ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಅಂಧ ಸಹೋದರರ ಅಂದದ ದಾರಿ!

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನನಗೆ ಹಾಗೂ ನನ್ನ ತಮ್ಮನಿಗೆ ಕಣ್ಣು ಕಾಣಿಸುವುದಿಲ್ಲ. ಹುಟ್ಟಿನಿಂದಲೇ ನಮಗೆ ಈ ಸಮಸ್ಯೆ ಇದೆ. ಆದರೆ ನಾವು ಯಾವುದೇ ಕೆಲಸದಲ್ಲಿ ಸಾಮಾನ್ಯ ವ್ಯಕ್ತಿಗಳಿಗಿಂತ ಕಡಿಮೆ ಇಲ್ಲ. ಎರಡೂ ಕಣ್ಣು ಕಾಣಿಸುವವರನ್ನು ನಾವು ಸೋಲಿಸಿದ್ದೇವೆ. ದೇಶದ ಅಗ್ರ ಚೆಸ್ ಆಟಗಾರರು ಆಗಬೇಕೆಂಬುದು ನಮ್ಮ ಕನಸು~

-ಒಡಿಶಾದ ನುವಾಪಡ ಜಿಲ್ಲೆಯ ಬೊಡೆನ್ ಎಂಬ ಕುಗ್ರಾಮದ ಅಂಧ ಸಹೋದರರಾದ ಪ್ರಚೂರ್ಯ ಕುಮಾರ್ ಪ್ರಧಾನ್ ಹಾಗೂ ಸೌಂದರ್ಯ ಕುಮಾರ್ ಪ್ರಧಾನ್ ಅವರ ಭರವಸೆಯ ನುಡಿಗಳಿವು. ಪ್ರಚೂರ್ಯ ರಾಷ್ಟ್ರೀಯ 19 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್. ಸೌಂದರ್ಯ 13 ವರ್ಷದೊಳಗಿನವರ ವಿಭಾಗದಲ್ಲಿ `ಅತ್ಯುತ್ತಮ ಆಟಗಾರ~ ಎನಿಸಿದ್ದಾರೆ.

ಇವರಿಬ್ಬರು ಉದ್ಯಾನ ನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮುಕ್ತ ಅಂಧರ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಚೂರ್ಯ (5.5 ಪಾಯಿಂಟ್) ಹಾಗೂ ಸೌಂದರ್ಯ (4.5) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ಇವರ ತಂದೆ ರವಿರಂಜನ್ ಪ್ರಧಾನ್ ಒಡಿಶಾ ಭಾಷೆಯ ಪ್ರೊಫೆಸರ್. ಆದರೆ ಕಾಲೇಜ್‌ಗೆ ರಜೆ ಹಾಕಿ ಈ ಚಾಂಪಿಯನ್‌ಷಿಪ್‌ಗೆ ತಮ್ಮ ಇಬ್ಬರು ಮಕ್ಕಳನ್ನು ಕರೆತಂದಿದ್ದಾರೆ. `ಇಬ್ಬರೂ ಮಕ್ಕಳು ಅಂಧರಾಗಿ ಜನಿಸಿದಾಗ ನಮಗೆ ನಿಜಕ್ಕೂ ಆಘಾತವಾಗಿತ್ತು. ಏನೂ ಮಾಡಬೇಕೆಂಬುದು ತೋಚಿರಲಿಲ್ಲ. ಆದರೆ ಈಗ ಪರಿಸ್ಥಿತಿಯೇ ಬದಲಾಗಿದೆ. ಎರಡೂ ಕಣ್ಣು ಕಾಣುವ ಮಕ್ಕಳು ಜನಿಸಿದ್ದರೂ ನಮಗೆ ಈ ಮಟ್ಟದ ಕೀರ್ತಿ ಸಿಗುತ್ತಿರಲಿಲ್ಲವೇನೊ~ ಎಂದು ಅವರು ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

12 ಹರೆಯದ ಸೌಂದರ್ಯ ಹಾಗೂ 15ರ ಹರೆಯದ ಪ್ರಚೂರ್ಯ ಭುವನೇಶ್ವರದ ಭೀಮ ಭೋಯಿ ಶಾಲೆಯಲ್ಲಿ ಕ್ರಮವಾಗಿ 6ನೇ ಹಾಗೂ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಬ್ಬರೂ ಫಿಡೆ ರೇಟೇಡ್ ಆಟಗಾರರು.

`ಪೋಷಕರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ನಾವು ಕುರುಡರಾಗಿ ಜನಿಸಿದೆವು. ಅವರ ನಿರೀಕ್ಷೆಯನ್ನು ಹುಸಿಗೊಳಿಸಿದ್ದೆವು. ಆದರೆ ಈಗ ಸಾಧನೆ ಮೂಲಕ ಅವರಿಗೆ ಗೌರವ ತಂದುಕೊಟ್ಟಿದ್ದೇವೆ. ನೀವು ಕುರುಡರಲ್ಲ. ಚೆನ್ನಾಗಿ ಕಣ್ಣು ಕಾಣಿಸುವ ನಾವು ಕುರುಡರು ಎಂದು ತಂದೆ ಹೇಳುವ ಮಾತುಗಳೇ ನಮಗೆ ಈಗ ಸ್ಫೂರ್ತಿ~ ಎನ್ನುತ್ತಾರೆ ಸೌಂದರ್ಯ.

`ನಮ್ಮ ತಂದೆಯೇ ಈಗ ನಮ್ಮ ಕಣ್ಣುಗಳು. ನಾವು ಯಾವುದೇ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ತೆರಳಿದರೂ ನಮ್ಮಂದಿಗೆ ಇರುತ್ತಾರೆ. ಅವರ ಕೆಲಸವನ್ನು ಬಿಟ್ಟು ಬರುತ್ತಾರೆ. ನಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತಾರೆ. ನಾವು ಅಂಧರ ಎಂದು ಅವರ ಯಾವತ್ತೂ ಕೊರಗಬಾರದು. ಅವರ ಕನಸನ್ನು ನನಸಾಗಿಸುವ ವಿಶ್ವಾಸವಿದೆ~ ಎಂದರು.

ಒಡಿಶಾದಲ್ಲಿ ಇತ್ತೀಚೆಗೆ ಜರುಗಿದ ಸಮರ್ಥ ಆಟಗಾರರ ಚೆಸ್ ಟೂರ್ನಿಯಲ್ಲಿ ಸೌಂದರ್ಯ ಪಾಲ್ಗೊಂಡಿದ್ದರು. ಈ ಟೂರ್ನಿಯಲ್ಲಿ 13 ವರ್ಷದೊಳಗಿನವರ ವಿಭಾಗದಲ್ಲಿ ಅವರು `ಭರವಸೆ ಆಟಗಾರ~ ಎಂಬ ಪ್ರಶಸ್ತಿ ಗಳಿಸಿದ್ದಾರೆ.

`ನಮ್ಮ ಏಕೈಕ ಗುರಿ ಚೆಸ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಪಡೆಯಬೇಕು. ಅಲ್ಲಿಯವರೆಗೆ ನಾವು ವಿರಮಿಸುವುದಿಲ್ಲ. ಚೆಸ್ ನಮ್ಮ ಉಸಿರು, ನಮ್ಮ ಜೀವ. ಅದಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ. ಯಾವುದೇ ಸವಾಲು ಬರಲಿ, ಎದುರಿಸುತ್ತೇವೆ~ ಎಂದು ಪ್ರಚೂರ್ಯ ಹೇಳಿದರು.

ತಮ್ಮ ಅಂಧ ಮಕ್ಕಳಿಗೆ ರಾಜ್ಯದಲ್ಲಿ ಸಿಗುತ್ತಿರುವ ಗೌರವ ಹಾಗೂ ಅಭಿನಂದನೆಯಿಂದ ತಂದೆ ರವಿರಂಜನ್ ತುಂಬಾ ಖುಷಿಯಾಗಿದ್ದಾರೆ. `ಇಡೀ ರಾಜ್ಯದ ಜನತೆ ನಮ್ಮ ಮಕ್ಕಳ ಸಾಧನೆಯನ್ನು ಕಂಡು ಕೊಂಡಾಡುತ್ತಿದೆ. ಆ ಖುಷಿಯಲ್ಲಿಯೇ ನಾನು ಹಾಗೂ ನನ್ನ ಪತ್ನಿ ಬದುಕುತ್ತಿದ್ದೇವೆ~ ಎಂದು ಅವರು ನುಡಿಯುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT