ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಬಳಗದ ಮುಂದೆ ಅಗ್ನಿಪಥ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ:  ಡ್ರ್ಯಾಗ್ ಫ್ಲಿಕ್ ಪರಿಣಿತ ಸಂದೀಪ್ ಸಿಂಗ್ ಮುಂದಿನ ಸೋಮವಾರ (ಫೆಬ್ರುವರಿ 27) ತಮ್ಮ ಜನ್ಮದಿನ ಆಚರಿಸಿಕೊಳ್ಳುವ ಮುನ್ನ  ಭಾರತ ಹಾಕಿ ತಂಡ ಲಂಡನ್ ಒಲಿಂಪಿಕ್ಸ್ ಅರ್ಹತೆ ಪಡೆಯುವುದನ್ನು ನೋಡಿ ಸಂಭ್ರಮಿಸುವ ತವಕದಲ್ಲಿದ್ದಾರೆ. ಆದರೆ ಅದಕ್ಕಾಗಿ ಮಂಗಳವಾರದಿಂದ ಎರಡನೇ ಸುತ್ತಿನ ಲೀಗ್‌ನ `ಅಗ್ನಿಪಥ~ವನ್ನು ದಾಟಬೇಕು.

ಭಾನುವಾರ ರಾತ್ರಿ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಪುರುಷರ ವಿಭಾಗದಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿರುವ ಭಾರತವು ಮುಂದಿನ ಹಂತದಲ್ಲಿ ಫ್ರಾನ್ಸ್ (ಮಂಗಳವಾರ), ಕೆನಡಾ (ಬುಧವಾರ) ಮತ್ತು ಪೋಲೆಂಡ್ (ಶುಕ್ರವಾರ) ತಂಡಗಳನ್ನು ಎದುರಿಸಬೇಕು.

ಮೊದಲ ಪಂದ್ಯದಲ್ಲಿ ಭಾರತದ ಫಾರ್ವರ್ಡ್ ಲೈನ್ ಆಟಗಾರರ ರಭಸಕ್ಕೆ ಅನನುಭವಿ ತಂಡ ಸಿಂಗಪುರ ಸೋತರೆ, ಎರಡನೇ ಪಂದ್ಯದಲ್ಲಿ ಸಂದೀಪ್ ಸಿಂಗ್  ಡ್ರ್ಯಾಗ್ ಫ್ಲಿಕ್ ಕೈಚಳಕಕ್ಕೆ ಇಟಲಿ ತಂಡ ಸೋತು ಸುಸ್ತಾಗಿ ಹೋಯಿತು. ಇಟಲಿ ವಿರುದ್ಧದ ಪಂದ್ಯದ ಗೆಲುವಿಗೆ ಅವರ ಮೂರು ಗೋಲುಗಳೇ ಕಾರಣವಾದವು.

ಆದರೆ ಫ್ರಾನ್ಸ್ ತಂಡವನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ ಎನ್ನುವುದನ್ನು ಸ್ವತಃ ಸಂದೀಪ್ ಸಿಂಗ್ ಒಪ್ಪಿಕೊಳ್ಳುತ್ತಾರೆ. ಪಂದ್ಯದ ನಂತರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ನಮ್ಮ ಲೆಕ್ಕಾಚಾರದಂತೆ  ಈ ಎರಡೂ ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದೇವೆ. ಆದರೆ, ಮುಂದಿನ ಪಂದ್ಯಗಳು ಸರಳವಲ್ಲ. ಆದ್ದರಿಂದ ಅದಕ್ಕಾಗಿ ಇನ್ನೂ ಉತ್ತಮವಾಗಿ ಆಡುತ್ತೇವೆ~ ಎಂದು ಅವರು ಹೇಳುತ್ತಾರೆ.

ಪಾಯಿಂಟ್ ಪಟ್ಟಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಭಾರತ ಗೆದ್ದು ಆರು ಪಾಯಿಂಟ್ ಗಳಿಸಿದ್ದು, ಒಟ್ಟು 23 ಗೋಲುಗಳನ್ನು ಖಾತೆಯಲ್ಲಿಟ್ಟುಕೊಂಡು ಅಗ್ರಸ್ಥಾನದಲ್ಲಿದೆ. ಫ್ರಾನ್ಸ್ ಕೂಡ ಎರಡು ಪಂದ್ಯಗಳನ್ನು ಗೆದ್ದು ಆರು ಪಾಯಿಂಟ್‌ಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಈ ಟೂರ್ನಿಯನ್ನು ಗೆಲ್ಲಬೇಕಾದರೆ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ತಂಡಕ್ಕೆ ಇದೆ. ಏಕೆಂದರೆ 26ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯ ಮೊದಲ ಮತ್ತು ದ್ವಿತೀಯ ಸ್ಥಾನದ ತಂಡಗಳು ಸೆಣಸುತ್ತವೆ. ಈ ಪಂದ್ಯದಲ್ಲಿ ಗೆದ್ದ ಏಕೈಕ ತಂಡವು ಲಂಡನ್ ವಿಮಾನ ಏರಲು ಅರ್ಹತೆ ಗಳಿಸುತ್ತದೆ. ಒಂದು ವೇಳೆ ಮಂಗಳವಾರದ ಪಂದ್ಯದಲ್ಲಿ ಭಾರತ ಸೋತರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನವನ್ನಾದರೂ ಉಳಿಸಿಕೊಳ್ಳಲೇ ಬೇಕು. 

`ನಾವೀಗ ಗೆಲುವಿನ ನಾಗಾಲೋಟದಲ್ಲಿದ್ದೇವೆ. ಅದನ್ನೇ ಕಾಯ್ದುಕೊಂಡು ಮುನ್ನುಗ್ಗುತ್ತೇವೆ. ಅವರ ತಂತ್ರಗಳಿಗೆ ಎದುರೇಟು ನೀಡುತ್ತೇವೆ. ನಮ್ಮ ತಂಡವು ಎಲ್ಲ ರೀತಿಯಿಂದಲೂ ಬಲಿಷ್ಠವಾಗಿದ್ದು, ಆಟಗಾರರ ಫಿಟ್‌ನೆಸ್ ಕೂಡ ಚೆನ್ನಾಗಿದೆ~ ಎಂದು ಮುಖ್ಯ ಕೋಚ್ ಮೈಕೆಲ್ ನಾಬ್ಸ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಿಂಗಪುರದ ವಿರುದ್ಧದ ಪಂದ್ಯದಲ್ಲಿ 15 ಗೋಲುಗಳನ್ನು ಗಳಿಸಿದ್ದರೂ ಅದರಲ್ಲಿ 14 ಫೀಲ್ಡ್ ಗೋಲುಗಳಾಗಿದ್ದವು. ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ಭಾರತ ಎಡವಿತ್ತು. ಆದರೆ ಎರಡನೇ ಪಂದ್ಯದಲ್ಲಿ ಈ ತಪ್ಪು ನಡೆಯಲಿಲ್ಲ. ಜೊತೆಗೆ ಪ್ರಥಮಾರ್ಧದಲ್ಲಿ ವೇಗ ಮತ್ತು ಆಕ್ರಮಣಕ್ಕೆ ಒತ್ತು ನೀಡಿದ್ದ ತಂಡ, ಎರಡನೇ ಅವಧಿಯಲ್ಲಿ ರಕ್ಷಣೆಗೆ ಹೆಚ್ಚಿನ ಗಮನ ಹರಿಸಿತ್ತು.  ಮೊದಲ ಅವಧಿಯಲ್ಲಿ ಸಿಕ್ಕ ನಾಲ್ಕು ಪೆನಾಲ್ಟಿ ಕಾರ್ನರ್‌ಗಳು ಗೋಲಿನ ರೂಪ ಪಡೆಯಲು ಸಂದೀಪ್ ಸಿಂಗ್ (3) ಮತ್ತು ಕರ್ನಾಟಕದ ಹುಡುಗ ವಿ.ಆರ್. ರಘುನಾಥ್ (1) ಕಾರಣರಾಗಿದ್ದರು.

ಮಿಡ್‌ಫೀಲ್ಡರ್ ಸರದಾರ್ ಸಿಂಗ್,  ಮನಪ್ರೀತ್‌ಸಿಂಗ್, ಸರವಣಜೀತ್‌ಸಿಂಗ್, ಕೋತಾಜಿತ್‌ಸಿಂಗ್, ದನೀಶ್ ಮುಜ್ತಾಬಾ  ಫಾರ್ವರ್ಡ್ ಲೈನ್‌ನಲ್ಲಿ ಸುನಿಲ್, ಗುರುವಿಂದರ್ ಸಿಂಗ್ ಚಂಡಿ, ಶಿವೇಂದ್ರಸಿಂಗ್ ಎಸ್.ಕೆ. ಉತ್ತಪ್ಪ, ತುಷಾರ್ ಖಾಂಡ್ಕರ್ ಚೆಂಡಿನ ಮೇಲೆ ಹಿಡಿತ ಸಾಧಿಸುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಸಫಲರಾಗಿದ್ದಾರೆ. ಅದೇ ಹೊಂದಾಣಿಕೆಯೂ ಮುಂದಿನ ಪಂದ್ಯಗಳಲ್ಲಿ ಮುಂದುವರೆದರೆ ಗೆಲುವು ಖಚಿತ.

ವಿಶ್ರಾಂತಿ ದಿನವಾದ ಸೋಮವಾರ ಅಭ್ಯಾಸಕ್ಕಾಗಿ ಮೈದಾನಕ್ಕೆ ತಂಡದ ಆಟಗಾರರು ಬರಲಿಲ್ಲ. ಆದರೆ ಹೊಟೇಲ್‌ನ ಜಿಮ್ನಾಷಿಯಂನಲ್ಲಿ ಹೆಚ್ಚು ಹೊತ್ತು ಕಳೆದ ನಂತರ, ತರಬೇತುದಾರರು ಮತ್ತು ಆಟಗಾರರು ಮುಂದಿನ ಪಂದ್ಯಗಳ ಯೋಜನೆಯನ್ನು ರೂಪಿಸಲು ಸಮಾಲೋಚನೆ ನಡೆಸಿದರು.

2008ರ ಕಹಿನೆನಪನ್ನು ಮರೆತು, ಭಾರತದ ರಾಷ್ಟ್ರೀಯ ಕ್ರೀಡೆಗೆ ಹೊಸದೊಂದು ಹುಟ್ಟು ನೀಡಬೇಕಾದರೆ ಮುಂದಿನ `ಅಗ್ನಿಪರೀಕ್ಷೆ~ಯಲ್ಲಿ ಭರತ್ ಚೆಟ್ರಿ ಬಳಗ ಗೆದ್ದು ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT