ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಾಪುರದ ಚಿನ್ನದಂತಹ ಸರ್ಕಾರಿ ಶಾಲೆ

Last Updated 23 ಅಕ್ಟೋಬರ್ 2011, 13:25 IST
ಅಕ್ಷರ ಗಾತ್ರ

ಹೊಸ ಆರ್ಥಿಕ ನೀತಿ, ಉದಾರೀಕರಣ, ಜಾಗತೀಕರಣ ಅಭಿವೃದ್ಧಿಶೀಲ ರಾಷ್ಟ್ರಗಳ ಜನರ ಜೀವನಮಟ್ಟವನ್ನು ಉನ್ನತಮಟ್ಟಕ್ಕೆ ಏರಿಸಿದೆ. ಜತೆಜತೆಗೆ ಸಾಮಾಜಿಕ ಸಂಸ್ಥೆಗಳು ಗುಣಮಟ್ಟದ ಸುಧಾರಣೆಗಳೊಂದಿಗೆ ಆಧುನಿಕ ಸೌಲಭ್ಯ ಬಳಸಿಕೊಂಡು ಅಸ್ತಿತ್ವ ಪಡೆದುಕೊಳ್ಳುತ್ತಲಿವೆ.

ಅಂತಹ ಬದಲಾವಣೆಗೆ ಸ್ಪಂದಿಸಿದ ಶಿಕ್ಷಣ ಕ್ಷೇತ್ರ ಬಿರುಸಾಗಿ ತನ್ನ ಹೊಸ ರೂಪದಲ್ಲಿ ನಿಂತಿದೆ. ವೈವಿಧ್ಯಮಯ ಕೋರ್ಸ್‌ಗಳು, ಐಷಾರಮಿ ಕಟ್ಟಡಗಳು, ಕೊಠಡಿಗಳು, ತಾಂತ್ರಿಕ ವ್ಯವಸ್ಥೆ, ಎಲೆಕ್ಟ್ರಾನಿಕ್ ಪಾಠೋಪಕರಣಗಳು ವಿದ್ಯಾಕಾಂಕ್ಷಿಗಳನ್ನು ಕೈ ಬೀಸಿ ಕರೆಯುತ್ತಿವೆ.

ಶ್ರೀಮಂತ ಹಾಗೂ ಮೇಲ್ಮಧ್ಯಮ ವರ್ಗ ತಮ್ಮ ಮಕ್ಕಳಿಗೆ ಆಧುನಿಕ ಜೀವನ ಶೈಲಿಗೆ ಆವಶ್ಯವಾದ ಉದ್ಯೋಗ ಪಡೆಯುವಂತಹ ಶಿಕ್ಷಣ ಕೊಡಿಸಲು ಹಾತೊರೆಯುತ್ತಿದ್ದಾರೆ. ಹಣದ ಥೈಲಿ ಹಿಡಿದು ಗುಣಮಟ್ಟ ಹಾಗೂ ಆಧುನಿಕತೆಯ ಸ್ಪರ್ಶವಿರುವ ಶಾಲಾಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸುತ್ತಾರೆ.

ಕೆಳ ಮಧ್ಯಮ ವರ್ಗ ಹಾಗೂ ಬಡವರಿಗೆ ಹಳ್ಳಿಗಳ ಸರ್ಕಾರಿ ಶಾಲೆಗಳೇ ವಿದ್ಯಾಭ್ಯಾಸದ ಆಸರೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಿರುವ ಇಂದಿನ ದಿನಗಳಲ್ಲಿ ಸಂತೇಬೆನ್ನೂರು ಸಮೀಪದ ಚೆನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಮಾದರಿಯಾಗಿದೆ.

ಪರಿಸರ ಸ್ನೇಹಿ ಆವರಣ: ಶಾಲಾ ಕಟ್ಟಡದ ಸುತ್ತ ವಿಶಾಲ ಮೈದಾನದಲ್ಲಿ ಹಸಿರು ಗಿಡ ಮರಗಳು ಮಕ್ಕಳನ್ನು ಶಾಲೆಗೆ ಕೈ ಬೀಸಿ ಕರೆಯುವಂತಿವೆ. ಶಿಕ್ಷಕ ಹಾಗೂ ವಿದ್ಯಾರ್ಥಿಗಳಗೆ ಕಲಿಕೆಗೆ ಮನೋಲ್ಲಾಸ ನೀಡಲು ಸಹಕಾರಿಯಾಗಿವೆ. ತೇಗದ ಮರಗಳನ್ನು ಕೂಡ ಪರಿಸರ ಶಿಕ್ಷಣದ ಮಾಹಿತಿ ನೀಡಲು ನಿಂತಂತಿವೆ.

ಅಂದದ ಶಾಲಾ ಕೊಠಡಿ: ಶಾಲಾ ಕೊಠಡಿಗಳು ಪಠ್ಯ-ಪಠ್ಯೇತರ ಮಾಹಿತಿಗಳ ಆಗರಗಳಾಗಿವೆ. ಬಣ್ಣಗಳ ಬರಹಗಳಲ್ಲಿ ಮೂಡಿ ಬಂದ ಅಕ್ಷರಗಳು ಹಾಗೂ ಚಿತ್ರಗಳು, ಚಿತ್ರಪಟಗಳು, ಪ್ರಯೋಗಶಾಲೆ ಕೊಠಡಿಯ ಆಕರ್ಷಣೆಯನ್ನು ಹೆಚ್ಚಿಸಿ ಕಲಿಕೆಗೆ ಪ್ರೋತ್ಸಾಹಿಸುವಂತಿವೆ.

ಆಗಾಗ್ಗೆ ಕೊಠಡಿಯಲ್ಲಿ ಶಾಶ್ವತ ಮಾಹಿತಿಯನ್ನು ಮಕ್ಕಳು ನೋಡುವುದರಿಂದ ಅವು ಅವರ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿರುತ್ತವೆ ಎನ್ನುತ್ತಾರೆ ಮುಖ ಶಿಕ್ಷಕ ಎಸ್.ಎನ್. ಮಂಜುನಾಥ್.

ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 140 ಮಕ್ಕಳು ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಕಾನ್ವೆಂಟ್‌ನಲ್ಲಿನ ಸೌಲಭ್ಯಗಳನ್ನು ಸರ್ಕಾರಿ ಶಾಲೆಯಲ್ಲಿ ನೀಡುವ ಭರವಸೆಯೊಂದಿಗೆ ಮಕ್ಕಳಿಗೆ ಗುಣಮಟ್ಟ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕೊಡಲು ಇಲ್ಲಿನ ಶಿಕ್ಷಕರು ಶ್ರಮಿಸುತ್ತಿದ್ದಾರೆ.

ಸರ್ಕಾರದ ಉಚಿತ ಶಿಕ್ಷಣ, ಬಿಸಿಯೂಟ, ಪುಸ್ತಕ, ಬಟ್ಟೆಗಳನ್ನು ಪಡೆದು ಬಡ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಅತ್ಯುತ್ತಮ ಉದ್ಯೋಗ ಪಡೆಯುವ ಹಿನ್ನೆಲೆಯಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಲಿದೆ.
ಶಾಲೆಯ ಅಭಿವೃದ್ಧಿ, ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವಲ್ಲಿ ಎಸ್‌ಡಿಎಂಸಿ ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಅತ್ಯುತ್ತಮ ಶಾಲೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಬಾರಿ ಶಿಕ್ಷಕ ದಿನಾಚರಣೆಯಂದು ಶಿಕ್ಷಕ ಎಂ ಜಗದೀಶ್ ಅವರಿಗೆ `ಗುರು ಶ್ರೀ~ ಪ್ರಶಸ್ತಿ ನೀಡಿ ಇಲಾಖೆ ಗೌರವಿಸಿದೆ.
ಶಾಲೆಯ ಪ್ರಗತಿ ಗಮನಿಸಿದ ಗ್ರಾಮದ ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ ಎನ್ನುತ್ತಾರೆ ಪೋಷಕ ಕುಮಾರ್.

ಉತ್ತಮ ಪಾಠ ಬೋಧನೆ ಮಾಡಿ ಪೋಷಕರ ಮನಗೆದ್ದ ಶಾಲೆಯ ಆರು ಜನ ಶಿಕ್ಷಕರು ಗ್ರಾಮದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT