ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯತ್ತ ರಿಯಲ್ ಎಸ್ಟೇಟ್...

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

 ಬೆಂಗಳೂರಿನಲ್ಲಿ ಕಳೆದ 2 ವರ್ಷಗಳ ಕಾಲ ಮಂದಗತಿಯಲ್ಲಿ ಸಾಗಿದ್ದ ರಿಯಲ್ ಎಸ್ಟೇಟ್ ವಹಿವಾಟು ಈಗ ಮತ್ತೆ ಗರಿಗೆದರುತ್ತಿದೆ.  ಇತ್ತೀಚಿನ ವರದಿಯೊಂದರ ಪ್ರಕಾರ, ನಗರದಲ್ಲಿ ವಸತಿ ನಿರ್ಮಾಣ ಯೋಜನೆಗಳು ಈಗ ಇನ್ನಷ್ಟು ಚುರುಕಾಗಿವೆ.

ಮನೆ,   ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ದೇಶದ ಇತರ ಮಹಾ ನಗರಗಳಲ್ಲಿ ಮನೆಗಳ ಮಾರಾಟ ಕುಸಿದಿದ್ದರೂ, ಬೆಂಗಳೂರಿಗೆ ಅದರ ಬಿಸಿ ತೀವ್ರವಾಗಿ ತಟ್ಟಿರಲಿಲ್ಲ. 2012ರ ಗೃಹ ನಿರ್ಮಾಣ ರಂಗಕ್ಕೆ ಇನ್ನಷ್ಟು ಆಶಾದಾಯಕವಾಗಿರಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ.

ಹೊಸ ವರ್ಷ ಮತ್ತು ಹಬ್ಬದ ಸಂದರ್ಭಗಳಲ್ಲಿ  ಖರೀದಿ ಬಯಕೆಯು ಮನೆಗಳ ಬೇಡಿಕೆಗೆ ಉತ್ತೇಜನ ನೀಡುತ್ತದೆ ಎಂದು `ಎಸ್‌ಬಿಐ ಕ್ಯಾಪ್ ಸೆಕ್ಯುರಿಟೀಸ್~ ಕೂಡ ಅಭಿಪ್ರಾಯಪಟ್ಟಿದೆ. ಐ.ಟಿ ದೈತ್ಯ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಮುಂತಾದವು ಹೊಸದಾಗಿ ನೌಕರರನ್ನು ನೇಮಿಸಿಕೊಳ್ಳುತ್ತಿರುವುದು ಕೂಡ ನಗರದಲ್ಲಿ ಹೊಸ ಮನೆ ಖರೀದಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ. ಬ್ಯಾಂಕ್ ಬಡ್ಡಿ ದರಗಳು ಕಡಿಮೆಯಾಗುವ ನಿರೀಕ್ಷೆಗಳೂ ಸಕಾರಾತ್ಮಕ ಬೆಳವಣಿಗೆಯಾಗಿದೆ. 

ನಗರದಲ್ಲಿ ಸಾಮಾನ್ಯರ ಒಂದು ಬೆಡ್‌ರೂಮ್‌ನಿಂದ ಸಿರಿವಂತರ ನಾಲ್ಕು ಬೆಡ್‌ರೂಮ್‌ವರೆಗಿನ ವಿಲಾಸಿ ಅಪಾರ್ಟ್‌ಮೆಂಟ್‌ಗಳ ಅಗತ್ಯ ಈಡೇರಿಸುವ ಯೋಜನೆಗಳಿಗೇನೂ ಬರವಿಲ್ಲ.  ಸ್ವತಂತ್ರ ವಿಲಾಸಿ ಮನೆಗಳ (ವಿಲ್ಲಾ) ಯೋಜನೆಗಳೂ ಸಾಕಷ್ಟು ಇವೆ. ವಸತಿ ಯೋಜನೆ ಹಣ ಹೂಡಿಕೆಯಲ್ಲಿ ಬೆಂಗಳೂರು ದೇಶದಲ್ಲಿಯೇ ಮೂರನೇ ಆದ್ಯತಾ ನಗರವಾಗಿದ್ದು,  ಡಾಲರ್ ರೂಪಾಯಿ ವಿನಿಮಯ ದರವೂ ರಿಯಲ್ ಎಸ್ಟೇಟ್ ಉದ್ದಿಮೆಯ ಚೇತರಿಕೆಗೆ ಪೂರಕವಾಗಿ ನೆರವಾಗುತ್ತಿದೆ.

ಅನಿವಾಸಿ ಭಾರತೀಯರೂ (ಎನ್‌ಆರ್‌ಐ) ನಗರದ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮೆಟ್ರೊ ರೈಲಿನ ವಿಸ್ತರಣೆಯು ಮುಂದಿನ ಮೂರು ವರ್ಷಗಳಲ್ಲಿ ನಗರದ ವಸತಿ ನಿರ್ಮಾಣ ರಂಗದ ಚಿತ್ರಣವನ್ನು ಗಮನಾರ್ಹವಾಗಿ ಬದಲಾಯಿಸಲಿದೆ ಎನ್ನುವ ಆಶಾವಾದ ಕಂಡು ಬರುತ್ತಿದೆ.

ನಗರದಲ್ಲಿ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ವಹಿವಾಟಿಗೆ ಪೂರಕವಾಗಿ ವರ್ಷಾರಂಭದಲ್ಲಿಯೇ     `ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್~ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಳೆದ ವಾರ ವಸತಿ ಯೋಜನೆಗಳ ಪ್ರದರ್ಶನ `ನಿಮ್ಮ ಮನೆ-2012~ ಏರ್ಪಡಿಸಿ ಗಮನ ಸೆಳೆಯಿತು. ಕಳೆದ ವರ್ಷ ಏರ್ಪಡಿಸಿದ್ದ ಇದೇ ಬಗೆಯ ಪ್ರದರ್ಶನಕ್ಕೆ ದೊರೆತ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಸಂಸ್ಥೆ ಈ ಬಾರಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಮೇಳ ಸಂಘಟಿಸಿತ್ತು.

ನಗರದ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳ 250ಕ್ಕೂ ಹೆಚ್ಚು ವಸತಿ ಯೋಜನೆಗಳ ವಿವರಗಳು ಇಲ್ಲಿ ಲಭ್ಯ ಇದ್ದವು. ಕೆಲ ಅಗತ್ಯ ಮಾಹಿತಿಗಳನ್ನು ಒದಗಿಸಿದರೆ ಸ್ಥಳದಲ್ಲಿಯೇ ಗೃಹ ಸಾಲ ಮಂಜೂರು ಮಾಡುವ ಅವಕಾಶವನ್ನೂ ಒದಗಿಸಲಾಗಿತ್ತು.
ಕಟ್ಟಡ ನಿರ್ಮಾಣ ಸಂಸ್ಥೆಗಳು ಸ್ಪರ್ಧಾತ್ಮಕ ದರಗಳ ವಿಪುಲ ಆಯ್ಕೆಗಳನ್ನು ಗೃಹ ಖರೀದಿದಾರರಿಗೆ ಒದಗಿಸಿದ್ದವು.  ಈ   ಪ್ರದರ್ಶನವು  ಬೆಂಗಳೂರಿನ ಜನತೆಗೆ ಹೊಸ ವರ್ಷದ ಕೊಡುಗೆಯ ರೂಪದಲ್ಲಿತ್ತು. ವಿವಿಧ ನಿರ್ಮಾಣ ಸಂಸ್ಥೆಗಳ ಅಗ್ಗದ ಮತ್ತು ವಿಲಾಸಿ ಗೃಹ ನಿರ್ಮಾಣ ಯೋಜನೆಗಳ ಸಮಗ್ರ ವಿವರಗಳೆಲ್ಲ ಇಲ್ಲಿ ಲಭ್ಯ ಇದ್ದವು.

ಡಾಲರ್ ಎದುರು ರೂಪಾಯಿ ವಿನಿಮಯ ದರ ಕುಸಿದಿರುವುದರ ಪ್ರಯೋಜನ ಪಡೆಯಲು ಅನಿವಾಸಿ ಭಾರತಿಯರು (ಎನ್‌ಆರ್‌ಐ) ಹೆಚ್ಚು ಆಸಕ್ತರಾಗಿದ್ದಾರೆ.  ಪ್ರತಿಯೊಂದು ಡಾಲರ್‌ಗೆ ಹೆಚ್ಚು ರೂಪಾಯಿಗಳು ದೊರೆಯುತ್ತಿರುವುದರಿಂದ ಮನೆಗಳ ಖರೀದಿ ಮೂಲಕ ಅದರ ಪ್ರಯೋಜನ ಪಡೆಯಲು ಮುಂದಾಗುತ್ತಿದ್ದಾರೆ. ಇದು ದೇಶದ ರಿಯಲ್ ಎಸ್ಟೇಟ್ ರಂಗದಲ್ಲಿ ನಿಜವಾಗಿಯೂ ಅನುಭವಕ್ಕೆ ಬರುತ್ತಿದೆ. ಇದರಿಂದ ಗೃಹ ನಿರ್ಮಾಣ ರಂಗಕ್ಕೂ ಹೆಚ್ಚು ಉತ್ತೇಜನ ಸಿಗಲಿದೆ  ಎಂದು `ಎಲ್‌ಐಸಿ ಎಚ್‌ಎಫ್‌ಎಲ್~ನ ನಿರ್ದೇಶಕ ವಿಜಯ್ ಕುಮಾರ್ ಶರ್ಮಾ ಅಭಿಪ್ರಾಯಪಡುತ್ತಾರೆ.

ದುಬೈ ಮತ್ತು ಕುವೈತ್‌ನಲ್ಲಿನ ಸಂಸ್ಥೆಯ ಕಚೇರಿಗಳಲ್ಲಿ ಅನಿವಾಸಿ ಭಾರತೀಯರು, ಸ್ವದೇಶದಲ್ಲಿನ ರಿಯಲ್ ಎಸ್ಟೇಟ್ ವಲಯದಲ್ಲಿನ ಬಂಡವಾಳ ಹೂಡಿಕೆಯ ಸಾಧ್ಯತೆಗಳ ಉತ್ಸಾಹದಿಂದ ಮಾಹಿತಿ ಪಡೆಯುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ `ಎನ್‌ಆರ್‌ಐ~ಗಳು ವಸತಿ ಯೋಜನೆಗಳ ಬಗ್ಗೆ ಪಡೆಯುವ ಮಾಹಿತಿಯು ಶೇ 50ರಿಂದ ಶೇ 60ರಷ್ಟು ಹೆಚ್ಚಾಗಿದೆ  ಎಂದೂ ಅವರು ಹೇಳುತ್ತಾರೆ.

ಮೆಟ್ರೊ ರೈಲಿನ ಕೊಡುಗೆಮುಂದಿನ 3 ವರ್ಷಗಳಲ್ಲಿ ನಗರದಲ್ಲಿ ಮೆಟ್ರೊ ರೈಲು ಯೋಜನೆಯ ವಿಸ್ತರಣೆಯು, ಬೆಂಗಳೂರಿನ ವಸತಿ ನಿರ್ಮಾಣ ರಂಗದ ಚಿತ್ರಣವನ್ನು ಗಮನಾರ್ಹವಾಗಿ ಬದಲಾಯಿಸಲಿದೆ ಎಂದೂ ಅವರು ನಿರೀಕ್ಷಿಸಿದ್ದಾರೆ.
 
ದೆಹಲಿಯಲ್ಲಿ ಆಗಿರುವಂತೆ, ಬೆಂಗಳೂರಿನಲ್ಲಿ ಇದುವರೆಗಿನ ನಿರ್ಲಕ್ಷಿತ ಪ್ರದೇಶಗಳೆಲ್ಲ ಗಮನ ಸೆಳೆಯಲಿವೆ. ಈ ಪ್ರದೇಶಗಳಲ್ಲಿನ ರಿಯಲ್ ಎಸ್ಟೇಟ್ ಚಟುವಟಿಕೆಗಳು ಒಟ್ಟಾರೆ     ನಗರದ ಚಿತ್ರಣವನ್ನೇ ಬದಲಿಸಲಿವೆ. ಮೂರು ವರ್ಷಗಳಲ್ಲಿ ನಗರದ ಮಾರುಕಟ್ಟೆ ಶೇ 20ರಿಂದ ಶೇ 25ರಷ್ಟು ವೃದ್ಧಿ ಕಾಣಲಿದೆ ಎನ್ನುವುದು ಅವರ ಖಚಿತ ಅಭಿಪ್ರಾಯ.

`ಎಲ್‌ಐಸಿ ಎಚ್‌ಎಫ್‌ಎಲ್~- ದೇಶದ  4ನೇ ಅತಿ ದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದ್ದು, ದೇಶದಾದ್ಯಂತ 10 ಲಕ್ಷದಷ್ಟು ಗ್ರಾಹಕರನ್ನು ಹೊಂದಿದೆ. ಶೇ 93ರಷ್ಟು ಗೃಹ ಸಾಲವನ್ನು ವ್ಯಕ್ತಿಗಳಿಗೆ ಮತ್ತು ಉಳಿದ ಶೇ 7ರಷ್ಟನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೀಡುತ್ತಿದೆ. ಈ ಅನುಪಾತವನ್ನು ಶೇ 90:10ಕ್ಕೆ ನಿಗದಿಪಡಿಸಲು ಸಂಸ್ಥೆ ಉದ್ದೇಶಿಸಿದೆ.

ಸಂಸ್ಥೆಯು ಎರಡು ವಿಶೇಷ ಗೃಹ ಸಾಲ ಯೋಜನೆಗಳನ್ನು ಹೊಂದಿದೆ. `ಸೂಪರ್ 3~ ಮತ್ತು `ನ್ಯೂ ಫ್ರೀಡಂ~ ಹೆಸರಿನ ಗೃಹ ಸಾಲ ಯೋಜನೆಗಳಿಗೆ ಶೇ 10.4ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಮೂರು ವರ್ಷಗಳವರೆಗೆ ಬಡ್ಡಿ ದರಗಳು ಸ್ಥಿರವಾಗಿರಲಿದ್ದು, ಆನಂತರ `ಬದಲಾಗುವ ಬಡ್ಡಿ ದರ~ ಅನ್ವಯಿಸಲಿದೆ.

`ಬದಲಾಗುವ ಬಡ್ಡಿ ದರ~, ಗೃಹ ಸಾಲ ಮಾರುಕಟ್ಟೆಯಲ್ಲಿಯೇ ಅತಿ ಕಡಿಮೆ ಮಟ್ಟದ ಬಡ್ಡಿ ದರವಾಗಿದೆ. ಇತರ ಸಂಸ್ಥೆಗಳು ಶೇ 12.75ರವರೆಗೆ `ಬದಲಾಗುವ ಬಡ್ಡಿ ದರ~ ಒದಗಿಸುತ್ತಿದ್ದರೆ, `ಎಲ್‌ಐಸಿ ಎಚ್‌ಎಫ್‌ಎಲ್~ ಶೇ 12ಕ್ಕಿಂತ ಕಡಿಮೆ ದರ ವಿಧಿಸುತ್ತಿದೆ. 

ಜೀವ ವಿಮೆ ವಹಿವಾಟಿನ ಅತಿ ದೊಡ್ಡ ಸಂಸ್ಥೆಯಾಗಿರುವ `ಭಾರತೀಯ ಜೀವ ವಿಮಾ ನಿಗಮ~ದ (ಎಲ್‌ಐಸಿ) ಅಂಗಸಂಸ್ಥೆಯಾಗಿರುವ `ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್~, ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಗರಗಳ ಗೃಹ ನಿರ್ಮಾಣ ರಂಗದಲ್ಲಿ ್ಙ 200 ಕೋಟಿಗಳಷ್ಟು ಬಂಡವಾಳ ತೊಡಗಿಸಲು / ಸಾಲ ನೀಡಲು ಉದ್ದೇಶಿಸಿದೆ.

ಜತೆಗೆ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಇದೇ ಮೊದಲ ಬಾರಿಗೆ ಪಾಲು ಹೊಂದಲೂ ಉದ್ದೇಶಿಸಿದೆ. ಇದುವರೆಗೆ ಗೃಹ ನಿರ್ಮಾಣ ಯೋಜನೆಗಳಿಗೆ ಸಾಲ ನೀಡುತ್ತಿದ್ದ ಸಂಸ್ಥೆಯು ಇನ್ನು ಮುಂದೆ ಯೋಜನೆಗಳಲ್ಲಿ ಪಾಲುದಾರ ಸಂಸ್ಥೆಯಾಗಲೂ ನಿರ್ಧರಿಸಿದೆ.

 ಪ್ರಸಕ್ತ ಹಣಕಾಸು ವರ್ಷದಲ್ಲಿ ್ಙ 20 ಸಾವಿರ ಕೋಟಿಗಳಷ್ಟು ಗೃಹ ಸಾಲ ನೀಡಲು ಸಂಸ್ಥೆ ಗುರಿ ನಿಗದಿಪಡಿಸಿತ್ತು. ಇದುವರೆಗೆ ್ಙ 15 ಸಾವಿರ ಕೋಟಿಗಳಷ್ಟು ಸಾಲ ವಿತರಿಸಿದೆ. ನಗರದಲ್ಲಿ ನಡೆದ ವಸತಿ   ಯೋಜನೆಗಳ ಪ್ರದರ್ಶನ ಮತ್ತು ಗೃಹ ಸಾಲ ಪ್ರದರ್ಶನದ ಮೂಲಕ ್ಙ 200  ಕೋಟಿಗಳಷ್ಟು ವಹಿವಾಟು ನಿರೀಕ್ಷಿಸಲಾಗಿದೆ. ಕಳೆದ ವರ್ಷದ ವಹಿವಾಟಿಗಿಂತ ಶೇ 150ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದೂ ಶರ್ಮಾ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT