ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ `ಕಾರ್ಯಭಾರ'

ಸಿಬ್ಬಂದಿ ಕೊರತೆ: ಹೆಚ್ಚಿದ ಒತ್ತಡ
Last Updated 18 ಏಪ್ರಿಲ್ 2013, 9:43 IST
ಅಕ್ಷರ ಗಾತ್ರ

ಕೋಲಾರ: ಹಗಲಿನಲ್ಲಿ ಈ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚು. ಒಂದು ಬದಿಯಿಂದ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗಲೇ ಮತ್ತೊಂದು ಬದಿಯಿಂದ ವಾಹನಗಳು ಸಲೀಸಾಗಿ ಹಾದು ಹೋಗುತ್ತವೆ. ಹೀಗಾಗಿ ಎಲ್ಲ ವಾಹನಗಳನ್ನೂ ಕೇವಲ ಇಬ್ಬರಿಂದ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ.

-ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ತಾಲ್ಲೂಕಿನ ಚೆಕ್‌ಪೋಸ್ಟ್ ಒಂದರ ಪೊಲೀಸ್ ಸಿಬ್ಬಂದಿಯೊಬ್ಬರ ನುಡಿಗಳಿವು.

ರಾತ್ರಿ ವೇಳೆ ದೀಪದ ವ್ಯವಸ್ಥೆಗೆಂದು ಆ ಚೆಕ್ ಪೋಸ್ಟ್‌ನ ತಲೆ ಮೇಲಿರುವ ವಿದ್ಯುತ್ ಮೇನ್ ಲೇನ್‌ಗೆ ತಂತಿಯೊಂದನ್ನು ತಗುಲಿಸಲಾಗಿದೆ. `ವಿದ್ಯುತ್ ಕೈ ಕೊಟ್ಟರೆ ಕತ್ತಲು ಗವೋ ಎನ್ನುತ್ತದೆ. ಕೈಯಲ್ಲಿರುವ ಬ್ಯಾಟರಿ ಬೆಳಕಿನಲ್ಲೇ ಎಲ್ಲ ಕೆಲಸವೂ ಆಗಬೇಕು. ಈ ಬ್ಯಾಟರಿ ಕೂಡ ನಮ್ಮ ಸ್ವಂತದ್ದು...'

-ಮತ್ತೊಬ್ಬ ಸಿಬ್ಬಂದಿ ಹೀಗೆ ಹೇಳಿ ವಾಹನವೊಂದರ ತಪಾಸಣೆಗೆ ಮುಂದಾದರು.

ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕಟವಾದ ಬಳಿಕ ಅಕ್ರಮಗಳ ತಡೆಗೆಂದು ಏ.3ರಿಂದ ಜಿಲ್ಲೆಯ ಹಲವೆಡೆ ಪೊಲೀಸ್ ಇಲಾಖೆ ಸ್ಥಾಪಿಸಿರುವ, 24 ಗಂಟೆ ಕಾರ್ಯನಿರ್ವಹಿಸುವ ಚೆಕ್‌ಪೋಸ್ಟ್‌ಗಳ ಪೈಕಿ ಹಲವೆಡೆ ಪೊಲೀಸ್ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಎರಡು ಪಾಳಿಯಲ್ಲಿ (ಬೆಳಿಗ್ಗೆ 8ರಿಂದ ರಾತ್ರಿ 8, ರಾತ್ರಿ 8ರಿಂದ ಬೆಳಿಗ್ಗೆ 8) ಕೇವಲ ನಾಲ್ವರು ಮಾತ್ರ ಸಾವಿರಾರು ವಾಹನಗಳ ತಪಾಸಣೆ ಕಾರ್ಯ ನಿರ್ವಹಿಸಬೇಕಾಗಿದೆ.

ಚೆಕ್‌ಪೋಸ್ಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ `ಪ್ರಜಾವಾಣಿ' ಪ್ರತಿನಿಧಿ ಮಂಗಳವಾರ ರಾತ್ರಿ ಕೆಲವು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿ ಮೇಲೆ `ಕಾರ್ಯಭಾರ' ಹೆಚ್ಚಿದ್ದು ಕಂಡುಬಂತು.

ಪೊಲೀಸರಿಗೆ ಬೆಳಕಿನ ಪ್ರತಿಫಲನ ಜಾಕೆಟ್‌ಗಳನ್ನು ನೀಡದೇ ಇರುವುದರಿಂದ, ಎದುರಿನಿಂದ ಬರುವ ವಾಹನಗಳ ಮೇಲೆ ಬ್ಯಾಟರಿ ಬೆಳಕನ್ನು ಬಿಟ್ಟು ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸಬೇಕಾದ ಸನ್ನಿವೇಶವೂ ಚೆಕ್‌ಪೋಸ್ಟ್‌ನಲ್ಲಿದೆ.

ಏ.3ರಿಂದ ಶುರುವಾಗಿರುವ ವಾಹನಗಳ ತಪಾಸಣೆ ಮತದಾನದ ದಿನವಾದ ಮೇ 5ರಂದು ಕೊನೆಗೊಳ್ಳಲಿದೆ. ವಾಹನಗಳ ತಪಾಸಣೆಯ ಚೆಕ್‌ಪೋಸ್ಟ್ ಕಾರ್ಯನಿರ್ವಹಣೆ ಒಂದು ಪಾಳಿಯಲ್ಲಿ ಕೇವಲ ಇಬ್ಬರಿಂದ ಸಾಧ್ಯವಿಲ್ಲ ಎನ್ನುತ್ತಾರೆ ಸಿಬ್ಬಂದಿ.
ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ಯಾರೂ ಬಂದಿಲ್ಲ.

ಹೀಗಾಗಿ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳ ತಪಾಸಣೆ ಕಷ್ಟಕರವಾಗಿದೆ. ಹಗಲಿನಲ್ಲಂತೂ ವಾಹನಗಳು ಹೆಚ್ಚಿರುವುದರಿಂದ ಒತ್ತಡವೂ ಹೆಚ್ಚಿರುತ್ತದೆ ಎನ್ನುತ್ತಾರೆ ಅವರು.

108 ಅಂಬುಲೆನ್ಸ್‌ನಂಥ ತುರ್ತು ವಾಹನಗಳೂ ಹೆಚ್ಚು ಸಂಚರಿಸುತ್ತವೆ. ಎಲ್ಲ ವಾಹನಗಳನ್ನೂ ಇಬ್ಬರೇ ತಪಾಸಣೆ ಮಾಡಲು ಶುರು ಮಾಡಿದರೆ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗುತ್ತದೆ. ಆ ಎಚ್ಚರಿಕೆಯನ್ನಿಟ್ಟುಕೊಂಡೇ ವಾಹನಗಳ ತಪಾಸಣೆ ಮಾಡುತ್ತೇವೆ. ರಾತ್ರಿ 11ರ ಬಳಿಕ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ಒತ್ತಡ ಕೊಂಚ ಕಡಿಮೆ ಇರುತ್ತದೆ ಎನ್ನುವ ಸಿಬ್ಬಂದಿಗೆ ಸಂಪರ್ಕದ ಸಲುವಾಗಿ ವಾಕಿಟಾಕಿ ನೀಡಲಾಗಿದೆ.

ಜಿಲ್ಲಾ ಕೇಂದ್ರವಾದ ನಗರದ ಬೃಂದಾವನ ವೃತ್ತದಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಇಬ್ಬರಿಗಿಂತಲೂ ಸಿಬ್ಬಂದಿ ಹೆಚ್ಚು ಕಂಡು ಬಂದರು. ಜಿಲ್ಲಾ ಕೇಂದ್ರಕ್ಕೆ ಪ್ರವೇಶಿಸುವ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಇಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಿಬ್ಬಂದಿ ಕೊರತೆ ಇದೆ. ಆದರೆ ಎರಡು ಪಾಳಿಯಲ್ಲಿ ಇಬ್ಬಿಬ್ಬರನ್ನು ನಿಯೋಜಿಸಿ ವಾಹನಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಇತ್ತೀಚೆಗಷ್ಟೆ ಅರೆ ಸೇನಾಪಡೆ ಸಿಬ್ಬಂದಿಯೂ ಬಂದಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಅವರನ್ನು ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಹೇಳಿದರು.

ಅಬಕಾರಿ ಚೆಕ್‌ಪೋಸ್ಟ್‌ಗೂ ಸಿಬ್ಬಂದಿ ಕೊರತೆ
ಸಂಪಂಗೇರೆಯಲ್ಲಿರುವ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಒಬ್ಬ ಎಸ್‌ಐ ಮಾತ್ರ ಇದ್ದಾರೆ. ಎಪಿಎಂಸಿ ಚೆಕ್‌ಪೋಸ್ಟ್‌ನಲ್ಲೇ ಅವರೂ ಆಶ್ರಯ ಪಡೆದಿದ್ದಾರೆ. ಅವರಿಗೆ ಸಹಾಯಕ ಸಿಬ್ಬಂದಿಯೂ ಇಲ್ಲ. ವಾಹನಗಳ ತಪಾಸಣೆ, ದಾಖಲೆಗಳ ನೋಂದಣೀಕರಣ ಸೇರಿದಂತೆ ಎಲ್ಲ ಕಾರ್ಯವನ್ನೂ ಅವರೊಬ್ಬರೇ ಮಾಡುತ್ತಿರುವುದು ಬುಧವಾರ ಕಂಡುಬಂತು.

ಅಲ್ಲಿಗೆ ಸಮೀಪದಲ್ಲೇ ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಂ ಕೂಡ ಇದೆ. ಅಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಇಬ್ಬರು ಕಾನ್ಸ್‌ಟೆಬಲ್, ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಮತ್ತು ನಾಲ್ವರು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡೆಟೋನೇಟರ್- ಬಾಂಬ್ ಪತ್ತೆ ಉಪಕರಣ, 20 ಸುತ್ತು ಗುಂಡು ಹಾರಿಸಬಲ್ಲ ಗನ್‌ಗಳನ್ನು ಅವರಿಗೆ ನೀಡಲಾಗಿದೆ.

ಅಬಕಾರಿ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸುವ ಸಲುವಾಗಿ ಹೊರ ಗುತ್ತಿಗೆ ಆಧಾರದಲ್ಲಿ ಹಲವರನ್ನು ನೇಮಿಸಿಕೊಳ್ಳಲಾಗಿದೆ ಎನ್ನುತ್ತವೆ ಅಬಕಾರಿ ಇಲಾಖೆಯ ಮೂಲಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT