ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈನಲ್ಲಿ ಮೊದಲ ದಿನ ಚೆಂದದ ಆಟ

ಕ್ರಿಕೆಟ್: ಸ್ಥಳೀಯ ಆಟಗಾರ ಅಶ್ವಿನ್ ಚಮತ್ಕಾರ; ಕ್ಲಾರ್ಕ್ ಶತಕ
Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಚೆನ್ನೈ: `ಕಲ್ಲಿಗೆ ಸರಿಯಾಗಿ ಉಳಿಯ ಪೆಟ್ಟು ಬಿದ್ದ ಮೇಲೆ ಅದು ಸುಂದರ ಮೂರ್ತಿಯಾಗಿ ರೂಪುಗೊಳ್ಳಬಲ್ಲದು' ಎಂಬ ಮಾತಿದೆ. ಹೋದ ವರ್ಷ ಕಳಪೆ ಪ್ರದರ್ಶನದ ಕಾರಣ ಟೀಕಾ ಪ್ರಹಾರಕ್ಕೆ ಗುರಿಯಾಗಿದ್ದ ಆರ್.ಅಶ್ವಿನ್ ಶುಕ್ರವಾರ ಭಾರತದ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಖುಷಿಯ ಮಹಲ್ ಕಟ್ಟಿದರು.

ತಮ್ಮೂರಿನ ಪಿಚ್‌ನಲ್ಲಿ ಮೊದಲ ಟೆಸ್ಟ್ ಆಡಿದ ಅವರು ಆರು ವಿಕೆಟ್ ಪಡೆದು ಮಿಂಚು ಹರಿಸಿದರು. ಪೋಷಕರು, ಪತ್ನಿ ಹಾಗೂ ಕುಟುಂಬ ವರ್ಗದವರ ಸಮ್ಮುಖದಲ್ಲಿ ಈ ಸಾಧನೆ ಮೂಡಿಬಂತು. ಅಶ್ವಿನ್ ಅವರ ಈ ಪ್ರಯತ್ನದಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೇಲುಗೈ ಹೊಂದಲು ಸಾಧ್ಯವಾಯಿತು.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾದ ಈ ಪಂದ್ಯದಲ್ಲಿ ಮೊದಲ ದಿನದ ಅಂತ್ಯಕ್ಕೆ ಪ್ರವಾಸಿ ತಂಡದವರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ 95 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದರು. ವೇಗವಾಗಿಯೇ ರನ್ ಗಳಿಸಿದರು. ಆದರೆ ಇನ್ನು ಕೈಯಲ್ಲಿರುವುದು ಮಾತ್ರ 3 ವಿಕೆಟ್.

ಅಂಪೈರ್ ಕುಮಾರ ಧರ್ಮಸೇನಾ ಸರಿಯಾಗಿ ತೀರ್ಪು ನೀಡಿದ್ದರೆ ಪಂದ್ಯದ ಕಥೆಯೇ ಬೇರೆಯಾಗಿರುತಿತ್ತು. ಏಕೆಂದರೆ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಔಟ್ ಆಗ್ದ್ದಿದು ಸ್ಪಷ್ಟವಾಗಿದ್ದರೂ ಧರ್ಮಸೇನಾ ಕೈ ಮೇಲೆತ್ತಲಿಲ್ಲ. ಆಗ ಅವರು 39 ರನ್ ಗಳಿಸಿದ್ದರು.

ಆ ಘಟನೆ ಹೊರತುಪಡಿಸಿದರೆ ಕ್ಲಾರ್ಕ್ ಗಳಿಸಿದ ಶತಕ ಸೊಗಸಾಗಿತ್ತು. ನಿಗದಿತ ಅವಧಿಗಿಂತ ಮುನ್ನವೇ ಭಾರತಕ್ಕೆ ಕಾಲಿರಿಸಿದ್ದ ಈ ದೇಶದ ಆಟಗಾರರು ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದರು. ಆದರೆ ಕ್ಲಾರ್ಕ್ (ಬ್ಯಾಟಿಂಗ್ 103; 169 ಎ., 235 ನಿ. 11 ಬೌಂ., 1 ಸಿ.) ನೇರವಾಗಿ ಈ ಪಂದ್ಯದಲ್ಲಿ ಆಡಿದರು. ಎಷ್ಟೇ ಆಗಲಿ 2004ರಲ್ಲಿ ಪದಾರ್ಪಣೆ ಪಂದ್ಯದಲ್ಲೇ ಭಾರತದ ನೆಲದಲ್ಲಿ ಶತಕ ಗಳಿಸಿದ ಆಟಗಾರ ಈ ಕ್ಲಾರ್ಕ್.

ಅಶ್ವಿನ್ ಅವರ ಪ್ರಭಾವಿ ದಾಳಿಯಿಂದಾಗಿ ಕಾಂಗರೂ ಬಳಗ ಒಂದು ಹಂತದಲ್ಲಿ ಕೇವಲ 153 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಕ್ಲಾರ್ಕ್ ಹಾಗೂ ಹೆನ್ರಿಕ್ಸ್ ಮಹತ್ವದ ತಿರುವು ನೀಡಿದರು. ಅದರಲ್ಲೂ ಚೊಚ್ಚಲ ಪಂದ್ಯದಲ್ಲಿ ಆಡುತ್ತಿರುವ ಹೆನ್ರಿಕ್ಸ್ (68; 132 ಎ, 172 ನಿ. 5 ಬೌಂ) ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ಅವರಿಗೆ ಮಾಜಿ ಆಟಗಾರ ಸ್ಟೀವ್ ರಿಕ್ಸನ್ ಬೆಳಿಗ್ಗೆ `ಟೆಸ್ಟ್ ಕ್ಯಾಪ್' ನೀಡಿದ್ದರು.

ಕ್ಲಾರ್ಕ್ ಹಾಗೂ ಹೆನ್ರಿಕ್ಸ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದು ಗೋಚರವಾಗುತ್ತಿದ್ದಂತೆ ಸಚಿನ್ ಪದೇ ಪದೇ ದೋನಿಗೆ ಸಲಹೆ ನೀಡುತ್ತಿದ್ದರು. ಅದಕ್ಕೆ ಸ್ಪಂದಿಸಿದ ದೋನಿ ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆ ಮಾಡುತ್ತಿದ್ದರು.

ಕೊನೆಯಲ್ಲಿ ಈ ಜೊತೆಯಾಟ ಮುರಿಯಲು ಅಶ್ವಿನ್ ಅವರೇ ಬರಬೇಕಾಯಿತು. ಅದು ನಂದಿ ಹೋಗುತ್ತಿದ್ದ ದೀಪಕ್ಕೆ ಎಣ್ಣೆ ಸಿಕ್ಕಿದಂತಾಯಿತು. ಅಷ್ಟರಲ್ಲಿ ಕ್ಲಾರ್ಕ್ ಹಾಗೂ ಹೆನ್ರಿಕ್ಸ್ ಆರನೇ ವಿಕೆಟ್‌ಗೆ 151 ರನ್ (254 ಎ.) ಸೇರಿಸಿದ್ದರು.

ಸುಮ್ಮನಿದ್ದ ಕ್ಲಾರ್ಕ್; ತಲೆ ಅಲ್ಲಾಡಿಸಿದ ಅಂಪೈರ್
ಕ್ಲಾರ್ಕ್ ಒಮ್ಮೆ ಅಪಾಯದಿಂದ ಪಾರಾಗಿದ್ದರು. ಇದಕ್ಕೆ ಕಾರಣವಾಗಿದ್ದು ಅಂಪೈರ್ ಧರ್ಮಸೇನಾ. ಅಶ್ವಿನ್ ಬೌಲಿಂಗ್‌ನಲ್ಲಿ ಕ್ಲಾರ್ಕ್ ಬ್ಯಾಟ್‌ಗೆ ತಾಗಿ ಪ್ಯಾಡ್‌ಗೆ ಬಡಿದಿದ್ದ ಚೆಂಡನ್ನು ಶಾರ್ಟ್ ಲೆಗ್‌ನಲ್ಲಿ ಪೂಜಾರ ಹಿಡಿತಕ್ಕೆ ಪಡೆದಿದ್ದರು. ಧರ್ಮಸೇನಾ ತಲೆ ಅಲ್ಲಾಡಿಸಿ ಸುಮ್ಮನಾದರು. ಕ್ಲಾರ್ಕ್ ಮತ್ತೆ ಬ್ಯಾಟ್ ಮಾಡಲು ಮುಂದಾದರು. ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್) ಇ್ದ್ದದಿದ್ದರೆ ಭಾರತ ತಂಡಕ್ಕೆ ನೆರವಾಗುತಿತ್ತು. ಏಕೆಂದರೆ ಬ್ಯಾಟ್‌ಗೆ ಚೆಂಡು ಸ್ಪರ್ಶಿಸಿದ್ದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು.

ಈ ಅವಕಾಶದ ನೆರವು ಪಡೆದ ಕ್ಲಾರ್ಕ್ 23ನೇ ಶತಕ ಗಳಿಸಿದರು. ಜಡೇಜ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ ಈ ಸಾಧನೆ ಮಾಡಿದರು. ಜೊತೆಗೆ ಟೆಸ್ಟ್‌ನಲ್ಲಿ ಏಳು ಸಾವಿರ ರನ್‌ಗಳ ಗಡಿ ದಾಟಿದ ಗೌರವಕ್ಕೆ ಪಾತ್ರರಾದರು.

ಅಶ್ವಿನ್ ಸ್ಪಿನ್ ಜಾದೂ
ಮೊದಲ ದಿನ ಅಭಿಮಾನಿಗಳ ಮನ ಗೆದ್ದಿದ್ದು ಸ್ಥಳೀಯ ಆಟಗಾರ ಅಶ್ವಿನ್. ಈ ಕ್ರೀಡಾಂಗಣದ ಪಿಚ್‌ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಅವರು ಪ್ರೆಸ್ ಬಾಕ್ಸ್ ತುದಿಯಿಂದ ಬೌಲ್ ಮಾಡಿ ಐದು ವಿಕೆಟ್ ಹಾಗೂ ಪೆವಿಲಿಯನ್ ತುದಿಯಿಂದ ಬೌಲ್ ಮಾಡಿ ಒಂದು ವಿಕೆಟ್ ಕಬಳಿಸಿದರು.

ಅವರು ಮೊದಲ ಎಸೆತದಿಂದಲೇ ಅಪಾಯಕಾರಿಯಾಗಿದ್ದರು. ಅದರಲ್ಲೂ ಭೋಜನ ವಿರಾಮದ ಬಳಿಕ ಪ್ರವಾಸಿ ತಂಡಕ್ಕೆ ದೊಡ್ಡ ಹೊಡೆತ ನೀಡಿದರು. 27 ರನ್‌ಗಳ ಅಂತರದಲ್ಲಿ ವಾಟ್ಸನ್, ವಾರ್ನರ್, ವೇಡ್ ವಿಕೆಟ್ ಕಬಳಿಸಿದರು. ಇದಕ್ಕೂ ಮುನ್ನ ವಾರ್ನರ್ 18 ರನ್ ಗಳಿಸ್ದ್ದಿದಾಗ ಅಶ್ವಿನ್ ಬೌಲಿಂಗ್‌ನಲ್ಲಿ ಸೆಹ್ವಾಗ್ ಮೊದಲ ಸ್ಲಿಪ್‌ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ್ದರು. ದೋನಿ ಸ್ಟಂಪ್ ಔಟ್ ಅವಕಾಶ ಕಳೆದುಕೊಂಡಿದ್ದರು.

ಭೋಜನ ವಿರಾಮದ ಬಳಿಕ ಮೊದಲ ಓವರ್‌ನಲ್ಲಿಯೇ ವಾಟ್ಸನ್‌ಗೆ ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದರು. ಮತ್ತೊಂದು ಓವರ್‌ನಲ್ಲಿ ವಾರ್ನರ್ (59) ವಿಕೆಟ್ ಪಡೆದರು. ಕೈಬೆರಳಿಗೆ ಪೆಟ್ಟು ಮಾಡಿಕೊಂಡ ಅವರು ಪೆವಿಲಿಯನ್‌ನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರು.

ವೇಗಿಗಳಿಗೆ ಹೆಚ್ಚು ಕೆಲಸವಿಲ್ಲ
ಟಾಸ್ ಗೆದ್ದ ಪ್ರವಾಸಿ ತಂಡದವರು ಮೊದಲು ಬ್ಯಾಟ್ ಮಾಡಲು ಮುಂದಾದರು. ಆದರೆ ವೇಗಿಗಳಾದ ಇಶಾಂತ್ ಶರ್ಮ ಹಾಗೂ ಪದಾರ್ಪಣೆ ಮಾಡಿದ ಭುವನೇಶ್ವರ್ ಕುಮಾರ್‌ಗೆ ಹೆಚ್ಚು ಕೆಲಸವಿರಲಿಲ್ಲ. ಈ ಪಿಚ್ ಸಂಪೂರ್ಣ ಒಣಗಿದ್ದು ವೇಗಿಗಳಿಗೆ ಕೊಂಚವೂ ನೆರವು ನೀಡುತ್ತಿಲ್ಲ.

ನೂರನೇ ಪಂದ್ಯ ಆಡುತ್ತಿರುವ ಹರಭಜನ್‌ಗೆ ವಿಕೆಟ್ ಲಭಿಸಲಿಲ್ಲ. ಪದಾರ್ಪಣೆ ಮಾಡಿದ ಉತ್ತರ ಪ್ರದೇಶದ ಭುವನೇಶ್ವರ್‌ಗೆ ಇಶಾಂತ್ ಟೆಸ್ಟ್ ಕ್ಯಾಪ್ ನೀಡಿದರು. ಟೆಸ್ಟ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ 276ನೇ ಆಟಗಾರ ಭುವನೇಶ್ವರ್. ಇದೇ ಕ್ರೀಡಾಂಗಣದಲ್ಲಿ ಅವರು ಚೊಚ್ಚಲ ಏಕದಿನ ಪಂದ್ಯ ಆಡಿದ್ದರು. ಎಡಗೈ ಸ್ಪಿನ್ನರ್ ಓಜಾ ಅವರನ್ನು ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಯಿತು.

ಸ್ಕೋರ್ ವಿವರ:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 95 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 316
ಎಡ್ ಕೊವನ್ ಸ್ಟಂಪ್ಡ್ ಎಂ.ಎಸ್.ದೋನಿ ಬಿ ಆರ್.ಅಶ್ವಿನ್  29
ಡೇವಿಡ್ ವಾರ್ನರ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  59
ಫಿಲ್ ಹ್ಯೂಸ್ ಬಿ ಆರ್.ಅಶ್ವಿನ್  06
ಶೇನ್ ವಾಟ್ಸನ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  28
ಮೈಕಲ್ ಕ್ಲಾರ್ಕ್ ಬ್ಯಾಟಿಂಗ್  103
ಮ್ಯಾಥ್ಯೂ ವೇಡ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  12
ಮೊಯಿಸೆಸ್ ಹೆನ್ರಿಕ್ಸ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  68
ಮಿಷೆಲ್ ಸ್ಟಾರ್ಕ್ ಬಿ ರವೀಂದ್ರ ಜಡೇಜ  03
ಪೀಟರ್ ಸಿಡ್ಲ್ ಬ್ಯಾಟಿಂಗ್  01
ಇತರೆ (ಲೆಗ್ ಬೈ-7)  07
ವಿಕೆಟ್ ಪತನ: 1-64 (ಕೊವನ್; 14.3); 2-72 (ಹ್ಯೂಸ್; 18.3); 3-126(ವಾಟ್ಸನ್; 34.4); 4-131 (ವಾರ್ನರ್; 36.4); 5-153 (ವೇಡ್; 46.6); 6-304 (ಮೊಯಿಸೆಸ್; 89.2); 7-307 (ಸ್ಟಾರ್ಕ್; 90.1).
ಬೌಲಿಂಗ್: ಭುವನೇಶ್ವರ್ ಕುಮಾರ್ 11-1-48-0, ಇಶಾಂತ್ ಶರ್ಮ 11-2-46-0, ಹರಭಜನ್ ಸಿಂಗ್ 19-1-71-0, ಆರ್.ಅಶ್ವಿನ್ 30-5-88-6, ರವೀಂದ್ರ ಜಡೇಜ 24-5-56-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT