ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ಹೂವಿಗೆ ಕುಸಿದ ಬೇಡಿಕೆ: ಕಂಗಾಲಾದ ರೈತ

Last Updated 24 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮುಂಜಾನೆ ಸೂರ್ಯನ ಹೊಂಬಿಸಿಲಿಗೆ ತಿಳಿ ಹಳದಿ ಬಣ್ಣದ ಚೆಂಡು ಹೂವುಗಳು ನಳನಳಿಸುತ್ತಿವೆ. ಆದರೆ ಇಷ್ಟು ಚೆನ್ನಾಗಿರುವ ಬೆಳೆ ಬೆಳೆದಿರುವ ತಾಲ್ಲೂಕಿನ ಚೀಮನಹಳ್ಳಿಯ ರೈತ ವೆಂಕಟನಾರಾಯಣಪ್ಪನ ಮುಖ ಮಾತ್ರ ಕಪ್ಪಿಟ್ಟಿದೆ. ಇದಕ್ಕೆ ಕಾರಣ ಚೆಂಡು ಹೂವಿಗೆ ಈಗ ಬೆಲೆಯೇ ಇಲ್ಲ.

ತಮ್ಮಲ್ಲಿರುವ ತುಂಡು ಭೂಮಿ, ಸ್ವಲ್ಪವೇ ಇರುವ ನೀರಿನ ಲೆಕ್ಕಾಚಾರದಲ್ಲೇ ಹೂವುಗಳನ್ನು ಬೆಳೆಸಿ ದರೂ ಲಾಭ ಸಿಗದ ಕಾರಣ ಅವರಿಗೆ ಬೇಸರ ಮೂಡಿದೆ. ತಾಲ್ಲೂಕಿನಲ್ಲಿ ಒಂದೆಡೆ ಮಳೆ ಹಿಮ್ಮುಖವಾಗಿದ್ದರೆ, ಮತ್ತೊಂದೆಡೆ ಬೆಳೆಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ರೈತರಲ್ಲಿ ನಿರಾಸೆ ಆವರಿಸಿದೆ.

`ಮಾರುಕಟ್ಟೆಯಲ್ಲಿ ಮೂರು ರೂಪಾಯಿಗೆ ಒಂದು ಕೆಜಿಯಷ್ಟು ಚೆಂಡು ಹೂವು ಮಾರಿದರೂ ಯಾರು ಕೊಳ್ಳುತ್ತಿಲ್ಲ. ಚಿಕ್ಕಬಳ್ಳಾಪುರದ ಮಾರು ಕಟ್ಟೆಗೆ ಸಾಗಿಸುವ ಖರ್ಚು ಬರಕತ್ತಾಗುವುದಿಲ್ಲ. ಇನ್ನು ಬೆಳೆಗೆ ಖರ್ಚು ಮಾಡಿರುವ ಹಣವನ್ನು ಹೇಗೆ ತಾನೆ ಹಿಂಪಡೆಯಲು ಸಾಧ್ಯ~ ಎಂದು ವೆಂಕಟನಾರಾಯಣಪ್ಪ ತಿಳಿಸಿದರು.

`ಒಂದು ನಾರಿಗೆ ಮೂರು ರೂಪಾಯಿಯಂತೆ ತೆತ್ತು ಸಾವಿರ ನಾರನ್ನು ನಾಟಿ ಮಾಡಿದ್ದೇನೆ. ಔಷಧಿ, ಗೊಬ್ಬರ ಮೊದಲಾದ ಹಲವು ರೀತಿಯಲ್ಲಿ ಖರ್ಚುಗಳಾಗಿವೆ.

ಕರೆಂಟ್ ಸರಿಯಾಗಿ ಇರುವುದಿಲ್ಲ ಎಂದು ರಾತ್ರಿ ಸರಿ ಹೊತ್ತಿನಲ್ಲಿ ಬಂದು ಸ್ವಲ್ಪ ನೀರಿರುವ ಕೊಳವೆ ಬಾವಿಯಿಂದಲೇ ನೀರು ಹರಿಸಿದ್ದೇನೆ. ರಾತ್ರಿ ಹಗಲೂ ಕಷ್ಟಪಟ್ಟರೂ ಬೆಳೆಗೆ ಬೆಲೆ ಬರದಿದ್ದಾಗ ಆಗುವ ನೋವು ಹೇಳತೀರದು.

 ಕಳೆದ ಬಾರಿ ಹಬ್ಬಕ್ಕೆ ಒಂದು ಕೆಜಿ ಚೆಂಡು ಹೂವಿಗೆ 70 ರೂಪಾಯಿವರೆಗೂ ಬೆಲೆ ಬಂದಿತ್ತು. ಈ ಬಾರಿ ಹಬ್ಬಕ್ಕೆ ಸರಿ ಯಾಗಿ ಬೆಳೆ ಬರಲೆಂದು ನಾಟಿ ಮಾಡಿದ್ದೆ. ಆದರೆ ಹತ್ತು ದಿನ ಮೊದಲೇ ಬೆಳೆ ಬಂದು ಚಿಂತೆಗೀಡು ಮಾಡಿದೆ.

 ಸೋಮವಾರ ಕೀಳುತ್ತೇವೆ. ಮಹಾಲಯ ಅಮಾವಾಸ್ಯೆಗೆ ಏನಾದರೂ ಕೊಂಚ ಹಣ ಸಿಗುವುದೋ ನೋಡಬೇಕು~ ಎಂದು ಅವರು ಹೇಳಿದರು.

`ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೋಗಲು ಕನಿಷ್ಠ 450 ರೂಪಾಯಿ ಬೇಕು. ಅಲ್ಲಿ 100 ರೂಪಾಯಿಗೆ 10 ರೂಪಾಯಿ ಕಮಿಷನ್ ಪಡೆಯುತ್ತಾರೆ. ಇನ್ನು ಬೆಲೆ ಇಳಿದಾಗಂತೂ ರೈತರನ್ನು ದಳ್ಳಾಳಿಗಳು ಮತ್ತು ವ್ಯಾಪಾರಿಗಳು ಕೈಗೆ ಹಣ ದಕ್ಕದಂತೆ ಮಾಡಿ ಬಿಡುತ್ತಾರೆ.

 ರೈತರಿಗೆ ನೇರವಾಗಿ ಹಣ ಸಿಗುವ ವ್ಯವಸ್ಥೆ ಬರುವವರೆಗೂ ರೈತರ ಪರದಾಟ ತಪ್ಪಿದ್ದಲ್ಲ~ ಎಂದು ಹಿರಿಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT