ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದುಳ್ಳಿ ಚೆಲುವೆಯ ಚಿಕ್ಕ ಕನಸು

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ರೂಪದರ್ಶಿಯಾಗಿ ಆರಂಭಿಸಿದ ಬದುಕಿನ ಪ್ರವಾಹ ಈಗ ನಟನೆಯ ಕಡೆಗೆ ಹರಿದಿದೆ. ಒಂದಿಷ್ಟು ಕಷ್ಟ ಆದರೂ ಹೇಗಾದರೂ ಅವಕಾಶ ಗಿಟ್ಟಿಸುವ ಆತುರವಿಲ್ಲ. ಬೇಗ ಖ್ಯಾತಿ ಪಡೆಯಬೇಕೆನ್ನುವ ಅವಸರವಿಲ್ಲ. ಆದ್ದರಿಂದಲೇ ಸಭ್ಯತೆಯ ಚೌಕಟ್ಟಿನೊಳಗೆ ಇರುವ ಅವಕಾಶಗಳಿಗೆ ಮಾತ್ರ `ಯಸ್~. ಇಲ್ಲದಿದ್ದರೆ `ನೋ~. ಹಣದ ಆಸೆಯೂ ಇಲ್ಲ. ಆದ್ದರಿಂದ ದೊಡ್ಡ ಪ್ರೊಜೆಕ್ಟ್‌ಗಳನ್ನು ತಿರಸ್ಕರಿಸಿದಾಗ ಬೇಸರವೂ ಆಗದು. ನಾನು ಇರುವುದೇ ಹೀಗೆ. ಸ್ವಲ್ಪ ಮಡಿವಂತಿಕೆ. ನಾನು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದು ಗೊತ್ತು. ಆ ಚೌಕಟ್ಟನ್ನು ಮೀರುವಂಥ ಕೆಲಸ ಮಾಡುವುದಿಲ್ಲ.

ದಕ್ಷಿಣದಲ್ಲಿ ಸಣ್ಣ ಬಜೆಟ್‌ನ ಕೆಲವು ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಮುಂದೆಯೂ ಅಂಥ ಅವಕಾಶಗಳನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಅಭಿರುಚಿಯ ಚಿತ್ರಗಳು ಬರುತ್ತಿವೆ.ಯಾವುದೇ ಅಡ್ಡದಾರಿ ಹಿಡಿಯದೆಯೇ ಇಲ್ಲಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ನನ್ನ ಆಸೆ. ಆದರೆ ಒಳಿತುಗಳ ಮಾರ್ಗದಲ್ಲಿ ಯಶಸ್ಸಿನ ದಾರಿಯಲ್ಲಿ ನಡೆಯಬೇಕು ಎನ್ನುವ ನನ್ನಂಥವರಿಗೆ ಕಷ್ಟಗಳೇ ಹೆಚ್ಚು. ಆದರೂ `ಸಹನೆಯಿಂದ ಕಾಯುವವರಿಗೆ ಎಂದಾದರೂ ಒಂದು ದಿನ ಒಳ್ಳೆಯದಾಗುತ್ತದೆ~ ಎನ್ನುವ ತತ್ವ ನಂಬಿದವಳು ನಾನು.

ಹಿಂದಿಯಲ್ಲಿ ಕೆಲವು ಸಾಮಾಜಿಕ ಕಳಕಳಿಯ ಜಾಹೀರಾತು ಹಾಗೂ ಸಾಕ್ಷ್ಯಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ರ್ಯಾಂಪ್ ನನ್ನ ಮೊದಲ ಆಯ್ಕೆ. ಅಲ್ಲಿ ಸಾಕಷ್ಟು ಅವಕಾಶಗಳೂ ಇವೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಅನೇಕ ನಗರಗಳಲ್ಲಿ ಫ್ಯಾಷನ್ ಪ್ರದರ್ಶನಗಳು ನಡೆಯುತ್ತಿವೆ. ಆದ್ದರಿಂದ ಕೈಯಲ್ಲಿ ಕೆಲಸವಂತೂ ಇದೆ. ಸುಮ್ಮನೇ ಕುಳಿತಿದ್ದೇನೆ ಎಂದು ಎಂದೂ ಅನಿಸಿಲ್ಲ. ಬಿಡುವ ಸಿಕ್ಕಾಗ ಒಳ್ಳೆಯ ಛಾಯಾಗ್ರಾಹಕರು ತಮ್ಮ ಕೌಶಲ ಹೆಚ್ಚಿಸಿಕೊಳ್ಳಲು ನೆರವಾಗುವ ರೂಪದರ್ಶಿಯಾಗುತ್ತೇನೆ. ಅದರಿಂದ ನನ್ನ ಫೋಟೊ ಪೋರ್ಟ್‌ಫೋಲಿಯೊ ಕೂಡ ಸ್ವಲ್ಪ ದೊಡ್ಡದಾಗುತ್ತದೆ.

ಬೇರೆ ಬೇರೆ ಭಾಷೆಯ ಕೆಲವು ಧಾರಾವಾಹಿ ನಿರ್ದೇಶಕರು ಸಂಪರ್ಕಿಸಿದ್ದರು. ಧ್ವನಿ ಡಬ್ ಮಾಡುತ್ತೇವೆ; ಲೀಡ್ ರೋಲ್... ಎಂದೆಲ್ಲಾ ಹೇಳಿದರು. ಆದರೆ ನನ್ನಿಂದ ಆಗದ ಕೆಲಸವದು. ಮುಖ್ಯವಾಗಿ ನಾನೇ ಸೀರಿಯಲ್ ನೋಡಲು ಇಷ್ಟಪಡುವುದಿಲ್ಲ. ಅಂದಮೇಲೆ ಆಸಕ್ತಿಯೇ ಇಲ್ಲದ ಕ್ಷೇತ್ರದಲ್ಲಿ ಕಾಲಿಡುವುದಾದರೂ ಹೇಗೆ? ಸಿನಿಮಾ, ಜಾಹೀರಾತು ಹಾಗೂ ಸಾಕ್ಷ್ಯಚಿತ್ರಗಳು ಓಕೆ. ಅಲ್ಲಿ ಒಂದೇ ಕಡೆಗೆ ಅಂಟಿಕೊಂಡು ಇರಬೇಕು ಎನ್ನುವ ಪರಿಸ್ಥಿತಿ ಇರುವುದಿಲ್ಲ. ನನಗೆ ಪ್ರಿಂಟ್ ಜಾಹೀರಾತಿಗೆ ರೂಪದರ್ಶಿ ಅಗುವುದು ತುಂಬಾ ಇಷ್ಟ. ದೊಡ್ಡ ಹೋಲ್ಡಿಂಗ್‌ಗಳಲ್ಲಿ ನನ್ನ ಮುಖವನ್ನು ಕಂಡಾಗ ಅದೇನೋ ಒಂಥರಾ ತೃಪ್ತಿ ಸಿಗುತ್ತದೆ. ಆಭರಣ ಹಾಗೂ ಸೀರೆಗಳ ಜಾಹೀರಾತುಗಳ ದೊಡ್ಡ ಫಲಕಗಳಲ್ಲಿ ನನ್ನನ್ನೇ ನೋಡಿ ಅದೆಷ್ಟೊಂದು ಸಂತಸಪಟ್ಟಿದ್ದೇನೆ. ಟೆಲಿವಿಷನ್ ಜಾಹೀರಾತು ಅಂತೂ ನಿಜವಾದ ಪ್ರತಿಭೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲು ಒಂದು ಉತ್ತಮ ವೇದಿಕೆ. 

 ಈಗ ಎಲ್ಲರೂ ದಿನಬೆಳಗಾಗುವಲ್ಲಿ ಖ್ಯಾತಿ ಪಡೆಯಲು ಬಯಸುತ್ತಾರೆ. ಆದರೆ ನಾನು ಹಾಗಲ್ಲ. ತುಂಬಾ ಸಹನೆಯಿಂದ ಮುಂದೆ ಸಾಗುವ ಗುಣ. ಅದು ನನ್ನ ತಂದೆ-ತಾಯಿಯಿಂದ ಬಳುವಳಿಯಾಗಿ ಬಂದಿದ್ದು. ಅದೇ ಇಲ್ಲಿಯವರೆಗಿನ ನನ್ನ ದೊಡ್ಡ ಸಾಧನೆ ಎಂದುಕೊಳ್ಳುತ್ತೇನೆ. ನನ್ನ ಸುತ್ತಲೂ ಸುಗುಣರಾದ ಜನರಿದ್ದಾರೆ. ಅವರೊಂದಿಗೆ ಸ್ವಲ್ಪ ಕಾಲ ಕಳೆದರೂ ಹೊಸ ಎನರ್ಜಿ ಸಿಕ್ಕಂತಾಗುತ್ತದೆ. ಮನಸ್ಸನ್ನು ಉಲ್ಲಸಿತವಾಗಿ ಇಟ್ಟುಕೊಳ್ಳಲು ಸಂಗೀತ ಆಲಿಸುತ್ತೇನೆ. ಒಳ್ಳೆಯ ಸಿನಿಮಾಗಳನ್ನು ನೋಡುತ್ತೇನೆ. ಸಕಾರಾತ್ಮಕ ಯೋಚನೆಯೊಂದಿಗೆ ಪ್ರತಿಯೊಂದು ದಿನವನ್ನು ಆರಂಭಿಸುತ್ತೇನೆ. ಆದ್ದರಿಂದ ದಿನದ ಕೊನೆಗೆ ಬೇಸರ ಕಾಡುವುದಿಲ್ಲ. ಸದಾ ನಗುಮೊಗದಿಂದ ಇರುತ್ತೇನೆ. ಅದೇ ಅಲ್ಲವೇ ಯಶಸ್ಸು. ಅಡ್ಡದಾರಿ ಹಿಡಿದು ಯಶಸ್ಸು ಕಂಡು ಆನಂತರ ಪರಿತಪಿಸಿದ ಹಲವರ ಬದುಕಿನ ಕಥೆಗಳು ನಮ್ಮ ಮುಂದಿವೆ. ಅವುಗಳು ನನ್ನಂಥ ಹೊಸ ರೂಪದರ್ಶಿಗಳಿಗೆ ಹಾಗೂ ನಟಿಯರಿಗೆ ನೀತಿಕಥೆಗಳು.

ಮಾಡೆಲಿಂಗ್ ಜಗತ್ತಿನಲ್ಲಿ `ಬಿಳಿತ್ವಚೆ~ಯ ಮೋಹ ಹೆಚ್ಚು. ನನಗೆ ಅದೊಂದು ವಿಷಯ ಸದಾ ಕಿರಿಕಿರಿ ಮಾಡುತ್ತದೆ. ಅದೇ ನಾನು ಅನೇಕ ಬಾರಿ ಎದುರಿಸಿರುವ ದೊಡ್ಡ ಸವಾಲು. ಈ ಮೋಹದಿಂದ ಹೊರಬಂದು ನೋಡಿದರೆ ನನ್ನಂಥವರೂ ಕ್ಯಾಮೆರಾ ಕಣ್ಣಿನಲ್ಲಿ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತೇವೆ. ಆದರೆ ಕೆಲವರಿರುತ್ತಾರೆ ಅವರೆಂದೂ ಈ `ಬೆಳ್ಳನೆಯವರು ಬೇಕು~ ಎನ್ನುವ ಮೋಹವನ್ನು ಬಿಡುವುದಿಲ್ಲ. ಅದರಲ್ಲಿಯೂ ಈ ಗ್ಲಾಮರ್ ಲೋಕದಲ್ಲಿ ಇಂಥ ಶ್ವೇತವರ್ಣ ಪ್ರಿಯರು ಹೆಚ್ಚು. ಇತ್ತೀಚೆಗೆ ಒಂದು ಅಂಶ ಗಮನಿಸಿದ್ದೇನೆ. ಹೆಚ್ಚಿನ ಸಿನಿಮಾ ಹಾಡುಗಳಲ್ಲಿ ಸಹ ನೃತ್ಯಗಾರ್ತಿಯರು ವಿದೇಶಿಯರು. ಕನ್ನಡ ಸೇರಿದಂತೆ ದಕ್ಷಿಣದ ಎಲ್ಲ ಸಿನಿಮಾಗಳಿಗೂ ಈ ರೋಗ ಅಂಟಿಕೊಂಡಿದೆ.

ಗ್ಲಾಮರ್ ಜಗತ್ತಿನಲ್ಲಿ ನನ್ನ ಬದುಕಿಗೆ ಆದರ್ಶವೆಂದರೆ ಮಾಧುರಿ ದೀಕ್ಷಿತ್. ನಾನು ಅವರ ಸಿನಿಮಾ ನೋಡುತ್ತಾ ಬೆಳೆದವಳು. ಅವಳಂತೆ ಹೆಜ್ಜೆ ಹಾಕುತ್ತಾ ನೃತ್ಯ ಕಲಿತವಳು. ಆದರೆ ನಿತ್ಯ ಜೀವನದಲ್ಲಿ ಅದೆಷ್ಟೊಂದು ಜನರು ನಮ್ಮ ಮುಂದೆ ಅನುಕರಣೀಯರಾಗಿ ನಿಲ್ಲುತ್ತಾರೆ. ಕೆಲವೊಮ್ಮೆ ಅವರ ಹೆಸರು ಕೂಡ ನನಗೆ ಗೊತ್ತಿರುವುದಿಲ್ಲ. ಆದರೂ ಅವರು ಜೀವನ ನಡೆಸುವ ರೀತಿ ಮೆಚ್ಚುವಂಥದಾಗಿರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT