ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡಿಗೆ ಮುತ್ತಿಟ್ಟು ಬೌಲಿಂಗ್ ಮಾಡುವ ಹುಡುಗರು...!

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೀದಿ ಬೀದಿಯಲ್ಲಿ ಕ್ರಿಕೆಟ್ ಆಡುವ ದೃಶ್ಯ ಅಚ್ಚರಿಯೇನಲ್ಲ. ಈ ಆಟವು ಜನಪ್ರಿಯವಾಗಿರುವ ಎಲ್ಲ ದೇಶಗಳ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಇಂಥ ನೋಟ ಸಹಜ. ನಾನು ಹುಟ್ಟಿ ಬೆಳೆದ ಹಳ್ಳಿಯಾದ ರಥಗಾಮಾ ಕೂಡ ಇದಕ್ಕೆ ಹೊರತಾಗಿಲ್ಲ. ಅಲ್ಲಿಗೆ ಹೋದಾಗ ಕೆಲವೊಮ್ಮೆ ಗಮನಿಸಿದ್ದೇನೆ. ಮಕ್ಕಳು ಬೌಲಿಂಗ್ ಮಾಡಲು ದೂರದಿಂದ ಓಡುವುದಕ್ಕೆ ಆರಂಭಿಸುವ ಮುನ್ನ ಚೆಂಡನ್ನು ಉಜ್ಜುತ್ತಾರೆ.

ಆನಂತರ ಅದಕ್ಕೆ ಮುತ್ತುಕೊಟ್ಟು ನಂತರ ಅದರ ಮೇಲೆ ಬೆರಳುಗಳನ್ನು ಬಿಗಿಗೊಳಿಸುತ್ತಾರೆ. ನಾನೂ ಹಾಗೆಯೇ ಮಾಡುತ್ತೇನೆ. ನನ್ನ ಆಟವನ್ನು ನೋಡಿ ಅವರು ಹೀಗೆ ಮಾಡುತ್ತಾರಾ? ಎಂದು ಕೆಲವೊಮ್ಮೆ ಯೋಚಿಸುತ್ತೇನೆ. ಶ್ರೀಲಂಕಾ ಕ್ರಿಕೆಟ್‌ಗೆ ನಾನು ಕೊಟ್ಟ ಕೊಡುಗೆ ಏನು ಎನ್ನುವುದನ್ನು ವಿಶ್ಲೇಷಣೆ ಮಾಡುವ ಗೊಡವೆಗೆ ಹೋಗುವುದಿಲ್ಲ. ಆದರೆ ಮಕ್ಕಳು ಬೌಲಿಂಗ್ ಅನುಕರಿಸುತ್ತಿರುವ ರೀತಿಯನ್ನು ಕಂಡಾಗ ಅದೇನೋ ಒಂಥರಾ ಸಂತಸವಾಗುತ್ತದೆ.

ನಾನು ತುಂಬಾ ದೂರದಿಂದ ಓಡಿಬಂದು ಚೆಂಡನ್ನು ಎಸೆಯುತ್ತೇನೆ. ಅದು ಸಹಜವಾಗಿಯೇ ನಾನು ಕಂಡುಕೊಂಡ ಬೌಲಿಂಗ್ ರೀತಿ. ಅದಕ್ಕಾಗಿಯೇ ಶಾಸ್ತ್ರೀಯವಾಗಿ ಆಟವನ್ನು ವಿಶ್ಲೇಷಣೆ ಮಾಡುವವರು ವಿಚಿತ್ರವಾದ ಶೈಲಿ ಎಂದು ಹೇಳುತ್ತಾರೆ. ಇನ್ನು ಕೆಲವರು ಪಂದ್ಯದ ಸ್ವರೂಪ ಬದಲಿಸುವಂಥ ಬೌಲರ್ ಎಂದು ಮೆಚ್ಚುಗೆ ಸೂಚಿಸುತ್ತಾರೆ. ಲೆಕ್ಕಕ್ಕೆ ಸಿಗದಷ್ಟು ನಿಯಮ ಉಲ್ಲಂಘನೆ ಮಾಡುವ ಬೌಲರ್ ಎಂದು ಟೀಕೆ ಮಾಡುವವರೂ ಕಡಿಮೆಯೇನಿಲ್ಲ. ‘ಕ್ಯಾಟಿಬಿಲ್ಲು’ ಬೌಲಿಂಗ್ ಶೈಲಿಯನ್ನು ನನಗೆ ಯಾರೂ ಹೇಳಿಕೊಡಲಿಲ್ಲ. ಸಹಜವಾಗಿಯೇ ಮೈಗೂಡಿಸಿಕೊಂಡು ಬಂದಿದ್ದೇನೆ.
 
ಆರಂಭದಲ್ಲಿನ ನನ್ನ ತಂತ್ರವನ್ನು ಸೂಕ್ಷ್ಮವಾಗಿ ತಿದ್ದಿಕೊಂಡಿದ್ದು ಕೋಚ್‌ಗಳು ಹಾಗೂ ದೇಹಚಲನಾ ಶಾಸ್ತ್ರ ತಜ್ಞರ ಸಹಾಯದಿಂದ. ಈ ಶೈಲಿಯಲ್ಲಿ ಕರಾರುವಕ್ಕಾಗಿ ಬೌಲಿಂಗ್ ದಾಳಿಯನ್ನು ನಡೆಸಿಕೊಂಡು ಹೋಗುವುದು ಕಷ್ಟ. ಆದರೆ ಇದರ ಪ್ರಯೋಜನವೆಂದರೆ ಹೆಚ್ಚಿನ ವೇಗದಿಂದ ಚೆಂಡನ್ನು ಎಸೆಯುವುದು ಸಾಧ್ಯವಾಗುತ್ತದೆ. ವೇಗದಿಂದ ಎದುರಾಳಿಗಳನ್ನು ಒತ್ತಡದಲ್ಲಿ ಇಡಲು ಸಾಧ್ಯ. ಪಂದ್ಯದಲ್ಲಿ ವೇಗದ ಜೊತೆಗೆ ಕರಾರುವಕ್ಕಾಗಿ ದಾಳಿ ಮಾಡಲು ಸಾಕಷ್ಟು ಏಕಾಗ್ರತೆ ಹಾಗೂ ಪರಿಶ್ರಮದ ಅಭ್ಯಾಸ ಅಗತ್ಯ.

‘ಕ್ಯಾಟಿಬುಲ್ಲು ಮಾಲಿಂಗ’ ಎಂದೇ ಅನೇಕರು ನನ್ನನ್ನು ಕರೆಯುತ್ತಾರೆ. ಅದು ನನಗೆ ಮುಜುಗರ ತರುವುದಿಲ್ಲ. ಸಹಜವಾಗಿ ಸ್ವೀಕರಿಸಿ ಸಂತಸ ಪಡುತ್ತೇನೆ. ಅದರಲ್ಲಿಯೂ ನನ್ನ ವಿಶಿಷ್ಟವಾದ ಬೌಲಿಂಗ್ ಶೈಲಿಯನ್ನು ಬೀದಿಯಲ್ಲಿ ಆಡುವ ಮಕ್ಕಳೂ ಅನುಕರಿಸುತ್ತಾರೆ ಎನ್ನುವುದನ್ನು ನೋಡಿದಾಗ ಸಂತಸ ಇಮ್ಮಡಿಯಾಗುತ್ತದೆ. ಶ್ರೀಲಂಕಾ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನನಗೆ ಹತ್ತು ವರ್ಷ ವಯಸ್ಸು. ಆಗ ನಾನಿನ್ನೂ ಟೆನಿಸ್‌ಬಾಲ್ ಕ್ರಿಕೆಟ್ ಆಡುತ್ತಿದ್ದೆ. ಆ ಕಾಲದಲ್ಲಿಯೇ ಕ್ರಿಕೆಟ್ ನನ್ನ ನೆಚ್ಚಿನ ಆಟವಾಗಿತ್ತು. ಶ್ರೀಲಂಕಾ ತಂಡವು ಆಡಿದ ಪ್ರತಿಯೊಂದು ಪಂದ್ಯವನ್ನೂ ಟೆಲಿವಿಷನ್‌ನಲ್ಲಿ ತಪ್ಪದೇ ನೋಡಿದ್ದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT