಿಸ್ತೇತಿ. ಅದೂ ಮಂಗಳವಾರದ ಸಂತಿ ದಿನ ಅಂತೂ ಈ ಕಡೆ ಕಾಲ ಹಾಕಿ ಸೈತ ಮಕ್ಕೊಬಾರದು~ ಎಂದು ಐದು ರೂಪಾಯಿ ಉಳಿಸಲು ಸಂಜೆ ಆರರ ಬಸ್ಸಿಗೆ ಹತ್ತಬೇಕಾಗಿತ್ತೇನೊ ಎಂದು ಹುಟ್ಟಿಕೊಂಡಿದ್ದ ಆಸೆಯನ್ನು ಅಲ್ಲಿಯೇ ಕತ್ತರಿಸಿದಳು.

ಮಂಗಳವಾರದ ಸಂತೆಯ ಚೀಲಗಳನ್ನು ಹೊತ್ತು ಹೊತ್ತು ದಡ್ಡು ಬಿದ್ದಿರುವ ಗಂಡಸರ ಹೆಗಲುಗಳು; ಮಕ್ಕಳನ್ನು ಹೆತ್ತು ಹೊತ್ತು ಶಕ್ತಿ ಸೋರಿ ಹೋಗಿರುವುದನ್ನು ಕಾಣಿಸುವ ಹೆಂಗಸರ ಹೊಕ್ಕಳಿನ ಹಡೆದ ಗೆರೆಗಳು; ಧಾರವಾಡ ಪೇಡಾ, ಧಾರವಾಡ ಪೇಡಾ ಎನ್ನುವ ಧ್ವನಿಗೆ ಹೆದರದೆ ಗೊಮ್ಮೆನ್ನುತ್ತಿದ್ದ ನೊಣಗಳನ್ನು ದೂರ ಓಡಿಸುತ್ತ ಪೇಢೆಯ ಬುಟ್ಟಿಯನ್ನು ಮುಖಕ್ಕೆ ಹಿಡಿಯುವ ವ್ಯಾಪಾರದ ಹುಡುಗರ ಆಸೆಯ ಕಣ್ಣುಗಳು; ಮಳೆ ಬಂದುದಕ್ಕೋ ಗುಟಕಾ-ಎಲೆ-ಅಡಿಕೆ ತಿಂದು ಉಗುಳಿರುವುದಕ್ಕೋ ಕೆಂಪನೆ ನಕಾಶೆ ಬಿಡಿಸಿದಂತಿರುವ ನೆಲದ ಮೇಲೆ ಗಕ್ಕನೆ ತಿರುಗುವ,

ಗಕ್ಕನೆ ನಿಲ್ಲುವ ಬಸ್ಸಿನ ಗಾಲಿಗಳು ಹನುಮವ್ವಳ ಕಣ್ಣಿಗೆ ಬಿದ್ದು ಬಸ್‌ಸ್ಟ್ಯಾಂಡಿನಲ್ಲಿ ಎಷ್ಟೊಂದು ತರದ ಮಂದಿ ಇರುತ್ತಾರಲ್ಲ ಎನಿಸಿತು. ಸಾವಿರಗಟ್ಟಲೆ ಮಂದಿ. ಎಲ್ಲಿಂದಲೋ ಬರುತ್ತಿದ್ದಾರೆ. ಬಸ್ಸು ಹತ್ತಿ ಎಲ್ಲಿಗೋ ಹೋಗುತ್ತಿದ್ದಾರೆ. ಅವಳು ಕುಳಿತಿರುವ ಬಸ್ಸಿನಲ್ಲಿಯೂ ಅಷ್ಟೇ.
 
ದೂಡುತ್ತಿದ್ದಾರೆ, ನೂಕುತ್ತಿದ್ದಾರೆ. ಗದ್ದಲದಲ್ಲಿ ನಿಲ್ಲಲಾಗದೆ ಸೀಟಿನಲ್ಲಿ ಕುಳಿತವರ ಮೇಲೆ ಬೀಳುತ್ತಿದ್ದಾರೆ. ಮಕ್ಕಳನ್ನು ಖಾಲಿ ಜಾಗೆ ಕಂಡ ಕಡೆ ತುರುಕುತ್ತಿದ್ದಾರೆ. ಹನುಮವ್ವಳ ಬಾಜೂ ಕುಳಿತ ರಾಯಪ್ಪಜ್ಜನಿಗೆ ಯಾರೋ ಒತ್ತಿಕೊಂಡು ಸರಿದು ಹೋದ ಪರಿಣಾಮವಾಗಿ ಅವನ ಒಣ ಕಟ್ಟಿಗೆಯಂತಿರುವ ಕೈ ಅವಳ ಗದ್ದಕ್ಕೆ ಬಡಿಯಿತು.
 
`ಹಗರ ಯಜ್ಜಾ, ನನ್ನ ದವಡಿ ಮುರದ ಇಟ್ಟಿಗಿಟ್ಟಿ~ ಎಂದು ಅವನನ್ನು ಹೆಗಲನಿಂದಲೇ ಬೀಳುವಂತೆ ದೂಡಿದಳು. ಬಸ್ಸಿನಲ್ಲಿಯ ಕಂಬಕ್ಕೆ ಆತುಕೊಂಡಿದ್ದ ಚುರುಮುರಿ ಚೀಲ ಮುದುಕನ ನೆರವಿಗೆ ಬರದಿದ್ದರೆ ಆತ ಸೀಟಿನಿಂದ ನೆಲಕ್ಕೆ ಕುಕ್ಕರಿಸುತ್ತಿದ್ದ.
 
`ಚಿಲ್ಲರ ಕೊಡ್ರಿ, ಎಲ್ಲಾರೂ ನೂರು-ಐವತ್ತರ ನೋಟ ಕೊಟ್ರ ನಾ ಎಲ್ಲಿಂದ ಚಿಲ್ಲರಾ ಕೊಡ್ಲಿ~ ಎಂದು ಕಂಡಕ್ಟರ್ ಮಂದಿಯನ್ನು ಸರಿಸುತ್ತ, ಟಿಕೇಟ್ ಹರಿಯುತ್ತ, ನೋಟುಗಳನ್ನೆಲ್ಲ ಕೈಯಲ್ಲಿ ಉದ್ದಕ್ಕೆ ಮಡಿಕೆ ಮಾಡಿ ಹಿಡಿದುಕೊಂಡು ಸ್ಟೈಲ್ ಮಾಡುತ್ತ, ನಡುನಡುವೆ ಬಾಯಿಂದಲೆ ಸಿಳ್ಳು ಹೊಡೆದು ತನ್ನ ಯೌವನ-ಸಂತೋಷಗಳನ್ನು ಪ್ರದರ್ಶಿಸುತ್ತ ಬರುತ್ತಿದ್ದ.

***
`ಏ ಯವ್ವಾ, ನಿನಗ ಎಷ್ಟ ಸಲ ಹೇಳಬೇಕಬೆ, ಈ ಚುಮ್ಮರಿ ಚೀಲ, ಗೊಬ್ಬರ ಚೀಲ ಎಲ್ಲ ಬಸ್ಸಿನ್ಯಾಗ ಹಾಕಬಾರದಂತ. ನಿಮ್ಮೂರ ಟೆಂಪೊ ಗಾಡಿ ಬರ‌್ತಾವಿಲ್ಲೊ, ಅದರಾಗ ಒಗೀಬೇಕು. ಮಂದಿಗೆ ಎಷ್ಟ ಇಡಕರಾ, ಏನ ಕತಿ~ ಎಂದು ಅದನ್ನು ರಾಯಪ್ಪಜ್ಜನಿಗೆ ಹಚ್ಚಿ ದೂಡಿದನು.

`ಯಪ್ಪಾ, ನನ್ನ ತಮ್ಮೋ, ಎಲ್ಲಾ ಪುಡಿ ಮಾಡ್ತೀಯೇನೊ? ಇಲ್ಲೆ ಪುಡಿಯಾದ್ರ ಅಂಗಡ್ಯಾಗ ಏನ ಇಟ್ಟು ಮಾರಾಟ ಮಾಡ್ಬೇಕು. ಮಂದೀನೂ ಈಗ ಶಾಣ್ಯಾರಾಗ್ಯಾರು. ಬೆರೆಸಿ ತಗೊಂಡು ಪುಡಿ, ಕಲ್ಲು, ಕಡ್ಡಿ ಕಸರು ಎಲ್ಲಾ ನಮಗ ಬಿಟ್ಟು ಹೋಗ್ತಾರ. ತಗೊಂಡು ಹೋಗಿ ಮಾರಿ ಇದರಾಗ ಎಷ್ಟ ಲಾಭ ಉಳಿಸ್ಕೊಬೇಕೊ ಗೊತ್ತಾಗಾಂಗಿಲ್ಲ ಯಪ್ಪಾ, ಇದೊಂದ ಸಲ ಲಗೇಜ್ ಬಿಡೊ~ ಎಂದು ಹನುಮವ್ವ ಕಂಡಕ್ಟರನ ಮುಖವನ್ನು ಆಸೆಗಣ್ಣಿನಿಂದ ನೋಡಿದಳು.

`ಯಕ್ಕಾ, ನಿನ್ನ ಕಾಲಿಗೆ ಬೀಳಲೇನು, ನನ್ನ ನೌಕರೀನ ಹೊಕ್ಕೇತಿ. ದಾರ‌್ಯಾಗ ಚೆಕ್ಕಿಂಗ್ ಮಾಮಾ ಬರ‌್ತಾನು~ ಎಂದು ಲಗೇಜ್ ಟಿಕೆಟ್ ಹರಿದೆ ಬಿಟ್ಟನು.
`ನನ್ನ ಸಲುವಾಗಿ ನಿನ್ನ ನೌಕರಿ ಕಳಕೋಬ್ಯಾಡಪ್ಪ, ತಗೊ ರೊಕ್ಕ~ ಎಂದು ಐದರ ಹೊಚ್ಚ ಹೊಸ ನೋಟೊಂದನ್ನು ಹತ್ತರ ನೋಟಿನೊಂದಿಗೆ ಅವನಿಗೆ ನೀಡಿದಳು.

`ತಾ, ನೀ ಒಬ್ಬಾಕೆಯಾದ್ರೂ ಕರೆಕ್ಟ್ ಚಿಲ್ಲರಾ ಕೊಟ್ಟಿ. ಸಾಕು~ ಎಂದು ನಗುತ್ತ ಕಂಡಕ್ಟರ್ ಮುಂದೆ ಹೆಜ್ಜೆಯಿಟ್ಟವನು ಕಾಲಿಗೆ ಅಡ್ಡ ಬಂದ ಸಂತೆಯ ಬುಟ್ಟಿಯ ಮೇಲೆ ಬೀಳುವವನಿದ್ದ.
 
`ಯಪ್ಪಾ, ಮ್ಯಾಲ ಬಾಳಿಹಣ್ಣ ಇಟ್ಟಿದ್ದಿ, ಗಿಜಬಿಳಕಿ ಮಾಡಿದ್ಯ ಏನ್ಯೊ~ ಎಂದು ಮುದುಕಿಯೊಬ್ಬಳು ಅರ್ಧ ಬೈಯ್ದಂತೆ, ಅರ್ಧ ಕೇಳಿದಂತೆ ಮಾಡಿದಳು. `ನಿಮ್ಮ ಸಲುವಾಗಿ ನನ್ನ ನೌಕರೀನ ಗಿಜಬಿಳಕಿ ಆಗೇತಿ ತಗೋರಿ. ಬಸ್‌ಗೋಳು ಮನಶ್ಯಾರಗಂತ ಇರ‌್ತಾವು. ಆದರ ನಾನೂ ನೋಡಾಕ ಹತ್ತೇನಿ.

ಈ ಮನಗುಂಡಿ ಮಂದಿ ಮನಶ್ಯಾರ ಜೋಡಿ ಆ ಚೀಲ, ಈ ಚೀಲ, ಬದ್ನಿಕಾಯಿ ಬುಟ್ಟಿ, ಟೊಮೆಟೊ ಬುಟ್ಟಿ, ಕುರಿ, ಆಡು, ಮೇವು, ಹುಲ್ಲು-ಕಸ ತಂದ ಇದೇನು ನಿಮ್ಮ ಹಿತ್ತಲಾ ಮಾಡಿದಂಗ ಮಾಡಿಬಿಟ್ಟೀರಿ ನೋಡ್ರಿ~ ಎಂದು ಬುಟ್ಟಿ ಮುರಿದುಹೋಗುವಂತೆ ಸರಿಸಿದನು.

`ಇನ್ನು ಮ್ಯಾಲ ಹೇಳ್ತೀನಿ, ಯಾರೂ ಒಳಗ ಏನೂ ತರತಕ್ಕದ್ದಲ್ಲ. ಹಮಾಲಿ ಹಚ್ಚಿ ಮ್ಯಾಲ ಹೇರಿಸ್ರಿ. ಇಲ್ಲಾ ನಿಮ್ಮ ನಿಮ್ಮ ವ್ಯವಸ್ಥಾ ನೀವ ಮಾಡಿಕೊಳ್ರಿ~ ಎಂದು ತುಸು ಸಿಟ್ಟಿನಿಂದಲೆ ಅಂದು ಬಾಗಿಲ ಮೆಟ್ಟಲ ಮೇಲೆ ನಿಂತಿದ್ದ ಕಾಲೇಜು ಹುಡುಗನಿಗೆ `ಏ ಕುಡಸಾಲ್ಯಾ ಒಳಗ ಬರ‌್ತೀಯೊ, ಇಲ್ಲಾ ರೋಡಿನ್ಯಾಗ ಬಿದ್ದ ಸಾಯ್ತೀಯೊ?~ ಎಂದು ದರ್ಶನನ ತರಹ ಕೂದಲು ಹಾರಿಸಿಕೊಂಡು ನಿಂತಿದ್ದ ಅವನ ಉತ್ಸಾಹವನ್ನು ಜರ‌್ರನೆ ಇಳಿಸಿದನು.

ಸುರೇಶ ಎನ್ನುವ ಈ ಕಂಡಕ್ಟರ್ ಈ ರೂಟಿನಲ್ಲಿ ಹೋಗಲು ಸುರು ಮಾಡಿದ ಮೇಲೆ ಕಲೆಕ್ಸನ್ ಸುಧಾರಿಸಿದೆಯೆಂಬುದು ಅಧಿಕಾರಿಗಳಿಗೆ ಗೊತ್ತಾಗಿತ್ತು. `ಈ ತರಹ ನೀನು ಸಂಸ್ಥಾಕ ಆದಾಯ ತರಾಕ ಹತ್ತಿದ್ರ ಲಗೂ ಲಗೂ ಪ್ರೊಮೋಶನ್ ಸಿಗ್ತಾವು~ ಎಂದು ಉಬ್ಬಿಸಿದ್ದರು. ಹೀಗಾಗಿ ಸುರೇಶ ಕಂಡಕ್ಟರ್‌ನಾಗಿ ಮನಗುಂಡಿಗೆ ಬರತೊಡಗಿದ ಮೇಲೆ ಬಸ್ಸು ಸರಿಯಾದ ಟೈಮಿಗೆ ಬರುವುದು, ಹೋಗುವುದು ಮಾಡತೊಡಗಿತು.

ಇದರಿಂದ ಕಾಲೇಜು ಹುಡುಗರಂತೂ ಅವನನ್ನು ತಮ್ಮ ಹೀರೊ ಆಗಿ ಆರಾಧಿಸತೊಡಗಿದರು. `ಕಂಡಕ್ಟರ್ ಅಂದ್ರ ಹೀಂಗ ಇರಬೇಕು, ಅಗದೀ ಸ್ಟ್ರಿಕ್ಟ್~ ಎಂದು ಅವನನ್ನು ಮಂದಿ ಹೊಗಳತೊಡಗಿದ ಮೇಲೆ ಬಸ್ಸಿನಲ್ಲಿ ಸಾಗಿಸುವ ಬುಟ್ಟಿಗಳನ್ನು, ಚೀಲಗಳನ್ನು, ಸಣ್ಣ ಮಕ್ಕಳನ್ನು ಮೊದಲಿನಂತೆ ಪುಕ್ಕಟೆ ಬಿಡದೆ ಕಾನೂನು ಪ್ರಕಾರ ದುಡ್ಡು ಇಸಿದುಕೊಳ್ಳತೊಡಗಿದ.
 
ಆದರೆ ಕೆಲವರಿಗೆ ಇದರಿಂದ ತೊಂದರೆಯಾಗತೊಡಗಿತು. `ಇಷ್ಟು ದಿನ ಇಲ್ಲದ ಕಾಯ್ದೆ ಈಗ ಬಂದೈತೇನು? ನೌಕರಿ ಮಾಡೋವ್ರಿಗೆ ರೈತರ ಕಷ್ಟ ಏನ ಗೊತ್ತ ಆಕ್ಕೇತಿ, ಶಾಣ್ಯಾ ಅದೀ ಕುಂಡ್ರು~ ಎಂದು ಒಮ್ಮಮ್ಮೆ ಅವನ ಬಾಯಿಯನ್ನೆ ಮುಚ್ಚಿಸುತ್ತಿದ್ದರು.
 
`ನೀವು ರೊಕ್ಕ ಕೊಡಲಿಲ್ಲಾಂದ್ರೂ ಟಿಕೇಟ್ ಮಾತ್ರ ನಾ ಹರ‌್ಯಾಂವನ ನನ್ ಕೈಯಿಂದ ಹಾಕ್ತೇನಿ~ ಅಂತ ಒಂದೆರಡು ಸಲ ಹಾಕಿದ ಮೇಲೆ ಮಂದಿಗೆ ಕರುಣ ಬಂದು `ಸುರೇಶಗ ಯಾಕ ತೊಂದ್ರಿ ಮಾಡೋದು? ಅಂವನ ಡ್ಯೂಟಿ ಆಂವ ಮಾಡ್ತಾನು, ನಮ್ಮ ಡ್ಯೂಟಿ ನಾವು ಮಾಡೋಣು~ ಎಂದು ಹೊಸ ಕಾಲಕ್ಕೆ ಹೊಂದಿಕೊಳ್ಳತೊಡಗಿದ್ದರು.

ಆವಾಗಿನಿಂದ ಬಸ್ಸಿನಲ್ಲಿ ಆಡು, ಕುರಿ, ಕೋಳಿಗಳು ಪ್ರಯಾಣ ಮಾಡುವುದು ಕಡಿಮೆಯಾಗಿ ಗೂಡ್ಸ್ ಟೆಂಪೊ ತಂದು ಬಾಡಿಗೆ ಹೊಡೆಯುತ್ತಿದ್ದ ಮಲಕಣ್ಣನಿಗೆ ಅದೃಷ್ಟ ಖುಲಾಯಿಸಿತು.

ಅವನು ಸುರೇಶ ಸಿಕ್ಕಾಗಲೆಲ್ಲ `ನಮಸ್ಕಾರ ಬ್ರದರ್, ನಮಗ ಹೆಲ್ಪ್ ಮಾಡಿದ್ರಿ~ ಅಂತ ಹೊಟೇಲಿಗೆ ಕರೆದುಕೊಂಡು ಹೋಗಿ ಬಿಸಿ ಭಜಿ ತಿನ್ನಿಸುತ್ತಿದ್ದ. ಹನುಮವ್ವನಂತಹ ಮಂದಿ ಮಾತ್ರ ಎಲ್ಲ ಕಡೆಗೆ ಬಾಡಿಗೆ ಕೊಟ್ಟು, ಕಮೀಶನ್ ಕೊಟ್ಟು ವ್ಯಾಪಾರ ಹೇಗೆ ಮಾಡಬೇಕು, ಲಾಭ ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಬಿದ್ದಿದ್ದರು.

ಕ್ರಾಸ್‌ವೊಂದರ ಬಳಿ ಇಳಿದ ಇಬ್ಬರು ಪ್ರಯಾಣಿಕರಿಗೆ ಅವರು ಕೊಟ್ಟಿದ್ದ ನೂರರ ನೋಟಿಗೆ ಉಳಿದ ಚಿಲ್ಲರನ್ನು ಹೇಗೊ ಹೊಂದಿಸಿಕೊಂಡು ಕಂಡಕ್ಟರ್ ಕೊಟ್ಟ. ಹನುಮವ್ವಳ ಬಳಿ ಬಂದು `ಅಕ್ಕಾ, ಐವತ್ತು ರೂಪಾಯಿ ಕೊಡು ಇಲ್ಲಿ~ ಎಂದ.
`ನಾ ಯಾಕ ಕೊಡ್ಲ್ಯೊ, ಆವಾಗನ ನಾನು ಟಿಕೆಟ್ ತಗಿಸೇನಿ~.

`ಅದಕ್ಕಲ್ಲ, ಐವತ್ತರದ್ದು ಅಥವಾ ನೂರರದು ಚಿಲ್ಲರ ತಾ ಇಲ್ಲಿ~ ಎಂದು ಅವಳ ಕಡೆಯಿಂದ ಹಳೆಯ ಹತ್ತರ ನೋಟುಗಳನ್ನು ಇಸಿದುಕೊಂಡ. ಹನುಮವ್ವನಿಗೆ ಆಶ್ಚರ್ಯವಾಗುತ್ತಿದ್ದ ಮಾತೆಂದರೆ ಮಂದಿಯ ಕಡೆ ಎಷ್ಟೆಲ್ಲ ನೋಟಿನ ಕಂತೆಗಳಿರುತ್ತವೆ? ನೂರರ, ಐದು ನೂರರ ನೋಟುಗಳನ್ನು ಎತ್ತೆತ್ತಲೊ ಇಟ್ಟುಕೊಳ್ಳುತ್ತಾರೆ ಎಲೆ ಅಡಿಕೆ ಕೊಂಡರೂ ಅಂಗಡಿಯವನಿಗೆ ಐದು ನೂರರ ನೋಟನ್ನೆ ಮುಂದು ಮಾಡುತ್ತಾರೆ.

ತನಗೆ ಮಾತ್ರ ಅಂತಹ ನಸೀಬು ಬರಲೇ ಇಲ್ಲ. ಯಾವಾಗಲಾದರೊಮ್ಮೆ ಆ ನೋಟುಗಳು ಕೈಗೆ ಬಂದರೂ ಬಹಳ ಹೊತ್ತಿನತನಕ ಅವು ತನ್ನ ಕೈಯಲ್ಲಿರುವದಿಲ್ಲ. ಉದ್ರಿ ತಂದವರಿಗೆ ಕೊಡಬೇಕಾಗುತ್ತದೆ. ಊರಿನ ಬಸವಣ್ಣ ದೇವರ ಗುಡಿಯ ಹತ್ತಿರವೆ ಇರುವ ತಮ್ಮ ಎರಡು ಪಡಕದ ಗೂಡಂಗಡಿಯನ್ನು ಮಾರಿದರೂ ಸಾವಿರ ರೂಪಾಯಿಯ ನೋಟು ಸಿಗುತ್ತದೆಯೊ ಇಲ್ಲವೊ ಎಂದು ಅನಿಸಿತು.

ಅಂಗಡಿಯನ್ನು ಮಾರುವ ವಿಚಾರ ಇತ್ತೀಚೆಗೆ ತನಗೆ ಯಾಕೆ ಬರುತ್ತದೆಯೊ ಎಂದು ಅವಳು ಸ್ವಲ್ಪ ಕಳವಳಕ್ಕೀಡಾಗಿ ಎಲೆ ಅಡಿಕೆಯ ಚೀಲ ತೆಗೆದು ಹೋಳು ಅಡಿಕೆಯನ್ನು ಬಾಯಿಗಿಟ್ಟುಕೊಂಡಳು. `ಕಾಕಾ, ಸ್ವಲ್ಪ ಸುಣ್ಣದ ಚೀಟ ತಾ ಇಲ್ಲಿ~ ರಾಯಪ್ಪಜ್ಜನ ಕೈಯಲ್ಲಿದ್ದುದನ್ನು ತೆಗೆದುಕೊಂಡು ಎಲೆಗೆ ಸವರಿ `ತೊಗೊ, ಕೊಟ್ಟೀನಿ ನೋಡು ಮತ್ತ ಕೊಟ್ಟಿಲ್ಲಂತ ಅಂಗಡಿಗೆ ಬಂದು ಹೊಸಾದು ಒಯ್ಯಾಂವ ನೀನು~ ಎಂದು ನಕ್ಕಳು.

`ಅಲ್ಲ ಮಗಳ ಮೊನ್ನಿ ಮೊಮ್ಮಗ ಬಂದಂಗ ಇತ್ತಲ್ಲ. ನೋಡಿದ್ನಿ. ಮಾತಾಡಿಸಬೇಕ ಅನ್ನೋದರೊಳಗ ಪಟಪಟ್ಟಿ ಮ್ಯಾಲ ಬಂವ್ ಅಂತ ಹೋಗೇಬಿಟ್ಟ...~
`ಬರ‌್ತಾನು, ಒಂದ ದಿನ ಇರ‌್ತಾನು, ಮತ್ತ ಬಂದೇ ಇಲ್ಲ ಅನ್ನವರಂಗ ಹೋಗಿ ಬಿಟ್ಟಿರ‌್ತಾನ. ತಾಯಿ ಮಾತು ತಲ್ಯಾಗ ಇರೂದಿಲ್ಲ. ಹೂಂ, ಹೂಂ ಅನ್ಕೊಂತ ಹೊಚ್ಚಲ ದಾಟತಾನು~.

`ಅಲ್ಲೆ ಪಗಾರ ಚುಲೊ ಕೊಡ್ತಾರಂತನ?~
`ಏನ ಕೊಡ್ತಾರೊ? ಏನ ಬಿಡ್ತಾರೊ? ಒಂದೂ ಹೇಳಂಗಿಲ್ಲ. ಮನಿ ಬಾಡಿಗೆ, ಸಂತಿ, ಪ್ಯಾಟಿ ಅಂತ ಖರ್ಚಾಗಿ ಹ್ವಾದ ಮ್ಯಾಲ ಎಷ್ಟ ಉಳಿಬೇಕು? ಒಟ್ಟ ಗಂಡ-ಹೆಂಡತಿ ಆರಾಮ ಅದಾರು ಸಾಕು. ಇಲ್ಲಿ ಬಾ ಅಂದ್ರ ಬರವಲ್ಲ. ಹೊಲದಾಗ ದುಡಿಯೋದು ಬ್ಯಾಡಾಗೇತಿ. ಫ್ಯಾಕ್ಟರಿಯೊಳಗ ಅವರ ಹೇಳಿದಂಗ ಕೇಳೋದು ಇವರಿಗೆ ಚುಲೋ ಆಗೇತಿ~ ಎಂದು ನಿಡುಸುಯ್ದಳು.

ಹಿಂದೆ ಸೊಸೆ ಬಂದಾಗಲೂ ಹನುಮವ್ವ `ಚಂದ್ರುಗ ನೀನ ಒತ್ತಾಯ ಮಾಡಿ ಕರ‌್ಕೊಂಡು ಬಾರವ್ವ, ಊರ ದೂರ ಮಾಡ್ಕೊಂಡ್ರ ದೂರ ಆಕ್ಕೇತಿ. ನಿನ್ನ ತವರಮನಿಗೂ ತೊಂದ್ರೆ ಅಲ್ಲೇನ. ನೀನು ಇಪ್ಪತ್ತು ಸಲ ಅಲ್ಲಿ ಹೋಗುದಕ ಎಂಥ ಅಳಿಯ ಸಿಕ್ಕ ಅಂತ ಅವರು ನನ್ ಬೈಯಬಾರದು~ ಎಂದಿದ್ದಳು.

`ಹಂಗೇನಿಲ್ಲ ಅತ್ತಿ, ನನಗೇನು? ನಿಮ್ಮ ಮಗ ಎಲ್ಲಿ ಇರೋಣು ಅಂತಾನು ಅಲ್ಲಿ ಇರುವಾಕಿ. ಇಲ್ಲಿ ಒಂದ ಎಕರೆ ಹೊಲದಾಗಾದ್ರೂ ಎಷ್ಟ ಬರತೈತಿ? ಬರೇ ಸಾಲ, ಸಾಲ. ಅದಕ್ಕ ಸಕ್ಕರಿ ಫ್ಯಾಕ್ಟರಿ ನೌಕರಿ ಸಿಕ್ಕದ್ದು ಚುಲೋ ಅಲ್ಲನ?~.

ಸೊಸೆಯ ಪ್ರಶ್ನೆಗೆ ಅತ್ತೆ ತಬ್ಬಿಬ್ಬಾಗಿದ್ದಳು. ಬೆಳಗಾವಿ ಸಮೀಪದ ಪಾರಿಶ್ವಾಡದಲ್ಲಿ ತನ್ನ ಮಗನಿಗೆ ಕನ್ಯೆ ನೋಡಿದ್ದೆ ತಪ್ಪಾಯಿತೆಂದು ಒಂದೊಂದು ಸಲ ಅನಿಸುತ್ತಿತ್ತು. ಮರಳು ಮಾಡಿ ಮಗನನ್ನು ತನ್ನೂರಿಗೆ ಕರೆದುಕೊಂಡು ಹೋದಳು. ಅಲ್ಲಿಯೆ ಮನೆ ಮಾಡಿದ್ದಾರೆ.
 
ಇನ್ನೂ ನಾಲ್ಕು ವರ್ಷದ ತುಂಬಿರದ ಮಗನನ್ನು ಕಾನ್ವೆಂಟ್ ಶಾಲೆಗೆ ಹಚ್ಚಿದ್ದಾರಂತೆ. ಅಲ್ಲಿಯ ಅಜ್ಜ-ಅಜ್ಜಿಯನ್ನು ಆ ಕೂಸು ಬಿಟ್ಟಿರುವದಿಲ್ಲವಂತೆ. ಕೂಸು ಶಾಲೆಗೆ ಹೋಗುತ್ತಿರುವುದು ಕೂಡ ಅವರಿಗೆ ಆ ಊರು ಬಿಟ್ಟು ಬರದಿರಲು ಒಂದು ಕಾರಣವಾಗಿದೆ.

ಚಂದ್ರಪ್ಪನಿಗೆ ತಾನು ಯಾವಾಗ ಎಷ್ಟು ಬಡಕೊಂಡೆ. ಇಲ್ಲೆ ಧಾರವಾಡ ಹುಬ್ಬಳ್ಳ್ಯಾಗ ಯಾವುದಾರ ನೌಕರಿ ನೋಡೋ ಅಂತ. `ನಾವು ಕೇಳಿದಿಲ್ಲಿ ಕೊಡಾಕ, ನಮಗ ಬೇಕಾದಂತ ಸಿಗಾಕ ಅದೇನು ಅಪ್ಪನ ಮನಿ ನೋಡು. ನೀನ ಹುಡುಕಿಕೊಡಬಾ ಗೊತ್ತಾಗ್ತೈತಿ~ ಎಂದು ಅಪ್ಪ-ಅವ್ವನನ್ನು ಹಂಗಿಸಿದ್ದ.

ಮಕ್ಕಳು ಎಷ್ಟು ಬೇಗ ದೊಡ್ಡವರಾಗುತ್ತಾರೆ. ಎಷ್ಟು ಬೇಗ ತಮಗೇ ಬುದ್ದಿ ಕಲಿಸಲು ಆರಂಭಿಸುತ್ತಾರೆ ಎನಿಸಿತು. ಈಗ ತಾನು ಗಂಡನ ಜೊತೆ ಅದಷ್ಟು ಹೊಲ ಮಾಡಿಸುತ್ತ ಅಂಗಡಿಯನ್ನೂ ನೋಡಿಕೊಂಡು ಹೋಗಬೇಕು.

ಕೋರಪಾಲಿನಂತೆ ಹೊಲ ಮಾಡಲು ಕೊಟ್ಟಿರುವದಕ್ಕಾಗಿ ಬಿತ್ತುವ ಸಮಯದಲ್ಲಿ ಮತ್ತು ರಾಶಿಯ ಸಮಯದಲ್ಲಿ ಅಲ್ಲಿ ಅವಶ್ಯ ಇರಲೇ ಬೇಕು. ಇಲ್ಲದಿದ್ದರೆ ನಾಲ್ಕು ಚೀಲ ಗೋದಿ ಬಂದರೆ ಎರಡೇ ಚೀಲ ಆಯ್ತೆಂದು ಹೇಳುತ್ತಾರೆ. ಉಣ್ಣಲು ಜೋಳ, ಗೋದಿ ಬರುತ್ತವಲ್ಲ.

ಅಷ್ಟಾದರೆ ಸಾಕು. ಹೆಚ್ಚಿಗೆ ಯಾಕೆ ಬೇಕು ಎಂದು ಹನುಮವ್ವ ಸಮಾಧಾನಪಟ್ಟುಕೊಳ್ಳುತ್ತಾಳೆ. ಕಿರಾಣಿ ಅಂಗಡಿಯ ಸಣ್ಣಪುಟ್ಟ ವ್ಯಾಪಾರದಿಂದ ದಿನಕ್ಕೊಂದು ನೂರು ರೂಪಾಯಿ ಉಳಿದು ಅದರಿಂದಲೇ ಅವಳ ದಿನ ನಿತ್ಯದ ಜೀವನ ಸಾಗಿದೆ. ಮಗನೂ ಆಗಾಗ ಸ್ವಲ್ಪ ದುಡ್ಡು ಕೊಡುತ್ತಾನೆ.

ಯಾವಾಗಲಾದರೊಮ್ಮೆ ಬರುವ ಈ ಹಳ್ಳಿಯ ಗಿರಾಕಿಗಳ ಸಲುವಾಗಿ ಎಷ್ಟೊಂದು ಕಾಯಬೇಕೆಂದು ಚಂದ್ರಪ್ಪ ಸಿಟ್ಟಾಗುತ್ತಿದ್ದ. `ಯವ್ವಾ, ಈ ಊರಾಗ ನಾಕ ಮಂದಿ ಬಂದಾರೆಷ್ಟು, ವ್ಯಾಪಾರ ಆದೀತೆಷ್ಟು? ಬಿಟ್ಟು ಬಿಡು ಇದನ್ನು ಬಂದ್ ಮಾಡೋಣು ತಗೊ~ ಎನ್ನುತ್ತಿದ್ದ.

`ಅಲ್ಲೊ ಚಂದ್ರು ಹಂಗ್ಯಾಕ ಅಂತೀಯೊ. ಈ ಅಂಗಡಿ ಮ್ಯಾಲನ ನಾವು ಆ ಹೊಲ ಹಿಡಿದಿವಿ, ಮನಿ ಕಟ್ಟೀವಿ, ಬದುಕು-ಬಾಳೆ ಸಾಗಿಸಿದೀವಿ, ನಿಮ್ಮ ಅಕ್ಕನ ಮದುವಿ ಮಾಡಿದಿವಿ. ನೀನೂ ಬೆಳೆದು ದೊಡ್ಡಾಂವ ಆದಿ. ಅಂಗಡಿಯಿಂದ ಬಂದಂಥ ಲಾಭಾನ ಹೆಂಗ ಮರ‌್ಯಾಕ ಆಕ್ಕೇತಿ ಹೇಳು?~

`ಆದದ್ದು ಆಗಿಹೋತು. ಯಾವಾಗ್ಲೂ ಮುಂದಿಂದು ವಿಚಾರ ಮಾಡಬೇಕು. ನನಗ ಏನ ಅನಸ್ತದ ಅಂದ್ರ ಹೊಲ ತುಟ್ಟಿ ಆಗ್ಯಾವು. ಮಾರಿದ್ರ ಒಳ್ಳೆ ರೇಟು ಬರತೈತಿ~.
`ಆ ರೊಕ್ಕ ತಗೊಂಡು ಎಷ್ಟ ದಿನ ಜೀವನ ಮಾಡ್ತೀಯೊ? ಕುಂತ ಉಂಡ್ರ ಕುಡಿಕಿ ಹೊನ್ನ ಸಾಲಂಗಿಲ್ಲ ಅಂತ ಹೇಳ್ತಾರಲ್ಲ, ಹಂಗ ಆಕ್ಕೇತಿ ನಮ್ಮ ಬಾಳೆ. ಅದಕ್ಕ ನೀನ ಅಂಗಡ್ಯಾಗ ನಿಂತು ಚೆಂದಾಗಿ ಮಾಡಿದ್ರ ವ್ಯಾಪಾರ ಇನ್ನೂ ಚುಲೊ ಆದೀತು.
 
ಚಲೊ ಆಗ್ತತೈತಿ ಅಂತ ಮನಸ್ಸಿನ್ಯಾಗ ಇದ್ರ ತಾನ ಆಗತೇತಿ. ನೀನ ಹರೇದಾಂವ ಹೀಂಗ ಕೈ ಚೆಲ್ಲಿದ್ರ ವಯಸ್ಸಾದವ್ರ ನಾವೇನು ಮಾಡಬೇಕು? ನಿನಗ ನೌಕರಿ ಹೋಗಾಕ ಬ್ಯಾಡ ಅನ್ನಂಗಿಲ್ಲ. ಆದರ ವಾರಕ್ಕ ಒಂದ ದಿನ ಆದ್ರೂ ಬಂದ ಕುಂಡ್ರು. ನೀ ಕುಂಡರಲಿಲ್ಲಂದ್ರು ಬ್ಯಾಡ ಹಂಗ ನಮ್ಮ ಜೋಡಿ ಇರು. ನಮಗ ಬಲ ಬರತೈತಿ~.

ಆದರೆ ಮಗನಿಂದ ಮಾತ್ರ ಅವಳಿಗೆ ಬಲ ಎಂದೂ ಬರಲೆ ಇಲ್ಲ. `ಧಾರವಾಡದೊಳಗ, ಬೆಳಗಾಂವದೊಳಗ ಈಗೆಲ್ಲ ದೊಡ್ಡ ದೊಡ್ಡ ಅಂಗಡಿ ಬರಾಕಹತ್ತ್ಯಾವು. ಅವು ಎಷ್ಟ ಚೆಂದ ಇರ‌್ತಾವು ಅಂತಿ. ಮಂದಿಯೆಲ್ಲ ಅಂಥಾದ್ರ ಕಡೇನ ಹೋಗಿ ಸಾಮಾನು ತಗೊಂಡು ಬರ‌್ತಾರ. ಸಣ್ಣ ಸಣ್ಣ ಅಂಗಡಿಯವರು ನೊಣ ಹೊಡಕೊಂಡು ಕುಂತಿರ‌್ತಾರ.
 
ಜಗತ್ತು ಹೀಂಗ ಇರೋಮುಂದ ನೀನು ಹಳ್ಳಿಯೊಳಗ ಇದನ್ನ ಮುಂದುವರಿಸು ಅಂತ ಹೇಳಾಕ ಹತ್ತಿ. ಎಲ್ಲಾರು ನಗ್ತಾರು ಅಷ್ಟ~ ಸುರೇಶನ ಮಾತು ಕೇಳುತ್ತಿದ್ದರೆ ನಾಳೆ ಸಾಯುವವರು ಇಂದೇ ಸಾಯಬೇಕು ಎನ್ನುವಂತಿರುತ್ತಿದ್ದವು. ಮಗನಲ್ಲಿ ಆಕೆ ಜಾಸ್ತಿ ಕೇಳಿಕೊಂಡಷ್ಟೂ ಅವನು ದೂರವಾಗತೊಡಗಿದ. ಈ ಹಾಳೂರಿನಲ್ಲಿ ತನಗೆ ಭವಿಷ್ಯವಿಲ್ಲವೆಂದುಕೊಂಡ. ಮದುವೆಯಾದ ಮೇಲಂತೂ ಕರುಳಿನ ಬಳ್ಳಿ ಒಣಗತೊಡಗಿತು.

ಮಗ ಬಂದರೆ ಅವನು ಬರೀ ತನ್ನ ವಿಚಾರವನ್ನೆ ತಮ್ಮ ಮೇಲೆ ಹಾಕುತ್ತಾನೆಂದು ತಿಳಿದ ಹನುಮವ್ವ ಅವನು ಬರದಿರುವುದೆ ಉತ್ತಮವೆಂದು ಈಗೀಗ ಅವಳಿಗೆ ಅನಿಸುತ್ತಿದೆ. ಯಾಕೊ ಗಂಟಲಕ್ಕೆ ಅಡಿಕೆ ಹತ್ತಿ ಅವಳಿಗೆ ಕೆಮ್ಮು ಬಂದಿತು. ಎಷ್ಟೊತ್ತಿನ ತನಕ ಅದು ಹೋಗಲೆ ಇಲ್ಲ.

`ನೀರ ಬೇಕೆನಬೇ?~ ಎಂದು ಕಂಡಕ್ಟರ್ ಕೇಳಿದ. ಕಾಲೇಜು ಹುಡುಗಿಯೊಬ್ಬಳು ಹಿಡಿದುಕೊಂಡಿದ್ದ ನೀರಿನ ಬಾಟಲಿಯನ್ನು ಇಸಿದುಕೊಟ್ಟ. ಸುರೇಶ ತೋರಿದ ವಾತ್ಸಲ್ಯಕ್ಕೆ ಅವಳ ಹೃದಯ ತುಂಬಿ ಬಂದಿತು. ನಡುವೆ ಎರಡು ಮೂರು ಊರಲ್ಲಿ, ಕ್ರಾಸ್‌ಗಳಲ್ಲಿ ಜನ ಇಳಿದಿದ್ದರಿಂದ ಬಸ್ಸಿನ ಮಂದಿ ಅರ್ಧಕ್ಕದ್ದ ಕಡಿಮೆಯಾಗಿದ್ದರು. ಸುರೇಶ ಬಂದು ಹನುಮವ್ವಳ ಎದುರಿನ ಸೀಟಿನಲ್ಲಿಯೆ ಕುಳಿತು ರೊಕ್ಕ ಎಣಿಸಿ ತನ್ನ ಕಿಸೆಯೊಳಗೆ ಇಟ್ಟುಕೊಂಡ. ವೇ ಬಿಲ್ ಬರೆದು ಮುಗಿಸಿದ್ದ.

ಅವನು ಈಗ ಸ್ವಲ್ಪ ಆರಾಮವಾದಂತಾಗಿ ಅವಳೊಂದಿಗೆ ಸ್ವಲ್ಪ ಹರಟುತ್ತ ಕುಳಿತ. `ಯಕ್ಕಾ, ಮನಿಗೆ ಬಂದ್ರ ಚುರುಮುರಿ ಮಾಡಿಕೊಡ್ತಿಯಲ್ಲೊ ಮತ್ತ?~ ಎಂದ. `ಬಾರೊ ನನ್ನ ಮಗನ~ ಎಂದಳು. ಅವನನ್ನು ನೋಡಿದರೆ ತನ್ನ ಮಗನನ್ನೆ ನೋಡಿದಂತಾಗುತ್ತಿತ್ತು.

`ಈ ಸಿಟಿಯೊಳಗ ದೊಡ್ಡ ದೊಡ್ಡ ಅಂಗಡಿಯೊಳಗ ಚೆಂದ ಪ್ಲಾಸ್ಟಿಕ್ ಚೀಲದಾಗ ಪ್ಯಾಕ್ ಮಾಡಿ ಇಟ್ಟಂತ ಚುರುಮುರಿ ಆಗ್ಲಿ ಅಥವಾ ಬ್ಯಾರೆ ಏನಾರ ಆಗ್ಲಿ ತಗೊಂಡ ತಿಂದರ ತಿಂದಾಂಗ ಆಗೂದಿಲ್ಲ. ಆದರ ಇನ್ನೂ ಬೇಕ ಅಂತೀರಿ, ಮಸ್ತಾ ಮಜಾ ಮಾಡ್ರಿ, ಜೀವನ ಪೂರ್ತಿ ತಿನ್ನಕೊಂತ ನಮ್ಮ ಅಂಗಡ್ಯಾಗ ಇರ‌್ತೀರಿ ಅಂತ ಏನೇನೊ ಬೋರ್ಡ್ ಹಾಕಿ ಮಂದಿನ್ನ ಕೆತ್ತತಿರತಾರು.
 
ಬಣ್ಣದ ಲೈಟಿನ ಬೆಳಕಿನ್ಯಾಗ ಮೋಸ ಹೋಗೋದು ತಿಳಿಯಂಗಿಲ್ಲ ನೋಡು~ ಎಂದು ಅವಳ ಬಗ್ಗೆ ಸಾಂತ್ವನವನ್ನೆ ಹರಿಸಿದ. ಸ್ವಲ್ಪ ಹೊತ್ತು ಸುಮ್ಮನಿದ್ದ ಅವನು ಆಮೇಲೆ `ಯಕ್ಕಾ, ಮಂದಿ ಜೋಡಿ ಮಾತಾಡಿ ಮಾತಾಡಿ ಗಂಟಲು ಆರ‌್ತು, ಬಾಯಿ ನೋಯಲಿಕ್ಕೆ ಹತ್ತು~ ಎಂದು ಕಿಸೆಯಿದ ಹಾಲಡಿಕೆ, ಬಿಳಿ ಎಲೆ ತೆಗೆದು ತಿನ್ನುತ್ತ ಅವಳಿಗೂ `ತಗೊ ಯಕ್ಕಾ, ಹಾಕ್ಕೊ~ ಎಂದು ಕೊಟ್ಟ.
 
ಕುಶಲೋಪರಿಯಾಗಿ ಎಷ್ಟು ದಿನದಿಂದ ಅವಳು ಅಂಗಡಿಯನ್ನು ನಡೆಸುತ್ತಿದ್ದಾಳೆಂದೂ ಎಷ್ಟು ದಿನಕ್ಕೊಮ್ಮೆ ಧಾರವಾಡದಿಂದ ಅವಳ ಅಂಗಡಿಯ ಸಂತೆಯನ್ನು ಒಯ್ಯುತ್ತಾಳೆಂದೂ ಕೇಳಿದ.

`ಅಕ್ಕ, ಒಂದ ಕೆಲಸ ಮಾಡು, ನೀನು ತಪ್ಪು ತಿಳಕೊಳ್ಳಲಿಲ್ಲಂದ್ರ ನಾನೊಂದು ಮಾತ ಹೇಳ್ತೀನಿ. ನಿನಗ ಮನಸಿದ್ರ ನನ್ನ ಮ್ಯಾಲೆ ನಂಬಿಕಿ ಇದ್ರ ಇನ್ನ ಮ್ಯಾಲ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ನಿನಗ ಏನೇನ ಬೇಕಂತ ನನ್ನ ಕೈಯಾಗ ಒಂದ ಚೀಟಿ ಕೊಟ್ಟಿರು. ನಾನು ತಂದುಕೊಡ್ತೀನಿ.
 
ಬಸ್‌ಸ್ಟ್ಯಾಂಡಿಗ ನೀನರ ಆಗ್ಲಿ ಅಥವಾ ನಿನ್ನ ಯಜಮಾನರಾಗ್ಲಿ ಅಥವಾ ಯಾರರ ಹುಡುಗರ ಕಡೆಯಿಂದ ಆಗ್ಲಿ ಹೇಳಿಕಳಿಸಿದ್ರ ಸಾಕು, ನಾನು ತರಿಸಿಕೊಡ್ತೀನಿ. ನೀ ಏನೂ ಹೆದರಕೋಬ್ಯಾಡ.
 
ಸಾಮಾನು ಮುಟ್ಟಿದ ಮ್ಯಾಲ ರೊಕ್ಕ ಕೊಡು, ಆತ? ನಮ್ಮ ಅಕ್ಕ ಒಬ್ಬಾಕಿ ನಿನ್ನಂಗ ನಿನ್ನ ನೋಡಿದ್ಲ ಕೂಡ್ಲೆ ನನಗ ಆಕೀನ ನೆನಪಾದ್ಲು. ವರದಕ್ಷಿಣೆ, ರೊಕ್ಕ, ಬಂಗಾರ ಅಂತ ಗಂಡನ ಮನಿಯವರು ಅವಳನ್ನು ಕೊಂದ ಇಟ್ರು. ನಾನು ಆವಾಗ ಸಣ್ಣಾಂವ ಇದ್ದೆ. ಆಕೀ ಮನಿಗೆ ಹೋದಾಗೆಲ್ಲ ನನಗೆ ತೋಯಿಸಿದ ಚುರುಮುರಿ ಮಾಡಿ ಕೊಡತಿದ್ಲು. ನನಗ ಅದು ಬಾಳ ಸೇರತಿತ್ತು.

ಆದರ ಆಕೀ ಸತ್ತ ಮ್ಯಾಲ ನನಗ ಚುರುಮುರಿ ಅಂದ್ರ ಸಿಟ್ಟ ಬರ‌್ತಿತ್ತು. ಆವತ್ತಿನಿಂದ ತಿಂದ ಇಲ್ಲ. ಇವತ್ತು ನಿನ್ನ ನೋಡಿದ ಮ್ಯಾಲ ಆ ನೆನಪು ಬಂತು~. ಎಂದು ಕಣ್ಣೊರಿಸಿಕೊಂಡ. ಅರ್ಧ ತಾಸಿನ ಹಿಂದೆ ಐದು ರೂಪಾಯಿ ಲಗೇಜಿಗೆಂದು ಖರ್ಚು ಹಾಕುತ್ತಿದ್ದ ಈ ಕಂಡಕ್ಟರ್‌ನ ಬಗ್ಗೆ ತಾನು ಅದೆಷ್ಟು ತಪ್ಪು ತಿಳಿದುಕೊಂಡಿದ್ದೆನೆಂದು ಅವಳಿಗೆ ವ್ಯಥೆಯಾಯಿತು.
 
`ಯಪ್ಪಾ, ನಾ ನಿನಗ ಇವತ್ತ ಮತ್ತು ಹಿಂದ ಏನರ ಅಂದಿದ್ರ ಮನಸ್ಸಿನ್ಯಾಗ ಇಟ್ಕೊಬ್ಯಾಡ~. ಕಂಡಕ್ಟರ್, ಡ್ರೈವರ್ ಬೇಡ ಬೇಡವೆಂದರೂ `ಬರ‌್ರಿ, ಮನಿ ಇಲ್ಲೆ ಹತ್ರ ಐತಿ~ ಎಂದು ಜುಲುಮೆಯಿಂದ ಅವರನ್ನು ಮನೆಗೆ ಕರೆದೊಯ್ದು ಚುರುಮುರಿ ತಿನ್ನಿಸಿ ಚಹಾ ಕುಡಿಸಿ ಕಳಿಸಿದಳು.

ಕಂಡಕ್ಟರ್ ಅವಳ ಮನೆಗೆ ಹೋಗಿ ಬಂದಾಗಿನಿಂದ ಹನುಮವ್ವಳ ಅಂಗಡಿಗೆ ಬರುವ ಗಿರಾಕಿಗಳ ಸಂಖ್ಯೆ ಹೆಚ್ಚಾಗಿದೆ. ಅವಳ ಅಂಗಡಿಯಲ್ಲಿ ಸಿಗುವಂತಹ ಚುರುಮುರಿಯ ರುಚಿ ಬೇರೆ ಕಡೆ ಸಿಗಲು ಸಾಧ್ಯವಿಲ್ಲವೆಂಬ ಮಾತು ಜನಜನಿತವಾಗಿದೆ.

ಊರಿನ, ಪರವೂರಿನ ದೊಡ್ಡ ಅಂಗಡಿಕಾರರು ಹನುಮವ್ವಳ ವ್ಯಾಪಾರದ ರಹಸ್ಯ ಅರಿಯಲು ಅವಳ ಅಂಗಡಿಗೆ ಖುದ್ದು ಭೆಟ್ಟಿ ಕೊಟ್ಟರೂ ಅದೇನೆಂದು ತಿಳಿಯದ ವಿಸ್ಮಯಕ್ಕೆ ಬೆರಗಾಗುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT