ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಓಪನ್ ಟೆನಿಸ್ ಟೂರ್ನಿ: ಭಾರತದ ಭರವಸೆ ಸೋಮದೇವ್ ದೇವ್‌ವರ್ಮನ್

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಪ್ರತಿ ವರ್ಷ ಕಳೆದಂತೆ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಬಹುಮಾನದ ಮೊತ್ತ ಹೆಚ್ಚುತ್ತಿದೆ. ಆದರೆ ಟೂರ್ನಿಯ `ಗ್ಲಾಮರ್~ ಮಾತ್ರ ಕಡಿಮೆಯಾಗುತ್ತಿದೆ. ಕಳೆದ ಒಂದೆರಡು ವರ್ಷಗಳಿಂದ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರುವುದು ಟೆನಿಸ್ ಪ್ರಿಯರಿಗೆ ನಿರಾಸೆ ಉಂಟುಮಾಡಿದೆ.

ಬೋರಿಸ್ ಬೆಕರ್, ಪ್ಯಾಟ್ರಿಕ್ ರಾಫ್ಟರ್, ಯೆವ್ಗೆನಿ ಕಫೆಲ್ನಿಕೋವ್, ಡೇವಿಡ್ ನಲ್ಬಂಡಿಯನ್ ಮತ್ತು ರಫೆಲ್ ನಡಾಲ್ ಅವರಂತಹ ಪ್ರಮುಖ ಆಟಗಾರರು ಈ ಹಿಂದೆ ಚೆನ್ನೈ ಓಪನ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಬಾರಿ ಅಂತಹ ಘಟಾನುಘಟಿ ಆಟಗಾರರು ಆಗಮಿಸಿಲ್ಲ.

ಎರಡು ಬಾರಿಯ ಚಾಂಪಿಯನ್ ಕ್ರೊಯೇಷ್ಯದ ಮರಿನ್ ಸಿಲಿಕ್ ಕೊನೆಯ ಕ್ಷಣದಲ್ಲಿ ಈ ಟೂರ್ನಿಯಿಂದ ಹಿಂದೆ ಸರಿದದ್ದು ಕೂಡಾ ಸಂಘಟಕರಿಗೆ ಅಲ್ಪ ಹಿನ್ನಡೆ ಉಂಟುಮಾಡಿದೆ. ಪ್ರಮುಖರ ಅನುಪಸ್ಥಿತಿಯಲ್ಲಿ ಸರ್ಬಿಯದ ಜಾಂಕೊ ತಿಪ್ಸಾರೆವಿಕ್‌ಗೆ ಸಿಂಗಲ್ಸ್ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.

ಎರಡನೇ ಶ್ರೇಯಾಂಕದ ನಿಕೊಲಾಸ್ ಅಲ್ಮಾರ್ಗೊ ಕೂಡಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟ ಗಾರ ಎನಿಸಿದ್ದಾರೆ. ಅಲ್ಮಾರ್ಗೊ 2011ರ ಋತುವಿ ನಲ್ಲಿ ಮೂರು ಪ್ರಶಸ್ತಿ ಗೆದ್ದಿದ್ದಾರೆ. ವಿಶ್ವ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಅಲ್ಮಾರ್ಗೊ ಅಚ್ಚರಿಯ ಫಲಿತಾಂಶ ನೀಡಿ ಚಾಂಪಿಯನ್ ಆಗುವ ತಾಕತ್ತು ಹೊಂದಿದ್ದಾರೆ. ಕಳೆದ ಬಾರಿಯ ಚಾಂಪಿ ಯನ್ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಅವರನ್ನೂ ಕಡೆಗಣಿಸುವಂತಿಲ್ಲ.

ತಿಪ್ಸಾರೆವಿಕ್ ಎಟಿಪಿ ವಲ್ಡ್ ಟೂರ್        ಫೈನಲ್ಸ್‌ನಲ್ಲಿ ತಮ್ಮದೇ ದೇಶದ ನೊವಾಕ್ ಜೊಕೊವಿಚ್ ಎದುರು ಅಚ್ಚರಿಯ ಗೆಲುವು ಪಡೆದಿದ್ದರು. ಕೆನಡಾದ ಮಿಲೋಸ್ ರೋನಿಕ್ ನಾಲ್ಕನೇ ಶ್ರೇಯಾಂಕ ಹೊಂದಿದ್ದಾರೆ. ಅಗ್ರ ನಾಲ್ಕು ಶ್ರೇಯಾಂಕದ ಆಟಗಾರರು ಮೊದಲ ಸುತ್ತಿನಲ್ಲಿ `ಬೈ~ ಪಡೆದಿದ್ದಾರೆ.

ಕಳೆದ ಬಾರಿಯ ರನ್ನರ್ ಅಪ್ ಕ್ಸೇವಿಯರ್ ಮಾಲೈಸ್ ಮತ್ತು ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಬೆಲ್ಜಿಯಂನ ಡೇವಿಡ್ ಗೊಫಿನ್ ಅವರೂ ಭಾರತದ ಏಕೈಕ ಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದ್ದಾರೆ.

ಸೋಮದೇವ್ ಭರವಸೆ: ಎಂದಿನಂತೆ ಈ ವರ್ಷವೂ ಸಿಂಗಲ್ಸ್ ವಿಭಾಗದಲ್ಲಿ ಸೋಮದೇವ್ ದೇವವರ್ಮನ್ ಭಾರತದ ಭರವಸೆ ಎನಿಸಿದ್ದಾರೆ. ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ಯೂಕಿಭಾಂಬ್ರಿ ಮತ್ತು ವಿಷ್ಣುವರ್ಧನ್ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿರುವ ಭಾರತದ ಇತರ ಸ್ಪರ್ಧಿಗಳು. ರೋಹನ್ ಬೋಪಣ್ಣ ಒಳಗೊಂಡಂತೆ ಇತರ ಆಟಗಾರರು ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ವಿಶ್ವ ರ‌್ಯಾಂಕಿಂಗ್‌ನಲ್ಲಿ 84ನೇ ಸ್ಥಾನದಲ್ಲಿರುವ ಸೋಮದೇವ್ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಎರಿಕ್ ಪ್ರೊಡನ್ ವಿರುದ್ಧ ಪೈಪೋಟಿ ನಡೆಸುವರು. 2008 ರಲ್ಲಿ ಇಲ್ಲಿ ಫೈನಲ್ ಪ್ರವೇಶಿಸಿದ್ದ ಸೋಮದೇವ್ ಬಳಿಕ ಅಂತಹದೇ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲರಾಗಿದ್ದರು.

ಯುವ ಪ್ರತಿಭೆಗಳಾದ ಯೂಕಿ ಭಾಂಬ್ರಿ ಮತ್ತು ವಿಷ್ಣುವರ್ಧನ್ ಮೊದಲ ದಿನ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ. ಇವರು ಮೊದಲ ಸುತ್ತಿನ ಪಂದ್ಯಗಳಲ್ಲಿ ಕ್ರಮವಾಗಿ ಸ್ಲೊವೇಕಿಯದ ಕರೊಲ್ ಬೆಕ್ ಮತ್ತು ಕ್ರೊಯೇಷ್ಯದ ಇವಾನ್ ಡೊಡಿಗ್ ವಿರುದ್ಧ ಪೈಪೋಟಿ ನಡೆಸುವರು.

ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಕಳೆದ ವರ್ಷ ಇಲ್ಲಿ ಜೊತೆಯಾಗಿ ಆಡಿದ್ದರು. ಆದರೆ ಈ ಬಾರಿ ಪೇಸ್ ಅವರು ತಿಪ್ಸಾರೆವಿಕ್ ಜೊತೆ ಹಾಗೂ ಮಹೇಶ್ ಭೂಪತಿ ಅವರು ರೋಹನ್ ಬೋಪಣ್ಣ ಜೊತೆ ಸೇರಿಕೊಂಡು ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದ್ದಾರೆ.

ಇಂದು ಕಣಕ್ಕಿಳಿಯಲಿರುವ ಭಾರತದ ಸ್ಪರ್ಧಿಗಳು:
ಸಿಂಗಲ್ಸ್ ವಿಭಾಗ: ಯೂಕಿ ಭಾಂಬ್ರಿ - ಕರೊಲ್ ಬೆಕ್ (ಸ್ಲೊವೇಕಿಯ); ವಿಷ್ಣುವರ್ಧನ್- ಇವಾನ್ ಡೊಡಿಗ್ (ಕ್ರೊಯೇಷ್ಯ).

ಡಬಲ್ಸ್: ಮೋಹಿತ್ ಮಯೂರ್/ ರಾಮ್‌ಕುಮಾರ್ ರಾಮನಾಥನ್- ಜೊನಾಥನ್ ಎಲ್ರಿಚ್/ ಆ್ಯಂಡಿ ರಾಮ್ (ಇಸ್ರೇಲ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT