ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈನಲ್ಲಿ ಭಾರಿ ಪ್ರತಿಭಟನೆ: ವ್ಯಾಪಕ ಖಂಡನೆ

Last Updated 22 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ಚೆನ್ನೈ: ಎಲ್‌ಟಿಟಿಇ ನಾಯಕ ದಿವಂಗತ ವೇಲುಪಿಳ್ಳೈ ಪ್ರಭಾಕರನ್ ಅವರ ತಾಯಿಯ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಗೆ ತೆರಳಿದ್ದ ತಮಿಳುನಾಡಿನ ಸಂಸದ ತೋಳ್ ತಿರುಮಾವಳನ್ ಅವರಿಗೆ ಶ್ರೀಲಂಕಾ ಸರ್ಕಾರ ದೇಶ ಪ್ರವೇಶಿಸಲು ಅನುಮತಿ ನಿರಾಕರಿಸಿದ ಘಟನೆಗೆ ಚೆನ್ನೈನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕ್ರಮವನ್ನು ಖಂಡಿಸಿ ಮಂಗಳವಾರ ಇಲ್ಲಿನ ಶ್ರೀಲಂಕಾ ಡೆಪ್ಯುಟಿ ಹೈಕಮಿಶನರ್ ಕಚೇರಿಯಲ್ಲಿ ಪಿಕೆಟಿಂಗ್ ನಡೆಸಲು ಯತ್ನಿಸಿದ ತಿರುಮಾವಳನ್ ಮತ್ತು ಅವರ ನೂರಾರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್‌ಟಿಟಿಇ ಬೆಂಬಲಿಗರೂ ಆದ ತಿರುಮಾವಳನ್ ಅವರಿಗೆ ಸೋಮವಾರ ಅಲ್ಲಿನ ಸರ್ಕಾರ ವೇಲ್ವಿತ್ತಿತುರೈ ಗ್ರಾಮ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಇದರಿಂದಾಗಿ ಅವರು ಕೊಲಂಬೊದ ಕಟುನಾಯಕೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ವಾಪಸಾಗಿದ್ದರು. ತಿರುಮಾವಳನ್ ಅವರು ಕೇಂದ್ರದ ಯುಪಿಎ ಮೈತ್ರಿಕೂಟದ ಅಂಗಪಕ್ಷವಾದ ವಿಡುದಲೈ ಚಿರುತೈಗಳ್ ಪಕ್ಷದ (ವಿಸಿಕೆ) ಪ್ರತಿನಿಧಿಯಾಗಿದ್ದಾರೆ.

ದಿಢೀರ್ ಪ್ರತಿಭಟನೆ: ಪಕ್ಷದ ಕಾರ್ಯಕರ್ತರು ಚೆನ್ನೈನಲ್ಲಿ ಬೆಳಿಗ್ಗೆ ದಿಢೀರ್ ಪ್ರತಿಭಟನೆ ನಡೆಸಿ ರಾಜಪಕ್ಸೆ ಅವರ ಪ್ರತಿಕೃತಿ ದಹಿಸಿದರು. ನಂತರ ಶ್ರೀಲಂಕಾ ಹೈಕಮಿಶನ್ ಕಚೇರಿಗೆ ಮೆರವಣಿಗೆಯಲ್ಲಿ ಹೊರಟರು. ಈ ಸಂದರ್ಭದಲ್ಲಿ ಪ್ರಭಾಕರನ್ ತಾಯಿಯ ಭಾವಚಿತ್ರಕ್ಕೆ ಹೂಹಾರ ಹಾಕಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಡಿಎಂಕೆ, ಪಿಎಂಕೆ ಸೇರಿದಂತೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಶ್ರೀಲಂಕಾ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT